Homeಮುಖಪುಟಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದುವರಿದ ಭಾಗ: ನ್ಯಾಯಾಧೀಶ ವರ್ಮಾ

ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದುವರಿದ ಭಾಗ: ನ್ಯಾಯಾಧೀಶ ವರ್ಮಾ

- Advertisement -
- Advertisement -

ಫೆಬ್ರವರಿ 4ನೇ ತಾರೀಖು ಸಾಕೇತ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಲ್ ವರ್ಮಾ ಅವರು ಜಾಮಿಯಾ ಮಿಲಿಯಾ ಗಲಭೆ ಕೇಸಿನ ಆರೋಪಿಗಳನ್ನು ವಿಚಾರಣೆಯಿಂದ ಮುಕ್ತಗೊಳಿಸಿ ನೀಡಿದ ತೀರ್ಪು ಅನೇಕ ವಲಯಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ಕೇಸಿನಲ್ಲಿ ಆರೋಪಿತರಾಗಿದ್ದ ಶಾರ್ಜಿಲ್ ಇಮಾಮ್, ಸಫೂರ ಜರಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ 8 ಜನರನ್ನು ಆರೋಪದಿಂದ ಮುಕ್ತಗೊಳಿಸುತ್ತ ನ್ಯಾಯಾಧೀಶರು “ಸಮಾಜದಲ್ಲಿ ಭಿನ್ನಮತ ಅಥವಾ ಭಿನ್ನಾಭಿಪ್ರಾಯಕ್ಕೆ ಸರಿಯಾದ ಸ್ಥಾನ ಮತ್ತು ವೇದಿಕೆಯನ್ನು ಒದಗಿಸಿಕೊಡಬೇಕು ಏಕೆಂದರೆ ಅದು ನಾಗರಿಕ ಅಂತಃಸಾಕ್ಷಿಯನ್ನು ಚುಚ್ಚುವ ವಿಷಯಗಳ ಅಭಿವ್ಯಕ್ತಿಯಾಗಿರುತ್ತದೆ” ಎಂದು ಹೇಳಿದ್ದಾರೆ. ಮತ್ತೆ ಮುಂದುವರಿದು “ಭಿನ್ನಾಭಿಪ್ರಾಯ ಎಂಬುದು ಬೇರೇನೂ ಅಲ್ಲ; ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದುವರಿದ ಭಾಗವಾಗಿದೆ ಮತ್ತು ಅದನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ” ಎಂದಿದ್ದಾರೆ. ತಮ್ಮ ತೀರ್ಪಿನಲ್ಲಿ ಮಹಾತ್ಮಗಾಂಧಿ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಶ್ರೀ ಡಿ.ವೈ ಚಂದ್ರಚೂಡ ಅವರನ್ನು ಉಲ್ಲೇಖಿಸುತ್ತ “ಭಿನ್ನ ಧ್ವನಿಗಳನ್ನು ಹತ್ತಿಕ್ಕಬಾರದು ಅದಕ್ಕೆ ಪ್ರೋತ್ಸಾಹ ನೀಡಬೇಕು” ಎಂದಿದ್ದಾರೆ.

ಈ ಎಲ್ಲ ಉಲ್ಲೇಖಗಳನ್ನು ನೋಡಿದಾಗ ಇಷ್ಟೊಂದು ಉದಾತ್ತ ವಿಚಾರಗಳನ್ನು ಒಳಗೊಂಡ ತೀರ್ಪಿಗೆ ಅಪಸ್ವರ ಏಕೆ ಮತ್ತು ಹೇಗೆ ಬರಲು ಸಾಧ್ಯ ಅನಿಸಬಹುದು. ಆದರೆ ದೆಹಲಿ ಪೊಲೀಸರು ಈಗಲೇ ತೀರ್ಪಿನ ವಿರುದ್ಧ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಮೇಲ್ಮನವಿ ಹೋಗಿದ್ದಾರೆ.

ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಅತ್ಯಂತ ವಿಷದವಾಗಿ ತೀರ್ಪು ನೀಡಿದ್ದು ಪೊಲೀಸರಿಗೆ ಕಿರಿಕಿರಿ ಉಂಟುಮಾಡಿದೆ. ಕಳೆದ ಕೆಲವು ವರ್ಷಗಳಿಂದ ದೆಹಲಿ ಪೊಲೀಸರು ವಿವಿಧ ಪ್ರತಿಭಟನಾಕಾರರನ್ನು ನಡೆಸಿಕೊಂಡ ರೀತಿ ಮತ್ತು ಅವರು ದೂರು ದಾಖಲಿಸಿದ ಮತ್ತು ದಾಖಲಿಸದೇ ಇರುವ ಅನೇಕ ಘಟನೆಗಳನ್ನು ನೋಡಿದಾಗ, ತೀರ್ಪಿನಿಂದ ದೆಹಲಿ ಪೊಲೀಸರ ಜೊತೆಗೆ ಯಾರುಯಾರಿಗೆಲ್ಲಾ ಕಿರಿಕಿರಿ ಆಗಿದೆ ಎಂಬುದು ಗೊತ್ತಾಗುತ್ತದೆ.

2019ರಲ್ಲಿ ದೇಶದಾದ್ಯಂತ ನಡೆದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳಲ್ಲಿ ಅನೇಕ ವಿಶ್ವವಿದ್ಯಾಲಯಗಳಂತೆ ಜಾಮಿಯಾ ಮಿಲಿಯಾದ ವಿದ್ಯಾರ್ಥಿಗಳು ಸಹ ಇದ್ದರು. ಆದರೆ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದು ಪೊಲೀಸರು ಕಾಲೇಜು ಕ್ಯಾಂಪಸ್ ಹಾಗೂ ಲೈಬ್ರರಿಗಳಿಗೆ ಸಹ ನುಗ್ಗಿ, ತಮ್ಮ ಪಾಡಿಗೆ ತಾವು ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ವಿಡಿಯೋಗಳು ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಆ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಮೇಲೆ ಹೇಳಿದ ಎಲ್ಲ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿದ್ದರು.

ತಮ್ಮ ಮೇಲೆ ಸಲ್ಲಿಸಲಾದ ಆರೋಪಪಟ್ಟಿಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಎಲ್ಲ ವಿದ್ಯಾರ್ಥಿಗಳು ಪೊಲೀಸರ ಕಾರ್ಯವೈಖರಿಯಲ್ಲಿನ ನ್ಯೂನತೆಗಳು ಹಾಗೂ ಇನ್ನೂ ಅನೇಕ ಕಾರಣಗಳನ್ನು ಮುಂದುಮಾಡಿ ತಮ್ಮನ್ನು ಆರೋಪಮುಕ್ತಗೊಳಿಸುವಂತೆ ಕೋರಿದ್ದರು. ಈ ಅರ್ಜಿಯ ಮೇಲೆ ಕೂಲಂಕಷವಾಗಿ ಚರ್ಚಿಸಿದ ನ್ಯಾಯಾಧೀಶರು ಈ ಕೆಳಗೆ ಹೇಳಿದ ಕೆಲ ನ್ಯೂನತೆಗಳನ್ನು ಪಟ್ಟಿ ಮಾಡಿದ್ದಾರೆ.

