Homeಕರ್ನಾಟಕಶಿವನ ಹೆಸರಲ್ಲಿ ಅಧ್ಯಾತ್ಮವನ್ನು ಬಂಡವಾಳ ಮಾಡಿಕೊಂಡಿದ್ದಾರೆಯೇ ಜಗ್ಗಿ ವಾಸುದೇವ್?

ಶಿವನ ಹೆಸರಲ್ಲಿ ಅಧ್ಯಾತ್ಮವನ್ನು ಬಂಡವಾಳ ಮಾಡಿಕೊಂಡಿದ್ದಾರೆಯೇ ಜಗ್ಗಿ ವಾಸುದೇವ್?

- Advertisement -
- Advertisement -

ಈಶಾ ಫೌಂಡೇಷನ್‌ ಮೂಲಕ ಹೆಸರಾಗಿರುವ ಜಗ್ಗಿ ವಾಸುದೇವ್‌ ಆಗಾಗ್ಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಹೊಸದೇನೂ ಅಲ್ಲ. ಅಲ್ಲಿ ಎಲ್ಲೋ ಹಾವು ಹಾಡಿಸಿ, ಸಂಜೆ ವೇಳೆ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ಸುದ್ದಿಯಾಗುವುದೂ ಉಂಟು. ತಾಳ್ಮೆಯ ಬಗ್ಗೆ ಮಾತನಾಡುವ ವಾಸುದೇವ್‌, ಒಮ್ಮೆ ಬಿಬಿಸಿ ತಮಿಳು ಅವತರಣಿಕೆಗೆ ಸಂದರ್ಶನ ನೀಡುವಾಗ ಸಿಟ್ಟಿಗೆದ್ದು ಹೊರನಡೆದಿದ್ದರು. ಬಿಬಿಸಿ ಪತ್ರಕರ್ತ ಮಾಡಿದ ತಪ್ಪಾದರೂ ಏನು?

“ಕೊಯಮತ್ತೂರು ಜಿಲ್ಲೆಯ ಬೂಲುವಾಪಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಪೂರ್ವಾನುಮತಿ ಪಡೆದಿಲ್ಲ. ನಿರ್ಮಾಣ ಮುಗಿದ ಸುಮಾರು ಮೂರು ವರ್ಷಗಳ ನಂತರ ಅಗತ್ಯವಿರುವ ಅನುಮತಿಗಳನ್ನು ಕೇಳಲಾಗಿದೆ ಎಂದು 2018ರಲ್ಲಿ ಜಗ್ಗಿ ವಾಸುದೇವ್‌ರವರ ಇಶಾ ಫೌಂಡೇಶನ್ ವಿರುದ್ಧ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌‌ (ಸಿಎಜೆ) ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗ್ರಾಮದಲ್ಲಿ 32,856 ಚದರ ಅಡಿ ವಿಸ್ತೀರ್ಣದ ವಿವಿಧ ಕಟ್ಟಡಗಳನ್ನು 1994 ರಿಂದ 2008 ರ ನಡುವೆ ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಸಿಎಜಿ ಹೇಳಿದ್ದರು. ಆದರೆ 2005 ಮತ್ತು 2008ರ ನಡುವೆ ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು. ಇಶಾ ಸಂಸ್ಥೆಯು 2011ರಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಮತ್ತು ಅನುಮೋದನೆ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಕೋರಿತ್ತು. “ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು?” ಎಂದು ಪತ್ರಕರ್ತ ಕೇಳಿದ್ದಷ್ಟೇ; ಜಗ್ಗಿ ಸಿಟ್ಟಿಗೆದ್ದರು.

