Homeಅಂಕಣಗಳುಸಂಸದರ ವಾಕ್ ಸ್ವಾತಂತ್ರ್ಯಕ್ಕೂ ಸೆನ್ಸಾರ್!

ಸಂಸದರ ವಾಕ್ ಸ್ವಾತಂತ್ರ್ಯಕ್ಕೂ ಸೆನ್ಸಾರ್!

- Advertisement -
- Advertisement -

ಸಂಸತ್ ಬಜೆಟ್ ಅಧಿವೇಶನದ ಮೊದಲ ಭಾಗಕ್ಕೆ ತೆರೆ ಬಿದ್ದಿದೆ. ಪ್ರಜಾಪ್ರಭುತ್ವ ತತ್ವಗಳನ್ನು ಕಾಯಬೇಕಾದ ಜಾಗ ಸಂಸತ್ತು. ಸಂಸತ್ತಿನ ಎರಡೂ ಮನೆಗಳು ಜನರ ಆಶೋತ್ತರಕ್ಕೆ ದನಿಯಾಗಬೇಕು. ಆಳುವ ಸರಕಾರಗಳ ನೀತಿಗಳನ್ನು ಪ್ರಶ್ನಿಸಿ, ಚರ್ಚೆಗಳನ್ನು ಹುಟ್ಟುಹಾಕಿ, ನಾಗರಿಕರ ಬೇಕುಬೇಡಗಳು ಪ್ರತಿಧ್ವನಿಸಿ, ಉತ್ತರಗಳನ್ನು ಕಂಡುಕೊಳ್ಳುವ ಜಾಗವದು. ಇದೇ ಕಾರಣಕ್ಕಾಗಿಯೇ ಜನಪ್ರತಿನಿಧಿಗಳಾದ ಸಂಸದರಿಗೆ ನಮ್ಮ ಸಂವಿಧಾನ ವಿಶೇಷ ಸವಲತ್ತುಗಳನ್ನು ಒದಗಿಸಿದೆ. ಸಂವಿಧಾನದ 105 (2)ನೇ ವಿಧಿಯ ಪ್ರಕಾರ “ಸಂಸತ್ತಿನಲ್ಲಾಗಲಿ ಅಥವಾ ಅದರ ಯಾವುದೇ ಸಮಿತಿಯಲ್ಲಾಗಲೀ, ಸಂಸದನೊಬ್ಬ ನುಡಿಯುವ ಯಾವುದೇ ಮಾತಿಗೆ, ಯಾವುದೇ ಕೋರ್ಟ್‌ನಲ್ಲಾಗಲೀ ವಿಚಾರಣೆಗೆ ಗುರಿಯಾಗುವುದಿಲ್ಲ..” ಎಂಬ ಸವಲತ್ತನ್ನು ನೀಡುತ್ತದೆ. ಖಂಡಿತಾ ಅದಕ್ಕೂ ಕೆಲವು ನಿರ್ಬಂಧಗಳಿವೆ; ಲೋಕಸಭೆಯ ವ್ಯವಹಾರಗಳ ನಿಯಮ 380ರ ಪ್ರಕಾರ, ಮೇಲ್ಮನೆ ಅಥವಾ ಕೆಳಮನೆಯ ಚರ್ಚೆಗಳಲ್ಲಿ ಯಾವುದೇ ಸಂಸದ ನುಡಿಯುವ ಮಾತು ಮಾನಹಾನಿ ತರುವಂಥದ್ದು ಅಥವಾ ಅಸಂವಿಧಾನಿಕ ಅಥವಾ ಘನತೆಗೆ ಕುತ್ತು ತರುವಂಥದು ಎಂದು ಸ್ಪೀಕರ್‌ಗೆ ಅನಿಸಿದರೆ, ಸಂಸತ್ತಿನ ವ್ಯವಹಾರಗಳ ಕಡತದಿಂದ ಅಂತಹ ಪದಗಳನ್ನು ತೆಗೆದುಹಾಕುವ ಅಧಿಕಾರವನ್ನು ಸ್ಪೀಕರ್ ಹೊಂದಿರುತ್ತಾರೆ. ಆದರೆ ಹಾಗೆ ಕಡಿತಗೊಳಿಸುವ ಅಧಿಕಾರ ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಅಣಕಿಸುವಂತಿರಬಾರದಲ್ಲವೇ?

