Homeಕರ್ನಾಟಕಅತ್ಯಾಚಾರಿಗಳನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತಿದೆ; ವೃಂದಾ ಗ್ರೋವರ್‌ ಆತಂಕ

ಅತ್ಯಾಚಾರಿಗಳನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತಿದೆ; ವೃಂದಾ ಗ್ರೋವರ್‌ ಆತಂಕ

- Advertisement -
- Advertisement -

“ಅತ್ಯಾಚಾರಿಗಳನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತಿದೆ” ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್‌ ಆತಂಕ ವ್ಯಕ್ತಪಡಿಸಿದರು.

‘ಲೈಂಗಿಕ ದೌರ್ಜನ್ಯದ ವಿರುದ್ಧ ಕರ್ನಾಟಕ’ ವೇದಿಕೆ ವತಿಯಿಂದ ಶನಿವಾರ ಬೆಂಗಳೂರಿನ ಸೇಂಟ್ ಜೋಸೆಫ್ ಸಭಾಂಗಣದಲ್ಲಿ ನಡೆದ ‘ಅತ್ಯಾಚಾರದ ರಾಜಕೀಯ: ನ್ಯಾಯ, ಹೊಣೆಗಾರಿಕೆ ಮತ್ತು ಪುನಶ್ಚೇತನ’ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಮಹಿಳೆಯನ್ನು ಆಯುಧವನ್ನಾಗಿಸಿ ಒಂದು ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಅತ್ಯಾಚಾರಿ ಒಂದು ಸಮುದಾಯದವನಿದ್ದರೆ ಮರಣದಂಡನೆಯನ್ನು ಕೊಡಲಾಗುತ್ತದೆ. ಇನ್ನೊಂದು ಕೇಸಿನಲ್ಲಿ ಅವರನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತದೆ. ಇನ್ನೊಂದು ಕೇಸಿನಲ್ಲಿ ನ್ಯಾಯದ ಹೊರಗಡೆ ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಯಾವ ಕೇಸಿನಲ್ಲೂ ಮಹಿಳೆಗೆ ನ್ಯಾಯ ಸಿಕ್ಕಿತಾ ಗೊತ್ತಾಗುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್‌

“ಮಹಿಳೆ ಕೇಳುವ ನ್ಯಾಯ ಇದಲ್ಲ. ಅವಳ ಮೇಲೆ ದೌರ್ಜನ್ಯ ಆಗಿದೆ ಎಂಬುದನ್ನು ಸಮಾಜ ಒಪ್ಪಿಕೊಂಡರೆ ಸಾಕು. ಲಿಂಚಿಂಗ್ ಕೇಸುಗಳಲ್ಲಿ ಒಂದು ಕೇಸನ್ನೂ ಕೂಡ ದಾಖಲು ಮಾಡದಂತಹ ಒಂದು ಸರಕಾರ ಮುಸ್ಲಿಂ ಮಹಿಳೆಯ ಮೇಲೆ ಆಗುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಬಲ್ಲದೇ?” ಎಂದು ಪ್ರಶ್ನಿಸಿದರು.

“ಬಾಲ್ಯವಿವಾಹಗಳ ಸಂಖ್ಯೆ ಇಂದು ಕಡಿಮೆಯಾಗಿದ್ದರೆ ಅದಕ್ಕೆ ಕಾರಣ ಸಂಘಟನೆಗಳು ಸಮಾಜದಲ್ಲಿ ಮೂಡಿಸಿರುವ ಜಾಗೃತಿ, ಹೆಣ್ಣುಮಕ್ಕಳಿಗೆ ಸಿಕ್ಕಿರುವ ಶಿಕ್ಷಣ, ಬೀದಿಯಲ್ಲಿ ನಿಂತು ಮಾಡಿದ ಹೋರಾಟಗಳು ಮತ್ತು ಜೀವನೋಪಾಯದ ಅವಕಾಶಗಳು ಕಾರಣವೇ ಹೊರತು, ನ್ಯಾಯಾಲಯ ಅಥವಾ ಕಾನೂನು ಅಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, “ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪಗಳ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಮೌನವಾಗಿದ್ದರೆ” ಎಂದು ಟೀಕಿಸಿದರು.

