ತ್ರಿಕೋನ ಸ್ಪರ್ಧೆ ಕಂಡುಬರುತ್ತಿದ್ದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದ್ದು ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಮೇಲೆ ಪಕ್ಷದ ಅಭ್ಯರ್ಥಿಗೆ ಆನೆಬಲ ಬಂದಂತಾಗಿದೆ. ಗೌಡಗೆರೆ-ಬರಗೂರು, ಕಳ್ಳಂಬೆಳ್ಳ ಭಾಗಗಳಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವಂತಹ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಇಡೀ ತಾಲೂಕಿನಾದ್ಯಂತ ತಂಡೋಪತಂಡವಾಗಿ ಪ್ರಚಾರ ನಡೆಸಿರುವುದು ಪ್ರಬಲ ಪೈಪೋಟಿಗೆ ಕಾರಣವಾಗಿದೆ.

ದೇವೇಗೌಡರು ಮಧುಗಿರಿ ತಾಲೂಕು ಬಡವನಹಳ್ಳಿ ಸಮೀಪದ ಕೈಮರದ ಶಾಸಕ ವೀರಭದ್ರಯ್ಯ ಅವರ ಮನೆಯಲ್ಲಿ ಬೀಡುಬಿಟ್ಟಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಗೌಡಗೆರೆ ಹೋಬಳಿಯಲ್ಲಿ ನೆಲೆಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಕೂಡ ಶಿರಾ ಕ್ಷೇತ್ರದಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮತದಾರರ ನಿರೀಕ್ಷೆಯಂತೆ ಜೆಡಿಎಸ್ ವರಿಷ್ಠರು ಕ್ಷೇತ್ರದಲ್ಲಿ ಕೊನೆಯ ಗಳಿಗೆಯಲ್ಲಿ ಪ್ರಚಾರವನ್ನು ತೀವ್ರಗೊಳಿಸಿದ್ದು ಮತದಾರರ ಮನ ಗೆಲ್ಲಲು ಹರಸಾಹಸಪಡುತ್ತಿದ್ದಾರೆ.
ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಮತ್ತು ಪುತ್ರ ಪ್ರಕಾಶ್ ವೇದಿಕೆಯಲ್ಲಿ ಕಣ್ಣೀರು ಸುರಿಸುತ್ತಾ ಮತದಾರರ ಅನುಕಂಪ ಗಿಟ್ಟಿಸುತ್ತಿದ್ದಾರೆ. ಅವರಿಬ್ಬರಿಗೆ ಭಾಷಣ ಕಲೆ ಗೊತ್ತಿಲ್ಲ. ಆದರೆ ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದನ್ನು ಪ್ರಸ್ತಾಪಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡುಬಂದಿದೆ. ಪಕ್ಷದ ಪ್ರಮುಖ ಮುಖಂಡರ ಅಗಮನ ಜೆಡಿಎಸ್‌ಗೆ ಚೈತನ್ಯ ಬಂದಂತಾಗಿದೆ. ಕಾರ್ಯಕರ್ತರು ಹುರುಪಿನಿಂದ ಪ್ರಚಾರದಲ್ಲಿ ಭಾಗವಹಿಸುವುದು ಕಂಡುಬರುತ್ತಿದೆ. ಇದುವರೆಗೆ ಮಂಕಾಗಿದ್ದ ಮತದಾರರು ಮತ್ತು ಸ್ಥಳೀಯ ಮುಖಂಡರಲ್ಲಿ ಪಕ್ಷದ ಪ್ರಮುಖರ ಆಗಮನದಿಂದ ಅತ್ಯಂತ ಉತ್ಸಾಹದ ಬುಗ್ಗೆ ಚಿಮ್ಮುತ್ತಿದೆ.

ಕಾಂಗ್ರೆಸ್ ಮೊದಲಿನಿಂದಲೂ ಪ್ರಚಾರದಲ್ಲಿ ಮುಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸಂತೋಷ ಲಾಡ್, ಕಂಪ್ಲಿಯ ಗಣೇಶ್, ಪುಟ್ಟರಂಗಶೆಟ್ಟಿ, ಷಡಕ್ಷರಿ, ಎಂ.ಡಿ. ಲಕ್ಷ್ಮೀನಾರಾಯಣ, ಬಿ.ಎಲ್.ಶಂಕರ್, ಬಿ.ಕೆ.ಹರಿಪ್ರಸಾದ್ ಮತ್ತು ಜಿಲ್ಲೆಯ ಪ್ರಮುಖ ನಾಯಕರ ತಂಡ ಪ್ರತಿಯೊಂದು ಹೋಬಳಿಯಲ್ಲೂ ಪ್ರಚಾರ ನಡೆಸಿ ಹೋಗಿದೆ. ಜಾತಿ ಲೆಕ್ಕಾಚಾರವನ್ನೂ ಕಾಂಗ್ರೆಸ್ ಹಾಕಿದಂತೆ ಕಾಣುತ್ತಿದೆ. ಅದೇ ಕಾರಣಕ್ಕಾಗಿಯೇ ಪಕ್ಷದ ಎಲ್ಲಾ ವಿಭಾಗಗಳ ಮುಖಂಡರು ಕೂಡ ಪ್ರಚಾರದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್‌ಗೆ ಲಾಭವಾಗಲಿದೆ.
