Homeಮುಖಪುಟಪಾಕಿಸ್ತಾನ: ಧರ್ಮನಿಂದನೆ ಆರೋಪದಲ್ಲಿ ಪೊಲೀಸ್ ಬಂಧನದಲ್ಲಿದ್ದ ವ್ಯಕ್ತಿಯ ಕೊಲೆ; ಠಾಣೆಗೆ ನುಗ್ಗಿ ಉದ್ರಿಕ್ತ ಗುಂಪಿನ ಅಟ್ಟಹಾಸ

ಪಾಕಿಸ್ತಾನ: ಧರ್ಮನಿಂದನೆ ಆರೋಪದಲ್ಲಿ ಪೊಲೀಸ್ ಬಂಧನದಲ್ಲಿದ್ದ ವ್ಯಕ್ತಿಯ ಕೊಲೆ; ಠಾಣೆಗೆ ನುಗ್ಗಿ ಉದ್ರಿಕ್ತ ಗುಂಪಿನ ಅಟ್ಟಹಾಸ

- Advertisement -
- Advertisement -

“ಪಾಕಿಸ್ತಾನದ ನಂಕಾನಾ ಸಾಹಿಬ್ ನಗರದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಲಾಗಿದ್ದ ವ್ಯಕ್ತಿಯನ್ನು ಉದ್ರಿಕ್ತ ಗುಂಪೊಂದು ಶನಿವಾರ ಪೊಲೀಸ್ ಠಾಣೆಗೆ ನುಗ್ಗಿ ಕೊಂದಿದೆ” ಎಂದು ಪಾಕಿಸ್ತಾನದ ‘ಡಾನ್’ ಮಾಧ್ಯಮ ವರದಿ ಮಾಡಿದೆ.

ಸಂತ್ರಸ್ತ ಮುಹಮ್ಮದ್ ವಾರಿಸ್, ಕುರಾನ್‌ನ ಕೆಲವು ಪುಟಗಳನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಉದ್ರಿಕ್ತ ಗುಂಪು ಶನಿವಾರ ವಾರಿಸ್‌ನನ್ನು ನೇಣಿಗೆ ಹಾಕಲು ಪ್ರಯತ್ನಿಸಿತ್ತು, ಆದರೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು.

ದೊಡ್ಡ ಗುಂಪೊಂದು ನಂಕಾನಾ ಸಾಹಿಬ್ ಪೊಲೀಸ್ ಠಾಣೆಯ ಗೇಟ್‌ಗಳನ್ನು ಒಡೆದು, ಆವರಣಕ್ಕೆ ನುಗ್ಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

“ಪೊಲೀಸರು ಅವರನ್ನು [ಜನಸಮೂಹ] ತಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಇದ್ದರು” ಎಂದು ಪೊಲೀಸ್ ವಕ್ತಾರ ಮುಹಮ್ಮದ್ ವಕಾಸ್ ರಾಯಿಟರ್ಸ್‌‌ಗೆ ತಿಳಿಸಿದ್ದಾರೆ.

ಆರೋಪಿಯನ್ನು ಸೆರೆಮನೆಯಿಂದ ಹೊರಗೆ ಎಳೆದೊಯ್ದು ಹೊಡೆದು ಕೊಲ್ಲಲಾಗಿದೆ. ದೇಹಕ್ಕೆ ಬೆಂಕಿ ಹಚ್ಚುವುದನ್ನು ತಡೆಯಲಷ್ಟೇ ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಯಿತು ಎಂದು ವಕಾಸ್ ತಿಳಿಸಿದ್ದಾರೆ.

ಘಟನೆಯ ನಂತರ ಪಂಜಾಬ್ ಇನ್ಸ್‌ಪೆಕ್ಟರ್ ಜನರಲ್ ಡಾ ಉಸ್ಮಾನ್ ಅನ್ವರ್ ಅವರು ಸ್ಟೇಷನ್ ಹೌಸ್ ಆಫೀಸರ್ ಮತ್ತು ನಂಕಾನಾ ಸಾಹಿಬ್ ಸರ್ಕಲ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ನವಾಜ್ ವಾರಕ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘಟನೆಯನ್ನು ಟೀಕಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಬಿಡುಗಡೆ ಮಾಡಿದ ‘ಎ ಬ್ರೀಚ್ ಆಫ್ ಫೇಯ್ತ್: ಫ್ರೀಡಂ ಆಫ್ ರಿಲಿಜನ್ ಆರ್‌ ಬಿಲೀಫ್ ಇನ್ 2021-22’ ಎಂಬ ವರದಿಯು ದೇಶದಲ್ಲಿ ಧರ್ಮನಿಂದೆಯ ಪ್ರಕರಣಗಳ ಆತಂಕಕಾರಿ ಏರಿಕೆಯನ್ನು ಪ್ರಕಟಿಸಿತ್ತು.

2021ರ ಪೊಲೀಸ್ ಅಂಕಿಅಂಶಗಳು, ಈ ವರ್ಷದಲ್ಲಿ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ 585 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿವೆ. ಹೆಚ್ಚಿನ ಪ್ರಕರಣಗಳು ಪಂಜಾಬ್ ಪ್ರಾಂತ್ಯದಲ್ಲಿ ದಾಖಲಾಗಿವೆ ಎಂದು ವರದಿ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...