Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಶ್ರವಣಬೆಳಗೊಳ: ಖಾತೆ ತೆರೆಯದ ಬಿಜೆಪಿ - ಜೆಡಿಎಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಕಸರತ್ತು

ಶ್ರವಣಬೆಳಗೊಳ: ಖಾತೆ ತೆರೆಯದ ಬಿಜೆಪಿ – ಜೆಡಿಎಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಕಸರತ್ತು

- Advertisement -
- Advertisement -

ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ದ ಶ್ರವಣಬೆಳಗೊಳ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಶ್ವವಿಖ್ಯಾತ 58 ಅಡಿಯ ಏಕಶಿಲಾ ಬಾಹುಬಲಿ ಮೂರ್ತಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಜೈನರ ಪುಣ್ಯಕ್ಷೇತ್ರವೂ ಹೌದು. ಭರತ ಮತ್ತು ಬಾಹುಬಲಿಯ ಸಂಕೇತವಾಗಿ ಚಂದ್ರಗಿರಿ ಬೆಟ್ಟ ಮತ್ತು ಇಂದ್ರಗಿರಿ ಬೆಟ್ಟಗಳಿವೆ. ಇಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಇಲ್ಲಿನ ವಿಶೇಷ ಸಂಭ್ರಮಾಚರಣೆಯಾಗಿದೆ.

ಶ್ರವಣಬೆಳಗೊಳಕ್ಕೆ ತಾಲ್ಲೂಕು ಕೇಂದ್ರ ಚನ್ನರಾಯಪಟ್ಟಣ. ಶ್ರವಣಬೆಳಗೊಳದಿಂದ ಚನ್ನರಾಯಪಟ್ಟಣ ಕೇವಲ 13 ಕಿ.ಮೀ ಸಮೀಪವಿದ್ದರೂ ವಿಧಾನಸಭಾ ಕ್ಷೇತ್ರಕ್ಕೆ ಶ್ರವಣಬೆಳಗೊಳ ಕ್ಷೇತ್ರ ಎಂದೇ ಹೆಸರಿಡಲಾಗಿದೆ. ತಾಲ್ಲೂಕಿನಲ್ಲಿ ತೆಂಗು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಯೂ ಹೌದು. ಭೌಗೋಳಿಕವಾಗಿ ಹೆಚ್ಚು ಬಯಲು ಸೀಮೆಯನ್ನು ಹೊಂದಿರುವ ಕ್ಷೇತ್ರದಲ್ಲಿ, ಕೃಷಿಗೆ ಸಂಬಂಧಿಸಿದಂತೆ ತೆಂಗು, ಕಬ್ಬು, ಭತ್ತ , ಇತ್ತೀಚೆಗೆ ಶುಂಠಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ ಕಡೆಗೆ ರೈತರು ಮುಖಮಾಡಿದ್ದಾರೆ. ಹೇಮಾವತಿ ಎಡದಂಡ ನಾಲೆ ಮತ್ತು ಬಲದಂಡ ನಾಲೆಗಳು ಕೆಲ ಭಾಗಗಳಲ್ಲಿ ಕೃಷಿಗೆ ನೀರಾವರಿ ಒದಗಿಸಿವ ರೈತರ ಜೀವನಾಡಿಯಾಗಿದೆ.

ಕ್ಷೇತ್ರದ ರಾಜಕೀಯ ಇತಿಹಾಸ

2023ರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಅಖಾಡ ಮತ್ತಷ್ಟು ರಂಗೇರಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಆ ಸಮುದಾಯದ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸಿ ಶಾಸಕರಾಗಿ ಬಂದಿರುವುದು ಇತಿಹಾಸವಾಗಿದೆ. 1957 ರಿಂದ ಶುರುವಾದ ಅಸೆಂಬ್ಲಿ ರಾಜಕೀಯ ಏಳುಬೀಳಿನ ಒಂದು ಇಣುಕು ನೋಟ ಇಲ್ಲಿದೆ.

