ಕಾಂಗ್ರೆಸ್ಸಿನ ಬುದ್ಧಿವಂತರ ನಡೆ ವಿಚಿತ್ರವಾಗಿದೆ. ಪಕ್ಷದ ಹಿರಿಯ ನಾಯಕರುಗಳೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಮತ್ತು ನೈಪುಣ್ಯತೆಗಳಿಗೆ ಹೆಸರುವಾಸಿಯಾದವರೂ ಆದ ಜೈರಾಮ್ ರಮೇಶ್, ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಇತ್ತೀಚಿಗೆ ಬೇರೆ ಬೇರೆ ಕಡೆ ಮಾತನಾಡುತ್ತಾ ಪ್ರಧಾನಮಂತ್ರಿ ಮೋದಿಯವರನ್ನು ಪದೇ ಪದೇ ಎಲ್ಲಾ ವಿಚಾರಗಳಲ್ಲೂ ದೂರುವುದು ಮತ್ತು ಅವರಲ್ಲಿ ತಪ್ಪು ಕಂಡು ಹಿಡಿಯುವುದು ಸರಿಯಲ್ಲವೆಂತಲೂ, ಇದರಿಂದಾಗಿ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ಹಾನಿ ಅಂತಲೂ ಹೇಳಿಕೆ ನೀಡಿದ್ದಾರೆ.
ಮೊದಲಿಗೆ ಈ ಮಾತುಗಳನ್ನು ಆಡಿದ್ದು ಜೈರಾಮ್ ರಮೇಶ್. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಆಡಿದ ಮೇಲಿನ ಅರ್ಥದ ಮಾತುಗಳನ್ನು ಆ ನಂತರ ಕ್ರಮವಾಗಿ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಪುನರುಚ್ಚರಿಸಿದ್ದಾರೆ. ಹಿಂದೊಮ್ಮೆ ಮೋದಿಯವರನ್ನು ತೀರಾ ಕೆಳಮಟ್ಟದಲ್ಲಿ ಟೀಕಿಸಿದ್ದ ಇನ್ನೊಬ್ಬ ಬುದ್ಧಿವಂತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಕೂಡಾ ಈಗ ಈ ಹೊಸ ರಾಗಕ್ಕೆ ತಾಳ ಹಾಕುತ್ತಿದ್ದಾರೆ.

ಇದಾಗುವುದಕ್ಕೆ ಕೆಲದಿನಗಳ ಹಿಂದೆ ಮೋದಿ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ವಿಚಾರದಲ್ಲೂ ಕೆಲ ಕಾಂಗ್ರೆಸ್ ನಾಯಕರು ಸರಕಾರದ ನಡೆಯನ್ನು ಸಮರ್ಥಿಸುತ್ತಾ ತಮ್ಮ ಪಕ್ಷದ ನಿಲುವನ್ನು ಖಂಡಿಸಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು. ಹೀಗೆ ಮಾಡಿದವರಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಯ ನಾಯಕ ಎಂದೇ ಪರಿಗಣಿತವಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೇರಿದ್ದರು ಎನ್ನುವುದನ್ನು ಗಮನಿಸಬೇಕು.
