Homeಮುಖಪುಟಈ ಬಿಕ್ಕಟ್ಟು ಅದಾನಿಯದ್ದಲ್ಲ, ಮೋದಾನಿಯದ್ದು

ಈ ಬಿಕ್ಕಟ್ಟು ಅದಾನಿಯದ್ದಲ್ಲ, ಮೋದಾನಿಯದ್ದು

- Advertisement -
- Advertisement -

ಯಾವಾಗಿನಿಂದ ರಾಹುಲ್ ಗಾಂಧಿ ಸೇರಿ ಎಲ್ಲಾ ವಿರೋಧ ಪಕ್ಷಗಳು ಅದಾನಿ ವಿಷಯವನ್ನು ಸಂಸತ್ತಿನಲ್ಲಿ ಎತ್ತಿದ್ದಾರೋ, ಆಗಿನಿಂದ ಷೇರು ಮಾರುಕಟ್ಟೆಯ ಈ ಭೂಕಂಪ ದೇಶದ ರಾಜಕೀಯಕ್ಕೂ ಹರಿದು ಅಲ್ಲೂ ಕಂಪನ ಹುಟ್ಟಿಸುತ್ತಿದೆ. ಪ್ರಧಾನಮಂತ್ರಿ ಮಾತ್ರ ಇದರ ಬಗ್ಗೆ ಮೌನವ್ರತ ಆಚರಿಸುತ್ತಿದ್ದಾರೆ. ಎರಡೂ ಸದನಗಳಲ್ಲಿ ಸಭಾಧ್ಯಕ್ಷರು ಅದಾನಿ ಮತ್ತು ನರೇಂದ್ರ ಮೋದಿಯವರ ಹೆಸರುಗಳನ್ನು ಜೊತೆಜೊತೆಗೆ ಹೇಳುವುದನ್ನೂ, ಅದನ್ನು ಸಂಸತ್ತಿನ ವ್ಯವಹಾರಗಳ ಕಡತದಿಂದ ತೆಗೆದುಹಾಕುವ ಜಿದ್ದಾಜಿದ್ದಿನಲ್ಲಿದ್ದಾರೆ. ಪ್ರತಿಪಕ್ಷಗಳು ಎತ್ತಿದ ಆರೋಪಗಳನ್ನು ಒಂದು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವುದಕ್ಕೂ ಈ ಸರಕಾರ ತಯ್ಯಾರಿಲ್ಲ. ಈ ವಿಚಿತ್ರ ಪ್ರತಿಕ್ರಿಯೆಯಿಂದ ಹೋಗುತ್ತಿರುವ ಸಂದೇಶ: ’ಚುಪ್ ಚುಪ್ ಖಡೆ ಹೊ, ಜರೂರ್ ಕೊಯಿ ಬಾತ್ ಹೈ’ ಅಂದರೆ ’ಸುಮ್ಮನೆ ನಿಂತಿದಿಯಾ, ಏನೋ ವಿಷಯ ಅಡಗಿದೆ’ ಎಂಬುದೇ ಆಗಿದೆ. ಲೋಕಸಭೆಯಲ್ಲಿ ಅದರ ಚರ್ಚೆಯೇ ಆಗಬಾರದಂತಹ ವಿಷಯವಾದರೂ ಏನಿದೆ ಎಂದು ಜನರು ಯೋಚಿಸುತ್ತಿದ್ದಾರೆ. ಪ್ರಧಾನಮಂತ್ರಿ ಹೆಸರನ್ನೂ ಹೇಳಲಾಗದಂತಹ ವಿಷಯವಾದರೂ ಏನಿದೆ? ಯಾರು ಏನೇ ಹೇಳಲಿ, ಏನೋ ಆಗಬಾರದ್ದಂತೂ ಆಗಿದೆ.

ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಮಂತ್ರಿಯ ನಡುವಿನ ಸಂಬಂಧ ರಹಸ್ಯವೇನೂ ಇಲ್ಲ. 2000ನೇ ಇಸವಿಯಲ್ಲಿ ಮೋದಿಜಿ ಗುಜರಾತಿನ ಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಅದಾನಿ ಒಟ್ಟು ಸಂಪತ್ತು 3,300 ಕೋಟಿ ರೂಪಾಯಿಗಳಾಗಿತ್ತು. ಮೋದಿಜಿಯ ಮುಖ್ಯಮಂತ್ರಿಯ ಅವಧಿಯಲ್ಲಿ, 2014ರ ತನಕ ಐದು ಪಟ್ಟು ಹೆಚ್ಚಳವಾಗಿ 16,780 ಕೋಟಿ ಆಯಿತು. ಆದರೆ ಅಸಲಿ ಆಟ ಅದರ ನಂತರ ಶುರುವಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೊದಲ ಐದು ವರ್ಷಗಳಲ್ಲಿ ಗೌತಮ ಅದಾನಿಯ ಒಟ್ಟು ಆಸ್ತಿ ಐದು ಪಟ್ಟು ಹೆಚ್ಚಾಯಿತು. ಅದರ ನಂತರ ಎರಡೂವರೆ ವರ್ಷಗಳಲ್ಲಂತೂ ಜಾದೂ ಆಗಿಬಿಟ್ಟಿತು ಎನ್ನಬಹುದು. ಲಾಕ್‌ಡೌನ್ ಶುರುವಾಗುವ ಸಮಯ 2020 ಮಾರ್ಚ್‌ನಲ್ಲಿ ಅವರ ಸಂಪತ್ತು 66 ಸಾವಿರ ಕೋಟಿ ಇತ್ತು. ಆದರೆ ಯಾವ ಎರಡು ವರ್ಷಗಳಲ್ಲಿ ದೇಶದ 97% ಕುಟುಂಬಗಳ ಆದಾಯ ಮತ್ತು ಆಸ್ತಿ ಕುಸಿಯಿತೋ, ಅದೇ ಅವಧಿಯಲ್ಲಿ ಗೌತಮ್ ಅದಾನಿಯ ಆಸ್ತಿ ಹತ್ತು ಪಟ್ಟು ಹೆಚ್ಚಳವಾಗಿ ಮಾರ್ಚ್ 2022ರಲ್ಲಿ 6 ಲಕ್ಷ 9 ಸಾವಿರ ಕೋಟಿ ಆಗಿಬಿಟ್ಟಿತು ಹಾಗೂ ಮುಂದಿನ ಆರು ತಿಂಗಳಲ್ಲಿ ಇನ್ನೊಂದು ಜಿಗಿತ ಕಂಡು 12 ಲಕ್ಷ ಕೋಟಿ ಮೀರಿತು.

ಸ್ವಾಭಾವಿಕವಾಗಿಯೇ ಇಂತಹ ಮಾಂತ್ರಿಕವಾದ ಹೆಚ್ಚಳವನ್ನು ಜನರು ಅದಾನಿ ಮತ್ತು ಮೋದಿಯ ಗೆಳೆತನದೊಂದಿಗೆ ತಳಕುಹಾಕುವರು. ಮೋದಿಜಿ ಮತ್ತು ಅದಾನಿಯ ಚಿತ್ರಗಳನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ತೋರಿಸಿದರು. ಪ್ರಧಾನಮಂತ್ರಿಯಾಗಿ ಆಯ್ಕೆಯಾದ ನಂತರ ಅದಾನಿಯ ವಿಮಾನದಲ್ಲಿ ಯಾತ್ರೆ ಮಾಡಿ ಬಂದಿಳಿಯುವುದು ಹಾಗೂ ಪ್ರಧಾನಮಂತ್ರಿಯ ವಿಮಾನದಲ್ಲಿ ಗೌತಮ್ ಅದಾನಿ ಕುಳಿತುಕೊಳ್ಳುವುದು ನಿಸ್ಸಂಶಯವಾಗಿ ಒಂದು ಆಳವಾದ ಸ್ನೇಹದ ಕಡೆಗೆ ಬೊಟ್ಟುಮಾಡುತ್ತವೆ. ಆದರೆ ಟಿವಿಯಲ್ಲಿ ಬಿಜೆಪಿಯ ವಕ್ತಾರರು ಮುಗ್ಧತೆಯಿಂದ ಇಂತಹ ಯಾವುದೇ ಸಂಬಂಧದ ಬಗ್ಗೆ ಪ್ರಮಾಣ ಕೇಳುತ್ತಿದ್ದಾರೆ.

