Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಕೆ.ಆರ್ ಪೇಟೆ: ಜೆಡಿಎಸ್‌ನಿಂದ ಬಂದ ದೇವರಾಜುರವರಿಗೆ ಕಾಂಗ್ರೆಸ್ ಟಿಕೆಟ್ - ಕ್ಷೇತ್ರದ ಸ್ಥಿತಿ ಹೀಗಿದೆ

ಕೆ.ಆರ್ ಪೇಟೆ: ಜೆಡಿಎಸ್‌ನಿಂದ ಬಂದ ದೇವರಾಜುರವರಿಗೆ ಕಾಂಗ್ರೆಸ್ ಟಿಕೆಟ್ – ಕ್ಷೇತ್ರದ ಸ್ಥಿತಿ ಹೀಗಿದೆ

- Advertisement -
- Advertisement -

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರವು ಮಂಡ್ಯದಿಂದ ದೂರ ಇರುವ ಕಾರಣಕ್ಕೂ, ಹೊಳೆನರಸೀಪುರ-ಚನ್ನರಾಯಪಟ್ಟಣ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಕಾರಣಕ್ಕೂ ಇಲ್ಲಿನ ರಾಜಕಾರಣದ ಮೇಲೆ ದೇವೇಗೌಡರ ಕುಟುಂಬ ಹಿಡಿತ ಹೊಂದಿದೆ. ಇಲ್ಲಿಯೇ ಬಿಜೆಪಿ ಪಕ್ಷವು  2019ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ತನ್ನ ಖಾತೆ ತೆರೆದಿದೆ. ಈ ಬಾರಿ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಆ ಕುರಿತ ಚುನಾವಣಾ ಪೂರ್ವ ವಿಶ್ಲೇಷಣೆ ಇಲ್ಲಿದೆ.

ಕ್ಷೇತ್ರದಲ್ಲಿ ಇದುವರೆಗೂ ನಡೆದಿರುವ 17 ಚುನಾವಣೆಗಳಲ್ಲಿ ಕಾಂಗ್ರೆಸ್: 7 ಬಾರಿ, ಜೆಡಿಎಸ್‌: 3 ಬಾರಿ, ಜನತಾ ಪರಿವಾರ: 3 ಬಾರಿ, ಸ್ವತಂತ್ರ ಅಭ್ಯರ್ಥಿಗಳು 3 ಬಾರಿ, ಬಿಜೆಪಿ ಒಮ್ಮೆ ಗೆಲುವು ಕಂಡಿದೆ.

1999ರ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಪಕ್ಷವು ಬಿ.ಎಲ್ ದೇವರಾಜುರವರಿಗೆ ಟಿಕೆಟ್ ನೀಡುತ್ತದೆ. ಕಾಂಗ್ರೆಸ್ ಪಕ್ಷದಿಂದ ಕೆ.ಬಿ ಚಂದ್ರಶೇಖರ್ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. 2004ರಲ್ಲಿಯೂ ಕೆ.ಬಿ ಚಂದ್ರಶೇಖರ್ ಮರು ಆಯ್ಕೆ ಬಯಸಿ ಕಣಕ್ಕಿಳಿಯುತ್ತಾರೆ. ಕೃಷ್ಣರವರು ರಾಜ್ಯ ರಾಜಕಾರಣಕ್ಕೆ ಮರಳಿ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಪ್ರಕಾಶ್ ಮತ್ತೆ ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಈ ಬಾರಿ ಕೃಷ್ಣರವರು ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ’ಸ್ಪೀಕರ್ ಕೃಷ್ಣ’ ಎಂದು ಹೆಸರು ಪಡೆಯುತ್ತಾರೆ.