1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಲಕ್ಕಪನವರ ವಿರುದ್ದ ಎನ್‌.ಜಿ.ನರಸಿಂಹೇಗೌಡ ಎಂಬುವವರು ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿ 9,837 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ನಂತರ 1972 ರವರೆಗೆ ಸತತ 4 ಬಾರಿ ಪಿಎಸ್‌ಪಿ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಇನ್ನೊಂದು ಕುತೂಹಲಕಾರಿ ಅಂಶವೆಂದರೆ 1967 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀಕಂಠಯ್ಯ 1972ರಲ್ಲಿ ಪಿಎಸ್‌ಪಿ ಪಕ್ಷದ ಅಭ್ಯರ್ಥಿಯಾಗಿ 30,308 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಕುಂತಲಮ್ಮ ಅವರನ್ನು 12134 ಮತಗಳ ಅಂತರದಿಂದ ಸೋಲಿಸುತ್ತಾರೆ.

1978ರಲ್ಲಿ ಮತ್ತೆ ಕಾಂಗ್ರೆಸ್ ಸೇರುವ ಹೆಚ್‌.ಸಿ.ಶ್ರೀಕಂಠಯ್ಯ ನಂತರ ನಡೆದ ಚುನಾವಣೆಯಲ್ಲಿ ಜನತಾಪಕ್ಷದ ಅಭ್ಯರ್ಥಿ ಎನ್‌.ಗಂಗಾಧರ್ ವಿರುದ್ಧ ಸ್ಪರ್ಧಿಸಿ 17,605 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆಯುವಂತೆ ಮಾಡಿದ್ದರು. 1983 ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ  ಶ್ರೀಕಂಠಯ್ಯ 41,164 ಮತಗಳನ್ನು ಪಡೆದು ಎನ್.ಗಂಗಾಧರ್ ಅವರ ಎದುರು 11,502 ಮತಗಳ ಅಂತರದಿಂದ ಗೆಲುವು ಸಾಧಿಸಿರುತ್ತಾರೆ. ರಾಜಕೀಯ ಅನಿಶ್ಚಿತೆಯಿಂದಾಗಿ ಮತ್ತೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪಧಿಸಿದ ಎನ್.ಗಂಗಾಧರ್ 44,522 ಮತಗಳನ್ನು 5,367 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಎನ್‌.ಬಿ.ನಂಜಪ್ಪ ಅವರನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ್ದರು.

1989ರಲ್ಲಿ ನಡೆದ ಚುನಾವಣೆಯಲ್ಲಿ ಡಾ.ಎನ್‌.ಬಿ. ನಂಜಪ್ಪನವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ 62,350 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಯಾಗಿ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದ ಸಿ.ಎಸ್‌.ಪುಟ್ಟೇಗೌಡ  41,711 ಮತಗಳನ್ನು ಪಡೆದು 20,639 ಮತಗಳ ಅಂತರದಿಂದ ಸೋಲುಂಡಿದ್ದರು. 1994ರಲ್ಲಿ ಜನತಾದಳದಿಂದ ಅಭ್ಯರ್ಥಿಯಾದ ಸಿ.ಎಸ್‌.ಪುಟ್ಟೇಗೌರು 66,906 ಮತಗಳನ್ನು ಪಡೆದು ಕಾಂಗ್ರೆಸ್‌ನ ಶ್ರೀಕಂಠಯ್ಯನವರ ವಿರುದ್ದ ಸುಮಾರು 21,035 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದರು. 1999ರಲ್ಲಿ  ಶ್ರೀಕಂಠಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 65,624 ಮತಗಳನ್ನು ಪಡೆದು ಜಿಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟೇಗೌಡ ವಿರುದ್ದ 23048 ಮತಗಳ ಅಂತರದಿಂದ ಗೆಲುವು ಸಾಧಿಸಿ ಕಂದಾಯ ಸಚಿವರು ಆಗಿದ್ದರು.