  •  ನಿಜವಾದ ಅಪರಾಧಿಗಳನ್ನು ಹಿಡಿಯುವಲ್ಲಿ ವಿಫಲರಾದ ಪೊಲೀಸರು ಈ ಆರೋಪಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡಿದ್ದಾರೆ.
  •  ಗಲಭೆಯ ಸ್ಥಳದಿಂದ ಕೆಲವರನ್ನು ಆರಿಸಿ ಪೊಲೀಸರು ತಮ್ಮ ಸ್ವೇಚ್ಛಾನುಸಾರ ಅದರಲ್ಲಿ ಕೆಲವರನ್ನು ಆರೋಪಿಗಳನ್ನಾಗಿ ಹಾಗೂ ಕೆಲವರನ್ನು ಸಾಕ್ಷಿಗಳನ್ನಾಗಿ ಮಾಡಿದ್ದಾರೆ.
  •  ಕೇವಲ ಪ್ರತಿಭಟನೆಯ ಸ್ಥಳದಲ್ಲಿ ಹಾಜರಿದ್ದರು ಎಂಬ ಮಾತ್ರಕ್ಕೆ ಯಾರೂ ಅಪರಾಧಿಗಳಾಗುವುದಿಲ್ಲ.
  •  ಹೀಗೆ ಬಂಧಿತರಾದವರನ್ನು ಕಾನೂನಿನ ಕ್ಲಿಷ್ಟಕರ ಮತ್ತು ದೀರ್ಘವಾದ ವಿಚಾರಣೆಗೆ ಒಡ್ಡುವುದು ಸೂಕ್ತವಲ್ಲ.
  •  ತನಿಖಾ ಸಂಸ್ಥೆಗಳಿಗೆ ಪ್ರತಿಭಟನೆ ಮತ್ತು ದಂಗೆಗಳ ಮಧ್ಯೆ ಅಂತರ ಗೊತ್ತಿರಬೇಕು; ದಂಗೆಯನ್ನು ಹತ್ತಿಕ್ಕಬೇಕು ಆದರೆ ಪ್ರತಿಭಟನೆಗಳನ್ನು ಪ್ರೋತ್ಸಾಹಿಸಬೇಕು; ಮತ್ತು ಅವಕ್ಕೆ ವೇದಿಕೆ ಕಲ್ಪಿಸಬೇಕು.
  •  ಈ ಕೇಸಿನಲ್ಲಿ ಒಂದಾದ ಮೇಲೆ ಒಂದರಂತೆ ಪೊಲೀಸರು 3 ಹೆಚ್ಚುವರಿ ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದು, ಕೊನೆಯಪಟ್ಟಿಯನ್ನು ಇದೇ ಫೆಬ್ರವರಿ 1, 2023ರಂದು ಸಲ್ಲಿಸಲಾಗಿದೆ.
  •  ಈ ಮೂಲಕ ಸಾಕ್ಷಿಗಳನ್ನು ಮತ್ತು ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ತಿಳಿಸುವ ಪ್ರಯತ್ನ ಮಾಡಲಾಗಿದೆ. ಮುಂದುವರಿದು ತನಿಖೆಯ ಹೆಸರಿನಲ್ಲಿ ಹಳೆಯ ಅಂಶಗಳನ್ನೇ ಮತ್ತೆ ಪುಷ್ಟೀಕರಿಸುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನಗಳ ಮೂಲಕ ಆರೋಪಿಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗಿದೆ.
  •  ಆರೋಪಿಗಳು ಘಟನೆಯಲ್ಲಿ ಭಾಗಿಯಾಗಿದ್ದರು ಎಂದು ತೋರಿಸಲು ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲ.