ಮೇಲ್ನೋಟಕ್ಕೆ ಹೀಗೆಲ್ಲಾ ಹೇಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಪಕ್ಷಭೇದ ಮರೆತು ಒಳ್ಳೆಯ ಕೆಲಸಗಳನ್ನು ಯಾವುದೇ ಪಕ್ಷದ ಸರಕಾರ ಅಥವಾ ಯಾವುದೇ ಪಕ್ಷಕ್ಕೆ ಸೇರಿದ ಪ್ರಧಾನ ಮಂತ್ರಿ ಮಾಡಿದರೂ ಅದನ್ನು ಪ್ರಾಂಜಲ ಮನಸ್ಸಿನಿಂದ ಮೆಚ್ಚಿಕೊಳ್ಳಬೇಕು ಎನ್ನುವ ಪ್ರಬುದ್ಧ ನಿಲುವು ಇದು ಎಂಬಂತೆ ಇದು ತತ್‍ಕ್ಷಣ ಅನ್ನಿಸಬಹುದು. ಆದರೆ ದೇಶದ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಮತ್ತು ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಮಗ್ರವಾಗಿ ಗಮನದಲ್ಲಿರಿಸಿಕೊಂಡು ನೋಡಿದಾಗ ಈ ನಾಯಕರ ಹೇಳಿಕೆ ರಾಜಕೀಯ ಪ್ರಬುದ್ಧತೆಯಿಂದ ಮೂಡಿಬಂದದ್ದು ಅಂತ ಅನ್ನಿಸುವುದಿಲ್ಲ. ಬದಲಿಗೆ, ಅವರ ಈ ಹೇಳಿಕೆಗಳು ಅವರಿಗೆ ಇಂದಿನ ರಾಜಕೀಯ ಪರಿಸ್ಥಿತಿಯ ಗಂಭೀರತೆಯೇ ಅರ್ಥವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಸಿದ್ಧಾಂತಗಳ ವಿಚಾರ ಹಾಗಿರಲಿ, ತೀರಾ ವ್ಯಾವಹಾರಿಕವಾದ ವಿಚಾರಗಳಲ್ಲೂ ಅವರಿಗಿರುವ ಗೊಂದಲವನ್ನು ಇದು ತೋರಿಸುತ್ತದೆ. ಕಾಂಗ್ರೆಸ್ಸಿನ ಚಾಣಾಕ್ಷ ಸಂಸದೀಯ ಪಟುಗಳು ಎನ್ನಲಾದ ಈ ಮಂದಿಯೇ ಈ ರೀತಿಯ ಗೊಂದಲದಲ್ಲಿ ಸಿಲುಕಿರುವಾಗ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು? ಅವರು ತಮ್ಮ ತಮ್ಮ ಪರಿಸರ, ಪರಿಸ್ಥಿತಿಯಲ್ಲಿ ಬಿಜೆಪಿಯ ದಾಳಿಯನ್ನು ಎದುರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.
ಮೋದಿಯವರನ್ನು ಎಲ್ಲದಕ್ಕೂ ಟೀಕಿಸುವುದು ಸರಿಯಲ್ಲ ಎನ್ನುತ್ತಿರುವ ಕಾಂಗ್ರೆಸ್ ನಾಯಕರುಗಳು ಅದಕ್ಕೆ ನೀಡುತ್ತಿರುವ ಸಮರ್ಥನೆ ಕೂಡ ವಿಚಿತ್ರವಾಗಿದೆ. ಮೋದಿ ಸರಕಾರ ಕೆಲ ಜನಪ್ರಿಯ ಯೋಜನೆಗಳನ್ನು ಅದ್ಭುತವಾಗಿ ರೂಪಿಸಿದ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕಾರಣ ಮೋದಿಯ ಆಡಳಿತ ಮಾದರಿಯಲ್ಲಿ ಮೆಚ್ಚಬೇಕಾಗಿರುವ ಹಲವಾರು ಅಂಶಗಳಿವೆ ಎನ್ನುವುದು ಅವರ ವಾದ.