ಇಂತಹ ಅಣಕ ಹಿಂದೆ ಸಂಸತ್ತಿನ ಎರಡೂ ಸದನಗಳಲ್ಲಿ ನಡೆದಿರುವ ಆರೋಪ ಪ್ರತ್ಯಾರೋಪಗಳು ಇವೆ. ಆದರೆ ಸದರಿ 2023ರ ಬಜೆಟ್ ಅಧಿವೇಶನದಲ್ಲಿ ಆ ಅಣಕ ತನ್ನೆಲ್ಲಾ ಎಲ್ಲೆ ಮೀರಿದ್ದು ಯಾರಿಗಾದರೂ ಅನುಭವಕ್ಕೆ ಬಂದಿರಬಹುದು! ಹಿಂದೆ ಅಸಂವಿಧಾನಿಕ ಮತ್ತು ಅಸಂಸದೀಯ ಎಂದು ಪರಿಗಣಿಸಿದ ಪದಗಳಿಗೆ ಹೆಚ್ಚು ಸೀಮಿತವಾಗುತ್ತಿದ ಈ ಪ್ರಕ್ರಿಯೆ, ಈಗ ಸರ್ಕಾರವನ್ನು ಪ್ರಶ್ನಿಸುವ, ಸರ್ಕಾರದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎತ್ತುವ ಚರ್ಚೆಗಳ ಭಾಗಗಳನ್ನು ತೆಗೆದುಹಾಕುವತ್ತ ಮುಂದುವರಿದಿರುವುದು ಆತಂಕಕಾರಿ ಸಂಗತಿ. ಹಿಂಡನ್‌ಬರ್ಗ್ ಎಂಬ ಅಮೆರಿಕ ಮೂಲದ ಸಂಸ್ಥೆ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಹಗರಣ ನಡೆಸಿದೆ ಎಂದು ಆರೋಪಿಸಿ ನೀಡಿದ ವರದಿ ಹಲವು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿತ್ತು. ಸಾರ್ವಜನಿಕ ಸಂಸ್ಥೆಗಳಾದ ಎಸ್‌ಬಿಐ ಮತ್ತು ಎಲ್‌ಐಸಿಗಳ ಹಣ ಅದಾನಿ ಸಮೂಹಗಳಲ್ಲಿ ಹೂಡಿಕೆಯಾಗಿದ್ದು, ಅದಾನಿ ಸಮೂಹದ ಕಂಪನಿಗಳ ಷೇರು ಕುಸಿತದ ಹಿನ್ನೆಲೆಯಲ್ಲಿ ಜನರಿಗೂ ಇದು ಆತಂಕ ಮೂಡಿಸಿತ್ತು. ಇದರ ಬಗ್ಗೆ ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗೆ ಸರ್ಕಾರದಿಂದ ಸಮರ್ಪಕ ಉತ್ತರ ದೊರೆಯದೆ ಹೋದಾಗ ಅದನ್ನು ಸಂಸತ್ತಿನಲ್ಲಿ ಪ್ರಶ್ನಿಸುವುದು ಅತ್ಯಗತ್ಯವಲ್ಲವೇ? ಆ ಮೂಲಕ ಸರ್ಕಾರದ ಉತ್ತರದಾಯಿತ್ವಕ್ಕೆ ಒತ್ತಡ ಹೇರುವುದು ವೈಬ್ರೆಂಟ್ ಆದ ಪ್ರಜಾಪ್ರಭುತ್ವದ ಲಕ್ಷಣವಲ್ಲವೇ?