ಪ್ರಚಾರ ಸಂದರ್ಭದಲ್ಲಿ ಕಾಡುಗೊಲ್ಲರ ಮುಖಂಡರು ಸಿದ್ದರಾಮಯ್ಯ ಅವರಿಗೆ ಕಂಬಳಿ ಸನ್ಮಾನ ಮಾಡಿ ಕುರಿಯೊಂದನ್ನು ನೀಡಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕಾಂಗ್ರೆಸ್ ಪಕ್ಷ ಒಕ್ಕಲಿಗರು, ದಲಿತರು, ಬಲಜಿಗರು, ಕಾಡುಗೊಲ್ಲರು, ಕುರುಬರು, ಅಲ್ಪಸಂಖ್ಯಾತರು, ನೇಕಾರರು ಹೀಗೆ ಎಲ್ಲಾ ಸಮುದಾಯಗಳ ಮುಖಂಡರನ್ನು ಕರೆಸಿ ಪ್ರಚಾರದಲ್ಲಿ ತೊಡಗುವಂತೆ ಮಾಡಿ ಆಯಾ ಸಮುದಾಯದ ಮತದಾರರಿಗೆ ಸಂದೇಶ ಹೋಗುವಂತೆ ಮಾಡಿದೆ. ಕುರುಬರು, ಕಾಡುಗೊಲ್ಲರು, ಅಲ್ಪಸಂಖ್ಯಾತರು, ನಾಯಕರು, ದಲಿತರು ಸೇರಿದಂತೆ ಅಹಿಂದ ವರ್ಗದ ಮತದಾರರನ್ನು ತನ್ನಡೆಗೆ ಸೆಳೆಯುವಂತಹ ಎಲ್ಲಾ ಪ್ರಯತ್ನಗಳಲ್ಲೂ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಶಿರಾ, ಮಡಕಶಿರಾ, ಪಾವಗಡ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಪ್ರಭಾವವನ್ನು ಹೊಂದಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರಾ ರೆಡ್ಡಿ ಅವರನ್ನು ಟಿ.ಬಿ.ಜಯಚಂದ್ರ ಭೇಟಿ ಮಾಡಿದ್ದಾರೆ. ಯುವ ಮುಖಂಡ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಕೂಡ ಭೇಟಿ ಮಾಡಿ ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ನೆರವಾಗುವಂತೆ ಮನವಿ ಮಾಡಿ ಬಂದಿದ್ದು ಬಿಜೆಪಿ ಎಲ್ಲಾ ಪಟ್ಟುಗಳನ್ನು ತಿರುವುಮುರುವಾಗುವಂತೆ ಮಾಡಿದೆ. ತಂಡತಂಡಗಳಲ್ಲಿ ಮಹಿಳಾ ಮುಖಂಡರು ಕೂಡ ಹೆಚ್ಚಿನ ಪ್ರಚಾರ ನಡೆಸಿದ್ದು ಮತದಾರರನ್ನು ಭೇಟಿ ಮಾಡುವಲ್ಲಿ ಸಫಲರಾಗಿದ್ದಾರೆ.

ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲಿನಿಂದ ಇದುವರೆಗೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ 5 ಸಾವಿರ ಕಾರ್ಯಕರ್ತರು ಸೇರ್ಪಡೆಯಾಗಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಬಿಜೆಪಿಯ ನಗರ ಘಟಕದ ಅಧ್ಯಕ್ಷ ಬಂಡಿ ರಮೇಶ್, ಗ್ರಾಮ ಪಂಚಾಯ್ತಿ ಮುಖಂಡ ರಾಜಕುಮಾರ್ ಹೀಗೆ ಅಕ್ಟೋಬರ್ ೨೪ರಂದೇ ೪೦ ಮಂದಿ ಬೇರೆ ಪಕ್ಷಗಳ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಕಾಂಗ್ರೆಸ್‌ಗೆ ಚುನಾವಣಾ ಸಮಯದಲ್ಲಿ ಒಂದು ರೀತಿಯಲ್ಲಿ ಒಳ್ಳೆಯದೇ ಆದರೂ ಮುಂದಿನ ದಿನಗಳಲ್ಲಿ ಕಿರಿಕಿರಿಗೆ ಕಾರಣವಾಗಲೂಬಹುದು.
ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ನಾಯಕರು ಬಂದ ನಂತರ ಶಿರಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ ಮತ್ತು ಬಿಜೆಪಿಯಲ್ಲಿ ಮೊದಲು ಇದ್ದ ಉತ್ಸಾಹ ಕುಸಿದಿದೆ. ಹಾಗಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎನ್ನುತ್ತಾರೆ ಜನ.
ಬಿಜೆಪಿಯ ಆರಂಭ ಶೂರತ್ವ ನಂತರದ ದಿನಗಳಲ್ಲಿ ಕಾಣದಂತಾಗಿದೆ. ನಾಮಪತ್ರ ಸಲ್ಲಿಸುವ ಮುನ್ನ ಕೆಲ ಬಿಜೆಪಿ ನಾಯಕರು ಕ್ಷೇತ್ರಕ್ಕೆ ಬಂದು ಹೋದರು. ನಂತರ ವಿಜಯೇಂದ್ರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಮೇಲೆ ನೆಪ ಮಾತ್ರಕ್ಕೆ ಉಪಮುಖ್ಯಮಂತ್ರಿಗಳಾದ ಗೋವಿಂದಕಾರಜೋಳ, ಅಶ್ವತ್ಥನಾರಾಯಣ ಒಂದು ದಿನ ಬಂದು ಪ್ರಚಾರ ನಡೆಸಿ ಹೋದರು. ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯುವ ಮುಖಂಡ-ಸಂಸದ ತೇಜಸ್ವಿ ಸೂರ್ಯ ಬಂದು ಜೆಡಿಎಸ್ ನಾಯಕರನ್ನು ಕೆಣಕಿ ಹೋದರು. ಮತ್ತೆ ಯಾವೊಬ್ಬ ನಾಯಕರು ಇತ್ತ ಸುಳಿದಿಲ್ಲ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದರೆ ಅದರ ಕ್ರೆಡಿಟ್ ವಿಜಯೇಂದ್ರ ಅವರಿಗೆ ಸಲ್ಲುತ್ತದೆ; ಆ ಕಾರಣಕ್ಕಾಗಿ ಬಿಜೆಪಿ ನಾಯಕರು ಪ್ರಚಾರದಲ್ಲಿ ಸಾಕಷ್ಟು ಭಾಗಿಯಾಗದೆ ಹಿಂದೆಸರಿದರು ಎಂದು ಹೇಳಲಾಗುತ್ತಿದೆ.
ಶಿರಾ ಕ್ಷೇತ್ರದ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ ಮೇಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತ ತಿರುಗಿಯೂ ನೋಡಿಲ್ಲ. ಆರ್.ಅಶೋಕ್, ಎಸ್.ಆರ್. ಬೊಮ್ಮಾಯಿ ಮತ್ತು ಆರ್.ಎಸ್.ಎಸ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡರು ಯಾರೂ ರಾಜೇಶ್ ಗೌಡ ಪರ ಪ್ರಚಾರಕ್ಕೆ ಬಂದಿಲ್ಲ. ಇದು ಬಿಜೆಪಿ ಕಾರ್ಯಕರ್ತರಲ್ಲಿ ನಿರುತ್ಸಾಹಕ್ಕೆ ಕಾರಣವಾಗಿದೆ. ಅಭ್ಯರ್ಥಿ ರಾಜೇಶ್ ಗೌಡ ಪರ ಬಿಜೆಪಿ ನಾಯಕರಲ್ಲಿ ಹೆಚ್ಚಿನ ಒಲವು ಇಲ್ಲದಿರುವುದು ಮತ್ತು ದುಡ್ಡು ಕೊಟ್ಟು ಟಿಕೆಟ್ ತಂದಿದ್ದಾರೆಂಬ ಆರೋಪಗಳು ಬಿಜೆಪಿ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗುಸುಗುಸು ಸುದ್ದಿ:
ಜೆಡಿಎಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಇರಬಹುದು. ಅದು ಕೆಲಸ ಮಾಡಿದರೆ ಕಾಂಗ್ರೆಸ್‌ಗೆ ಹಿನ್ನಡೆ ಆಗುವುದು ಖಚಿತ. ಆ ಮರ್ಮವೇ ತಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು.
- ಕೆ.ಈ ಸಿದ್ದಯ್ಯ
ಇದನ್ನೂ ಓದಿ; RR ನಗರ ಉಪಚುನಾವಣೆ: ಮತದಾರರ ಹಾಟ್ ಫೇವರಿಟ್ ಯಾರು ಎಂಬುದು ಇನ್ನೂ ನಿಗೂಢ!