2008ರಲ್ಲಿ ಕೃಷ್ಣರವರು ಮರು ಆಯ್ಕೆ ಬಯಸಿ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರೆ. ಟಿಕೆಟ್ ಸಿಗದ ಪ್ರಕಾಶ್‌ರವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಕೆ.ಬಿ ಚಂದ್ರಶೇಖರ್‌ರವರಿಗೆ ಟಿಕೆಟ್ ನೀಡುತ್ತದೆ. ಮುಂಬೈನಿಂದ ಬಂದ ಉದ್ಯಮಿ ಕೆ.ಸಿ ನಾರಾಯಣಗೌಡ ಬಿಎಸ್‌ಪಿಯಿಂದ ಚುನಾವಣೆಗೆ ನಿಲ್ಲುತ್ತಾರೆ. ಈ ಚುನಾವಣೆಯಲ್ಲಿ ಕೆ.ಬಿ ಚಂದ್ರಶೇಖರ್ 3,056 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಕೆ.ಬಿ ಚಂದ್ರಶೇಖರ್ 48,558 ಮತಗಳನ್ನು ಪಡೆದರೆ, ಕೃಷ್ಣರವರು 45,500 ಮತಗಳನ್ನು ಪಡೆಯುತ್ತಾರೆ. ಬಿ.ಪ್ರಕಾಶ್‌ರವರು 27,131 ಮತಗಳನ್ನು ಪಡೆದರೆ ನಾರಾಯಣಗೌಡರು 10,218 ಮತಗಳನ್ನು ಪಡೆಯುತ್ತಾರೆ.

2013ರ ಚುನಾವಣೆಯಲ್ಲಿ ಕೆ.ಬಿ ಚಂದ್ರಶೇಖರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಕೆ.ಸಿ ನಾರಾಯಣಗೌಡರು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಸಿಟ್ಟಿಗೆದ್ದ ಕೃಷ್ಣರವರು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಮೂವರ ನಡುವಿನ ಕದನದಲ್ಲಿ ಕೆ.ಸಿ ನಾರಾಯಣಗೌಡರು 9,243 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾಗುತ್ತಾರೆ. ಅವರು 56,784 ಮತಗಳನ್ನು ಪಡೆದರೆ, ಕೆ.ಬಿ ಚಂದ್ರಶೇಖರ್ 47,541 ಮತ ಗಳಿಸುತ್ತಾರೆ. ಕೃಷ್ಣರವರಿಗೆ 37,764 ಮತಗಳು ಲಭಿಸುತ್ತವೆ.

2018ರ ಚುನಾವಣೆಗೆ ಮತ್ತೆ ಕೆ.ಸಿ ನಾರಾಯಣಗೌಡರು ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಕೆ.ಬಿ ಚಂದ್ರಶೇಖರ್‌ಗೆ ಟಿಕೆಟ್ ನೀಡುತ್ತದೆ. 88,016 ಮತಗಳನ್ನು ಪಡೆಯುವ ನಾರಾಯಣಗೌಡರು ಮತ್ತೊಮ್ಮೆ ಗೆದ್ದು ಬರುತ್ತಾರೆ. ಕೆ.ಬಿ ಚಂದ್ರಶೇಖರ್ 70,879 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಬಿ.ಸಿ ಮಂಜು ಕೇವಲ 9,819 ಮತಗಳಿಗೆ ಸೀಮಿತರಾಗುತ್ತಾರೆ. ಆದರೆ ಕೆ.ಸಿ ನಾರಾಯಣಗೌಡರು ಆಪರೇಷನ್ ಕಮಲದ ಬಲೆಗೆ ಬೀಳುತ್ತಾರೆ. ಹಾಗಾಗಿ 2019ರಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಜೆಡಿಎಸ್‌ನಿಂದ ಬಿ.ಎಲ್ ದೇವರಾಜುರವರು ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಮತ್ತೆ ಕೆ.ಬಿ ಚಂದ್ರಶೇಖರ್‌ರವರಿಗೆ ಟಿಕೆಟ್ ನೀಡುತ್ತದೆ. ಬಿಜೆಪಿ ಸರ್ಕಾರದ ಮಂತ್ರಿಗಳು ಕ್ಷೇತ್ರದಲ್ಲಿ ಬೀಡುಬಿಡುತ್ತಾರೆ. ರಾಜ್ಯದ ನಾನಾ ಭಾಗಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಆಗಮಿಸಿ ಕ್ಷೇತ್ರದ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಾರೆ. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ದುಡ್ಡಿನ ಹೊಳೆಯನ್ನು ಹರಿಸಿದ ಪರಿಣಾಮ ನಾರಾಯಣಗೌಡರು 9,731 ಮತಗಳ ಅಂತರದಿಂದ ಮೂರನೇ ಬಾರಿಗೆ ಗೆದ್ದು ಬರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುತ್ತದೆ. ನಾರಾಯಣಗೌಡರು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾಗುತ್ತಾರೆ.