ಒಂದು ಸರಕಾರದ ಆಡಳಿತ ಮಾದರಿಯ ಬಗ್ಗೆ ತೀರ್ಪು ನೀಡಲು ಕೇವಲ ಕೆಲ ಜನಪ್ರಿಯ ಯೋಜನೆಗಳಷ್ಟೇ ಯಾವತ್ತಿಗೂ ಆಧಾರವಾಗಬಾರದು. ಎಲ್ಲಾ ಕಾಲದಲ್ಲೂ ಎಲ್ಲಾ ಸರಕಾರಗಳೂ ಕೆಲ ಯೋಜನೆಗಳನ್ನು ಚೆನ್ನಾಗಿಯೇ ನಡೆಸಿವೆ. ಅದನ್ನು ಜನ ಮೆಚ್ಚಿದ್ದೂ ಇದೆ. ಮೋದಿ ಸರಕಾರ ಕೆಲ ಯೋಜನೆಗಳನ್ನು ಹಿಂದಿನ ಎಲ್ಲಾ ಸರಕಾರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಿರಬಹುದು. ಪ್ರಧಾನಮಂತ್ರಿಗಳು ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ತೋರುತ್ತಿರುವ ತಾಂತ್ರಿಕವಾದ ಕ್ಷಮತೆಯನ್ನು ಆಡಳಿತದಲ್ಲಿಯೂ ಬಳಸಿಕೊಳ್ಳುತ್ತಿದೆ ಎನ್ನುವುದು ನಿರ್ವಿವಾದ. ಆದರೆ ಇಷ್ಟಕ್ಕೆ ಅದೊಂದು ಅದ್ಭುತ ಆಡಳಿತ ಮಾದರಿ ಎನ್ನುವ ನಿರ್ಣಯಕ್ಕೆ ಕಾಂಗ್ರೆಸ್ ನಾಯಕರುಗಳು ಯಾಕೆ ಬಂದರೋ ತಿಳಿಯುತ್ತಿಲ್ಲ.
ಇಡೀ ದೇಶ ಇಂದು ಕಂಡುಕೇಳರಿಯದ ಆರ್ಥಿಕ ತಲ್ಲಣವನ್ನು ಅನುಭವಿಸುತ್ತಿದೆ. ಸಮಾಜದಲ್ಲಿ ಹಿಂಸೆ ಎಗ್ಗಿಲ್ಲದೆ ವಿಜೃಂಭಿಸುತ್ತಿದೆ. ಪ್ರತಿರೋಧದ ಧ್ವನಿ ಚಾರಿತ್ರಿಕವಾಗಿ ಉಡುಗಿಹೋಗಿದೆ. ಇವೆಲ್ಲವೂ ಅದೇ ಆಡಳಿತ ಮಾದರಿಯ ಬಳವಳಿಗಳಲ್ಲವೇ? ಇನ್ನೊಂದು ಅರ್ಥವಾಗದ ವಿಚಾರ ಎಂದರೆ ಈ ಕಾಂಗ್ರೆಸ್ ನಾಯಕರುಗಳೆಲ್ಲಾ ಮೋದಿಯ ವಿರುದ್ಧ ಯಾರು ಮಾಡಿದ ಯಾವ ಟೀಕೆಗಳನ್ನು ಗಮನದಲ್ಲಿರಿಸಿಕೊಂಡು ಈ ರೀತಿ ಹೇಳಿದ್ದು ಎನ್ನುವ ಪ್ರಶ್ನೆ. ವಾಸ್ತವದಲ್ಲಿ 2019ರ ಚುನಾವಣಾ ಫಲಿತಾಂಶದ ನಂತರ ಇಡೀ ದೇಶ ಬಾಯಿಗೆ ಬೀಗ ಜಡಿದು ಕುಳಿತಿದೆ. ಯಾರೊಬ್ಬರೂ ಈ ಸರಕಾರದ ಬಗ್ಗೆ, ಅದರ ನೀತಿಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಏನನ್ನೂ ಹೇಳುತ್ತಿಲ್ಲ. ಆದುದರಿಂದ ಕಾಂಗ್ರೆಸ್‍ನ ಬುದ್ಧಿವಂತರ ಯೋಚನಾ ಲಹರಿಯೇ ಒಗಟಾಗಿ ಕಾಣಿಸುತ್ತಿದೆ.