2004 ಹಾಗೂ 2008ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಸಿ.ಎಸ್‌. ಪುಟ್ಟೇಗೌಡರು 2013ರ ಚುನಾವಣೆ ವೇಳೆಗೆ ಪಕ್ಷ ಬದಲಾಯಿಸಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಸಿ.ಎನ್‌.ಬಾಲಕೃಷ್ಣ ಅಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್​ ಪಡೆದು ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಇದಾದ ಬಳಿಕ ಕಳೆದ 2018ರ ಚುನಾವಣೆಯಲ್ಲೂ ಸ್ಪರ್ಧಿಸಿದ ಸಿ.ಎನ್‌.ಬಾಲಕೃಷ್ಣ ಮತ್ತೆ ಗೆಲುವಿನ ಸಿಹಿ ಉಂಡಿದ್ದಾರೆ.

ಹಾಲಿ ಶಾಸಕರಾದ ಸಿ.ಎನ್‌.ಬಾಲಕೃಷ್ಣ ತಮಗೆ ಸಿಕ್ಕ ಅವಕಾಶಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಮೂಲಕ ಕ್ಷೇತ್ರದ ಜನರಲ್ಲಿ ಬಾಲಣ್ಣ ಎಂದೇ ಪ್ರೀತಿಗಳಿಸಿದ್ದಾರೆ. ಅಲ್ಲದೆ ಕಾಂಗ್ರೆಸ್​ ಕೈ ಹಿಡಿದಿದ್ದ ಸಿ.ಎಸ್‌. ಪುಟ್ಟೇಗೌಡರು ಈ ಕ್ಷೇತ್ರದಿಂದ ಸತತ ಎರಡು ಬಾರಿ ಸ್ಪರ್ಧಿಸಿದರೂ, ಗೆಲುವು ಕಾಣಲು ಸಾಧ್ಯವಾಗಿಲ್ಲ. ಅಲ್ಲದೆ ಸಿ.ಎನ್‌.ಬಾಲಕೃಷ್ಣರ ವಿರುದ್ಧ ಅವರ ಸೋಲಿನ ಅಂತರ ಹೆಚ್ಚಾಯಿತು. 2013ರಲ್ಲಿ 24ಸಾವಿರ ಮತಗಳಿಂದ ಸೋತ್ತಿದ್ದ ಪುಟ್ಟೇಗೌಡರು 2018ರಲ್ಲಿ 53 ಸಾವಿರ ಮತಗಳಿಂದ ಸೋಲಿಗೆ ಶರಣಾಗಿದ್ದರು.

2018ರಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಶಿವನಂಜೇಗೌಡ, ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವುದಿಲ್ಲ ಎಂಬ ವಿಷಯ ತಿಳಿಯುತ್ತಿದಂತೆ, ಬಿಜೆಪಿಗೆ ಜಂಪ್ ಆಗಿದ್ದರು ನಂತರ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಅವರು 7,506 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದರು. ಈಗಲೂ ಕ್ಷೇತ್ರದಲ್ಲಿ ಬಿಜೆಪಿ ನಾಮಕಾವಸ್ತೆ ಎಂಬಂತಿದೆ.