ನಾರಾಯಣಗೌಡರು 66,094 ಮತಗಳನ್ನು ಪಡೆದರೆ, ಜೆಡಿಎಸ್‌ನ ಬಿ.ಎಲ್ ದೇವರಾಜುರವರು 56,363 ಮತಗಳನ್ನು ಪಡೆಯುತ್ತಾರೆ. ಕೆ.ಬಿ ಚಂದ್ರಶೇಖರ್ 41,665 ಸಾವಿರ ಮತಗಳಿಗೆ ಕುಸಿಯುತ್ತಾರೆ.

ಅಂದಾಜು ಜಾತಿವಾರು ಮತಗಳು

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುರುಬ ಸಮುದಾಯ ಎರಡನೇ ಸ್ಥಾನ ಪಡೆದಿದೆ. ಪ.ಜಾ ಮತಗಳು ಗಣನೀಯ ಸಂಖ್ಯೆಯಲ್ಲಿವೆ. ಇಲ್ಲಿಯವರೆಗೂ ಶಾಸಕರಾದವರೆಲ್ಲ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ.

ಒಟ್ಟು ಮತದಾರರು: 2,20,000; ಒಕ್ಕಲಿಗರು: 90,000, ಕುರುಬರು: 35,000, ಪರಿಶಿಷ್ಟ ಜಾತಿ: 34,000, ಲಿಂಗಾಯತ: 15,000, ಮುಸ್ಲಿಂ: 15,000, ಇತರೆ: 31,000

ಹಾಲಿ ಪರಿಸ್ಥಿತಿ

ಎರಡು ಅವಧಿಗೆ ಮೂರು ಬಾರಿ ಶಾಸಕರಾಗಿರುವ, ಹಾಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಹಾಗೂ ಕಾರ್ಯಕ್ರಮ ಸಂಯೋಜನೆ ಸಾಂಖ್ಯಿಕ ಇಲಾಖೆ ಸಚಿವರೂ ಆಗಿರುವ ಕೆ.ಸಿ ನಾರಾಯಣಗೌಡರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಪೌರಾಡಳಿತ ಸಚಿವರಾಗಿದ್ದರೂ ಸಹ ಕೆ.ಆರ್ ಪೇಟೆ ನಗರದ, ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತೂ ಗಮನ ವಹಿಸಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.

ರಸ್ತೆಗಳನ್ನು ಮಾಡಿಸಿಲ್ಲ, ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಮಾಡಿಸಿಲ್ಲ, ಚಿರತೆ ಹಾವಳಿ ತಡೆಗೆ ಸ್ಪಂದಿಸಿಲ್ಲ, ಅತಿವೃಷ್ಟಿ ನಿರ್ವಹಣೆಗೆ ತಲೆ ಕೆಡಿಸಿಕೊಂಡಿಲ್ಲ, ಸದಾ ಬೆಂಗಳೂರಿನಲ್ಲಿ ವಾಸಿಸುತ್ತಾ ಜನರ ಕೈಗೆ ಸಿಗುತ್ತಿಲ್ಲ, ಸ್ಟೇಡಿಯಂ ಒಳಗೆ ಒಳಾಂಗಣಾ ಕ್ರೀಡಾಂಗಣ ನಿರ್ಮಿಸಿ ಸ್ಟೇಡಿಯಂ ಇಲ್ಲದಂತೆ ಮಾಡಿದರು ಇತ್ಯಾದಿ ದೂರುಗಳು ಅವರ ಮೇಲಿವೆ.

ಹೇಮಾವತಿ ಹಗರಣದಲ್ಲಿ ಲೂಟಿ ಹೊಡೆದ ಹಣದಲ್ಲಿ ಉಪಚುನಾವಣೆ ಗೆದ್ದ ಆರೋಪ!