ಪ್ರಮಾಣಕ್ಕಾಗಿ ತುಂಬಾ ದೂರ ಹೋಗುವ ಅವಶ್ಯಕತೆ ಇಲ್ಲ. ಮೊದಲ ಪ್ರಮಾಣ, ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಅವಾಂತರಗಳ ಬಗ್ಗೆ ಸರಕಾರಿ ಸಂಸ್ಥೆಗಳು ಕಣ್ಣುಮುಚ್ಚಿ ಕುಳಿತದ್ದು. ನಿಜ ಏನೆಂದರೆ, ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು ಅದಾನಿ ಸಮೂಹದ ಬಗ್ಗೆ ಮಾಡಿದ ವರದಿಯಲ್ಲಿ ಬಹಿರಂಗಪಡಿಸಿದ ವಿಷಯಗಳಲ್ಲಿ ಹೊಸದೇನೂ ಇರಲಿಲ್ಲ. ಷೇರು ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಇರುವ ಸಂಸ್ಥೆಯಾದ ಸೆಬಿಗೆ (SEBI) ಅದಾನಿ ಕಂಪನಿಗಳಲ್ಲಿ ಮಾರಿಷಸ್‌ನ ಕೆಲವು ಅಜ್ಞಾತ ನಿಧಿಗಳು ದುಡ್ಡು ಹಾಕುತ್ತಿವೆ ಎಂಬ ಸಂಪೂರ್ಣ ಮಾಹಿತಿ ಇತ್ತು. ಈ ನಿಧಿಗಳು ಗೌತಮ್ ಅದಾನಿಯ ಸಹೋದರ ವಿನೋದ್ ಅದಾನಿಯೊಂದಿಗೆ ಸಂಬಂಧ ಹೊಂದಿವೆ ಎಂಬುದು ’ಪನಾಮಾ ಪೇಪರ್’ಗಳ ಮೂಲಕ ಬಹಿರಂಗಗೊಂಡಿದ್ದವು, ಪ್ರಶ್ನೆ ಏನೆಂದರೆ, ಈ ಎಲ್ಲಾ ವಿಷಯಗಳು ಗೊತ್ತಿದ್ದರೂ ಸೆಬಿ ಇಡೀ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ವಿಷಯದ ಬಗ್ಗೆ ತನಿಖೆ ಯಾಕೆ ನಡೆಸಲಿಲ್ಲ ಎಂಬುದು. ಈ ಕಾರಣಕ್ಕಾಗಿಯೇ ಸುಮ್ಮನಿರಿ ಎಂದು ಸೆಬಿಗೆ ಸರಕಾರ ಸೂಚನೆ ನೀಡಿತ್ತೇ?

ಇದನ್ನೂ ಓದಿ: ಅದಾನಿಗೂ ಪ್ರಧಾನಿ ಮೋದಿಗೂ ಇರುವ ಸಂಬಂಧವೇನು? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆ

ಅದಾನಿ ಸಮೂಹಗಳ ದೌರ್ಬಲ್ಯದ ಬಗ್ಗೆ ತಿಳಿದಿದ್ದರೂ ಸರಕಾರಿ ನಿಧಿಯು ಅದಾನಿ ಕಂಪನಿಗಳಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿತು ಹಾಗೂ ಸರಕಾರಿ ಬ್ಯಾಂಕುಗಳು ಅವರಿಗೆ ತೆರೆದ ಹಸ್ತದಿಂದ ಸಾಲ ನೀಡಿದವು. ಕಳೆದ 10 ವರ್ಷಗಳಿಂದ ಅದಾನಿಯ ಲಾಭದ ಹೋಲಿಕೆಯಲ್ಲಿ ಅವರು ಮಾಡಿರುವ ಸಾಲವು ಹಲವಾರು ಪಟ್ಟು ಹೆಚ್ಚಿದೆ. ಇದನ್ನು ನೋಡಿ, ಮ್ಯೂಚುವಲ್ ಫಂಡ್‌ಗಳು ಅದಾನಿಯ ಷೇರುಗಳಿಂದ ಅಂತರ ಕಾಯ್ದುಕೊಂಡವು. ಆದರೆ ಎಲ್‌ಐಸಿಯು ಅದಾನಿಯ ಷೇರುಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆ ಮಾಡಿತು. ಅದಾನಿಯ ಷೇರು ಮುಳುಗುವುದರಿಂದ ದೇಶದ ಸಾಮಾನ್ಯ ಜನರ ದುಡಿಮೆಯ ಸಾವಿರಾರು ಕೋಟಿ ರೂಪಾಯಿ ಭಸ್ಮವಾಯಿತು. ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳು ಅದಾನಿಗೆ 34,000 ಕೋಟಿ ಸಾಲ ನೀಡಿವೆ, ಈಗ ಅವುಗಳ ಮೇಲೆ ಅಪಾಯ ಬಂದೊಡ್ಡಿದೆ. ಪ್ರಶ್ನೆ ಏನೆಂದರೆ, ದೇಶದ ಸಂಪತ್ತಿನೊಂದಿಗೆ ಚೆಲ್ಲಾಟ ಆಡುವ ಅನುಮತಿ ಯಾರು ನೀಡಿದರು?