1957 ಎನ್‌ ಜಿ ನರಸಿಂಹೇಗೌಡ ಪಿಎಸ್‌ ಪಿ 16923 ಕೆ ಲಕ್ಕಪ್ಪ ಕಾಂಗ್ರೆಸ್‌ 7086 9837
1962 ಎಸ್‌ ಶಿವಪ್ಪ ಪಿಎಸ್ ಪಿ 21136 ಕೆ ಲಕ್ಕಪ್ಪ ಕಾಂಗ್ರೆಸ್‌ 12483 8653
1967 ಎಸ್‌ ಶಿವಪ್ಪ ಪಿ ಎಸ್‌ ಪಿ 30637 ಶ್ರೀ ಕಂಠಯ್ಯ ಕಾಂಗ್ರೆಸ್‌ 16798 13839
1972 ಶ್ರೀ ಕಂಠಯ್ಯ ಪಿ ಎಸ್‌ ಪಿ 30308 ಶಕುಂತಲಮ್ಮ ಕಾಂಗ್ರೆಸ್‌ 18174 12134
1978 ಶ್ರೀ ಕಂಠಯ್ಯ ಕಾಂಗ್ರೆಸ್‌ 43045 ಎನ್‌ ಗಂಗಾಧರ ಜೆಎನ್‌ ಪಿ 25440 17605
1983 ಶ್ರೀ ಕಂಠಯ್ಯ ಕಾಂಗ್ರೆಸ್‌ 41164 ಎನ್‌ ಗಂಗಾಧರ ಜೆಎನ್‌ ಪಿ 29662 11502
1985 ಎನ್‌ ಗಂಗಾಧರ ಜೆಎನ್‌ ಪಿ 44522 ಎನ್‌ ಬಿ ನಂಜಪ್ಪ ಕಾಂಗ್ರೆಸ್‌ 39155 5367
1989 ಎನ್‌ ಬಿ ನಂಜಪ್ಪ ಕಾಂಗ್ರೆಸ್‌ 62350 ಸಿ ಎಸ್‌ ಪುಟ್ಟೇಗೌಡ ಜೆಎನ್‌ ಪಿ 41711 20639
1994 ಸಿ ಎಸ್‌ ಪುಟ್ಟೇಗೌಡ ಜನತಾದಳ 66906 ಶ್ರೀ ಕಂಠಯ್ಯ ಕಾಂಗ್ರೆಸ್‌ 45871 21035
1999 ಶ್ರೀ ಕಂಠಯ್ಯ ಕಾಂಗ್ರೆಸ್‌ 65624 ಸಿ ಎಸ್‌ ಪುಟ್ಟೇಗೌಡ ಜನತಾದಳ 42576 23048
2004 ಸಿ ಎಸ್‌ ಪುಟ್ಟೇಗೌಡ ಜೆಡಿಎಸ್ 70461 ವಿನಯ್‌ ಕುಮಾರ್‌ ಹೆಚ್‌ ಎಸ್ ಕಾಂಗ್ರೆಸ್‌ 35585 34876
2008 ಸಿ ಎಸ್‌ ಪುಟ್ಟೇಗೌಡ ಜೆಡಿಎಸ್ 65726 ಶ್ರೀ ಕಂಠಯ್ಯ ಕಾಂಗ್ರೆಸ್‌ 56280 9446
2013 ಸಿಎನ್‌ ಬಾಲಕೃಷ್ಣ ಜೆಡಿಎಸ್ 87185 ಸಿ ಎಸ್‌ ಪುಟ್ಟೇಗೌಡ ಕಾಂಗ್ರೆಸ್‌ 63043 24142
2018 ಸಿಎನ್‌ ಬಾಲಕೃಷ್ಣ ಜೆಡಿಎಸ್ 105516 ಸಿ ಎಸ್‌ ಪುಟ್ಟೇಗೌಡ ಕಾಂಗ್ರೆಸ್‌ 52504 53012

ಕ್ಷೇತ್ರದ ಮತದಾರರ ವಿವರ:

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಟ್ಟು 2,12,070 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 1,06,029 ಹಾಗೂ ಮಹಿಳಾ ಮತದಾರರು – 1,06,041 ಇದ್ದಾರೆ. ಇಲ್ಲಿ ಅಂದಾಜು ಜಾತಿವಾರು ಮತದಾರರ ಅಂಕಿ ಸಂಖ್ಯೆಗಳನ್ನು ಲೆಕ್ಕಹಾಕಿದರೆ,

ಒಕ್ಕಲಿಗ-1,20,000
ಎಸ್ಸಿ- 24,000
ಎಸ್ಟಿ- 10,000
ಮುಸ್ಲಿಂ- 10,000
ಕುರುಬ- 7000
ಲಿಂಗಾಯತ-7000
ಇತರೆ: 35,000

2023ರ ಚುನಾವಣಾ ಕಣ :

ಜೆಡಿಎಸ್

ಶ್ರವಣಬೆಳಗೊಳ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸತತ ಎರಡು ಚುನಾವಣೆಯಲ್ಲಿ ಗೆಲುವು ಕಂಡಿರುವ ಹಾಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಅವರೇ ಈ ಬಾರಿಯೂ ಜೆಡಿಎಸ್​ನಿಂದ ಕಣಕ್ಕಿಳಿದಿದ್ದು, ತಾನು ಈ 10 ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ಜನರ ಮುಂದೆ ಮತಯಾಚನೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ತಳ ಮಟ್ಟದಿಂದ ರಾಜಕೀಯ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿರುವ ಸಿ.ಎನ್. ಬಾಲಕೃಷ್ಣ ಮೊದಲಿಗೆ ತಾಲೂಕು ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಅಧ್ಯಕ್ಷರಾಗಿ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ , ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ, ಸದ್ಯ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಿದೆ. ಇದರ ಜೊತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದವರು ಎಂಬ ಪದನಾಮವೂ ಬಾಲಣ್ಣನವರಿಗೆ ಪ್ಲಸ್ ಪಾಯಿಂಟ್.

ತಾಲ್ಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘಗಳು ಬಾಲಕೃಷ್ಣಾರವರ ಬೆನ್ನಿಗೆ ನಿಲ್ಲುತ್ತವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನ ಮಾಡಿರುವುದು, ಬಾಗೂರು ನವಿಲೆ ಸುರಂಗ ವ್ಯಾಪ್ತಿಯಲ್ಲಿ ಸುಮಾರು 30 ಕೆರೆಗಳಿಗೆ ತಮ್ಮದೇ ಖರ್ಚಿನಲ್ಲಿ ನೀರು ತುಂಬಿಸಿರುವುದು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಆದರೆ ಜೆಡಿಸ್‌ನಲ್ಲಿ ತಾವೊಬ್ಬರೇ ಬೆಳೆಯಬೇಕು ಎನ್ನುವ ಮನೋಭಾವದಿಂದಾಗಿ ಎರಡನೇ ನಾಯಕತ್ವವನ್ನು ಬೆಳಸುತ್ತಿಲ್ಲ ಎಂಬ ಆರೋಪದ ಜೊತೆಗೆ, ಗುತ್ತಿಗೆದಾರರು ಈ ಬಾರಿ ಬಾಲಣ್ಣನೊಂದಿಗೆ ಮುನಿಸಿಕೊಂಡಂತೆ ಕಾಣುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ 10ವರ್ಷ ಅವಧಿಯಲ್ಲಿ ಅಧಿಕಾರದಲ್ಲಿದ್ದರೂ, ಚನ್ನರಾಯಪಟ್ಟಣಕ್ಕೆ ಮೂರನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಯೋಜನೆಯನ್ನು ಪುಟ್ಟೇಗೌಡ ಶಾಸಕರಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಗಿದ್ದರೂ ನಂತರದಲ್ಲಿ ಅದನ್ನು ಅನುಷ್ಠಾನ ಮಾಡುವಲ್ಲಿ ಬಾಲಕೃಷ್ಣರವರು ಕಾರ್ಯೋನ್ಮುರಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅರಸೀಕೆರೆ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್‌ನ ಶಿವಲಿಂಗೇಗೌಡರು ಹೇಮಾವತಿಯಿಂದ ಅರಸೀಕೆರೆಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಿದ್ದಾರೆ, ಆದರೆ ಚನ್ನರಾಯಪಟ್ಟಣಕ್ಕೆ ಕೂಗಳತೆ ದೂರದಲ್ಲಿದ್ದರೂ ಹೇಮಾವತಿಯಿಂದ ಕುಡಿಯುವ ನೀರಿನ ಮೂರನೇ ಹಂತದ ಯೋಜನೆಯನ್ನು ಜಾರಿ ಮಾಡಲಾಗಿಲ್ಲ ಎಂಬ ಕೊರಗು ಜನರದ್ದು.

