ಭಾನುವಾರ (ಡಿ.15) ವಿಸ್ತರಣೆಗೊಂಡ ಮಹಾರಾಷ್ಟ್ರದ ‘ಮಹಾಯುತಿ’ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದ್ದ ಬೇಸರಗೊಂಡಿರುವ ಶಿವಸೇನೆಯ ಭಂಡಾರ ಶಾಸಕ ನರೇಂದ್ರ ಭೋಂಡೇಕರ್ ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಶಿವಸೇನೆಯ ಉಪನಾಯಕ ಮತ್ತು ಪೂರ್ವ ವಿದರ್ಭದ ಸಮನ್ವಯಕಾರರಾಗಿ ಸೇವೆ ಸಲ್ಲಿಸಿದ್ದ ಭೋಂಡೇಕರ್, ಪಕ್ಷದ ನಾಯಕತ್ವದಿಂದ ತಮಗೆ ಸಂಪುಟ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಸಂಪುಟ ವಿಸ್ತರಣೆ ವೇಳೆ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಭಂಡಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಭೋಂಡೇಕರ್, ತನ್ನನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆಯೆಲ್ಲ ಜಿಲ್ಲಾ ಉಸ್ತುವಾರಿ ಹುದ್ದೆ ಹೊರಗಿನವರಿಗೆ ದೊರೆತಿದೆ. ಈ ಬಾರಿ ತನಗೆ ದೊರೆತರೆ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದರು.
ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ 38 ಸಾವಿರ ಮತಗಳ ಅಂತರದಿಂದ ಭೋಂಡೇಕರ್ ಗೆಲುವು ಸಾಧಿಸಿದ್ದರು.
ಭಾನುವಾರ ವಿಸ್ತರಣೆಗೊಂಡ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟಕ್ಕೆ 39 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿ 19 ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಮಹಾಯುತಿ ಮೈತ್ರಿಕೂಟದ ಪ್ರಮುಖ ಪಕ್ಷ ಅತಿ ಹೆಚ್ಚು (19) ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನೆ (ಶಿಂದೆ ಬಣ) ಮತ್ತು ಎನ್‌ಸಿಪಿ(ಅಜಿತ್ ಪವಾರ್ ಬಣ)ಗೆ ಕ್ರಮವಾಗಿ 11 ಮತ್ತು 9 ಸಚಿವ ಸ್ಥಾನಗಳು ದೊರೆತಿವೆ.
ಸಚಿವ ಸ್ಥಾನ ಸಿಗುವ ಖಾತ್ರಿಯಿಂದಲೇ ನಾನು ಶಿವಸೇನೆ ಸೇರಿದ್ದೇನೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಆ ಖಾತ್ರಿ ನೀಡಿದ್ದರು. ನಾನು ಸ್ವತಂತ್ರ ಶಾಸಕನಾಗಿದ್ದಾಗಲೂ ಶಿಂದೆ ಅವರನ್ನು ಬೆಂಬಲಿಸಿದ್ದೆ. ಸಂಪುಟ ವಿಸ್ತರಣೆಯ ಆರಂಭದಲ್ಲಿ ನನ್ನ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಇತ್ತು. ಆದರೆ, ಅಂತಿಮ ಹಂತದಲ್ಲಿ ಕೈ ಬಿಡಲಾಗಿದೆ ಎಂದು ಭೋಂಡೇಕರ್ ಹೇಳಿದ್ದಾರೆ.
“ನಾನು ಶಿವಸೇನೆಯ ಸಾಮಾನ್ಯ ಸದಸ್ಯನಾಗಿ ಮುಂದುವರೆಯುತ್ತೇನೆ. ಪಕ್ಷದ ಯಾವುದೇ ಹುದ್ದೆಗಳು ಬೇಡ. ಸ್ಥಳೀಯ ನಾಯಕರು ಜಿಲ್ಲೆಯ ನಾಯಕತ್ವ ವಹಿಸಿಕೊಂಡರೆ ಅಭಿವೃದ್ದಿಯಾಗಲಿದೆ” ಎಂದು ಭೋಂಡೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಅವಿಶ್ವಾಸ ಗೊತ್ತುವಳಿ ಮಂಡನೆಯ ನಡುವೆಯೇ ಇಂದು ರಾಜ್ಯಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ


