Homeಕರ್ನಾಟಕಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಸಂದರ್ಶನಕ್ಕೆ ಹಾಜರಾಗಿದ್ದ ಕಲಾವಿದನನ್ನು ಹೀಯಾಳಿಸಿ ಹೊರಗೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಕಿರಿಯ ಕಲಾವಿದರೊಬ್ಬರಿಗೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ನಿಂದಿಸಿರುವ ಆಡಿಯೊ ವೈರಲ್‌ ಆಗಿದೆ. ಆಕ್ಷೇಪಾರ್ಹ ಪದಗಳನ್ನು ಕಿರಿಯ ರಂಗಕರ್ಮಿಗೆ ನಿರ್ದೇಶಕರು ಬಳಸಿರುವುದು ಆಡಿಯೊದಲ್ಲಿ ದಾಖಲಾಗಿದೆ.

ರಂಗಾಯಣದ ರೆಪರ್ಟರಿ ಕಲಾವಿದರ ಆಯ್ಕೆ ಪ್ರಕ್ರಿಯೆ ಮೊನ್ನೆಯಷ್ಟೇ ಮೈಸೂರು ರಂಗಾಯಣದಲ್ಲಿ ನಡೆದಿತ್ತು. ರಂಗಾಯಣದಲ್ಲಿ ತರಬೇತಿ ಪಡೆದಿರುವ ಅನುರಾಗ್ ಶರ್ಮ ಎನ್ನುವ ಕಿರಿಯ ಕಲಾವಿದ ಅರ್ಜಿ ಹಾಕಿದ್ದರು. ಆದರೆ ಈ ಹಿಂದೆ ಕಾರ್ಯಪ್ಪ ಅವರ ವಿರುದ್ಧ ಅನುರಾಗ್‌ ಮಾತನಾಡಿದ್ದರು ಎಂಬ ಕಾರಣಕ್ಕೆ ಸಂದರ್ಶನ ನಡೆಸದೆ ವಾಪಸ್‌ ಕಳಿಸಲಾಗಿದೆ ಹಾಗೂ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರೂ ಎಂದು ಆರೋಪಿಸಲಾಗಿದೆ. ನಂತರ ಅನುರಾಗ್ ಅವರು ರಂಗಾಯಣ ನಿರ್ದೇಶಕರಿಗೆ ಕರೆ ಮಾಡಿ, “ಏಕೆ ನನ್ನ ಸಂದರ್ಶನ ಮಾಡಲಿಲ್ಲ” ಎಂದು ಕೇಳಿದಾಗ ಆಕ್ಷೇಪಾರ್ಹ ಪದಗಳನ್ನು ಕಾರ್ಯಪ್ಪ ಅವರು ಬಳಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೈರಲ್‌ ಆಡಿಯೊದಲ್ಲಿ ಏನಿದೆ? 

ಅನುರಾಗ್‌: ನನ್ನನ್ನು ಸಂದರ್ಶನ ಮಾಡದೆ ನಿನ್ನೆ ಹೊರಗೆ ಕಳಿಸಿದ್ದು ಏಕೆ?

ಅಡ್ಡಂಡ ಕಾರ್ಯಪ್ಪ: ನೀನು ಯಾರೋ ಮಾರಾಯ ಫೋನ್‌ ಮಾಡೋದಕ್ಕೆ? ನೀ ಯಾರು ನನ್ನ ಕೇಳೋದಕ್ಕೆ… ಲೋ……. ಇಡೋ ಮಾರಾಯ ಫೋನು.

ಅನುರಾಗ್: ನಾನು ಏಕೆ ಫೋನ್ ಮಾಡಬಾರದು.

ಕಾರ್ಯಪ್ಪ: ನೀನ್ ಯಾರೋ ಫೋನ್ ಮಾಡೋಕೆ? ರಂಗಾಯಣಕ್ಕೆ ಕೆಟ್ಟ ಹೆಸರು ತರೋದಕ್ಕೆ… 

ಅನುರಾಗ್: ನಾನು ಯಾವಾಗ ಕೆಟ್ಟ ಹೆಸರು ತಂದಿದ್ದೀನಿ. ಇರೋ ವಿಷಯ ಹೇಳಿದ್ದೇನಲ್ಲವಾ? 