ಇನ್ನು ಬಾಲಕೃಷ್ಣ ಅವರಿಗೆ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಡದೇ ಹೋದರೂ ಕಾಂಗ್ರೆಸ್‌ನಿಂದ ಎಂ.ಎ.ಗೋಪಾಲಸ್ವಾಮಿಗೆ ಟಿಕೆಟ್ ಸಿಕ್ಕಿರುವುದು ಬಾಲಕೃಷ್ಣರ ಗೆಲುವಿನ ಓಟಕ್ಕೆ ಸ್ಪಲ್ಪ ಅಡಚಣೆ ಆಗಬಹುದು ಎನ್ನಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿ ಗೋಪಾಲಸ್ವಾಮಿಯವರ ಬೆಂಬಲಕ್ಕೆ ನಿಂತರೆ ಬಾಲಕೃಷ್ಣರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕೇಳುಬರುತ್ತಿದೆಯಾದರೂ, ಸದ್ಯಕ್ಕೆ ಕ್ಷೇತ್ರದಲ್ಲಿ ಬಾಲಕೃಷ್ಣ ಸೇಫ್ ಜೋನ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪರಿಸ್ಥಿತಿ

ಕಳೆದ 4 ವಿಧಾನಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಮುಖ್ಯವಾಗಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಒಲವು ತೋರಿದ್ದು ಕಡಿಮೆಯೇ. ಹೆಚ್‌.ಸಿ.ಶ್ರೀಕಂಠಯ್ಯ ನಂತರ ಕಾಂಗ್ರೆಸ್ ಒಮ್ಮೆಯೂ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಮಾಜಿ ಶಾಸಕ ಪುಟ್ಟೇಗೌಡ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬಂದರೂ ಗೆಲುವಿನ ದಡ ಸೇರಲು ಸಾಧ್ಯವಾಗಿಲ್ಲ.

ಇದೆಲ್ಲದರ ನಡುವೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರದ ಅವಧಿಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಗೋಪಾಲಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿ 2016ರಲ್ಲಿ ಹಾಸನ ಜಿಲ್ಲೆಯಿಂದ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ಗೆ ಕೊಂಚ ಬೂಸ್ಟ್‌ ನೀಡುತ್ತಾರೆ. ಅಂದಿನಿಂದ ಪಕ್ಷದ ಚಟುವಟಿಯಲ್ಲಿ ಸ್ವಲ್ಪ ಪ್ರಮಾಣದ ಚೇತರಿಕೆ ಕಂಡುಬರುತ್ತದೆ. ಆದರೆ ಪಕ್ಷದ ಒಳಗೆ ಬಣ ರಾಜಕೀಯಗಳು, ಅಧಿಕಾರದ ವ್ಯಮೋಹ, ನಾಯಕತ್ವದ ಕೊರತೆಗಳನ್ನು ಮೀರುವಲ್ಲಿ ಕ್ಷೇತ್ರದ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.

