ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ‘ಶೀಶ್ ಮಹಲ್ ಮತ್ತು ರಾಜ್‌ಮಹಲ್‘ ಎಂಬ ಎರಡು ಬಂಗಲೆಗಳನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಕಿತ್ತಾಟ ಶುರು ಮಾಡಿದ್ದಾರೆ.
ಶೀಶ್ ಮಹಲ್ ಮತ್ತು ರಾಜ್‌ಮಹಲ್ ಎಂಬ ಎರಡು ಬಂಗಲೆಗಳೇ ಪ್ರಸ್ತುತ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಿವಾಸವನ್ನು ‘ರಾಜ್‌ಮಹಲ್’ ಎಂದು ಕರೆದಿರುವ ದೆಹಲಿಯ ಆಡಳಿತರೂಢ ಎಎಪಿ, ಅ ಬಂಗಲೆಯ ನವೀಕರಣಕ್ಕೆ ಬರೋಬ್ಬರಿ 2,700 ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ಖರ್ಚು ಮಾಡಲಾಗಿದೆ ಎಂದು ಆರೋಪಿಸಿದೆ.
ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ, ಅವರ ಅಧಿಕೃತ ನಿವಾಸ ಶೀಶ್ ಮಹಲ್‌ನ ನವೀಕರಣಕ್ಕೆ ಭಾರೀ ಪ್ರಮಾಣದಲ್ಲಿ ಸಾರ್ವಜನಿಕರ ಹಣವನ್ನು ಖರ್ಚು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕೇಜ್ರಿವಾಲ್ ಬಂಗಲೆಯನ್ನು ಖಾಲಿ ಮಾಡಿದ ನಂತರ “ಗೋಲ್ಡನ್ ಕಮೋಡ್” ಸೇರಿದಂತೆ ಅಮೂಲ್ಯ ವಸ್ತುಗಳು ಕಾಣೆಯಾಗಿವೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ಬಿಜೆಪಿಗರ ಈ ಆರೋಪಕ್ಕೆ ಪ್ರತ್ಯುತ್ತರವಾಗಿ ಪ್ರಧಾನಿಯ ನಿವಾಸದ ವಿಚಾರವನ್ನು ಎಎಪಿ ಮುನ್ನಲೆಗೆ ತಂದಿದೆ.
ಜನವರಿ 8, 2025ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಾಕಿದ್ದ ಎಎಪಿ, “ಮೋದಿಯವರ ಅರಮನೆಯನ್ನು (ರಾಜ್‌ಮಹಲ್) ಜನರಿಗೆ ತೋರಿಸಬೇಕು” ಎಂದು ಬರೆದುಕೊಂಡಿದೆ.
“ಮೋದಿಯವರ ಅರಮನೆ ನಿರ್ಮಾಣಕ್ಕೆ 2,700 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅದರ ಕಾರ್ಪೆಟ್‌ಗೆ 300 ಕೋಟಿ ರೂಪಾಯಿ ಮತ್ತು ಗೊಂಚಲು ದೀಪಗಳಿಗೆ 200 ಕೋಟಿ ರೂಪಾಯಿ ವ್ಯಯಿಸಲಾಗಿದೆ” ಎಂದು ಎಎಪಿ ಆರೋಪಿಸಿದೆ.
जनता को दिखाया जाए, मोदी का राजमहल‼️ pic.twitter.com/xnckg77IaF
— AAP (@AamAadmiParty) January 8, 2025
ಎಎಪಿ ನಾಯಕರ ಸಿಎಂ ಮನೆ ಪ್ರವೇಶಕ್ಕೆ ತಡೆ
ಭಾರೀ ಪ್ರಮಾಣದ ಹಣ ಖರ್ಚು ಮಾಡಲಾಗಿದೆ ಎಂದು ಬಿಜೆಪಿಗರು ಆರೋಪಿಸಿರುತ್ತಿರುವ ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ಶೀಶ್‌ಮಹಲ್’ ನಲ್ಲಿ ಪ್ರಸ್ತುತ ಸಿಎಂ ಅತಿಶಿ ಮರ್ಲೆನಾ ಅವರು ವಾಸವಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಿಎಂ ಹುದ್ದೆಯಿಂದ ಕೆಳಗಿಳಿದ ಬಳಿಕ, ನಿಯಮದ ಪ್ರಕಾರ ಅತಿಶಿ ಅವರಿಗೆ ಆ ಸರ್ಕಾರಿ ಬಂಗಲೆ ಹಂಚಿಕೆಯಾಗಿದೆ.
ಬಿಜೆಪಿಗರ ಆರೋಪ ಹಿನ್ನೆಲೆ, ಜನವರಿ 8ರಂದು ಮಾಧ್ಯಮದವರಿಗೆ ಶೀಶ್‌ಮಹಲ್ ತೋರಿಸಲು ಎಎಪಿ ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಮುಂದಾಗಿದ್ದರು. ಆದರೆ, ಸಿಎಂ ಮನೆ ಗೇಟ್ ಬಳಿ ಅವರನ್ನು ಪೊಲೀಸರು ತಡೆದಿದ್ದಾರೆ. ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ.
