ಒಂಭತ್ತು ವರ್ಷಗಳ ಹಿಂದೆ ಭದ್ರಾವತಿಯಲ್ಲಿ ನಡೆದ ಸರ್ಕಾರಿ ಶಾಲೆಯ ಶಿಕ್ಷಕ ಇಮ್ತಿಯಾಝ್ ಅಹ್ಮದ್ ಎಂಬವರ ಕೊಲೆ ಪ್ರಕರಣದಲ್ಲಿ ಮೃತರ ಪತ್ನಿ ಮತ್ತು ಪ್ರಿಯಕರನಿಗೆ ಮರಣದಂಡನೆ ವಿಧಿಸಿ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ (ಆ.23) ಆದೇಶಿಸಿದೆ.
ಸರ್ಕಾರಿ ಶಾಲೆಯ ಶಿಕ್ಷಕಿ ಲಕ್ಷ್ಮಿ ಮತ್ತು ಆಕೆಯ ಪ್ರಿಯಕರ, ಚಾಲಕ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಮರಣದಂಡನೆ ಶಿಕ್ಷೆ ಘೋಷಣೆಯಾದವರು. ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ನೆರವಾದ ಮೂರನೇ ಅಪರಾಧಿ ಶಿವರಾಜ್ ಎಂಬಾತನಿಗೆ ಏಳು ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸಲಾಗಿದೆ.
ಮೃತ ಶಿಕ್ಷಕ ಇಮ್ತಿಯಾಝ್ ಮತ್ತು ಲಕ್ಷ್ಮಿ ಇಬ್ಬರೂ ಕಲಬುರಗಿಯ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮದುವೆಯಾಗಿದ್ದರು. ಇಮ್ತಿಯಾಜ್ ಸೊರಬ ಮೂಲದವರು, ಲಕ್ಷ್ಮಿ ಭದ್ರಾವತಿಯ ನಿವಾಸಿ. ಮದುವೆಯ ನಂತರ ಇಬ್ಬರೂ ಭದ್ರಾವತಿಗೆ ಸ್ಥಳಾಂತರಗೊಂಡಿದ್ದರು. ಈ ನಡುವೆ ದಂಪತಿಗೆ ಒಬ್ಬ ಮಗ ಹುಟ್ಟಿದ್ದ.
ಭದ್ರಾವತಿಯ ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮಿ ಅವರಿಗೆ ಬಾಲ್ಯದ ಸ್ನೇಹಿತ, ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜೊತೆ ಆತ್ಮೀಯತೆ ಬೆಳೆದಿತ್ತು. ಬಳಿಕ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತೆನ್ನಲಾಗಿದೆ. ಇದನ್ನು ಇಮ್ತಿಯಾಝ್ ವಿರೋಧಿಸಿದ್ದರು. ಈ ಕಾರಣಕ್ಕೆ ಇಮ್ತಿಯಾಝ್ ಅವರನ್ನು ಲಕ್ಷ್ಮಿ ಮತ್ತು ಕೃಷ್ಣಮೂರ್ತಿ ಹಾಗೂ ಕೃಷ್ಣ ಮೂರ್ತಿಯ ಸ್ನೇಹಿತ ಶಿವರಾಜ ಸೇರಿ 2016ರ ಜುಲೈ 7ರಂದು ಜನ್ನಾಪುರದ ಮನೆಯಲ್ಲಿ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು. ಮೃತದೇಹವನ್ನು ನೈಲಾನ್ ದಾರದಲ್ಲಿ ಕಟ್ಟಿ ಭದ್ರಾವತಿಯ ಹೊಸಸೇತುವೆ ಸಮೀಪ ಭದ್ರಾ ನದಿಗೆ ಎಸೆದಿದ್ದರು.
ಪ್ರಕರಣದ ಸಂಬಂಧ ಇಮ್ತಿಯಾಝ್ ಅವರ ಸಹೋದರ ಇಜಾಝ್ ಅಹ್ಮದ್ ದಾಖಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಭದ್ರಾವತಿಯ ನ್ಯೂ ಟೌನ್ ಪೊಲೀಸರು, ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಶಿವರಾಜನನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಲಕ್ಷ್ಮಿ ಹಾಗೂ ಕೃಷ್ಣಮೂರ್ತಿಗೆ ಮರಣದಂಡನೆ ಹಾಗೂ ಶಿವರಾಜ್‌ಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಕಾರಣ ನ್ಯಾಯಾಲಯವು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಪ್ರಕರಣದಲ್ಲಿ ರತ್ನಮ್ಮ ಅವರು ಸಾರ್ವಜನಿಕ ಅಭಿಯೋಜಕರಾಗಿದ್ದರು.
ಪ್ರತ್ಯೇಕ ಒಳಮೀಸಲಾತಿ ಇಲ್ಲ ಎಂದಿದ್ದಕ್ಕೆ ಫ್ರೀಡಂ ಪಾರ್ಕಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅಲೆಮಾರಿ ಸಮುದಾಯ