“ನಾವು ಆರಂಭದಲ್ಲಿ ಸಾರ್ವಜನಿಕವಾಗಿ ಆರೋಪಗಳನ್ನು ಮಾಡಿದಾಗ, ನಮಗೆ ರಾಜಕೀಯ ನಾಯಕರಿಂದ ಬೆಂಬಲ ಸಿಗಲಿಲ್ಲ. ವಾಸ್ತವವಾಗಿ, ಅನೇಕರು ಈ ಆರೋಪಗಳು ನಿಜವಲ್ಲ ಎಂದಿದ್ದರು” ಎಂದು ಹೇಳಿದರು.

“ಮುರುಘಾ ಶರಣರ ವಿರುದ್ಧ ಆರೋಪ ಮಾಡಿರುವ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಅಪರಾಧಿಗಳನ್ನು ಪ್ರಶ್ನಿಸಬೇಕೇ ಹೊರತು ಅನ್ಯಾಯವನ್ನು ಎತ್ತಿ ಹಿಡಿಯುವವರನ್ನಲ್ಲ. ಕೊಡಗು ಜಿಲ್ಲೆಯಲ್ಲಿ ಸ್ವಾಮೀಜಿಗೆ ಎಕರೆಗಟ್ಟಲೆ ಜಮೀನಿದೆ, ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗ-ಕೊಡಗು ನಡುವೆ ಸಂಚರಿಸುತ್ತಿದ್ದರು. ಈ ಪ್ರಜಾಪ್ರಭುತ್ವದಲ್ಲಿ ಧರ್ಮ ಮತ್ತು ರಾಜಕೀಯ ಜೊತೆಜೊತೆಯಲ್ಲಿ ಸಾಗುತ್ತಿವೆ” ಎಂದು ವಿಷಾದಿಸಿದರು.

ಮುರಘಾ ಮಠದಲ್ಲಿ ಅತ್ಯಾಚಾರಗಳು ನಡೆಯುತ್ತಿರುವ ಬಗ್ಗೆ 2006ರಿಂದಲೇ ನಮಗೆ ವಿಷಯ ಗೊತ್ತಾಗಿದ್ದರೂ ಸಾಕ್ಷಿಗಳು ಸಿಕ್ಕಿರಲಿಲ್ಲ. ಸುಮಾರು 200ಕ್ಕೂ ಹೆಚ್ಚು ಹೆಣ್ಣುಮಕ್ಕಳು ಅಲ್ಲಿ ಅತ್ಯಾಚಾರ ಸಂತ್ರಸ್ತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

‘ಅತ್ಯಾಚಾರದ ರಾಜಕೀಯ: ನ್ಯಾಯ, ಹೊಣೆಗಾರಿಕೆ ಮತ್ತು ಪುನಶ್ಚೇತನ’ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಒಡನಾಡಿಯ ಸ್ಟ್ಯಾನ್ಲಿಯವರು ಮಾತನಾಡಿದರು.

ಅಖಿಲ ಭಾರತೀಯ ಮಹಿಳಾ ಜನವಾದಿ ಸಂಘಟನೆಯ ಮೀನಾಕ್ಷಿ ಬಾಳಿ ಮಾತನಾಡಿ, “ಮುರುಘಾ ಮಠದ ಸ್ವಾಮೀಜಿಯ ಪ್ರಕರಣದಲ್ಲಿನ ಬೆಳವಣಿಗೆಗಳು ಧಾರ್ಮಿಕ ಮುಖಂಡರ ವಿರುದ್ಧದ ಪ್ರಕರಣಗಳ ಹೋರಾಟದ ರೀತಿಗೆ ಒಂದು ಉದಾಹರಣೆಯಾಗಿದೆ” ಎಂದು ಬಣ್ಣಿಸಿದರು.