ತಮ್ಮನ್ನು ತಾವು ‘ಸದ್ಗುರು’ ಎಂದು ಕರೆದುಕೊಳ್ಳುವ ಜಗ್ಗಿಯವರು, ರ್‍ಯಾಲಿ ಫಾರ್‌ ರಿವರ್‌ ಎನ್ನುತ್ತಾ, ಮರಗಿಡ ಬೆಳೆಸಿ ಎಂದು ಸಸಿಯೊಂದಕ್ಕೆ 42 ರೂಪಾಯಿ ಕಲೆಕ್ಟ್‌ ಮಾಡಿದರು. ಅದು ಏನಾಯ್ತೆಂದು ಸಾರ್ವಜನಿಕರಿಗೆ ಗೊತ್ತಾಗಲಿಲ್ಲ. ಈ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮಣ್ಣು ಉಳಿಸಿ ಎಂದು ಹೊರಟಾಗ ಪ್ರಭುತ್ವವು ಕೂಡ ಜಗ್ಗಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ವಾಸುದೇವ್ ಅವರ ಇಶಾ ತನ್ನ ಯೋಗ ಕೇಂದ್ರವನ್ನು ಅಕ್ರಮವಾಗಿ ನಿರ್ಮಿಸಿದೆ ಎಂದು ನ್ಯೂಸ್‌ಲಾಂಡ್ರಿ ಕಳೆದ ವಾರ ವರದಿ ಮಾಡಿದೆ. ಅದಕ್ಕೆ ಪುರಾವೆ ಕೂಡ ಇದೆ. ಪರಿಸರ ಇಲಾಖೆ ಅಧಿಸೂಚನೆಯನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ ಎಂದು ಇಶಾ ಸ್ವತಃ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಎದುರು ಒಪ್ಪಿಕೊಂಡಿದೆ! ತಮಿಳುನಾಡಿನಲ್ಲಿ ತೀವ್ರ ವಿರೋಧವನ್ನು ಎದುರಿಸುತ್ತಿರುವ ವಾಸುದೇವ್‌ ಕರ್ನಾಟಕದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ‘ಆದಿಯೋಗಿ’ ವಿಗ್ರಹವನ್ನೂ ಕಟ್ಟಿಸಿದ್ದಾರೆ. ಕರ್ನಾಟಕ ಸರ್ಕಾರ ಅವರಿಗೆ 100 ಕೋಟಿ ಅನುದಾನ ಸಹ ನೀಡಿದೆ. ಜಗ್ಗಿ ವಾಸುದೇವ್‌ರವರು ಶಿವರಾತ್ರಿಯಂದು ವಿಶೇಷ ಪೂಜೆಯನ್ನೂ ಏರ್ಪಡಿಸುತ್ತಾರೆ. ಆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಾವಿರಾರು ರೂಗಳ ಶುಲ್ಕ ವಿಧಿಸಲಾಗುತ್ತದೆ.

ಅಂತೆಯೇ, ಜಗ್ಗಿ ಆಧ್ಯಾತ್ಮಿಕ ಪ್ರವಾಸ ಎಂಬ ಟ್ರಾವೆಲಿಂಗ್ ದಂಧೆಯನ್ನೂ ಮಾಡುತ್ತಿದ್ದಾರೆ. ವಾಸುದೇವ್ ಅವರೊಂದಿಗೆ ಹಿಮಾಲಯಕ್ಕೆ ಮೋಟಾರ್ ಸೈಕಲ್‌ನಲ್ಲಿ 12 ದಿನಗಳ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 12 ಲಕ್ಷ ರೂ! ಐದು ದಿನಗಳ ವಾರಣಾಸಿ ಪ್ರವಾಸಕ್ಕೆ ಐದು ಲಕ್ಷ ರೂ! ಮೈಸೂರಿನ ಚಾಮುಂಡಿ ಬೆಟ್ಟದ ದರ್ಶನದ ಪ್ರವಾಸಕ್ಕೆ 50 ಸಾವಿರ ರೂ ಮತ್ತು ರಾಮೇಶ್ವರಂ ಅಥವಾ ಮಧುರೈಗೆ ಐದು ದಿನಗಳ ಪ್ರವಾಸಕ್ಕೆ ಒಬ್ಬ ಭಕ್ತನಿಗೆ 45,000 ರೂ. ಹೇಗಿದೆ ಆಧ್ಯಾತ್ಮಿಕ ಪ್ರವಾಸದ ರೇಟು ಪಟ್ಟಿ? ಇದು ಸುಲಿಗೆಯಲ್ಲವೇ? ಜೊತೆಗೆ ಇದಕ್ಕೆ ತೆರಿಗೆ ಕಟ್ಟುವ ಜವಾಬ್ದಾರಿಯೂ ಇಶಾ ಸಂಸ್ಥೆಗೆ ಇಲ್ಲ! ಈ ಎಲ್ಲಾ ‘ಆಧ್ಯಾತ್ಮಿಕ’ ಪ್ರವಾಸಗಳನ್ನು ಮಾರಾಟ ಮಾಡುವುದರಿಂದ, ಜಗ್ಗಿಯ ಇಶಾ ಸಂಸ್ಥೆಗೆ ವಾರ್ಷಿಕ 60 ಕೋಟಿ ರೂ. ಲಾಭ ದೊರಕುತ್ತಿದೆ. ಇದರಲ್ಲಿ ಬಹುತೇಕವನ್ನು ದೇಣಿಗೆ ಹೆಸರಲ್ಲಿ ತೋರಿಸಿ ತೆರಿಗೆ ರಿಯಾಯಿತಿ ಪಡೆಯಲಾಗುತ್ತಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ. ಇದೆಲ್ಲವನ್ನೂ ನೋಡಿದರೆ ಶಿವನ ಹೆಸರಲ್ಲಿ ಜಗ್ಗಿ ವಾಸುದೇವ್ ಅಧ್ಯಾತ್ಮವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದಾರೋ ಎಂಬ ಪ್ರಶ್ನೆಗಳು ಮೂಡುತ್ತಿವೆ.

