Homeಮುಖಪುಟಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್‌’

ಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್‌’

ತಾಳ್ಮೆಯ ಬಗ್ಗೆ ಜಗ್ಗಿ ಅನೇಕ ಸಂದರ್ಭಗಳಲ್ಲಿ ಬೋಧಿಸಿದ್ದಾರೆ. ಆದರೆ ಬಿಬಿಸಿ ಸಂದರ್ಶನದ ವೇಳೆ ಸ್ವತಃ ತಾಳ್ಮೆ ಕಳೆದುಕೊಂಡರು. ಮೂರು ಕ್ಯಾಮೆರಾಗಳನ್ನು ಇಶಾ ಸಂಸ್ಥೆ ಆಫ್ ಮಾಡಿಸಿತು.

- Advertisement -
- Advertisement -

ಸ್ವಯಂಘೋಷಿತ ದೇವಮಾನವ, ಸದ್ಗುರು ಎಂದೂ ಕರೆಯಲ್ಪಡುವ ಜಗ್ಗಿ ವಾಸುದೇವ್ ಅವರು ತಾಳ್ಮೆಯ ಬಗ್ಗೆ ಅನೇಕ ಸಂದರ್ಭಗಳಲ್ಲಿ ಬೋಧನೆ ಮಾಡಿದ್ದಾರೆ. ಆದರೆ ಬಿಬಿಸಿ ತಮಿಳು ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆ ಸ್ವತಃ ಜಗ್ಗಿಯವರೇ ತಮ್ಮ ತಾಳ್ಮೆಯನ್ನು ಕಳೆದುಕೊಂಡರು.

ಸಂದರ್ಶನದ ಮಧ್ಯದಲ್ಲೇ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಿದರು. ಬಿಬಿಸಿ ತಮಿಳಿನ ಕೆ.ಸುಬಗುಣಂ ಅವರು ಜಗ್ಗಿ ವಾಸುದೇವ್‌ ಅವರ ಸಂದರ್ಶನ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಂದರ್ಶನದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತ್ರಕರ್ತರ ಪ್ರಶ್ನೆಗಳಿಂದ ಜಗ್ಗಿ ವಿಚಲಿತರಾಗಿರುವುದು ಚರ್ಚೆಯಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಗ್ಗಿ ಆರಂಭಿಸಿರುವ ‘ಮಣ್ಣು ಉಳಿಸಿ ಆಂದೋಲನ’ದ ಕುರಿತು ಮಾತನಾಡುವ ಮೂಲಕ ಸಂದರ್ಶನ ಆರಂಭವಾಗುತ್ತದೆ. ಸ್ವಘೋಷಿತ ದೇವಮಾನವರಾದ ಜಗ್ಗಿ ತಮ್ಮ ದ್ವಿಚಕ್ರ ವಾಹನದಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಈ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಜಗ್ಗಿಯವರ ಇಶಾ ಫೌಂಡೇಶನ್‌ಗೆ ಸಂಬಂಧಿಸಿದಂತೆ ಪರಿಸರ ಅನುಮತಿಯ ವಿವಾದದ ಕುರಿತು ಪ್ರಶ್ನೆಗಳು ಬರುತ್ತಿದ್ದಂತೆ ಸಿಟ್ಟಿಗೆದ್ದಿದ್ದಾರೆ. ಅಂತಿಮವಾಗಿ ಸಂದರ್ಶನವನ್ನು ಮೊಟಕುಗೊಳಿಸಲು ಸೂಚಿಸಿದ್ದಾರೆ.

ಕೊಯಮತ್ತೂರು ಜಿಲ್ಲೆಯ ಬೂಲುವಾಪಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಪೂರ್ವಾನುಮತಿ ಪಡೆದಿಲ್ಲ. ನಿರ್ಮಾಣ ಮುಗಿದ ಸುಮಾರು ಮೂರು ವರ್ಷಗಳ ನಂತರ ಅಗತ್ಯವಿರುವ ಅನುಮತಿಗಳನ್ನು ಕೇಳಲಾಗಿದೆ ಎಂದು 2018ರಲ್ಲಿ ಸದ್ಗುರುಗಳ ಇಶಾ ಫೌಂಡೇಶನ್ ವಿರುದ್ಧ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌‌ (ಸಿಎಜೆ) ಗಂಭೀರ ಆರೋಪಗಳನ್ನು ಮಾಡಿದ್ದರು.

