Homeಮುಖಪುಟಉತ್ತರ ಕನ್ನಡದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತುಗಳು

ಉತ್ತರ ಕನ್ನಡದಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತುಗಳು

ಗಾಂಧೀಜಿ ಕಾರವಾರಕ್ಕೆ ಬಂದಿದ್ದು ಆ ವೇಳೆ ಅಡಿಯಾಗಿದ್ದ ಅಸ್ಪೃಶ್ಯತೆ ಮತ್ತು ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧದ ಜನಜಾಗೃತಿ ಮೂಡಿಸಲೆಂದಾಗಿತ್ತು.

- Advertisement -
- Advertisement -

ಉತ್ತರ ಕನ್ನಡದ ಹಲವೆಡೆ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು ಇವತ್ತಿಗೂ ಅಚ್ಚಳಿಯದೇ ಉಳಿದಿದೆ! ಜಿಲ್ಲೆಗೆ ಹಲವು ಬಾರಿ ಗಾಂಧೀಜಿ ಬಂದುಹೋಗಿದ್ದಾರೆ. ಗಾಂಧೀಜಿ ಉತ್ತರ ಕನ್ನಡಕ್ಕೆ ಆಗಮಿಸುತ್ತಿದ್ದುದು ಸ್ವಾತಂತ್ರ್ಯ ಚಳವಳಿ ಜಾಗೃತಿಗೆಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಗಾಂಧೀ ಹೊರಟರೆಂದರೆ ಬರೀ ಸ್ವರಾಜ್ಯ ಕನಸಷ್ಟೇ ಅಲ್ಲ, ಸಾಮಾಜಿಕ ಮತ್ತು ಜೀವಪರ ತುಡಿತವೂ ಇರುತ್ತಿತ್ತು. ಉಪ್ಪು ತಯಾರಿಕೆ ಮತ್ತು ಮಾರಾಟವನ್ನು ಬ್ರಿಟಿ‍‍‍ಷ್ ಸರ್ಕಾರ ನಿಷೇಧಿಸಿದಾಗ ಗಾಂಧೀಜಿ ಆದಿಯಾಗಿ ಹಿರಿಯ ರಾಷ್ಟ್ರೀಯ ನೇತಾರರು ತಿರುಗಿ ಬಿದ್ದಿದ್ದರು. ಅಸಹಕಾರ ಚಳುವಳಿಯೊಂದೇ ಈ ಸಮಸ್ಯೆ ಪರಿಹಾರಕ್ಕೆ ತಾರಕ ತಂತ್ರವೆಂಬ ತೀರ್ಮಾನಕ್ಕೆ ಬಂದಿದ್ದರು. 20-2-1930ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ್ ಕಾಂಗ್ರೆಸ್ ಸಮಿತಿ ಉತ್ತರ ಕನ್ನಡದ ಅಂಕೋಲಾ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಸರಿಯಾದ ಸ್ಥಳವೆಂದು ನಿರ್ಧರಿಸಿತ್ತು.

ಪೊಲೀಸರ ಅಡೆತಡೆಯನ್ನೆಲ್ಲ ಕಡೆಗಣಿಸಿ ಏಪ್ರಿಲ್ 13ರಂದು ಭರ್ಜರಿ ಮೆರವಣಿಗೆಯೊಂದಿಗೆ ಅಂಕೋಲೆಯ ಜನಸಾಗರ ಕಡಲ ಕಿನಾರೆಯತ್ತ ಹೊರಟಿತ್ತು! ಅಲ್ಲಿ ಬ್ರಿಟಿಷ್ ಸರ್ಕಾರದ ಕಾನೂನು ಧಿಕ್ಕರಿಸಿ ಉಪ್ಪು ತಯಾರಿಕೆ, ಮಾರಾಟ ಮಾಡಲಾಯಿತು. ಅಂಕೋಲೆಯ ಹಳ್ಳಿಹಳ್ಳಿಯಲ್ಲಿ ಚಳವಳಿ ಭುಗಿಲೆದ್ದಿತು! ಅಸಹಕಾರ ಚಳವಳಿ, ಕರಬಂಧಿ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲೆ ನಿರ್ಣಾಯಕ ಪಾತ್ರ ವಹಿಸಿತ್ತು. ಹೋರಾಟಗಾರ ರೈತರು ತಮ್ಮ ಭೂಮಿ ಕಳಕೊಳ್ಳಬೇಕಾಗಿ ಬಂತು; ಆದರೂ ಅಂಜದೆ ಅಳುಕದೆ ಪೊಲೀಸರ ಲಾಠಿಗೆ ಎದೆಗೊಟ್ಟು ನಿಂತರು! ಗುಜರಾತಿನ ಬಾರ್ಡೋಲಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಮಾದರಿಯಲ್ಲೇ ಅಂಕೋಲೆಯಲ್ಲೂ ಚಳುವಳಿ ಆಗಿತ್ತು. ಅಂಕೋಲೆಗೆ ಕರ್ನಾಟಕದ ಬಾರ್ಡೋಲಿಯೆಂದು ಹೆಸರು ಬಂದಿದ್ದೇ ಈ ಯಶಸ್ವೀ ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹದಿಂದ! ಈ ಹೊತ್ತಲ್ಲಿ ಅಂಕೋಲೆಗೆ ಬಂದಿದ್ದ ಗಾಂಧೀಜಿ ಸ್ಪೂರ್ತಿಯ ಚಿಲುಮೆಯಾಗಿದ್ದರು.