ಜಗ್ಗಿ ವಾಸುದೇವ್ ಅವರ ಆಧ್ಯಾತ್ಮಿಕ ಬೋಳೇತನದ ಕುರಿತು ಆಗಾಗ್ಗೆ ಬರೆಯುತ್ತಾ ಬಂದಿರುವ ಬರಹಗಾರ ಡಾ.ಟಿ.ಎನ್‌.ವಾಸುದೇವ್ ಮೂರ್ತಿಯವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಭಾರತದ ಯೋಗಿಗಳು ತಮ್ಮನ್ನು ತಾವು ʼಬ್ರಹ್ಮʼನೆಂದು, ʼಭಗವಂತʼನೆಂದು (ಅಹಂ ಬ್ರಹ್ಮಾಸ್ಮಿ) ಕರೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿ ತನ್ನನ್ನು ತಾನು ಹಾಗೆ ನಿರ್ವಚಿಸಿಕೊಳ್ಳಲೂ ಒಂದು ಆತ್ಮಶಕ್ತಿ ಬೇಕಾಗುತ್ತದಲ್ಲವೇ? ಆದರೆ ತಾನು ಮತ್ತೊಬ್ಬನಿಗೆ ಗುರು ಎಂದು, ಅವನನ್ನು ಅಧ್ಯಾತ್ಮ ಮಾರ್ಗದಲ್ಲಿ ಮುನ್ನಡೆಸುತ್ತೇನೆ ಎಂದು ಯಾವ ಅನುಭಾವಿಯೂ ಕರೆದುಕೊಂಡಿಲ್ಲ. ಕರೆದುಕೊಂಡಿದ್ದರೂ ವ್ಯಂಗ್ಯಕ್ಕೆ ವಿಡಂಬನೆಗೆ ಹಾಗೆ ಕರೆದುಕೊಂಡಿರಬಹುದು ಅಷ್ಟೇ (ಆರು ದರುಶನಕೆ ಆನು ಗುರುವಾದೆ ಗುಹೇಶ್ವರ – ಅಲ್ಲಮ)” ಎಂದು ತಿಳಿಸಿದರು.

ಇದನ್ನೂ ಓದಿರಿ: ಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್‌’

ಮುಂದುವರಿದು, “ಒಬ್ಬ ವ್ಯಕ್ತಿ ತನ್ನನ್ನು ತಾನು ʼಗುರುʼ ಅಥವಾ ʼಸದ್ಗುರುʼ ಎಂದು ಕರೆದುಕೊಳ್ಳುವುದು ಅಧ್ಯಾತ್ಮವಲ್ಲ, ಅದು ಯೋಗಿಯ ಲಕ್ಷಣವೂ ಅಲ್ಲ. ಗೌತಮ ಬುದ್ಧ ಸಹ ತನ್ನನ್ನು ತಾನು ಸಕಲ ಜೀವರಾಶಿಗಳಿಗೆ ಸ್ನೇಹಿತ (ಮೈತ್ರೇಯ) ಎಂದು, ಮನುಷ್ಯ ದುಃಖಕ್ಕೆ ವೈದ್ಯ ಕರೆದುಕೊಂಡನೇ ವಿನಾ ಜನರಿಗೆ ʼಮಾರ್ಗದರ್ಶನʼ ಮಾಡುವ ಅಧಿಕಪ್ರಸಂಗತನಕ್ಕೆ ಇಳಿಯಲಿಲ್ಲ” ಎಂದರು.