ಕಾಶ್ಮೀರದ ವಿಚಾರ ಅದೆಷ್ಟು ಕ್ಲಿಷ್ಟಕರವಾಗಿದೆ ಎಂದರೆ ಬರಬರುತ್ತಾ ಈ ವಿಚಾರದಲ್ಲಿ ಸ್ಪಷ್ಟತೆಗಿಂತ ಗೊಂದಲಗಳೇ ಹೆಚ್ಚಾಗುತ್ತಿವೆ. ಮೊನ್ನೆ ಸಂವಿಧಾನ ತಜ್ಞ ಮತ್ತು ಹೈದರಾಬಾದಿನ ಕಾನೂನು ವಿಶ್ವವಿದ್ಯಾನಿಯದ ಕುಲಪತಿಗಳಾಗಿದ್ದ ಪ್ರೊಫೆಸರ್ ಫೈಸಾನ್ ಮುಸ್ತಫಾ ಖ್ಯಾತ ಟೆಲಿವಿಷನ್ ನಿರೂಪಕ ಕರಣ್ ತಾಪರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಕಾಶ್ಮೀರದ ವಿಷಯದ ಕುರಿತು ಹಲವಾರು ಸೂಕ್ಷ್ಮಗಳನ್ನು ದೇಶದ ಮುಂದೆ ತೆರೆದಿಟ್ಟರು. ಅವರ ಪ್ರಕಾರ 370ನೇ ವಿಧಿಯ ರದ್ಧತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡಿದ್ದ ಬಹುತೇಕ ಸಮರ್ಥನೆಗಳೆಲ್ಲಾ ಅಪ್ಪಟ ಸುಳ್ಳು. ಕಾಶ್ಮೀರದಲ್ಲಿ 370ನೇ ವಿಧಿ ಇದ್ದಾಗ ಮೀಸಲಾತಿ ಇರಲಿಲ್ಲ, ಮಾಹಿತಿ ಹಕ್ಕು ಇರಲಿಲ್ಲ, ವಿದ್ಯಾಭ್ಯಾಸ ಖಾತರಿ ಇರಲಿಲ್ಲ, ಅಲ್ಲಿನ ಮಹಿಳೆಯರು ಹೊರಗಿನವರನ್ನು ಮದುವೆಯಾದರೆ ಅವರಿಗೆ ಆಸ್ತಿ ಹಕ್ಕು ಇರಲಿಲ್ಲ ಇತ್ಯಾದಿ ವಿಚಾರಗಳಲ್ಲಿ ಸರಕಾರ ಹೇಳಿದ್ದು ಒಂದಾದರೆ ವಾಸ್ತವ ಸ್ಥಿತಿ ಬೇರೆಯೇ ಇತ್ತು.
ಅದಕ್ಕಿಂತಲೂ ಮುಖ್ಯವಾಗಿ 370ನೇ ವಿಧಿ ರದ್ದು ಮಾಡಿದ ಕಾರಣಕ್ಕೆ ಕಾಶ್ಮೀರ ಕಳೆದುಕೊಂಡದ್ದಕ್ಕಿಂತ ಹೆಚ್ಚಾಗಿ ಕೇಂದ್ರ ಸರಕಾರ ಕಾಶ್ಮೀರದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು ಹೇಗೆ ಎನ್ನುವುದನ್ನು ಎತ್ತಿ ತೋರಿಸಿದರು. ಈ 370ನೇ ವಿಧಿಯ ರದ್ದು ಎನ್ನುವುದು ಕೇವಲ ಸಾಂಕೇತಿಕವಾಗಿತ್ತು ಎಂದರು. ದಿನದಿಂದ ದಿನಕ್ಕೆ ಹೆಚ್ಚು ಕಗ್ಗಂಟಾಗಿ ಪರಿಣಮಿಸುತ್ತಿರುವ ಈ ವಿಷಯದಲ್ಲಿ ಅಡಗಿರುವ ಸೂಕ್ಷ್ಮಗಳನ್ನು ದೇಶದ ಮುಂದಿಡಬೇಕಾಗಿದ್ದ ನಾಯಕರುಗಳು ಗುಂಪಿನಲ್ಲಿ ಸೇರಿ ಗೋವಿಂದಾ ಎನ್ನುತ್ತಿರುವುದು ತೀರಾ ಅಸಂಗತವಾಗಿದೆ.