photo courtesy : Banglore Mirror

ಕರನಿರಾಕರಣೆ ಚಳವಳಿಯು ಕರಾವಳಿ ದಾಟಿ ಮಲೆನಾಡಿಗೂ ವ್ಯಾಪಿಸಿತ್ತು. ಗಾಂಧೀಜಿ ಕುಮಟಾ-ಶಿರಸಿ-ಸಿದ್ದಾಪುರಕ್ಕೂ ಹೋಗಿ ಹೋರಾಟ ಹುರಿಗೊಳ್ಳುವಂತೆ ಮಾಡಿದ್ದರು. 1934ರಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾದೇವಿತಾಯಿಯವರ ಮನೆಗೂ ಭೇಟಿ ಕೊಟ್ಟಿದ್ದರು. ಈ ಮಹಾದೇವಿತಾಯಿ ಸಿದ್ದಾಪುರದ ಪ್ರತಿಷ್ಠಿತ “ದೊಡ್ಮನೆ ಹೆಗಡೆ” ಕುಟುಂಬದವರು; ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಡಪ್ಪನ ಮಗಳು. ಒಂದು ಮೂಲದ ಪ್ರಕಾರ ಮಹಾದೇವಿ ಬಾಲವಿಧವೆ; ಆಕೆಗೆ ಕೇಶಮುಂಡನ ಮಾಡಲಾಗಿತ್ತು. ಆಕೆಗಾಗುತ್ತಿದ್ದ ಹಿಂಸೆಯ ಸುದ್ದಿ ತಿಳಿದಿದ್ದ ಗಾಂಧೀಜಿ ಇದೊಂದು ಹೇಯ-ಬರ್ಬರ ದೌರ್ಜನ್ಯವೆಂದು ಹೇಳಿದ್ದರು; ಇಲ್ಲಾಕೆಗೆ ನೆಮ್ಮದಿಯಿಂದಿರಲು ಸಾಧ್ಯವಾಗದಿದ್ದರೆ ತಮ್ಮ ಆಶ್ರಮಕ್ಕೆ ಕರೆದೊಯ್ಯುವುದಾಗಿ ಹೇಳಿದರು. ಮಹಾದೇವಿಯೂ ಒಪ್ಪಿ ಗಾಂಧಿ ಆಶ್ರಮ ಸೇರಿಕೊಳ್ಳುತ್ತಾರೆ. ಅಕ್ಕನ ಉತ್ತರ ಭಾರತದ ಸಂಪರ್ಕ ಬಳಸಿಕೊಂಡು ರಾಮಕೃಷ್ಣ ಹೆಗಡೆ ಬನಾರಸ್ ವಿಶ್ವವಿದ್ಯಾಲಯ ಸೇರಿಕೊಳ್ಳುತ್ತಾರೆ. ಅಲ್ಲಿ ಹಿಂದಿ-ಇಂಗ್ಲಿಷ್‌ನಲ್ಲಿ ಪಾರಂಗತರಾದ ಹೆಗಡೆ ಆ ಭಾಷಾ ಚಾಕಚಾಕ್ಯತೆಯಿಂದಲೇ ರಾಷ್ಟ್ರ ನಾಯಕರ ಸಾಲಿನಲ್ಲಿ ಮಿಂಚಲು ಅವಕಾಶವೂ ಆಯಿತು!