ಆದರೆ ಸಂಸದರ ವಾಕ್ ಸ್ವಾತಂತ್ರ್ಯದ ವಿಶೇಷ ಪ್ರಿವಿಲೆಜ್‌ಗೆ ಕತ್ತರಿ ಹಾಕಿದ ಘಟನೆಗಳು ಇತ್ತೀಚಿನ ಅಧಿವೇಶನದಲ್ಲಿ ನಡೆದುಹೋದವು; ಅದಾನಿ ಮತ್ತು ಪ್ರಧಾನಿ ಮೋದಿಯವರ ’ವಿಶೇಷ ಗೆಳೆತನ’ದ ಕಾರಣಕ್ಕಾಗಿ ಅದಾನಿ ತನ್ನ ಸಾಮ್ರಾಜ್ಯವನ್ನು ಈ ಮಟ್ಟಕ್ಕೆ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಂತಾದ ಸಂಸತ್ ಸದಸ್ಯರು ಆರೋಪಿಸಿದರು. ಈ ಆರೋಪಗಳಿಗೆ ಪ್ರಧಾನಿ ಮೋದಿಯವರು ಉತ್ತರಿಸಬಹುದಿತ್ತು; ತಮ್ಮನ್ನು ಸಮರ್ಥಿಸಿಕೊಳ್ಳುವ ಅವಕಾಶ ದಂಡಿಯಾಗಿತ್ತು. ಆದರೆ ಸಂಸತ್ತಿನಲ್ಲಿ ತಟಸ್ಥವಾಗಿರಬೇಕಿರುವ ಎರಡೂ ಮನೆಯ ಸ್ಪೀಕರ್‌ಗಳು ಅದಾನಿ ಮತ್ತು ಪ್ರಧಾನಿಯವರ ಸಂಬಂಧವನ್ನು ಪ್ರಶ್ನಿಸಿ ಮಾಡಿದ ಆರೋಪಗಳ ಅಂಶಗಳನ್ನೇ ಕಡತದಿಂದ ತೆಗೆದುಹಾಕುವ ಅಸಂವಿಧಾನಿಕ ಕ್ರಮಕ್ಕೆ ಮುಂದಾಗಿದ್ದಾರೆ! ತಾವು ತೆಗೆದುಕೊಂಡಿರುವ ಪ್ರಮಾಣಕ್ಕೆ ವ್ಯತಿರಿಕ್ತವಾಗಿ ಒಂದು ರಾಜಕೀಯ ಪಕ್ಷದ, ಸರಕಾರದ ಪಕ್ಷ ವಹಿಸಿರುವ ಸಂಶಯ ಈ ಸ್ಪೀಕರ್‌ಗಳ ಮೇಲೆ ವ್ಯಕ್ತವಾಗುತ್ತದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿಗೆ ನೋಟಿಸ್‌

ಹಲವು ನೈಜ ಕಾರಣಗಳಿಗಾಗಿ ರೂಪುಗೊಂಡಿರುವ ಆರೋಗ್ಯಕರ ನಿರ್ಬಂಧಗಳು ಸದರಿ ಸರಕಾರದಡಿಯಲ್ಲಿ ಏಕಪಕ್ಷೀಯ ಮತ್ತು ಸರ್ವಾಧಿಕಾರದ ರೂಪ ಪಡೆಯುತ್ತಿರುವುದು ಈಗಾಗಲೇ ಹಲವು ಬಾರಿ ನಿರೂಪಣೆಗೊಂಡಿದೆ. ಸಾಮಾನ್ಯ ಜನರ, ಕಲಾವಿದರ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲೆ ಮೀರದಂತೆ ಕಾಯಲು ಇರುವ ’ರೀಸನಬಲ್ ರಿಸ್ಟ್ರಿಕ್ಷನ್’ಗಳನ್ನು ಸದರಿ ಒಕ್ಕೂಟ ಸರ್ಕಾರ ತನ್ನಿಚ್ಛೆಗನುಸಾರ ’ಸೆನ್ಸಾರ್‌ಶಿಪ್’ಗೆ ಬಳಸುತ್ತಿದೆ. ಇತ್ತೀಚೆಗಷ್ಟೇ ಬಿಬಿಸಿ ಸುದ್ದಿ ಸಂಸ್ಥೆ 2002ರ ಗುಜರಾತಿನ ಗಲಭೆ ಮತ್ತು 2014ರ ನಂತರ ಭಾರತದಲ್ಲಿ ನಡೆದ ಕೆಲವು ಮುಖ್ಯ ಕೋಮು ಹಿಂಸಾಚಾರದ ಘಟನೆಗಳ ಕುರಿತು ’ಇಂಡಿಯಾ: ದ ಮೋದಿ ಕೊಶ್ಚನ್’ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಬಿಡುಗಡೆಮಾಡಿತ್ತು. ಹೊಸ ಐಟಿ ನಿಯಮಗಳನ್ನು ಬಳಸಿಕೊಂಡು ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ, ಶೇರ್ ಮಾಡದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು. ಈ ನಿರ್ಬಂಧ ಹೇರುತ್ತಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೆಯೇ! ಈ ಡಾಕ್ಯುಮೆಂಟರಿಯನ್ನು ಬ್ಯಾನ್ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಯಾವುದೇ ನಿಷೇಧವಿಲ್ಲದ ಒಂದು ಸಾಕ್ಷ್ಯಚಿತ್ರದ ಕತ್ತುಹಿಸುಕಿದ ನಡೆ ಸದರಿ ಸರ್ಕಾರ ಅಸಂಖ್ಯಾತ ಸೆನ್ಸಾರ್‌ಗಳಲ್ಲಿ ಒಂದು! ಈ ಲೇಖನ ಬರೆಯುವ ಹೊತ್ತಿಗೆ ದೆಹಲಿಯ ಬಿಬಿಸಿ ಸುದ್ದಿಸಂಸ್ಥೆಯ ಮುಖ್ಯ ಕಚೇರಿಯ ಮೇಲೆ ಐಟಿ “ಸಮೀಕ್ಷೆ” ನಡೆಸಲು ದಾಳಿ ಮಾಡಲಾಗಿದೆ. “ಸರ್ಕಾರದ ನೀತಿಗಳನ್ನು ಟೀಕಿಸುವ, ಆಡಳಿತವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಳ್ಳುವ ಪ್ರವೃತ್ತಿಯ ಮುಂದುವರಿಕೆಯಾಗಿ ಐಟಿ ಇಲಾಖೆಯ ’ಸಮೀಕ್ಷೆಗಳು’ ನಡೆಯುತ್ತಿವೆ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದ್ದು, ಮಾಧ್ಯಮಗಳ ಮೇಲಿನ ಬೆದರಿಕೆಯನ್ನು ಖಂಡಿಸಿವೆ.