1,012 ಕೋಟಿ ರೂ ವೆಚ್ಚದ ಹೇಮಾವತಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಗುಳುಂ ಮಾಡಲಾಗಿದೆ. ಏಕೆಂದರೆ ಕಾಮಗಾರಿ ಮುಗಿದ ಒಂದೇ ವರ್ಷದಲ್ಲಿ ನಾಲೆಗಳು ದುರಸ್ತಿಗೆ ಬಂದಿವೆ!. ಈ ಕಾಮಗಾರಿಗೆ 253 ಕೋಟಿ ರೂಪಾಯಿಯ ಬಾಬ್ತಿನ ಗ್ರ್ಯಾವೆಲ್ ಮಣ್ಣು ತಂದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ ಒಂದು ಹಿಡಿ ಮಣ್ಣನ್ನೂ ತರದೇ ಹಣವನ್ನು ತಿಂದು ತೇಗಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಚೌಡಹಳ್ಳಿ ಎಂಬ ಹಳ್ಳಿಯೇ ಇಲ್ಲ. ಆದರೂ ಚೌಡಹಳ್ಳಿ ಹೆಸರಿನಲ್ಲಿ ನಾಲ್ಕು ಸರ್ವೇ ನಂಬರ್‌ಗಳನ್ನು ಸೃಷ್ಟಿಸಿ, ಅಲ್ಲಿಂದ ಮಣ್ಣು ತಂದ ಲೆಕ್ಕ ತೋರಿಸಿ ಹಣ ಕಬಳಿಸಲಾಗಿದೆ. ಗುತ್ತಿಗೆದಾರರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ನಡೆಸಿರುವ ಈ ಭ್ರಷ್ಟಾಚಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಆರೋಪ ಶಾಸಕ-ಸಚಿವ ಕೆ.ಸಿ ನಾರಾಯಣಗೌಡರ ಮೇಲೂ ಇದೆ.

ಅಲ್ಲದೆ ನಾಲೆಯ ಬದಿಗಳಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿದ್ದೇವೆಂದು, ಹುಲ್ಲು ಹಾಸು ಹಾಕಿದ್ದೇವೆಂದು ಮತ್ತು ಬೆಂಚ್‌ಮಾರ್ಕ್ ಕಲ್ಲುಗಳನ್ನು ಹಾಕಿದ್ದೇವೆಂದು ಸುಳ್ಳು ಹೇಳಿ ಯಾವುದೇ ಕೆಲಸ ಮಾಡದೇ 64 ಕೋಟಿ ರೂ ಬಾಚಲಾಗಿದೆ. ಇದೆಲ್ಲವೂ ನಡೆದಿದ್ದು 2019ರ ಜುಲೈನಿಂದ 2020ರ ಜುಲೈವರೆಗೆ. ಅಂದರೆ ಕೊರೊನಾ ಸಾಂಕ್ರಾಮಿಕ ಇದ್ದ ಲಾಕ್‌ಡೌನ್ ಕಾಲದಲ್ಲಿ! ಕಾಮಗಾರಿ ಮಾಡಿದ್ದೇವೆಂದು ನಕಲಿ ದಾಖಲೆ ಸೃಷ್ಟಿಸಿ ಹಣ ತಿಂದಿದ್ದಾರೆ. ಇದೇ ಹಣವನ್ನು 2019ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ನೀರಿನಂತೆ ಹರಿಸಿ ನಾರಾಯಣಗೌಡರು ಗೆದ್ದಿದ್ದಾರೆ ಎಂದು ರೈತಸಂಘದ ಕಾರ್ಯಕರ್ತರು ಆರೋಪಿಸುತ್ತಾರೆ.

ಆಪ್ತರಿಗಷ್ಟೇ ಕಾಮಗಾರಿಗಳ ಗುತ್ತಿಗೆ ನೀಡುತ್ತಾರೆ, ಎಲ್ಲದಕ್ಕೂ ಕಮಿಷನ್ ತೆಗೆದುಕೊಳ್ಳುತ್ತಾರೆ, ಪತ್ನಿ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ, ಸರ್ಕಾರಿ ಜಮೀನನ್ನು ನೂರಾರು ವರ್ಷಗಳಿಗೆ ಲೀಸ್‌ಗೆ ಪಡೆದಿದ್ದಾರೆ ಎಂಬುದು ಅವರ ಮೇಲಿರುವ ಆರೋಪ.

ಚುನಾವಣೆ ಹತ್ತಿರ ಬಂದಂತೆ ನಾರಾಯಣಗೌಡರು 4ನೇ ಹಂತದ ಕುಡಿಯುವ ನೀರು, ಕೆರೆ ಅಭಿವೃದ್ದಿ, ಏತ ನೀರಾವರಿ, ಜಲಜೀವನ್ ಮಿಷನ್ ಮತ್ತು ರಸ್ತೆ ಕಾಮಗಾರಿಯಂತಹ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಆದರೂ ನಿರೀಕ್ಷೆಗೆ ತಕ್ಕಷ್ಟು ಕೆಲಸಗಳಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಇನ್ನು ಮೂಲ ಬಿಜೆಪಿಗರು ನಾರಾಯಣಗೌಡರನ್ನು ತಮ್ಮ ಮುಖಂಡರೆಂದು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಅವರು ಈ ಬಾರಿ ಬಿಜೆಪಿಯಿಂದ ನಿಂತರೆ ಗೆಲ್ಲುವುದಿಲ್ಲ ಎಂಬುದನ್ನು ಅರಿತು ಕಾಂಗ್ರೆಸ್ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ ಎಂಬು ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದ್ದವು. ಆದರೆ ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾರ್ಯಕರ್ತರು ಬಿಟ್ಟಿಲ್ಲ. ಈ ನಡುವೆ ಬಿ.ಎಸ್ ಯಡಿಯೂರಪ್ಪ ಹಾಗೂ ಅಮಿತ್‌ ಶಾ ನಡೆಸಿದ ರಾಜಿ ಸಂಧಾನದಿಂದ ಅವರು ಪಕ್ಷ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಪರಿಸ್ಥಿತಿ