ಕಾರ್ಯಪ್ಪ: ಇಡೋ ಮಾರಾಯ ಫೋನು. ನೀನೊಬ್ಬ ಲೋ….  ಇದ್ದೀಯ. ಇಡೋ ಫೋನು.

ಅನುರಾಗ್: ರಂಗಾಯಣ ನಿರ್ದೇಶಕರಾಗಿ ನೀವು ಈ ರೀತಿ ಮಾತನಾಡುವುದು ಸರಿಯೇ? 

ಕಾರ್ಯಪ್ಪ: ನೀನೊಬ್ಬ ಕಡಚಾ ಫೇಲೋ. ನೀನೊಬ್ಬ ಆರ್ಟಿಸ್ಟಾ?

ಅನುರಾಗ್‌: ನಿಮ್ಮ ಕುರ್ಚಿಗಾದರೂ ಮರ್ಯಾದೆ ಕೊಡೋದು ಬೇಡವಾ?

ಕಾರ್ಯಪ್ಪ: ರಂಗಾಯಣದ ಋಣಪಾತಕ ನೀನು. ಫೋನ್ ಮಾಡಲಿಕ್ಕೆ ನಿನಗೆಷ್ಟು ಸೊಕ್ಕು ಇದೆ. 

ಅನುರಾಗ್‌: ಇದಕ್ಕೆ ಉತ್ತರ ಕೊಡಿ ಸಾಕು, ಇಂಟರ್‌ವ್ಯೂಗೆ ಬಂದ ಕಲಾವಿದನನ್ನು….

ಕಾರ್ಯಪ್ಪ: ನೀನ್ಯಾವನೋ ಕೇಳೋಕೆ. ಸರಿಯಾಗಿ ಅಪ್ಲಿಕೇಷನ್‌ ಕೂಡ ಹಾಕದೆ, ಚೇಷ್ಟೇಗಾಗಿ ಬೇಕಂತಲೇ ಅಪ್ಲಿಕೇಷನ್ ಹಾಕಿದವನು ನೀನು. 

ಅನುರಾಗ್‌: ಎಷ್ಟೋ ಜನ ಡಿಪ್ಲೊಮಾ ಕೂಡ ಮಾಡದವರು ರಂಗಾಯಣಕ್ಕೆ ಅರ್ಜಿ ಹಾಕಿದ್ದಾರೆ. 

ಕಾರ್ಯಪ್ಪ: ನೀನು ಡಿಪ್ಲೊಮಾ ಮಾಡಿದವನು. ನಿನ್ನನ್ನು ತೆಗೆದುಕೊಳ್ಳುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು. ಆದರೆ ನೀನು ಹಾಕಿದ ಉದ್ದೇಶವೇ… (ಮಾತು ಅಸ್ಪಷ್ಟವಾಗಿದೆ).

ಅನುರಾಗ್: ಸುಮ್ಮನೇ ಕೂಗಾಡಬೇಡಿ ಸರ್‌. ಬೇರೆಯವರ ಮಾತನ್ನೂ ಕೇಳಿಸಿಕೊಳ್ಳಿ.

ಕಾರ್ಯಪ್ಪ: ನಾಯಿಗಳ ಜೊತೆ ನಾನು ಮಾತನಾಡುವುದಿಲ್ಲ.