ರಾಜಕೀಯ ನಾಯಕರು ಪಕ್ಷಾತೀತವಾಗಿ ಯೋಚಿಸಬೇಕು, ವಿರೋಧಿಸುವುದಕ್ಕಾಗಿ ವಿರೋಧಿಸಬಾರದು, ಸೂಕ್ಷ್ಮ ವಿಚಾರಗಳಲ್ಲಿ ಸರಕಾರಕ್ಕೆ ಸಹಕರಿಸಬೇಕು ಇತ್ಯಾದಿ ವಾದಗಳನ್ನು ಒಪ್ಪಿಕೊಳ್ಳಬಹುದು. ಹೀಗೆ ಮಾಡುವುದು ರಾಜಕೀಯ ಪ್ರಬುದ್ಧತೆಯ ಸಂಕೇತ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ ಮೋದಿಯವರ ಆಡಳಿತ ಮಾದರಿಗೆ ಮೆಚ್ಚುಗೆ ಸೂಚಿಸುವಲ್ಲಿ ಮತ್ತು 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಯಾವುದೇ ಪ್ರಶ್ನೆಗಳನ್ನು ಎತ್ತದೆ ಸ್ವಾಗತಿಸುವಲ್ಲಿ ಕೆಲ ಕಾಂಗ್ರೆಸ್ ನಾಯಕರುಗಳು ತೋರಿದ್ದು ಪ್ರಬುದ್ಧತೆಯನ್ನಲ್ಲ. ಅವರು ತಮ್ಮ ಗೊಂದಲವನ್ನು ಪ್ರದರ್ಶಿಸಿದ್ದಾರೆ, ದೇಶದ ಆಗುಹೋಗುಗಳ ವಿಚಾರದಲ್ಲಿ ಅವರು ಎಷ್ಟು ನಿರ್ಲಕ್ಷತೆಯಿಂದ ಇದ್ದಾರೆ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಗ ಇರುವ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೆ ನೂಕುವ ಈ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಿರುವ ಈ ನಾಯಕರುಗಳ ಪಕ್ಷ ನಿಷ್ಠೆಯ ಬಗ್ಗೆಯೂ ಸಂದೇಹ ಮೂಡುತ್ತದೆ. ಹಾಗೊಂದು ವೇಳೆ ಮೋದಿಯವರನ್ನು ಟೀಕಿಸುವ ವಿಚಾರದಲ್ಲಿ ಅವರಿಗೇನಾದರೂ ಭಿನ್ನಾಭಿಪ್ರಾಯವಿದ್ದದ್ದೇ ಆದಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿ ಪ್ರಶ್ನಾರ್ಹವಾದ ಒಂದು ಆಡಳಿತ ಮಾದರಿಗೆ ಹೊಸ ಒಪ್ಪಿಗೆಯ ಮುದ್ರೆಯನ್ನು ನೀಡುವ ಬದಲು, ಪಕ್ಷದ ವೇದಿಕೆಯಲ್ಲಿ ಅವರು ತಮ್ಮ ಅಭಿಪ್ರಾಯ ಮಂಡಿಸಬಹುದಿತ್ತು. ಅದೇನೇ ಇರಲಿ. ಕಾಂಗ್ರೆಸ್ ಪಕ್ಷಕ್ಕೆ ಇವರುಗಳ ಹೇಳಿಕೆಯಿಂದ ಆಗುವ ಲಾಭ ನಷ್ಟಗಳ ವಿಚಾರ ಮುಖ್ಯವಲ್ಲ. ಇಂತಹ ಹೇಳಿಕೆಗಳನ್ನೆಲ್ಲಾ ನೀಡುವ ಮೂಲಕ ಈ ಮಂದಿ ವಿರೋಧ ಪಕ್ಷಗಳಿಗಿರುವ ಸಾಂವಿಧಾನಿಕ ಜವಾಬ್ದಾರಿಯನ್ನು ಕ್ಷುಲ್ಲಕಗೊಳಿಸುತ್ತಿದ್ದಾರೆ ಎನ್ನುವುದು ಗಂಭೀರವಾಗಿ ಯೋಚಿಸಬೇಕಾದ ವಿಚಾರ.