ರಾಮಚಂದ್ರಾಪುರ ಮಠದ ಅತ್ಯಾಚಾರ ಪ್ರಕರಣದ ಉದಾಹರಣೆ ಕೊಡುತ್ತ “ಧರ್ಮ, ಜಾತಿಯ ಮೇಲರಿಮೆಯು ಅತ್ಯಾಚಾರವನ್ನು ಮಾಡಿಯೂ ಗೆಲ್ಲುತ್ತದೆ. ಹವ್ಯಕ ಬ್ರಾಹ್ಮಣರ ಪ್ರಬಲ ಸಮುದಾಯವು 10 ನ್ಯಾಯಾಧೀಶರನ್ನು ಕೇಸಿನಿಂದ ಹಿಂದೆ ಸರಿಯುವಂತೆ ಮಾಡಿತು. ಕಡೆಗೆ ಸಿ.ಐ.ಡಿ.ಗಳು ದೂರು ದಾಖಲಿಸುವಂತಿಲ್ಲ ಎಂದು ಹೇಳಿ ಕೇಸನ್ನು ಕೈಬಿಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಅತ್ಯಾಚಾರ ಸಂತ್ರಸ್ತರೊಬ್ಬರು ತಮ್ಮ ನೋವನ್ನು ಹಂಚಿಕೊಂಡು ನಾನು ನಿಮ್ಮೆಲ್ಲರ ಬೆಂಬಲದಿಂದ ಹೋರಾಟವನ್ನು ಮುಂದುವರೆಸುತ್ತೇನೆ ತಮ್ಮ ನಿರ್ಧಾರ ಪ್ರಕಟಿಸಿದರು.

ಓಪನ್ ಸ್ಪೇಸಸ್‌ನ ಅನಿತಾ ಚೆರಿಯಾ ಮಾತನಾಡಿ, “ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳಿಗೆ ಸುಮ್ಮನಿರುವುದನ್ನು ಸತತವಾಗಿ ಕಲಿಸಲಾಗುತ್ತಿದೆ. ಅವರು ತಮ್ಮ ಸಮುದಾಯದ ಒಳಗಡೆ ಆಗುವ ದೌರ್ಜನ್ಯವನ್ನೂ ಹೇಳಿಕೊಳ್ಳುವಂತಿಲ್ಲ, ಸಮುದಾಯದ ಮೇಲೆ ನಡೆಯುವ ದೌರ್ಜನ್ಯವನ್ನೂ ಬಾಯಿ ಬಿಚ್ಚಲಾಗುತ್ತಿಲ್ಲ” ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಂಬೈನ ಬೇಬಾಕ್ ಸಂಘಟನೆಯ ಹಸೀನಾ ಖಾನ್, “ಮುಸ್ಲಿಮ್ ಸಮುದಾಯದ ಮಹಿಳೆಯರು ಮತ್ತು ಇಡೀ ಸಮುದಾಯವೇ ಚೀರಿ ಚೀರಿ ಹೇಳುತ್ತಿದ್ದರೂ ಸರಕಾರವು ಕೇಳಿಸಿಕೊಳ್ಳದಂತೆ ಕುಳಿತಿದೆ” ಎಂದು ತಮ್ಮ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ ಸಂಘಟನೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶದ ಹಕ್ಕೊತ್ತಾಯಕ್ಕೆ ಸ್ಪಂದಿಸಲು ಪೊಲೀಸ್ ಅಧಿಕಾರಿಗಳಾದ ಎಸಿಪಿ ನಾರಾಯಣ್ ಅವರು ಆಗಮಿಸಿದ್ದರು. ಹಕ್ಕೊತ್ತಾಯಗಳನ್ನು ಅವರು ಸ್ವೀಕರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...