“ಇದು ಉದಾರೀಕರಣದ, ವ್ಯಾಪಾರೀಕರಣದ ಯುಗ. ಭಾರತದಲ್ಲಂತೂ ಅಧ್ಯಾತ್ಮ ಎಂಬುದು ಬಹಳ ಜನಪ್ರಿಯವಾದ, ಸುಲಭವಾಗಿ ಬಿಕರಿಯಾಗುವ ದುಬಾರಿ ವ್ಯಾಪಾರೀ ಸರಕಾಗಿದೆ. ಜಗ್ಗಿ ವಾಸುದೇವರಂತಹವರು ಭಾರತದ ಅಧ್ಯಾತ್ಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುತ್ತಿದ್ದಾರೆ. ಜಗ್ಗಿ ವಾಸುದೇವರ ಆದಿಯೋಗಿ ಪ್ರತಿಮೆ, ಶಿವರಾತ್ರಿ ಉತ್ಸವ ಇತ್ಯಾದಿಗಳು ಇಂಥದೊಂದು ವ್ಯಾಪಾರದ ತಂತ್ರವಾಗಿದೆ” ಎಂದು ಅಭಿಪ್ರಾಯಪಟ್ಟರು.

“ನನಗೆ ಜಗ್ಗಿ ವಾಸುದೇವರನ್ನು ನೆನೆದಾಗಲೆಲ್ಲ ಈಶಾವಾಸ್ಯ ಉಪನಿಷತ್ತಿನ ಈ ಮಂತ್ರ ನೆನಪಾಗುತ್ತದೆ: ಅಂಧಂ ತಮಃ ಪ್ರವಿಶಂತಿ ಯೇSವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಗ್ಂ ರತಾಃ ||೯|| ಅವಿದ್ಯೆಯನ್ನು ಪೂಜಿಸುವವರು ಕುರುಡು ಕತ್ತಲೆಯನ್ನು ಪ್ರವೇಶಿಸುತ್ತಾರೆ; ವಿದ್ಯೆಯಲ್ಲಿ ಆಸಕ್ತಿ ಹೊಂದಿರುವವರು ಇನ್ನೂ ಗಾಢವಾದ ಅಂಧಕಾರದೊಳಗೆ ಮುಳುಗುತ್ತಾರೆ. ಆ ಕಾಲದಲ್ಲೂ ಜಗ್ಗಿ ವಾಸುದೇವರಂತಹ ಜನರಿದ್ದರು ಎನಿಸುತ್ತದೆ. ಅಂತಹವರನ್ನು ಕಂಡೇ ಆ ಉಪನಿಷತ್ತಿನ ದ್ರಷ್ಟಾರ ಈ ಮಾತುಗಳನ್ನು ನುಡಿದಿರಬೇಕು. ವಿಜ್ಞಾನ, ತಂತ್ರಜ್ಞಾನ, ಯೋಗ ಅಧ್ಯಾತ್ಮ ಮುಂತಾದ ವಿಷಯಗಳ ಬಗ್ಗೆ ಅರೆಬರೆ ತಿಳಿವಳಿಕೆ ಇಟ್ಟುಕೊಂಡು ಎಲ್ಲವನ್ನೂ ಬೆರೆಸಿ ಬಾಯಿಗೆ ಬಂದದ್ದನ್ನು ಮಾತನಾಡುತ್ತ ಇದುವೆ ನಿಜವಾದ ಭಾರತೀಯ ಪರಂಪರೆ, ಭಾರತೀಯ ಅಧ್ಯಾತ್ಮ ಎಂದು ವಿಶ್ವಸಮುದಾಯವನ್ನು ನಂಬಿಸುವ ಕೆಲಸವಿದೆಯಲ್ಲ ಅದು ವಂಚನೆಯಾಗಿದೆ. ಜನರನ್ನು ಕಾರ್ಗತ್ತಲೆಯ ಕಡೆಗೆ ಕರೆದೊಯ್ಯುವ ಕೆಲಸವಾಗಿದೆ. ಇವರ ಚಟುವಟಿಕೆಗಳು ಭಾರತೀಯತೆಗೆ ಒಂದು ಕಳಂಕವಾಗಿದೆ” ಎಂದು ಟೀಕಿಸಿದರು.