ಮಹುವಾ ಮೊಯಿತ್ರ

ಈ ಸೆನ್ಸಾರ್‌ಶಿಪ್ ಈಗ ಸಂಸತ್ತಿನ ಹೊಸ್ತಿಲನ್ನು ದಾಟಿ ಅದರ ಒಳಹೊಕ್ಕಿರುವುದು ದುರಂತ. ಇದೇ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರ ತಮ್ಮ ಮಾತುಗಳ ಮಧ್ಯೆ ಹೀಗೆ ಹೇಳಿದರು: “ನಾನಿನದನ್ನು ಭಾರವಾದ ಹೃದಯದೊಂದಿಗೆ ಹೇಳಬೇಕಾಗಿದೆ: ಈಗ ನಮ್ಮ ಲೋಕಸಭೆಯಲ್ಲಿ ಸದಸ್ಯರು ಏನನ್ನು ಹೇಳಬಹುದು ಎಂಬುದಕ್ಕಿಂತ ಏನನ್ನು ಹೇಳಬಾರದು ಎಂಬುದೇ ಮಹತ್ವದ್ದಾಗಿ ಪರಿಣಮಿಸಿದೆ. ಹೇಳಬಹುದಾದ ವಿಷಯಗಳಿಗಿಂತ ನಾವು ಹೇಳಬಾರದ ವಿಷಯಗಳ ಪಟ್ಟಿ ದೊಡ್ಡದಾಗಿದೆ. ಪ್ರತಿಪಕ್ಷಗಳ ಸದಸ್ಯರು ಇಂತಹ ವಿಷಯಗಳನ್ನು ಪ್ರಸ್ತಾಪಿಸಿದ ಕೂಡಲೇ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದವರಂತೆ ಮಾತಾಡುವವರ ಬಾಯಿಮುಚ್ಚಿಸಲು ಗದ್ದಲ ಎಬ್ಬಿಸಲಾಗುತ್ತದೆ. ನಾವು ಚೀನಾ ಎನ್ನುವಂತಿಲ್ಲ, ನಾವು ಪೆಗಸಸ್ ಎನ್ನುವಂತಿಲ್ಲ, ನಾವು ಮೋರ್ಬಿ ಎನ್ನುವಂತಿಲ್ಲ, ನಾವು ರಫೇಲ್ ಎನ್ನುವಂತಿಲ್ಲ, ಕೆಲವು ಸಲ ನಾವು ಮೋದೀಜಿ ಎಂದೂ ಹೇಳುವಂತಿಲ್ಲ. ಈ ರೀತಿಯ ಅತಿರೇಕಗಳ ಕಾರಣದಿಂದಾಗಿಯೇ ನಾವು ಪ್ರತಿಪಕ್ಷಗಳ ಸದಸ್ಯರು ಪ್ರತೀ ದಿನ ಎಂಬಂತೆ ಸಭಾತ್ಯಾಗ ಮಾಡಬೇಕಾಗಿ ಬಂದಿದೆ. ನಾವು ಸ್ವಲ್ಪ ಬಲವಾಗಿ ಮಾತನಾಡುವಂತಿಲ್ಲ, ನಾವು ಸ್ವಲ್ಪ ಜೋರಾಗಿ ಮಾತನಾಡುವಂತಿಲ್ಲ” ಎಂದು ಅವರು ಆಳುವ ಪಕ್ಷದ ಸಂಸದರು ಮಾಡುವ ಗದ್ದಲದ ಬಗ್ಗೆ ಹೇಳಿದ್ದರೂ, ಈ ಅಧಿವೇಶನದಲ್ಲಿ ನಡೆದಿರುವುದನ್ನು ನೋಡಿದಾಗ ಅದು ಸ್ಪೀಕರ್‌ಗಳು ಹೇರುತ್ತಿರುವ ಸೆನ್ಸಾರ್‌ಶಿಪ್‌ಗೆ ಕೂಡ ಅನ್ವಯವಾಗುತ್ತದೆ. ಈಗ ’ಅಶೇಮ್ಡ್’ (ನಾಚಿಕೆಯಾಗುತ್ತದೆ), ’ಬಿಟ್ರೇಯ್ಡ್’ (ದ್ರೋಹ ಬಗೆಯಲಾಗಿದೆ), ’ಕರಪ್ಟ್’ (ಭ್ರಷ್ಟ), ಡ್ರಾಮಾ (ನಾಟಕ), ಹಿಪೋಕ್ರಸಿ (ಬೂಟಾಟಿಕೆ), ’ಇನ್‌ಕಾಂಪಿಟೆಂಟ್’ (ಅಶಕ್ತ) ಮುಂತಾದ ಪದಗಳನ್ನೂ ಅನ್‌ಪಾರ್ಲಿಮೆಂಟರಿ (ಅಸಂಸದೀಯ) ಪದಗಳ ಪಟ್ಟಿಗೆ ಸೇರಿಸಲಾಗಿದೆಯಂತೆ. ಈಗ ಈ ಅಸಂಸದೀಯ ಪದಗಳ ಪಟ್ಟಿ 900 ಪುಟಗಳಿಗೂ ಮೀರಿ ಬೆಳೆದಿದೆ. ಇದು ಹಲವು ಸರ್ಕಾರಗಳ ತಾಳಕ್ಕೆ ಕುಣಿದ ಸ್ಪೀಕರ್‌ಗಳು ನೀಡಿರುವ ಕೊಡುಗೆಯಾದರೂ, ಸದರಿ ಲೋಕಸಭಾ ಮತ್ತು ರಾಜ್ಯಸಭೆಯ ಸ್ಪೀಕರ್‌ಗಳು ಒಂದು ಹೆಜ್ಜೆ ಮುಂದೆ ಹೋಗಿ ಅಸಂವಿಧಾನಿಕ ಎಂದು ಬಗೆಯಬಹುದಾದ ಸೆನ್ಸಾರ್‌ಶಿಪ್‌ಗೆ ಇಳಿದಿರುವುದು ಕಳವಳಕಾರಿ ಸಂಗತಿ. ಇದಕ್ಕೆ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರೂ ಸೇರಿದಂತೆ ನಾಗರಿಕ ಸಮಾಜದ ಹಲವರು ಆಕ್ಷೇಪಿಸಿದ್ದಾರೆ. ಆದರೆ ಎಂದಿನಂತೆ ತಿದ್ದಿಕೊಳ್ಳುವ ಯಾವ ಕುರುಹೂ ಆಕಡೆಯಿಂದ ಕಂಡುಬಂದಿಲ್ಲ.

ಹಿರಿಯ ನ್ಯಾಯವಾದಿ ಎ ಜಿ ನೂರಾನಿ ಒಂದು ಕಡೆ ಹೀಗೆ ಬರೆಯುತ್ತಾರೆ: “ಸಂಸತ್ತಿನಲ್ಲಿ ಮಾಡುವ ಭಾಷಣ ಅಲ್ಲಿನ ಸಂಸದರನ್ನುದ್ದೆಶಿಸಿ ಮಾತನಾಡುವಷ್ಟೇ ದೇಶವನ್ನುದ್ದೇಶಿಸಿ ಮಾತನಾಡುತ್ತಿರುತ್ತದೆ. ಯಾರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಹೀಗಿದ್ದೂ, ಸಂಸದೀಯ ವ್ಯವಹಾರಗಳು ಟಿವಿಗಳಲ್ಲಿ ನೇರಪ್ರಸಾರವಾಗುವ ಇಂದಿನ ದಿನದಲ್ಲೂ, ಸ್ಪೀಕರ್‌ಗಳು ಅಸಂಗತ ಆದೇಶಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಈ ಅಧಿಕಾರ ದುರುಪಯೋಗ ಮುಂದುವರಿದರೆ, ಸಂಸದೀಯ ವ್ಯವಹಾರಗಳು ಮತ್ತು ಅದರ ಬಗ್ಗೆ ಮಾಧ್ಯಮಗಳ ವರದಿ, ಎರಡೂ ತಮ್ಮೆಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದ ಎರಡೂ ಸಂಸ್ಥೆಗಳು ಸೊರಗುತ್ತವೆ”. ಈಗಾಗಲೇ ದೇಶದ ಹಲವು ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹಳ್ಳ ಹಿಡಿಸಿದ್ದಾಗಿದೆ. ಇನ್ನು ವಿರೋಧ ಪಕ್ಷಗಳು ಸ್ವಲ್ಪವಾದರೂ ಚಟುವಟಿಕೆಯಿಂದ ಇರಲು ಸಾಧ್ಯವಾಗಿರುವ ಸಂಸತ್ತಿನೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನಾದರೂ ಸಂವಿಧಾನದ ಮೂಲ ತತ್ವಗಳಿಗೆ ಅನುಗುಣವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...