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಪ್ರಬಲ ಹಿಡಿತ ಹೊಂದಿದೆ. ಕೆ.ಆರ್ ಪೇಟೆ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಪ್ರಭಾವವೂ ಹೆಚ್ಚಿದೆ. ಆದರೂ ಇಲ್ಲಿ ಟಿಕೆಟ್ ಹಂಚಿಕೆ ಎಂಬುದು ಯಾವಾಗಲೂ ತಲೆನೋವಿನ ವಿಷಯವಾಗಿರುತ್ತದೆ. ಇಬ್ಬರಿಗೆ ಬಿ ಫಾರಂ ನೀಡುವ ಗೊಂದಲ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಷ್ಟೆಲ್ಲದರ ನಡುವೆಯೂ 2019ರ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಬೇಕಾಯಿತು. ಇದಕ್ಕೆ ದೇವೇಗೌಡರ ಕುಟುಂಬದ ಮಿತಿಮೀರಿದ ಹಸ್ತಕ್ಷೇಪವೇ ಕಾರಣ ಎಂದು ಜನ ಮಾತನಾಡುತ್ತಾರೆ.

ಇನ್ನು ಈ ಚುನಾವಣೆಗೆ ಬರುವುದಾದರೆ ಉದ್ಯಮಿ ಮಾಜಿ ಜಿ.ಪಂ ಸದಸ್ಯ, ಮನ್‌ಮುಲ್ ನಿರ್ದೇಶಕ ಹೆಚ್.ಟಿ ಮಂಜುರವರಿಗೆ ಜೆಡಿಎಸ್ ಪಕ್ಷ ಟಿಕೆಟ್ ಘೋಷಿಸಿದೆ. ಆ ಬೆನ್ನಲ್ಲೆ ನಾಲ್ಕೈದು ಜನ ಟಿಕೆಟ್ ಆಕಾಂಕ್ಷಿತರು ಬಂಡಾಯದ ಬಾವುಟ ಹಾರಿಸಿದ್ದಾರೆ. ತನಗೆ ಟಿಕೆಟ್ ಬೇಕೆಂದು ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಜಿ.ಪಂ ಸದಸ್ಯ ಬಿ.ಎಲ್ ದೇವರಾಜು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೊತೆಗೆ ಬಸ್ ಸಂತೋಷ್, ಬಸ್ ಕೃಷ್ಣೇಗೌಡ, ರಾಜಹುಲಿ ದಿನೇಶ್ ಕೂಡ ಟಿಕೆಟ್ ಕೇಳುತ್ತಿದ್ದಾರೆ. ಬಂಡಾಯ ಶಮನಕ್ಕೆ ದಳಪತಿಗಳು ಮುಂದಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್ ದೇವರಾಜು

ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಸೋತರೂ ಸಹ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿತ್ತು. ಅಧಿಕೃತವಾಗಿ 6 ಜನ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಮತ್ತಿಬ್ಬರು ಅರ್ಜಿ ಸಲ್ಲಿಸದೇ ಲಾಬಿ ಮಾಡಿದ್ದರು. ಸತತ ಮೂರು ಬಾರಿ ಸೋತಿದ್ದ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಉದ್ಯಮಿ ವಿಜಯ್ ರಾಮೇಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಎಂ.ಡಿ ಕೃಷ್ಣಮೂರ್ತಿ ಮತ್ತು ಕುರುಬ ಸಮುದಾಯದ ಬಿ.ನಾಗೇಂದ್ರ ಕುಮಾರ್ ಅರ್ಜಿ ಸಲ್ಲಿಸಿದ ಇತರರಾಗಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷವು ಜೆಡಿಎಸ್‌ ಟಿಕೆಟ್ ವಂಚಿತ ಬಿ.ಎಲ್ ದೇವರಾಜುರವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡಿ ಟಿಕೆಟ್ ನೀಡಿದೆ. 40 ವರ್ಷಗಳಿಂದ ದೇವೇಗೌಡರ ಅತ್ಮೀಯರಾಗಿದ್ದ, ಜೆಡಿಎಸ್ ಪಕ್ಷ ಸಂಘಟನೆ ಮಾಡಿದ್ದ ಅವರಿಗೆ ಜೆಡಿಎಸ್ ಟಿಕೆಟ್ ನಿರಾಕರಿಸಲಾಗಿತ್ತು. ಅಲ್ಲದೆ ದೇವೇಗೌಡರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣನಂತವರು ಕೆ.ಆರ್ ಪೇಟೆಗೆ ಬರುವಾಗ ಹಿರಿಯರಾದ ಬಿ.ಎಲ್ ದೇವರಾಜುರಂತಹ ಮುಖಂಡರು ಹಾರ ಹಿಡಿದಿ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಇದು ಸ್ವಾಭಿಮಾನಕ್ಕೆ ಪೆಟ್ಟು ಎಂದು ತಿಳಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಈ ಹಿಂದೆ ನಾರಾಯಣಗೌಡರು ಕಾಂಗ್ರೆಸ್‌ ಬರುವುದನ್ನು ವಿರೋಧಿಸಿದ ಕಾಂಗ್ರೆಸ್ ಆಕಾಂಕ್ಷಿಗಳು ಇದು ಕೊನೆಯ ಚುನಾವಣೆ ಎಂದು ಬಂದಿರುವ ಬಿ.ಎಲ್ ದೇವರಾಜುರವರನ್ನು ಹೇಗೆ ನೋಡುತ್ತಾರೆ ಎಂಬುದು ನಿಗೂಢವಾಗಿದೆ.

ಮತ್ತೆ ಚುನಾವಣಾ ಕಣಕ್ಕೆ ರೈತಸಂಘ

1996ರ ಉಪ ಚುನಾವಣೆಯಲ್ಲಿ ರೈತ ಮುಖಂಡರಾದ ಕೆ.ಆರ್ ಜಯರಾಂರವರು ಸ್ಪರ್ಧಿಸಿದ್ದು ಬಿಟ್ಟರೆ ಮತ್ತೆ ರೈತ ಸಂಘ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ರೈತ ನಾಯಕಿ ನಂದಿನಿ ಜಯರಾಂರವರು ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ರೈತ ಸಂಘ ಪ್ರಬಲವಾಗಿದ್ದು ತನ್ನದೇ ಆದ ಒಂದಷ್ಟು ಮತಗಳನ್ನು ಹೊಂದಿದೆ.

ಬಿಎಸ್‌ಪಿ ಪಕ್ಷದಿಂದ ಬಸ್ತಿ ಪ್ರದೀಪ್‌ರವರು ಅಭ್ಯರ್ಥಿಯಾಗುವ ಬಯಕೆಯಲ್ಲಿದ್ದು, ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಚಂದನ್‌ಗೌಡ ಎಂಬ ಯೂಟ್ಯೂಬರ್ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡು ಪ್ರತಿ ದಿನ ಕ್ಷೇತ್ರದ ಒಂದೊಂದು ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಹಣ, ಹೆಂಡ ಹಂಚೊಲ್ಲ, ಅಭಿವೃದ್ದಿ ಕೆಲಸ ಮಾಡುತ್ತೇನೆ ನನಗೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದಾರೆ.

ಸದ್ಯಕ್ಕೆ ಕೆ.ಆರ್ ಪೇಟೆಯಲ್ಲಿ ತ್ರಿಕೋನ ಹಣಾಹಣಿ ಏರ್ಪಟ್ಟಿದ್ದೆ. ಮೂವರು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಕಾಳಗ ಏರ್ಪಡಲಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಹಣದ ಹೊಳೆ ಹರಿಸುವ ಸಂಭವವಿದೆ. ಈ ಬಾರಿ ಮತದಾರರು ಯಾರನ್ನು ಆರಿಸಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಮೇಲುಕೋಟೆ ವಿಧಾನಸಭಾ ಕ್ಷೇತ್ರ: ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ ಘೋಷಿಸಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...