ಪಶ್ಚಿಮ ಬಂಗಾಳ ಚುನಾವಣೆಯ ಘೋಷಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಮುಖ ಪಕ್ಷಗಳು ಈಗಾಗಲೆ ತಯಾರಿ ಆರಂಭಿಸಿವೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷ ಶಿವಸೇನೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಹಾಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ ಎದುರಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, “ಬಹುನಿರೀಕ್ಷಿತ ಅಪ್‌ಡೇಟ್ ಇಲ್ಲಿದೆ. ಪಕ್ಷದ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಚರ್ಚಿಸಿದ ನಂತರ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುವುದಾಗಿ ನಿರ್ಧರಿಸಲಾಗಿದೆ. ನಾವು ಅತಿ ಶೀಘ್ರದಲ್ಲೇ ಕಲ್ಕತ್ತಾವನ್ನು ತಲುಪಲಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್
So, here is the much awaited update.
After discussions with Party Chief Shri Uddhav Thackeray, Shivsena has decided to contest the West Bengal Assembly Elections.
We are reaching Kolkata soon…!!
Jai Hind, জয় বাংলা !
— Sanjay Raut (@rautsanjay61) January 17, 2021
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದತ್ತ ಬಿಜೆಪಿ ಚಿತ್ತ!
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹಲವು ಪ್ರಮುಖ ಪಕ್ಷಗಳು ಇದುವರೆಗೂ ಘೋಷಿಸಿವೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಅಸದುದ್ದೀನ್ ಓವೈಸಿ ಅವರ ಪಕ್ಷವೂ ಸಹ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಇನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮತ್ತೊಂದು ಕಡೆ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂದು ಹವಣಿಸುತ್ತಿದೆ. ಇನ್ನು ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಈ ಎಲ್ಲಾ ಪಕ್ಷಗಳೂ ರಾಜ್ಯದ ಚುನಾವಣೆಯಲ್ಲಿ ಭಾಗವಹಿಸುವುದರಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಮತಗಳು ವಿಭಜನೆಯಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಾಲಿಗೆ ಈಗ ಶಿವಸೇನೆಯೂ ಸೇರಿಕೊಂಡಿರುವುದರಿಂದ ಮಮತಾಗೆ ಮತ್ತೊಂದು ಆಘಾತ ಎದುರಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್‌ಗೆ ನೇರಾನೇರಾ ತೀವ್ರ ಪೈಪೋಟಿ ಇರಲಿದೆ. ಹಾಗಾಗಿ ಪಶ್ಚಿಮ ಬಂಗಾಳ ಯಾರ ತೆಕ್ಕೆಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: AAP ಯ ದೆಹಲಿ ಮಾದರಿ ಪ್ರಚಾರ ತಂತ್ರ ಬಳಸಲಿರುವ ಮಮತಾ ಬ್ಯಾನರ್ಜಿ


