ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಸೋಮವಾರ (ನವೆಂಬರ್) ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿ ಆದೇಶಿಸಿದೆ.
ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನಕ್ಕೆ ಕಾರಣವಾದ, ಕಳೆದ ವರ್ಷದ ವಿದ್ಯಾರ್ಥಿ ನೇತೃತ್ವದ ಆಂದೋಲನದ ಸಂದರ್ಭದಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಅವರು ದೋಷಿ ಎಂದು ನ್ಯಾಯಮಂಡಳಿ ಹೇಳಿದೆ.
ಮೂವರು ಸದಸ್ಯರ ನ್ಯಾಯಮಂಡಳಿಯು ಹಸೀನಾ ಅವರ ಇಬ್ಬರು ಸಹಾಯಕರಾದ ಮಾಜಿ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ವಿರುದ್ಧವೂ ಇದೇ ಆರೋಪಗಳ ಮೇಲೆ ತೀರ್ಪು ನೀಡಿದೆ. ಅಲ್-ಮಾಮುನ್ ಅವರನ್ನು ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿತ್ತು.
ನ್ಯಾಯವನ್ನು ತಡೆಯುವುದು, ಪ್ರತಿಭಟನಾಕಾರರ ಹತ್ಯೆಗೆ ಆದೇಶಿಸುವುದು ಮತ್ತು ದಂಡನಾತ್ಮಕ ಹತ್ಯೆಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿರುವುದು ಸೇರಿದಂತೆ ಮೂರು ಆರೋಪಗಳಲ್ಲಿ ಹಸೀನಾ ತಪ್ಪಿತಸ್ಥರೆಂದು ಸಾಬೀತಾಗಿದೆ.
“ನಾವು ಅವರಿಗೆ (ಹಸೀನಾ) ಒಂದೇ ಒಂದು ಶಿಕ್ಷೆಯನ್ನು ವಿಧಿಸಲು ನಿರ್ಧರಿಸಿದ್ದೇವೆ, ಅದು ಮರಣದಂಡನೆ” ಎಂದು ನ್ಯಾಯಾಧೀಶ ಗೋಲಮ್ ಮೊರ್ತುಝಾ ಮೊಜುಂದಾರ್ ಢಾಕಾದ ಕಿಕ್ಕಿರಿದ ನ್ಯಾಯಾಲಯದಲ್ಲಿ ತೀರ್ಪು ಓದುವಾಗ ಹೇಳಿದ್ದಾರೆ. ಅಲ್-ಮಾಮುನ್ ಅವರು ಮರಣದಂಡನೆಯಿಂದ ಪಾರಾಗಿದ್ದಾರೆ.
(ಐಸಿಟಿ-ಬಿಡಿ) ಮುಖ್ಯ ನ್ಯಾಯಾಧೀಶರು, ಹಸೀನಾ ಪ್ರತಿಭಟನಾಕಾರರ ವಿರುದ್ಧ ಹೆಲಿಕಾಪ್ಟರ್, ಡ್ರೋನ್ ಮತ್ತು ಮಾರಕ ಆಯುಧಗಳನ್ನು ಬಳಸಲು ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ. ದಕ್ಷಿಣ ಢಾಕಾ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ನಿರ್ದೇಶನ ಬಹಿರಂಗವಾಗಿದೆ. ವಿಧಿವಿಜ್ಞಾನ ಪರೀಕ್ಷೆಯು ಸಿಡಿ ಮತ್ತು ರೆಕಾರ್ಡಿಂಗ್ ನಿಜವೆಂದು ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ಢಾಕಾ ವಿಶ್ವವಿದ್ಯಾಲಯದ ಕುಲಪತಿಯೊಂದಿಗಿನ ಅವರ ಸಂಭಾಷಣೆಯ ದಾಖಲೆಗಳು ಲಭ್ಯವಿರುವುದನ್ನು ತಿಳಿಸಿದ ನ್ಯಾಯಮಂಡಳಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕೊಲ್ಲಲು ಹಸೀನಾ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.
ಹಸೀನಾ ವಿದ್ಯಾರ್ಥಿ ಚಳವಳಿಯನ್ನು ದುರ್ಬಲಗೊಳಿಸಿದ್ದಾರೆ. ಅವರು ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ‘ರಜಾಕರು’ ಎಂದು ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ ಎಂದು ತಿಳಿಸಿದ್ದಾರೆ.
ಜುಲೈ 14, 2024ರ ರಾತ್ರಿ, ಢಾಕಾ ವಿಶ್ವವಿದ್ಯಾಲಯದ ಉಪಕುಲಪತಿಯೊಂದಿಗೆ ಮಾತನಾಡಿ ಹಸೀನಾ, “ನಾನು ರಜಾಕಾರರನ್ನು ಗಲ್ಲಿಗೇರಿಸಿದ್ದೇನೆ, ಅವರನ್ನು [ಪ್ರತಿಭಟನಾಕಾರರನ್ನು] ಕೂಡ ಗಲ್ಲಿಗೇರಿಸಲಾಗುವುದು. ಅವರಲ್ಲಿ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ. “ನಾನು ಅವರ ಬಂಧನ ಮತ್ತು ಕ್ರಮಕ್ಕೆ ಆದೇಶಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.
ಹಸೀನಾ, ಮಾಜಿ ಗೃಹ ಸಚಿವ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಪ್ರತಿಭಟನಾಕಾರರನ್ನು ಕೊಲ್ಲಲು ಮತ್ತು ನಿಗ್ರಹಿಸಲು ಜಂಟಿಯಾಗಿ ಕೆಲಸ ಮಾಡಿದ್ದಾರೆ. ಹಸೀನಾ ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಶಕೀಲ್ ಎಂಬ ಸಹಾಯಕನಿಗೆ ಫೋನ್ ಕರೆ ಮಾಡಿ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ 226 ಜನರನ್ನು ಕೊಲ್ಲುವಂತೆ ಕೇಳಿಕೊಂಡಿದ್ದಾರೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಮಾನವೀಯತೆಯ ವಿರುದ್ಧದ ಅಪರಾಧ : ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೋಷಿ ಎಂದ ಬಾಂಗ್ಲಾ ನ್ಯಾಯಮಂಡಳಿ