ಇದೇ ಸಿದ್ದಾಪುರ ಹುಡದೀಬೈಲ್‍ನಲ್ಲಿ 1934ರ ಮಾರ್ಚ್‍ನಲ್ಲಿ ಗಾಂಧೀಯವರ ಭಾಷಣ ಕಾರ್ಯಕ್ರಮವಿತ್ತು. ದೊಡ್ಡ ಜನಸ್ತೋಮವೇ ನೆರೆದಿತ್ತು! ಸಿದ್ದಾಪುರದ ಮುಖಂಡರು ‘ದೇವಿ ಶಿವಪ್ಪ ಹಸ್ಲರ್’ ಎಂಬ ದಲಿತ ಮಹಿಳೆಯನ್ನು ವಾದ್ಯದೊಂದಿಗೆ ವೇದಿಕೆಗೆ ಕರೆತರುತ್ತಾರೆ. ಶಂಕರ ಗುಲ್ವಾಡಿ ಎಂಬುವರು ದೇವಿಯನ್ನು ಗಾಂಧೀಜಿಗೆ ಪರಿಚಯಿಸುತ್ತಾರೆ. ಸ್ವಾತಂತ್ರ್ಯ ಚಳವಳಿಗೆ ತನ್ನದೇ ರೀತಿಯಲ್ಲಿ ಅರ್ಪಿಸಿಕೊಂಡಿದ್ದ ಆಕೆಯ ಉದಾತ್ತತೆ-ಪ್ರಾಮಾಣಿಕತೆ ಕೇಳಿ ಗಾಂಧೀಜಿ ಕಣ್ಣಲ್ಲಿ ನೀರು ಬರುತ್ತದೆ!! “ದೇವಿಯಂಥ ಪುಣ್ಯಾತ್ಮರು ಈ ಧರೆಯಲ್ಲಿರುವುದರಿಂದಲೇ ಜಗತ್ತು ನಡೆದಿದೆ” ಎಂದವರು ಉದ್ಘರಿಸುತ್ತಾರೆ!! ಗಾಂಧೀಜಿ ಕೈಯಿಂದ ಆಕೆಗೆ ಸನ್ಮಾನವೂ ಆಗುತ್ತದೆ.