– ಹೀಗೆ ಸಂಭಾಷಣೆ ಇರುವ ಆಡಿಯೊ ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿ ಹರಿದಾಡಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಿರಿಯ ಕಲಾವಿದ ಅನುರಾಗ್‌ ಶರ್ಮಾ ಅವರು, “ನಾನೊಬ್ಬ ಕಲಾವಿದನಾಗಿ ರಂಗಾಯಣ ಕೆಲವು ನಾಟಕಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹೊಸ ಕಲಾವಿದ ಅಲ್ಲ. ‘ಶ್ರೀ ರಾಮಾಯಣ ದರ್ಶನಂ’ ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದೆ. ‘ಪರ್ವ’ದಲ್ಲಿ ಕರ್ಣನ ಪಾತ್ರ ಮಾಡಿದ್ದೆ. ಆದರೆ ಕೆಲವು ದಿನಗಳಿಂದ ರಂಗಾಯಣ ನಿರ್ದೇಶಕರು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತನ್ನು ಎಲ್ಲ ಕಡೆ ತುರುಕುತ್ತಾ ಹೋಗಿದ್ದರಿಂದ ಇರುಸುಮುರುಸಾಗಿ ಕೆಲವು ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡಿದ್ದೆ. ಈ ವೈಯಕ್ತಿಕ ವೈಷಮ್ಯ ಇಟ್ಟುಕೊಂಡು ಹೀಗೆ ವರ್ತಿಸಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಕರಾವಳಿ ಕರ್ನಾಟಕದ ರಕ್ತಸಿಕ್ತ ಚರಿತ್ರೆಯ ನಿಜ ಕಥನ ‘ನೇತ್ರಾವತಿಯಲ್ಲಿ ನೆತ್ತರು’

“ಸಂದರ್ಶನದ ವೇಳೆ- ನೀನು ಕರ್ಣನ ಪಾತ್ರ ಮಾಡಿದವನು. ಆದರೆ ನೀನು ಶಕುನಿ. ನಿನಗೆ ರಂಗಾಯಣಕ್ಕೆ ಅರ್ಜಿ ಹಾಕುವ ಯೋಗ್ಯತೆ ಇಲ್ಲ. ನಿನ್ನ ಸಂದರ್ಶನ ಮಾಡುವುದಿಲ್ಲ. ಹೊರಗೆ ಹೋಗು- ಎಂದು ಬಲವಂತವಾಗಿ ಹೊರದಬ್ಬಿದರು. ಆ ನಂತರದಲ್ಲಿ ಅವರಿಗೆ ಕರೆ ಮಾಡಿದ್ದೆ. ‘ಹೀಗ್ಯಾಕೆ ಮಾಡಿದಿರಿ, ಕನಿಷ್ಟಪಕ್ಷ ಸಂದರ್ಶನವಾದರೂ ಮಾಡಬಹುದಿತ್ತಲ್ಲ’ ಎಂದು ಕೇಳಿದಾಗ ಹೀಗೆ ನಿಂದಿಸಿದ್ದಾರೆ” ಎಂದು ಆರೋಪಿಸಿದರು.

ಪೊಲೀಸರಿಗೆ ದೂರು ನೀಡಿದ್ದೇನೆ: ಅಡ್ಡಂಡ ಕಾರ್ಯಪ್ಪ

ವೈರಲ್ ಆಡಿಯೊಕ್ಕೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು, “ಸಂದರ್ಶನ ಮುಗಿದ ಮೇಲೆ ಸುಮಾರು ಐವತ್ತು ಭಾರಿ ಕರೆ ಮಾಡಿ ನನಗೆ ಅನುರಾಗ್ ತೊಂದರೆ ಕೊಟ್ಟಿದ್ದಾನೆ. ಆನಂತರದಲ್ಲಿ ನಾನು ಆತನೊಂದಿಗೆ ಮಾತನಾಡಿದ್ದೇನೆ. ಪೊಲೀಸರಿಗೆ ದೂರು ಕೂಡ ನೀಡಿದ್ದೇನೆ” ಎಂದರು.

ಸಂದರ್ಶನ ಮಾಡದೆ ಕಳುಹಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಕಳೆದ ಒಂದು ವರ್ಷದಿಂದ ರಂಗಾಯಣದ ವಿರುದ್ಧ, ನಿರ್ದೇಶಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಂಗಾಯಣದ ಚರಿಷ್ಮಾವನ್ನು ಹಾಳು ಮಾಡುತ್ತಾ ಬಂದಿದ್ದಾನೆ. ರಂಗಾಯಣದ ಇಬ್ಬರು ಹಿರಿಯ ಕಲಾವಿದರು, ರಂಗ ಸಮಾಜದ ಇಬ್ಬರು ಸದಸ್ಯರು ಒಳಗೊಂಡು ಸಂದರ್ಶನ ಸಮಿತಿ ಮಾಡಿದ ತೀರ್ಮಾನವಿದು” ಎಂದು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

0
"ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?"...