ಇವಿಷ್ಟಲ್ಲದೆ ನ್ಯಾಯಾಧೀಶರು ಮಾಡಿದ ಪಟ್ಟಿಯನ್ನು ಹೇಳುತ್ತಾ ಹೋದರೆ ಯಾವುದೇ ಪ್ರಜ್ಞಾವಂತರಿಗೆ ಆಘಾತವಾಗುವುದು ಸಹಜ. ಇದರೊಟ್ಟಿಗೆ ಜೊತೆಗೆ ಪೊಲೀಸರು ಯಾವ ರೀತಿ ಪರಿಣಾಮಕಾರಿಯಾಗಿ ತನಿಖೆ ಮಾಡಬೇಕು ಎಂಬ ವಿವರಣೆಯನ್ನು ನೀಡಿದ್ದು ಈ ತೀರ್ಪಿನ ಮೇಲೆ ಮೇಲ್ಮನವಿ ಹೋಗಲು ಮುಖ್ಯ ಕಾರಣವಾಗಿದೆ. ಮೇಲ್ಮನವಿಯಲ್ಲಿ ನ್ಯಾಯಾಧೀಶರ ಅಭಿಪ್ರಾಯಗಳನ್ನು ಅವರ ವೈಯಕ್ತಿಕ ಅಭಿಪ್ರಾಯ ಎಂದಿರುವ ಸಾಲಿಸಿಟರ್ ಜನರಲ್, ನ್ಯಾಯಾಧೀಶರು ಅನವಶ್ಯಕವಾಗಿ ಎಲ್ಲ ಅಂಶಗಳನ್ನು ಚರ್ಚಿಸಿದ್ದಾರೆ, ಈ ಕೇಸಿನ ಈ ಹಂತದಲ್ಲಿ ಇದು ಸೂಕ್ತವಲ್ಲ ಎಂದಿದ್ದಾರೆ. ಈ ಕೇಸಿನ ಮುಂದಿನ ತೀರ್ಪು ಏನಾಗಬಹುದು? ಅದು ಮುಂದೆ ತಿಳಿಯಲಿರುವ ವಿಚಾರ. ಆದರೆ ಸಂವಿಧಾನದ ಅಂತಃಸಾಕ್ಷಿಯನ್ನು ಕಾಪಾಡುವ ನ್ಯಾಯಾಧೀಶರ ಪ್ರಯತ್ನ ಬಹುತೇಕ ಜನರಿಗೆ ಅಪಥ್ಯವಾದದ್ದು ಮಾತ್ರ ನಿಜ.

ತುಷಾರ್ ಮೆಹ್ತಾ

ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಭಾರತ ಮುಕ್ತ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಕೆಳಗೆ ಬಿದ್ದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಇತ್ತೀಚೆಗೆ ಜನಪ್ರತಿನಿಧಿಗಳು ಆಡುವ ಮಾತಿನ ಮೇಲೆ ಅಂಕುಶ ತರುವ ಕುರಿತು ಬಂದ ತೀರ್ಪಿನಲ್ಲಿ ಜಸ್ಟಿಸ್ ಬಿ.ವಿ ನಾಗರತ್ನ ಅವರನ್ನು ಹೊರತುಪಡಿಸಿ ಉಳಿದ ನಾಲ್ವರು ನ್ಯಾಯಮೂರ್ತಿಗಳು ಜನಪ್ರನಿಧಿಗಳು ಆಡುವ ಮಾತು ಸರ್ಕಾರದ ಮಾತು ಎಂದು ಹೇಳಲು ಬರುವುದಿಲ್ಲ ಎಂದಿದ್ದರು. ಆದರೆ ಜಸ್ಟಿಸ್ ನಾಗರತ್ನ ಅವರು ಮಾತ್ರ ಸರ್ಕಾರದ ಜವಬ್ದಾರಿಯುತ ಸ್ಥಾನದಲ್ಲಿದ್ದು ಜನಪ್ರತಿನಿಧಿಗಳು ಆಡುವ ಮಾತಿಗೆ ಸರ್ಕಾರವೂ ಬಾಧ್ಯಸ್ತವಾಗುತ್ತದೆ ಎಂದಿದ್ದರು.

ಜನವರಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕೇಸಿನಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ 19ನೇ ಅನುಚ್ಛೇದದ ಮೇಲೆ ಇನ್ನೂ ಹೆಚ್ಚಿನ ಅಂಕುಶಗಳನ್ನು ಹೇರುವ ಅಗತ್ಯವಿಲ್ಲ; 19(2)ರಲ್ಲಿ ಈಗಾಗಲೇ ಹೇಳಿರುವ ಪ್ರತಿಬಂಧಗಳು ಬೇಕಾದಷ್ಟು ವಿವರವಾಗಿದೆ ಎಂದಿದೆ.