“ಇಂತಹವರು ವಿಕಾಸವಾದದ ಬಗ್ಗೆ ತಪ್ಪು ತಪ್ಪು ವಿಚಾರಗಳನ್ನು ಮಂಡಿಸಿದಾಗ, ಇತಿಹಾಸವನ್ನು ಆಧಾರ ರಹಿತವಾಗಿ ವಿವರಿಸತೊಡಗಿದಾಗ, ಭಾರತೀಯ ಮಿಲಿಟರಿ ಬಗ್ಗೆ, ಜಿಎಸ್ಟಿ ಬಗ್ಗೆ ಹೇಳುವಾಗ, ಪರಿಸರದ ಬಗ್ಗೆ ಢೋಂಗಿ ಕಾಳಜಿ ತೋರಿಸಿದಾಗ ಆಯಾ ಕ್ಷೇತ್ರದ ತಜ್ಞಪರಿಣತರು ಇವರ ಮಿತಿಗಳನ್ನು ಇವರಿಗೆ ತೋರಿಸಿ ಕೊಡುವ ಕೆಲಸ ಮಾಡಬೇಕು. ಇನ್ನು ಅಧ್ಯಾತ್ಮ ಮಾತಿನಿಂದ ವ್ಯಕ್ತವಾಗುವ ಒಂದು ಪರಿಣತಿಯಲ್ಲ. ಅದು ನಮ್ಮ ಜೀವನ ಕ್ರಮದಲ್ಲಿ, ಸಮಾಜವನ್ನು ನೋಡುವ ದೃಷ್ಟಿಯಲ್ಲಿ ವ್ಯಕ್ತವಾಗಬೇಕಾಗುತ್ತದೆ” ಎಂದು ವಿವರಿಸಿದರು.

ಹಿಂದಿಯಲ್ಲಿ ಒಂದು ಗಾದೆ ಮಾತಿದೆ: “ನವಿಲು ಪ್ರಪಂಚದ ಅರ್ಧಭಾಗಕ್ಕೆ ತನ್ನ ವರ್ಣಮಯವಾದ ಗರಿಗಳನ್ನು ತೋರಿಸುತ್ತಿದ್ದರೆ ಉಳಿದರ್ಧ ಭಾಗಕ್ಕೆ ತನ್ನ ಬೆತ್ತಲೆ ಅಂಗಗಳನ್ನು ಪ್ರದರ್ಶಿಸುತ್ತಿರುತ್ತದೆ”. ಜಗ್ಗಿ ವಾಸುದೇವರಂತಹವರು ಒಂದೆಡೆ ಅಧ್ಯಾತ್ಮದ ಹೆಸರಿನಲ್ಲಿ ಸಾವಿರಾರು ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದರೆ ಮತ್ತೊಂದೆಡೆ ಯಾವುದು ಹುಸಿ ಅಧ್ಯಾತ್ಮ ಮತ್ತು ಯಾವುದು ದಿಟದ ಅಧ್ಯಾತ್ಮ ಎಂಬುದರ ಕಡೆಗೆ ಲಕ್ಷಾಂತರ ಜನಗಳ ಕಣ್ತೆರೆಸುವ ಕೆಲಸವನ್ನೂ ಮಾಡುತ್ತಿರುತ್ತಾರೆ. ಆದ್ದರಿಂದ ಅಧ್ಯಾತ್ಮದ ಹೆಸರು ಹೇಳಿ ಧನಲಾಭ ಮಾಡಿಕೊಳ್ಳುವ ಕಾರ್ಪೊರೇಟ್ ಗುರುಗಳ ವಹಿವಾಟನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಆದರೆ ಯಾವುದೇ ವ್ಯಾಪಾರ ಅಥವಾ ಸರಕು ಸೇವೆ ವಹಿವಾಟು ಜಾಗತಿಕ ಮಟ್ಟದಲ್ಲಿ ವಿಸ್ತಾರಗೊಂಡಾಗ, ಬಿಲಿಯನ್ ಗಟ್ಟಲೆ ವಹಿವಾಟು ನಡೆಸಲಾರಂಭಿಸಿದಾಗ ಅದು ಪರಿಸರದ ಮೇಲೆ ಜನಸಾಮಾನ್ಯರ ಬದುಕಿನ, ರೈತಾಪಿ ವರ್ಗದ ದುಡಿಮೆಯ ಮೇಲೆ ಅನಿವಾರ್ಯವಾಗಿ ವಿಷಮ ಪರಿಣಾಮ ಉಂಟು ಮಾಡುತ್ತದೆ. ಸರ್ಕಾರಗಳು ಅಂತಹ ದುಷ್ಪರಿಣಾಮವನ್ನು ನಿಯಂತ್ರಿಸುವ ಅಂತಹ ವ್ಯಾಪಾರಿಗಳನ್ನು ನಿರ್ಬಂಧಿಸುವ ಕೆಲಸ ಮಾಡಬೇಕು. ನಾವು ಸರ್ಕಾರವನ್ನು ಆರಿಸಿ ಕಳಿಸುವುದೂ ಇದೇ ಉದ್ದೇಶಕ್ಕಾಗಿ. ಆದರೆ ನಮ್ಮ ಜನಪ್ರತಿನಿಧಿಗಳು (ನರೇಂದ್ರ ಮೋದಿಯಿಂದ ಹಿಡಿದು ಬೊಮ್ಮಾಯಿಯವರವರೆಗೆ) ಇಂತಹವರೊಂದಿಗೆ ಕೈಜೋಡಿಸಿದರೆ, ಕಾಲಿಗೆ ಬಿದ್ದರೆ, ಪದ್ಮ ಪ್ರಶಸ್ತಿ ನೀಡಿದರೆ ಇಂತಹವರ ವಹಿವಾಟಿನ ಪ್ರವರ್ಧನೆಗೆ ಎಲ್ಲ ರೀತಿಯ ಸಹಾಯ ಸಹಕಾರ ಒದಗಿಸಿದರೆ ಅದು ಬೇಲಿಯೇ ಎದ್ದು ಹೊಲ ಮೇಯುವ ಕೆಲಸವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಪಾರ್ವತಿಗೆ ವಿಜ್ಞಾನ ಭೈರವ ತಂತ್ರವನ್ನು ಬೋಧಿಸಿದ ಗುರು, ಅದ್ವೈತ ಸಿದ್ಧಾಂತ ಬೋಧಿಸಿದ ಅಹಿಂಸೆಯ ಸಾಕಾರಮೂರ್ತಿಯಾದ ದಕ್ಷಿಣಾಮೂರ್ತಿ ಹೀಗೆ ಶಿವನಿಗೆ ನಾನಾ ವೈರುದ್ಧ್ಯಕರವಾದ ವ್ಯಕ್ತಿತ್ವಗಳಿವೆ. ನಮ್ಮಲ್ಲಿ ಶಿವ ಅವೈದಿಕ ದೈವ ಎನ್ನುವವರೂ ಉಂಟು, ವೇದಧರ್ಮದ ಪ್ರತಿಷ್ಠಾಪಕ ಎನ್ನುವವರೂ ಉಂಟು. ಇವೆಲ್ಲ ಶಿವ ಒಬ್ಬ ವ್ಯಕ್ತಿಯ ಹೆಸರೋ ಅಥವಾ ಆ ಹೆಸರಿನ ಹಲವು ವ್ಯಕ್ತಿಗಳಿರುವರೋ ಎಂಬ ಅನುಮಾನ ಮೂಡಿಸುತ್ತದೆ. ವೇದಗಳಲ್ಲಿ ಹನ್ನೊಂದು ಮಂದಿ ʼರುದ್ರʼರ ಪ್ರಸ್ತಾಪ ಬರುತ್ತದೆ. ಈ ರುದ್ರರ ಪೈಕಿ ಒಬ್ಬನು ಶಿವ ಎಂದು ಅನಂತರ ಪುರಾಣಗಳ ಕಾಲದಲ್ಲಿ ಆರೋಪಿಸಲಾಯಿತು. ಕ್ರಿ.ಪೂ. 2ನೇ ಶತಮಾನದಲ್ಲಿದ್ದ ಕಾಶ್ಮೀರ ಶೈವಧರ್ಮದ ಗುರು ನಂದಿನಾಥನನ್ನು ʼಆದಿಯೋಗಿʼ ಎಂದು ಕರೆಯುತ್ತಾರೆ. ಶಿವನನ್ನು ಆದಿಯೋಗಿ ಎಂದು ಕರೆಯಲು ವೇದ ಅಥವಾ ಪುರಾಣದಲ್ಲಿ ಯಾವುದೇ ಆಧಾರ ಸಿಗುವುದಿಲ್ಲ. ಜಗ್ಗಿ ವಾಸುದೇವರ ಶಿವ ಅವರದೇ ಕಪೋಲಕಲ್ಪಿತ ಸೃಷ್ಟಿಯಾಗಿದೆ. ಅಥವಾ ಅವರ ವ್ಯಾಪಾರದ ಟ್ರೇಡ್ ಮಾರ್ಕ್ ಆಗಿದೆ” ಎಂದು ಕುಟುಕಿದರು.