ಮೋದಿ ಸರಕಾರವು ನೇರವಾಗಿ ಅದಾನಿ ಸಮೂಹಕ್ಕೆ ಲಾಭವಾಗಲಿ ಎಂದೇ ನೀತಿಗಳನ್ನು ರಚಿಸಿದ ನೇರವಾದ ಪ್ರಮಾಣಗಳೂ ಇವೆ. ಇತ್ತ ಅದಾನಿಯು ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ಆಮದು ಮಾಡಲು ಶುರುಮಾಡಿದರು, ಅತ್ತ ಸರಕಾರವು ಕಲ್ಲಿದ್ದಲು ಆಮದಿನ ಶುಲ್ಕ ಕಡಿಮೆ ಮಾಡಿತು. ಅದಾನಿಯು ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಯೋಜನೆ ಘೋಷಿಸಿದಾಗ ಅದರ ತಕ್ಷಣವೇ ಸರಕಾರವು ಗ್ರೀನ್ ಮಿಷನ್ ಅಡಿಯಲ್ಲಿ ಅದಕ್ಕೆ ಸಬ್ಸಿಡಿ ನೀಡುವ ಯೋಜನೆ ರಚಿಸಿತು. ಇತ್ತ ಅದಾನಿಯು ಆಹಾರಧಾನ್ಯಗಳನ್ನು ಸಂಗ್ರಹಿಸುವ ಸಲುವಾಗಿ ಸೈಲೋಸ್‌ಗಳನ್ನು ನಿರ್ಮಿಸಲು ಶುರುಮಾಡಿದಾಗ ಅತ್ತ ಸರಕಾರವು ಆಹಾರವನ್ನು ಅಕ್ರಮವಾಗಿ ಸಂಗ್ರಹಿಸುವ ಕಾನೂನನ್ನು ಸಡಿಲಗೊಳಿಸಿ, ಅದನ್ನು ರೈತ ವಿರೋಧಿ ಕಾನೂನಾಗಿ ತಿದ್ದುಪಡಿ ಮಾಡಿತು. ದೇಶದ ಹೆಚ್ಚಿನ ಬಂದರುಗಳು ಮತ್ತು ವಿಮಾನನಿಲ್ದಾಣಗಳ ಮೇಲೆ ಅದಾನಿಯ ನಿಯಂತ್ರಣ ಸಾಧ್ಯವಾಗಲಿ ಎಂದು ಸರಕಾರಿ ನಿಯಮಗಳನ್ನು ಬದಲಿಸಲಾಯಿತು. ವಾಣಿಜ್ಯ ಸಚಿವಾಲಯ ಮತ್ತು ನೀತಿ ಆಯೋಗದ ಆತಂಕಗಳನ್ನು ಕಡೆಗಣಿಸಲಾಯಿತು. ಅದಾನಿಯ ಪ್ರತಿಸ್ಪರ್ಧಿ ಕಂಪನಿಯಾದ ಜಿವಿಕೆ ಕಂಪನಿಗೆ ಇನ್‌ಕಂಟ್ಯಾಕ್ಸ್ ಮತ್ತು ಇಡಿಯ ದಾಳಿಗಳ ಬೆದರಿಕೆಯ ಮೂಲಕ ಮುಂಬಯಿ ವಿಮಾನನಿಲ್ದಾಣವನ್ನು ಅದಾನಿಗೆ ಒಪ್ಪಿಸಲು ಒತ್ತಾಯಿಸಲಾಯಿತು ಎಂಬ ಬಲವಾದ ಅನುಮಾನಗಳೂ ಇವೆ.

ಈ ಪಾರ್ಟ್ನರ್‌ಶಿಪ್ ಕೇವಲ ಭಾರತಕ್ಕೇ ಸೀಮಿತವಾಗಿಲ್ಲ. ಪ್ರಧಾನಮಂತ್ರಿ ವಿದೇಶಕ್ಕೆ ಹೋದಲ್ಲೆಲ್ಲ ಅದಾನಿ ಸಮೂಹಕ್ಕೆ ದೊಡ್ಡ ಗುತ್ತಿಗೆಗಳು ಸಿಕ್ಕಿವೆ ಎಂಬುದೂ ಕಂಡುಬಂದಿದೆ. ಆಸ್ಟ್ರೇಲಿಯ, ಇಸ್ರೇಲ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಅದಾನಿ ಸಮೂಹವು ತನ್ನ ಕಾಲು ಚಾಚಿದೆ. ಅದಾನಿಗೇ ವಿದ್ಯುತ್ ಗುತ್ತಿಗೆ ನೀಡುವಂತೆ ಸ್ವತಃ ಪ್ರಧಾನಿ ಮೋದಿಯೇ ಒತ್ತಡ ಹಾಕಿದರು ಎಂದು ರಾಷ್ಟ್ರಪತಿ ರಾಜಪಕ್ಷೆ ಹೇಳಿದ್ದನ್ನು ಶ್ರೀಲಂಕಾದ ವಿದ್ಯುತ್ ನಿಗಮದ ಅಧ್ಯಕ್ಷ ಒಪ್ಪಿಕೊಂಡ ಮೇಲೆ ಶ್ರೀಲಂಕಾದಲ್ಲಿ ಈ ವಿಷಯ ಬಹಿರಂಗಗೊಂಡಿತು. ರಾಜಕೀಯ ಮತ್ತು ಬಿಸಿನೆಸ್‌ನ ಈ ಯುಗಳಗೀತೆಗೆ ಇನ್ನೂ ಹೆಚ್ಚಿನ ಪ್ರಮಾಣ ಬೇಕೇ?