ಇದನ್ನೂ ಓದಿ: ಸಂಸದರ ವಾಕ್ ಸ್ವಾತಂತ್ರ್ಯಕ್ಕೂ ಸೆನ್ಸಾರ್!

ಯಾವುದೇ ದೇಶ ಅಥವಾ ಕಾಲಮಾನವಿರಲಿ ಪ್ರತಿಭಟನೆಗಳು ಆ ಸಮಾಜದ ಚಲನೆ ಮತ್ತು ಜೀವಂತಿಕೆಯ ಸಂಕೇತ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಅಕಸ್ಮಾತ್ ಪ್ರತಿಭಟನೆ ಅಥವಾ ಭಿನ್ನಾಭಿಪ್ರಾಯಗಳಿಗೆ ಸೂಕ್ತ ವೇದಿಕೆ ಸಿಗದಿದ್ದರೆ ಅದು ಅಸಂಘಟಿತವಾಗಿ ಹರಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ. ಭಿನ್ನಮತ ಯಾವಾಗ ವ್ಯವಸ್ಥಿತವಾಗಿರುತ್ತದೋ ಆಗ ಪ್ರಭುತ್ವದ ಮೇಲೆ ನಿಗಾ ಇಡುವುದು ಸರಳ; ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಎಂಬುದು ನಿರಂತರವಾದ ಸಮಸ್ಯೆಯಾಗಿ ಪರಿಣಮಿಸುತ್ತದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಕೂಡ ಭಾರತೀಯರ ವಿರೋಧವನ್ನು ವ್ಯವಸ್ಥಿತಗೊಳಿಸುವ ಪ್ರಯತ್ನದ ಒಂದು ಭಾಗವಾಗಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆ ಆಗಿತ್ತು.

ಸುಪ್ರೀಂಕೋರ್ಟ್ ಕಾಲಕಾಲಕ್ಕೆ ನೀಡಿದ ತೀರ್ಪುಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಎತ್ತಿಹಿಡಿಯುತ್ತಲೇ ಬಂದಿದೆ. ಆದರೆ ಕಾಲಕಾಲಕ್ಕೆ ಬಂದ ಸರ್ಕಾರಗಳು ಮತ್ತು ಬೆನ್ನುಮೂಳೆ ಇರದ ಸರ್ಕಾರಿ ಅಂಗಗಳು ತಮ್ಮ ಎಲ್ಲಾ ಶಕ್ತಿಯನ್ನು ಪ್ರದರ್ಶಿಸಿ ಮತ್ತು ಪ್ರಯತ್ನಗಳನ್ನು ಬಳಸಿ ಅದನ್ನು ಬಗ್ಗುಬಡಿಯುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಆದರಲ್ಲೂ ಕೋಮುವಾದಿ ಮತ್ತು ಫ್ಯಾಸಿಸ್ಟ್ ಸರ್ಕಾರಗಳಿಗೆ ಭಿನ್ನಸ್ವರ ಎಂದರೆ ಆಗದು; ಅಂತಹ ಎಲ್ಲ ಸಮಯದಲ್ಲಿ ಸಮಾಜದ ಬಗ್ಗೆ ಕಳಕಳಿ ಹೊಂದಿದ ಪ್ರತಿ ಮನುಷ್ಯನೂ ಅವಲಂಬಿಸುವುದು ನ್ಯಾಯಾಂಗವನ್ನೇ. ನ್ಯಾಯಾಧೀಶ ಅರುಲ್ ವರ್ಮಾ ಅವರು ನೀಡಿದ ತೀರ್ಪು ಸ್ಪಷ್ಟ ಮಾತುಗಳಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...