ಇದನ್ನೂ ಓದಿರಿ: ಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್‌’

ಚಿಂತಕ ಎಲ್‌.ಸಿ.ನಾಗರಾಜ್ ಅವರು ಜಗ್ಗಿ ವಾಸುದೇವ್ ಅವರ ವ್ಯಾಪಾರೀಕರಣದ ಬಗ್ಗೆ ಹಿಂದೊಮ್ಮೆ ವಿಸ್ತೃತವಾಗಿ ಬರೆದಿದ್ದರು. “ಮಣ್ಣು ಉಳಿಸಿ ಅಭಿಯಾನಕ್ಕಾಗಿ ಯೂರೋಪಿನಾದ್ಯಂತ 3000 ಕಿಮೀನಷ್ಟು ದೀರ್ಘ ಮೋಟಾರು ಸೈಕಲ್ ಓಡಿಸುತ್ತಿರುವಾಗಲೇ ರಷ್ಯಾ ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ಪೊಟಾಶಿಯಂ ಬಾಂಬುಗಳನ್ನು ಒಂದಾದ ನಂತರ ಒಂದರಂತೆ, ನೀವು ಬೋಧಿಸಿರುವ ದೀಪಾವಳಿ ಪಟಾಕಿಯಂತೆ ಉಡಾಯಿಸಿದಾಗ ಯುಕ್ರೇನಿನ ‘ಚೆರ್ನೊಜೈಟ್’ ಎಂಬ ಫಲವತ್ತಾದ ಮಣ್ಣಿನ ಕೆನೆಪದರದಿಂದ ಸಾರಜನಕವು ಆವಿಯಾಗಿ ಹೊರಟು ಹೋದ ಬಗ್ಗೆ ಅಲ್ಲೇ ಯೂರೋಪಿನಲ್ಲೇ ಇದ್ದ ನೀವು ಒಂದಾದರು ಯುದ್ದ ವಿರೋಧಿ ಪ್ರವಚನ ಕೊಡುತ್ತೀರಿ ಎಂದು ಒಣಮರದಲ್ಲಿ ಗಿಳಿಯಂತೆ ಕಾದಿದ್ದವರ ನಿರೀಕ್ಷೆಯನ್ನೇ ಹುಸಿ ಮಾಡಿಬಿಟ್ಟಿರಿ” ಎಂದು ಉಲ್ಲೇಖಿಸಿದ್ದರು.