ಭಾರತದಲ್ಲಿ ಈ ಮೈತ್ರಿ ಹೊಸದೇನಲ್ಲ. ಆದರೆ ಅದಾನಿ ಮತ್ತು ಮೋದಿಯ ಈ ಸಂಬಂಧ ಅಭೂತಪೂರ್ವವಾಗಿದೆ, ಹಿಂದೆಂದೂ ಕಾಣದಂತಹ ಸಂಬಂಧವಾಗಿದೆ. ನನ್ನ ಸ್ನೇಹಿತ ಹಾಗೂ ರೈತ ನಾಯಕ ಡಾ. ಸುನಿಲಂ ಇದನ್ನು ವಿಕಾಸದ ಮೊದಾನಿ ಮಾದರಿ ಎಂದು ಕರೆಯುತ್ತಾರೆ, ಅಂದರೆ ಮೋದಿ+ಅದಾನಿ ಮೈತ್ರಿಯ ಮಾದರಿ. ನಮಗೆ ಮೋದಿಯವರು ಅದಾನಿ ಸಲುವಾಗಿ ಏನು ಮಾಡಿದ್ದಾರೆ ಎಂಬುದರ ಒಂದು ಝಲಕ್ ಅಂತೂ ಸಿಕ್ಕಿದೆ, ಆದರೆ ಅದಾನಿ ಮೋದಿಜಿಯ ಸಲುವಾಗಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಊಹೆ ಮಾತ್ರ ಮಾಡಬಲ್ಲೆವು. ಬಿಜೆಪಿಯ ಸಫಲತೆಯ ಹಿಂದೆ ಅದಾನಿಯ ಕೈವಾಡವಿದೆಯೇ? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು ಸಾಧ್ಯವಿಲ್ಲ. ಆದರೆ ಒಂದು ಮಾತ್ರ ಖಚಿತ, ಕಳೆದ ಕೆಲವು ದಿನಗಳ ಬಿಕ್ಕಟ್ಟು ಕೇವಲ ಅದಾನಿಯ ಬಿಕ್ಕಟ್ಟಲ್ಲ. ಇದು ರಾಜಕೀಯ ನಾಯಕರ ಮತ್ತು ಹಣದ ಸೇಠುಗಳ ಮೈತ್ರಿಯ ಹೊಸ ಮೊದಾನಿ ಮಾದರಿಯ ಬಿಕ್ಕಟ್ಟಾಗಿದೆ. ಇದು ಕೇವಲ ಷೇರು ಮಾರುಕಟ್ಟೆಯ ಬಿಕ್ಕಟ್ಟಾಗಿಲ್ಲ. ಇದು ಪ್ರಜಾಪ್ರಭುತ್ವದ ಬಿಕ್ಕಟ್ಟು, ಆ ಬಿಕ್ಕಟ್ಟಿನ ಷೇರುದಾರರು ಭಾರತದ ಜನರು.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Yogendra Yadav,
    Nice article , which talks about adani and modi friendship from 2014 onwards, Adani group it’s miracle share price growth, anyone can doubt this growth! However Modani friendship is there, we know this from 2014 election prior itself.
    Let’s wait and watch, Modi is silent on this adani hedenberg shortseller issue. 🙂

  2. This great man has no other work but to indulge in vilification…..He may have been good at his work and may have been a good teacher…but by applying the Peter’s Principle he is neither a good politician nor a good chintak ….

    He has been an armchair critic, selective and biased at that and that takes away all his credibility whatsoever little he may have! He has openly acknowledged and has sided and has been an anarchist and its nothing but harakiri….He has all the freedom to be against Modi and be glued to Rahul…but that doesn’t mean he can run riot against the country…..In his own words he has been an ardent member of the toolkit gang and an International Pitch maker…a master at that….promoting him too much will also destroy your credibility! !!

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...