ಈ ಕಾರಣಕ್ಕೆ ಪೊಲೀಸರು ಮತ್ತು ಎಎಪಿ ನಾಯಕರ ನಡುವೆ ಸಿಎಂ ಮನೆ ಗೇಟ್ ಬಳಿ ವಾಗ್ವಾದ ನಡೆದಿದೆ.
“ನಮ್ಮನ್ನು ತಡೆಯಲು ನಿಮಗೆ ಯಾರು ಸೂಚನೆ ನೀಡಿದ್ದಾರೆ? ನಾನೊಬ್ಬ ಸಚಿವ, ಪರಿಶೀಲನೆಗಾಗಿ ಇಲ್ಲಿಗೆ ಬಂದಿದ್ದೇನೆ. ನೀವು ನನ್ನನ್ನು ಹೇಗೆ ತಡೆಯುತ್ತೀರಿ? ಯಾರ ಆದೇಶದ ಮೇರೆಗೆ? ಲೆಫ್ಟಿನೆಂಟ್ ಗವರ್ನರ್ ಅವರಿಂದ ನಿಮಗೆ ನಿರ್ದೇಶನ ಬಂದಿದೆಯಾ? ಅವರು ನನ್ನ ಸ್ಥಾನಕ್ಕಿಂತ ಮೇಲೆ ಒಂದು ಅಧಿಕಾರ ಹೊಂದಿದ್ದಾರೆ ಅಷ್ಟೆ” ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'#SheeshMahal' row: @AamAadmiParty leaders stopped from entering #DelhiCM #bungalow pic.twitter.com/7JH8qE29mD
— The Tribune (@thetribunechd) January 8, 2025
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಭಾರದ್ವಾಜ್ ಅವರು, “ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿ ಹೇಳಿಕೊಳ್ಳುತ್ತಿರುವ ಚಿನ್ನದ ಕಮೋಡ್, ಈಜುಕೊಳ ಮತ್ತು ಮಿನಿಬಾರ್ ಅನ್ನು ಹುಡುಕಲು ಪ್ರಯತ್ನಿಸುತ್ತೇವೆ” ಎಂದಿದ್ದರು.
“ಸಿಎಂ ಮನೆ ಸರ್ಕಾರದ ಆಸ್ತಿ ಎಂಬುವುದನ್ನು ಗಮನಿಸಬೇಕು. ಅವುಗಳನ್ನು ತೆರಿಗೆದಾರರ ಹಣದಿಂದ ನಿರ್ಮಿಸಲಾಗಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿರ್ಮಿಸಲಾಗಿದೆ. ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಗಳಿದ್ದರೆ ತನಿಖೆ ಮಾಡಬೇಕು” ಎಂದು ಭಾರದ್ವಾಜ್ ಹೇಳಿದ್ದರು.
ಪ್ರಧಾನ ಮಂತ್ರಿಯ ನಿವಾಸವನ್ನು ‘ರಾಜ್‌ಮಹಲ್’ ಎಂದು ಕರೆದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್, “ನಾವು 2,700 ಕೋಟಿಯಲ್ಲಿ ನಿರ್ಮಿಸಿದ ಪ್ರಧಾನಿ ನಿವಾಸಕ್ಕೆ ಮಾಧ್ಯಮದವರನ್ನು ಕರೆದುಕೊಂಡು ಹೋಗುತ್ತೇವೆ ಎಂದಿದ್ದರು.
ಫೆಬ್ರವರಿ 5ರಂದು ದೆಹಲಿಯ ವಿಧಾನಸಭೆ ಚುನಾವಣೆಯ ಮತದಾನ ಒಂದೇ ಹಂತದಲ್ಲಿ ನಡೆಯಲಿದೆ. ಫೆಬ್ರವರಿ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಡಲಿದೆ.
ಎಎಪಿ ಮೂರನೇ ಬಾರಿಗೆ ರಾಜಧಾನಿಯ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಬಿಜೆಪಿ ಎರಡು ದಶಕಗಳ ಬಳಿಕ ದೆಹಲಿ ಮೇಲೆ ಹಿಡಿತ ಸಾಧಿಸಲು ತಂತ್ರ ಹೆಣೆಯುತ್ತಿದೆ. ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಎಎಪಿಯ ಮಿತ್ರ ಪಕ್ಷವಾಗಿದ್ದ ಕಾಂಗ್ರೆಸ್, ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ.
ಇದನ್ನೂ ಓದಿ : ಸಂಭಾಲ್ ಮಸೀದಿ ಪ್ರಕರಣ: ಅಲಹಾಬಾದ್ ಹೈಕೋರ್ಟ್ ನಿಂದ ಸಿವಿಲ್ ನ್ಯಾಯಾಲಯದ ವಿಚಾರಣೆಗೆ ತಡೆ