“ತೀವ್ರ ಬರಗಾಲದಿಂದ ಉಣಲು ಧಾನ್ಯವಿಲ್ಲದೇ ಹಸಿವು ನೀಗಿಸಿಕೊಳ್ಳಲು ಅನಿವಾರ್ಯವಾಗಿ ಕೀಟಗಳನ್ನು ಆಯ್ಕೆ ಮಾಡಿಕೊಂಡ ಆಫ್ರಿಕ ಭೂಖಂಡದ ದೇಶಗಳಿಗೂ ನಿಮ್ಮ ಮಣ್ಣು ಉಳಿಸಿ ಮೋಟಾರು ಸೈಕಲ್ ಸವಾರಿ ವಿಸ್ತರಿಸಿಕೊಳ್ಳುವುದೆಂದು ಇದ್ದ ನಿರೀಕ್ಷೆಯನ್ನೂ ಹುಸಿ ಮಾಡಿಬಿಟ್ಟಿರಿ. ಈ ನಿಮ್ಮ “ಯೂರೋಪಿಯನ್ ಲಿಮಿಟೆಡ್” ಮಣ್ಣು ಉಳಿಸಿ ಅಭಿಯಾನ ವಾಸ್ತವಿಕವಾಗಿ ಆಗಬೇಕಿದ್ದು ತೀವ್ರ ಮಣ್ಣು ಸವಕಳಿಯಾಗಿರುವ ಆಫ್ರಿಕದ ಬಡದೇಶಗಳು ಮತ್ತು ಬದು, ಬಂಕ, ಬಚ್ಚಲುಗಳೇ ಇಲ್ಲದೆ ವಾರ್ಷಿಕ ಒಂದೂವರೆ ಅಂಗುಲದಷ್ಟು ಮಣ್ಣಿನ ಕೆನೆಪದರವು ಕೊಚ್ಚಿಹೋಗಿ ಬರಡಾಗುತ್ತಿರುವ ಬಡವರ ಸಣ್ಣ ಭೂ ಹಿಡುವಳಿಗಳಿರುವ ಭಾರತ ದೇಶದಲ್ಲಿ. ಪ್ರಸಿದ್ದ ಮಾನವಶಾಸ್ತ್ರಜ್ಞ ಕ್ಲಾಡ್ ಲೆವಿ ಸ್ಟ್ರಾಸ್ ಈ ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿಗಳಿರುವ ಭಾರತ ದೇಶವನ್ನು “ಹರಿದ ಹಳೆಯ ಸೀರೆಗಳ ನವೆಯದ ಭಾಗಗಳ ಕತ್ತರಿಸಿ ಹೊಲಿಗೆ ಹಾಕಿದ ಕೌದಿಯಂತೆ ಕಾಣುತ್ತಿದೆ” ಎಂಬ ರೂಪಕವಾಗಿ ವರ್ಣಿಸಿರುವುದು ಬಹುಶಃ ಸದ್ಗುರುವಾಗಿರುವ ತಮಗೆ ತಿಳಿದಿರಬಹುದು ಮತ್ತು ಈ ರೂಪಕವು ನೆಲಮಟ್ಟದಲ್ಲಿ ಮತ್ತಷ್ಟು ವಾಸ್ತವಿಕತೆಗಳನ್ನು ಬಗೆದು ತೋರುತ್ತಿದೆ” ಎಂಬುದು ಎಲ್‌.ಸಿ.ನಾಗರಾಜ್ ಅವರ ಅಭಿಪ್ರಾಯ.

ಒಟ್ಟಾರೆಯಾಗಿ ತನ್ನನ್ನು ತಾನೇ ಸದ್ಗುರು ಎಂದು ಕರೆದುಕೊಳ್ಳುತ್ತ, ನದಿ ಉಳಿಸುತ್ತೇವೆ, ಮಣ್ಣು ಉಳಿಸುತ್ತೇವೆ ಎಂದು ಶಿವನ ಹೆಸರಿನಲ್ಲಿ ಹೈಟೆಕ್ ಕಾರ್ಯಕ್ರಮಗಳನ್ನು ಮಾಡುತ್ತಾ ಅತಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಆದರೆ ಬಹುತೇಕ ಮಧ್ಯಮ ವರ್ಗ ಅವರ ಅನುಯಾಯಿಗಳಾಗಿದ್ದು ಕುರುಡಾಗಿ ನಂಬುತ್ತಿದ್ದಾರೆ. ಆದರೆ ಜವಾಬ್ದಾರಿಯುತ ಸರ್ಕಾರಗಳು ಸಹ ಹಿಂದು ಮುಂದೆ ಯೋಚಿಸದೆ ಜನರ ತೆರಿಗೆ ಹಣವನ್ನು ಇಂತವರಿಗೆ ನೀಡುವುದು ಸರಿಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ಇದನ್ನೂ ಓದಿ: ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕಾನೂನಿಗಿಂತ ಮಿಗಿಲಲ್ಲ: ಜಗ್ಗಿ ವಾಸುದೇವ್‌ಗೆ ಹೈಕೋರ್ಟ್‌ ತರಾಟೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...