ಗ್ರಾಮದಲ್ಲಿ 32,856 ಚದರ ಅಡಿ ವಿಸ್ತೀರ್ಣದ ವಿವಿಧ ಕಟ್ಟಡಗಳನ್ನು 1994 ರಿಂದ 2008 ರ ನಡುವೆ ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಸಿಎಜಿ ಹೇಳಿದ್ದರು. ಆದರೆ 2005 ಮತ್ತು 2008ರ ನಡುವೆ ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ಕಟ್ಟಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು. ಇಶಾ ಸಂಸ್ಥೆಯು 2011ರಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಮತ್ತು ಅನುಮೋದನೆ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಕೋರಿತ್ತು.

“ಇಶಾ ಫೌಂಡೇಶನ್ ಈಗ ಪರಿಸರಕ್ಕಾಗಿ ಕೆಲಸ ಮಾಡುತ್ತಿದೆ” ಎಂದು ಬಿಬಿಸಿಯ ಸುಬಗುಣಂ ಪ್ರಸ್ತಾಪಿಸುತ್ತಾರೆ. “ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು?” ಎಂದು ಕೇಳುತ್ತಾರೆ.

ಇದರಿಂದ ತಾಳ್ಮೆ ಕಳೆದುಕೊಂಡ ಸದ್ಗುರು, ‘ಇದನ್ನು ಎಷ್ಟು ಬಾರಿ ಕೇಳುತ್ತೀರಿ?’ ಎನ್ನುತ್ತಾರೆ. ಮಾತು ಮುಂದುವರಿಸಲು ಹೊರಟ ಪತ್ರಕರ್ತನನ್ನು ತಡೆದು, “ನೀವು ಸುದ್ದಿ ನೋಡುತ್ತಿದ್ದೀರಾ, ಸರ್ಕಾರಿ ಇಲಾಖೆ ಹೇಳುವುದನ್ನು, ನ್ಯಾಯಾಲಯ ಹೇಳಿದ್ದನ್ನು ನೋಡಿದ್ದೀರಿ? ಅಥವಾ ನೀವು ಅರೆಬೆಂದ ವ್ಯಕ್ತಿಯ ಮಾತನ್ನು ಕೇಳುತ್ತಿದ್ದೀರಾ?” ಎಂದು ಪ್ರಶ್ನೆಗಳನ್ನು ಕೇಳುತ್ತಾರೆ. ಸುಬಗುಣಂ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವಾಗ, ಜಗ್ಗಿ ಮತ್ತೆ ಮಾತನಾಡುವುದಕ್ಕೆ ತಡೆದು ಪ್ರಶ್ನೆಗಳನ್ನು ಪುನರಾವರ್ತಿಸುತ್ತಾರೆ.

ಇದನ್ನೂ ಓದಿರಿ: ನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

“ನಾವು ಯಾವುದೇ ಅತಿಕ್ರಮಣ ಮಾಡಿಲ್ಲ ಎಂದು ಇಲಾಖೆ ಹೇಳುತ್ತಿದೆ. ಎಲ್ಲವೂ ಸರಿಯಾಗಿದೆ” ಎನ್ನುತ್ತಾರೆ ಜಗ್ಗಿ. ಪತ್ರಕರ್ತ ತನ್ನ ಪ್ರಶ್ನೆಯನ್ನು ವಿವರಿಸಲು ಪ್ರಯತ್ನಿಸಿದಾಗ, ಜಗ್ಗಿ ಮಧ್ಯಪ್ರವೇಶಿಸಿ, “ಈ ದೇಶದಲ್ಲಿ ಕಾನೂನು ಇದೆಯೇ? ಸರ್ಕಾರ ಇದೆಯೇ? ಅವರ ಕೆಲಸ ಮಾಡಲಿ. ಬಿಟ್ಟುಬಿಡು. ನೀವು ಯಾಕೆ ಮಾಡುತ್ತಿದ್ದೀರಿ?” ಎಂದು ಹರಿಹಾಯುತ್ತಾರೆ.