ಈ ಪ್ರಾಮಾಣಿಕತೆಯ ಬಗ್ಗೆ ಒಂದು ಕತೆಯೂ ಇದೆ: ಕರ ನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿದವರನ್ನು ಬಂಧಿಸುವುದು ಕ್ರೂರವಾಗಿ ದಂಡಿಸುವುದು ಬ್ರಿಟಿಷರ “ನೀತಿ”ಯಾಗಿದ್ದ ಕಾಲವದು. ಸಿದ್ದಾಪುರದ ಕೆಳಗಿನ ಮನೆ ನಾಗೇಶ ಹೆಗಡೆ ತನ್ನನ್ನು ಪೊಲೀಸರು ಬಂಧಿಸುತ್ತಾರೆಂದು ಖಾತ್ರಿಯಾದಾಗ ಮನೆಯಲ್ಲಿದ್ದ ಬಂಗಾರವನ್ನೆಲ್ಲ ಒಂದು ತಪ್ಪಲಿಯಲ್ಲಿ ಹಾಕಿ ಕಿರಿಯ ಮಗನಿಗೆ ಕೊಡುತ್ತಾರೆ. ಆತ ಆ ತಪ್ಪಲಿಯನ್ನು ತೋಟದಲ್ಲಿ ಹುಗಿದಿಡುತ್ತಾನೆ. ಅದು ದೇವಿಗೆ ಗೊತ್ತಿರುತ್ತದೆ. ಕೆಲವು ದಿನಗಳಲ್ಲಿ ಆತನೂ ಜೈಲು ಪಾಲಾಗುತ್ತಾನೆ. ಒಂದು ದಿನ ಜೋರು ಮಳೆಯಲ್ಲಿ ಆ ತಪ್ಪಲಿ ತೇಲಿ ಬರುವುದು ಕಂಡ ದೇವಿ ಅದನ್ನು ಜೋಪಾನವಾಗಿ ಇಡುತ್ತಾಳೆ. ಪರಮ ಕುಡುಕನಾದ ಗಂಡ ಪೀಡಿಸಿದರೂ, ಪೊಲೀಸರು ಸತಾಯಿಸಿದರೂ ದೇವಿ ಆ ಬಂಗಾರ ಮಾತ್ರ ಕೊಡುವುದಿಲ್ಲ. ನಾಗೇಶ್ ಹೆಗಡೆ ಬಿಡುಗಡೆ ಆಗುವುದನ್ನೇ ಕಾಯುತ್ತಿದ್ದ ದೇವಿ ಅಂದೇ ನಡುರಾತ್ರಿ ಆತನ ಮನೆಗ್ಹೋಗಿ ಬಂಗಾರದ ತಪ್ಪಲಿ ಒಪ್ಪಿಸುತ್ತಾಳೆ. ನಾಗೇಶ್ ಹೆಗಡೆ ಒಂದು ಬಂಗಾರದ ಸರ ಆಕೆಗೆ ಕೊಡಲು ಮುಂದಾದಾಗ ಒಲ್ಲೆ ಅಂತಾಳೆ!! ಈ ಬಂಗಾರ ತನ್ನಲ್ಲಿರುವ ತನಕ ತಾನೆಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ; ಈ ಚಿನ್ನ ಸಂರಕ್ಷಣೆಯಲ್ಲೇ ಗಂಡನನ್ನೂ ಕಳಕೊಂಡೆ ಎನ್ನುತ್ತ ಮನೆಯೆಡೆ ಹೆಜ್ಜೆ ಹಾಕುತ್ತಾಳೆ.

photo courtesy : Kamat Potpouri

ಗಾಂಧೀಜಿ ಶಿರಸಿಗೆ ಹಲವು ಬಾರಿ ಬಂದುಹೋಗಿದ್ದಾರೆ. ಆದರೆ ದಾಖಲೆಯಲ್ಲಿರುವುದು ಕೆಲವು ಸಂದರ್ಭಗಳಷ್ಟೇ. 1934 ಮಾರ್ಚ್ 1ರಂದು ಶಿರಸಿಯ ಬಿಡಕಿಬೈಲ್‍ನಲ್ಲಿ ಗಾಂಧೀಜಿಯವರ ಸಾರ್ವಜನಿಕ ಸಭೆ ಏರ್ಪಾಡಾಗಿತ್ತು. ಸಭೆಯ ನಂತರ ಆ ಬಯಲಲ್ಲೇ ಹೋರಾಟಗಾರರ ಜತೆ ಗಾಂಧೀಜಿ ಸಂವಾದ ನಡೆಸುತ್ತಾರೆ. ಇದಾದ ಬಳಿಕ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಎಸ್.ಎನ್ ಕೇಶವೈನ್ ದೇವಾಲಯಕ್ಕೆ ಹೋಗೋಣ ಎನ್ನುತ್ತಾರೆ. “ನಾನು ಬರಬೇಕೆಂದಿದ್ದರೆ ದೇವಾಲಯದಲ್ಲಿ ನಡೆಯುವ ಕೋಣಬಲಿ ನಿಲ್ಲಿಸಬೇಕು; ಜಾತಿ ಭೇದವಿಲ್ಲದೆ ಎಲ್ಲರಿಗೂ ಪ್ರವೇಶ ಕಲ್ಪಿಸಬೇಕು” ಎಂದು ಗಾಂಧಿ ಹಠ ಹಿಡಿಯುತ್ತಾರೆ. ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಒಪ್ಪಿದ ನಂತರವೇ ದರ್ಶನಕ್ಕೆ ಹೋಗುತ್ತಾರೆ. ಅಂದಿನಿಂದ ಶಿರಸಿ ಜಾತ್ರೆ ಹೊತ್ತಲ್ಲಿ ನಡೆಯುತ್ತಿದ್ದ ಪ್ರಾಣಿ ವಧೆ ನಿಷೇಧಿಸಲಾಗಿದೆ. ಆದರೂ ಸಿರಿಂಜ್‍ನಿಂದ ಕೋಣನ ರಕ್ತ ತೆಗೆದು “ಬ್ರಾಹ್ಮಣ ದೇವಿಗೆ” ಅರ್ಪಣೆ ಮಾಡಿ ಆಕೆ ಚಮಗಾರ (ದಲಿತ) ಯುವಕನ ಮೋಹಿಸಿ ಮೋಸಹೋದೆನೆಂದು ಜಿದ್ದಿಗೆ ಬಿದ್ದ “ಪುರಾಣ” ಬೇಡವೆಂದರೂ ನೆನಪಾಗುವಂತೆ ಮಾಡಲಾಗುತ್ತಿದೆ.…