2023ರ ವಿಧಾನಸಭಾ ಕದನ ಕಣದಲ್ಲಿ ಕಾಂಗ್ರೆಸ್‌ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿ ಮನೆಮಾಡಿತ್ತು. ಅಂತಿಮವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿಯವರಿಗೆ ಪಕ್ಷ ಟಿಕೆಟ್ ನೀಡುವ ಮೂಲಕ ಮೂಲ ಕಾಂಗ್ರೆಸ್ಸಿಗರಿಗೆ ಮಣೆಹಾಕಿದೆ. ಆ ಮೂಲಕ ಜೆಡಿಎಸ್‌ನಿಂದ ವಲಸೆ ಬಂದು ಕಾಂಗ್ರೆಸ್‌ನಿಂದ ಎರಡು ಬಾರಿ ಸೋತಿದ್ದ ಸಿ.ಎಸ್.ಪುಟ್ಟೇಗೌಡರು ನೇಪತ್ಯಕ್ಕೆ ಸರಿದಿದ್ದಾರೆ. ಇನ್ನು ಮಾಜಿ‌ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರ ಮಗ ಹೆಚ್.ಎಸ್. ವಿಜಯ್ ಕುಮಾರ್ ಮತ್ತು ಜತ್ತೇನಹಳ್ಳಿ ರಾಮಚಂದ್ರ ಕೂಡಾ ಈ ಕ್ಷೇತ್ರದ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ ಅದೃಷ್ಟದ ಆಟದಲ್ಲಿ ಕಾಂಗ್ರೆಸ್ ಟಿಕೆಟ್ ಎಂ.ಎ.ಗೋಪಾಲಸ್ವಾಮಿಯವರ ವಶವಾಗಿದೆ.

ಬಿಜೆಪಿ

ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳುವಲ್ಲಿ ಮೊದಲಿನಿಂದಲೂ ಹರಸಾಹಸ ಮಾಡುತ್ತಲೇ ಇದ್ದು, ಈ ಬಾರಿಯೂ ಅಂತಹ ಮತ್ತೊಂದು ಪ್ರಯತ್ನ ನಡೆಯುತ್ತಿದೆ. 2018ರಲ್ಲಿ ವಿನಾಯಕ ಗ್ಯಾಸ್‌ ಏಜನ್ಸಿ ಮಾಲೀಕರಾದ ಶಿವನಂಜೇಗೌಡ ಚುನಾವಣೆಯಲ್ಲಿ ಸ್ಪರ್ಧಿಸಿ 7 ಸಾವಿರ ಮತಗಳನ್ನು ಪಡೆದು ಸೋತ್ತಿದ್ದರು. ಇನ್ನು 2023 ರ ವಿಧಾನಸಭಾ ಚುನಾವಣೆಯ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗದ್ದ ಅಣತಿ ಆನಂದ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಪ್ರೀತಂಗೌಡ ಅವರ ಆಪ್ತ ಮತ್ತು ನುಗ್ಗೇಹಳ್ಳಿಯ ಅಳಿಯ ಚಿದಾನಂದ ಎಂಬುವವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಆದರೆ ಕ್ಷೇತ್ರದಲ್ಲಿ ಇವರ ಬಗ್ಗೆ ಹೆಚ್ಚಿನ ಜನ ಮನ್ನಣೆಯಾಗಲೀ, ಪರಿಚಯವಾಗಲೀ ಇಲ್ಲ. ದೇವಸ್ಥಾನಗಳ ಅಭಿವೃದ್ದಿಗೆ ಹಣ ನೀಡುತ್ತ ಸಮಾಜ ಸೇವೆ ಹೆಸರಿನಲ್ಲಿ ಚುನಾವಣೆ ಎದುರಿಸಲಿದ್ದಾರೆ. ಆದರೆ ಟಿಕೆಟ್ ವಂಚಿತ ಅಣತಿ ಆನಂದ್ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಮತ್ತು ಅಭ್ಯರ್ಥಿ ಪರವಾಗಿ ಪ್ರಚಾರಕ್ಕಾಗಲಿ ಹೋಗುತ್ತಿಲ್ಲ.

ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ ಇತರೆ ಪಕ್ಷಗಳಾದ, ಬಿಎಸ್‌ಪಿ, ಎಎಪಿ ಮತ್ತು ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು  ಚುನಾವಣಾ ಅಖಾಡದಲ್ಲಿ ಪರೀಕ್ಷೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...