ಸುಬಗುಣಂ ಅವರು ಮತ್ತೆ ಪ್ರಶ್ನೆಯನ್ನು ವಿವರಿಸಲು ಪ್ರಯತ್ನಿಸಿದರು. “ಇಶಾ ಫೌಂಡೇಷನ್‌‌ ಅನುಮತಿ ಪಡೆದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ್ದೀರಿ” ಎಂದು ಸಂದರ್ಶಕ ಪ್ರಶ್ನಿಸಿದಾಗ ಜಗ್ಗಿ, ”ನೀವು ಹೇಳುತ್ತಿರುವುದು ಮೂರ್ಖತನದಿಂದ ಕೂಡಿದೆ. ಈ ಕ್ಯಾಮೆರಾವನ್ನು ಆಫ್ ಮಾಡಿ, ಸಾಕು” ಎಂದು ಕಿಡಿಕಾರುತ್ತಾರೆ.

“Listen man” ಎಂದು ಜಗ್ಗಿ ವಾಸುದೇವ್ ಮುಂದುವರಿಸಿದರು. “ನನ್ನ ಮಾತನ್ನು ಕೇಳಿ, ದೇಶದಲ್ಲಿ ಇರುವ ಪ್ರತಿಯೊಂದು ಕಾನೂನನ್ನು ಅನುಸರಿಸಲಾಗಿದೆ. ಯಾವುದೇ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿದ್ದೇವೆ. ಬಹಳ ಹಿಂದೆ,  20 ವರ್ಷಗಳ ಹಿಂದೆ… ಕೆಲವು ಸಣ್ಣ ವ್ಯತ್ಯಾಸಗಳಿದ್ದವು. ನಾವು ಅದನ್ನು ಸರಿಪಡಿಸಿದ್ದೇವೆ” ಎಂದು ಪ್ರತಿಕ್ರಿಯೆ ನೀಡುತ್ತಾರೆ.

“ಸುಬಗುಣಂ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಮುಂದಾದರು. ಈ ಸಮಯದಲ್ಲಿ, ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಇದ್ದವರು ಬಲವಂತವಾಗಿ ಮೂರು ಕ್ಯಾಮೆರಾಗಳ ರೆಕಾರ್ಡಿಂಗ್ ನಿಲ್ಲಿಸಿದರು” ಎಂದು ಬಿಬಿಸಿ ಹೇಳಿಕೊಂಡಿದೆ.

ಕೆಲವು ದಿನಗಳ ಹಿಂದೆ, ಜಗ್ಗಿ ವಾಸುದೇವ್ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಪ್ಪುದಾರಿಗೆಳೆಯುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ನಂತರ ಅದನ್ನು BOOM ವೆಬ್‌ಸೈಟ್‌ ಫ್ಯಾಕ್ಟ್‌ ಚೆಕ್ ಮಾಡಿತ್ತು.

ಭಾರತದಲ್ಲಿ ಅಸಹಿಷ್ಣುತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗ್ಗಿ, “ಕಳೆದ 25 ವರ್ಷಗಳಲ್ಲಿ ಈ ವಿಷಯಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ 25 ವರ್ಷಗಳ ಹಿಂದೆ, ನಾವು ವಿಶ್ವವಿದ್ಯಾನಿಲಯದಲ್ಲಿದ್ದಾಗ ಗಲಭೆಯನ್ನು ನೋಡದ ವರ್ಷವೇ ಇರಲಿಲ್ಲ. ದೇಶದಲ್ಲಿ ಕೋಮುಗಲಭೆಗಳು ಪ್ರತಿ ವರ್ಷ ಎಲ್ಲೋ ಒಂದು ಕಡೆ ನಡೆಯುತ್ತಿದ್ದವು. ಕಳೆದ 5-6 ವರ್ಷಗಳಲ್ಲಾಗಲಿ 10 ವರ್ಷಗಳಲ್ಲಾಗಲಿ ನೀವು ಅದರ ಬಗ್ಗೆ ಕೇಳಿಲ್ಲ” ಎಂದಿದ್ದರು.

ಆದರೆ, ಗೃಹ ವ್ಯವಹಾರಗಳ ಸಚಿವಾಲಯದ ಡೇಟಾವನ್ನು ಉಲ್ಲೇಖಿಸಿ 2012 ಮತ್ತು 2020 ರ ನಡುವೆ ಕನಿಷ್ಠ 6,285 ಕೋಮು ಗಲಭೆಗಳು ನಡೆದಿವೆ ಎಂದು BOOM ವರದಿ ಮಾಡಿತು. 2014 ಮತ್ತು 2020ರ ನಡುವೆ ದೇಶದಲ್ಲಿ 5,415 ಕೋಮು ಗಲಭೆಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶವನ್ನು ವರದಿ ಉಲ್ಲೇಖಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...