27 ಫೆಬ್ರುವರಿ 1934 ರಂದು ಗಾಂಧೀಜಿ ಕಡಲನಗರಿ ಕಾರವಾರಕ್ಕೆ ಬಂದಿದ್ದರು. ಮರುದಿನ ಗಾಂಧೀಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡುವುದಿತ್ತು. ಅಂದು ಅವರು ಕಾರವಾರಾಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಸಂದೇಶ ಸಾರಲು ಬಂದಿದ್ದರೆಂಬುದು ಸಾಮಾನ್ಯ ಅಭಿಪ್ರಾಯ. ವಾಸ್ತವವೆಂದರೆ, ಗಾಂಧೀಜಿ ಕಾರವಾರಕ್ಕೆ ಬಂದಿದ್ದು ಆ ವೇಳೆ ಅಡಿಯಾಗಿದ್ದ ಅಸ್ಪೃಶ್ಯತೆ ಮತ್ತು ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧದ ಜನಜಾಗೃತಿ ಮೂಡಿಸಲೆಂದಾಗಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕಾರವಾರದ ಸುಬ್ಬರಾವ್ ಹಳದೀಪುರ್ಕರ್ ಸಹೋದರ ಕೃಷ್ಣರಾವ್ ಆಸ್ಥೆಯಿಂದ ಗಾಂಧಿಜೀಯವರನ್ನು ಕರೆಸಿದ್ದರು.

ಕುಂದಾಪುರದಿಂದ ‘ದಯಾವತಿ’ ಎಂಬ ಬೋಟ್‍ನಲ್ಲಿ ಕಾರವಾರ ತಲುಪಿದ್ದ ಗಾಂಧೀಜಿ ಹಳದಿಪುರ್ಕರ್ ಮನೆಯಲ್ಲೇ ವಾಸ್ತವ್ಯ ಮಾಡಿದ್ದರು. ಮರುದಿನದ ಸಭೆಗಾಗಿ ರಾತ್ರಿ ಸಮಾಲೋಚನೆ ನಡೆಸಿದ್ದರು. ಗೀತಾಂಜಲಿ ಟಾಕೀಸ್ ಹಿಂದಿನ ಬಯಲಲ್ಲಿ ಸಾರ್ವಜನಿಕ ಸಭೆಯ ವೇದಿಕೆ ಸಿದ್ಧ ಮಾಡಲಾಗಿತ್ತು. ಅಲ್ಲಿ ಗಾಂಧೀಜಿಗೆ ಶ್ರೀಗಂಧದ ಪೆಟ್ಟಿಗೆ ಮತ್ತು ಬೆಳ್ಳಿ ಡಬ್ಬಿಯಲ್ಲಿ “ಮಾನಪತ್ರ” ಅರ್ಪಿಸಲಾಗಿತ್ತು. ಕಾಣಿಕೆ ಪಡೆಯಲು ನಯವಾಗಿ ನಿರಾಕರಿಸಿದ ಗಾಂಧೀಜಿ ಅದನ್ನು ಅದೇ ಸಭೆಯಲ್ಲಿ ಹರಾಜು ಹಾಕಿದ್ದರು. ಉತ್ತರ ಕನ್ನಡಕ್ಕೆ ಗಾಂಧೀಜಿಯವರ ಚಿಂತನೆಗಳ ಜತೆಜತೆಗೇ ಒಡನಾಟವೂ ಸಿಕ್ಕಿದ್ದು ವಿಶೇಷವಾಗಿದೆ!

  • ಶುದ್ದೋಧನ

ಇದನ್ನೂ ಓದಿ: ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...