ಗೀತಮ್ಮ ಎಂಬ 45 ವರ್ಷದ ಮಹಿಳೆಗೆ ಭೂತ ಬಿಡಿಸುವ ಹೆಸರಿನಲ್ಲಿ ಮಹಿಳಾ ಮಂತ್ರವಾದಿಯೋರ್ವರು ಹಲವಾರು ಗಂಟೆಗಳ ಕಾಲ ಕ್ರೂರವಾಗಿ ಥಳಿಸಿದ್ದು, ಅಸ್ವಸ್ಥಗೊಂಡಿದ್ದ ಆಕೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯಭದ್ರಾವತಿ ತಾಲ್ಲೂಕಿನ ಜಂಬರಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಗೀತಮ್ಮ ಅವರ ಮಗ ಸಂಜಯ್ (20) ತನ್ನ ತಾಯಿಗೆ ಭೂತ ಹಿಡಿದಿದೆ ಎಂದು ನಂಬಿ ಆಶಾ (35) ಎಂಬ ಮಹಿಳೆಯ ಬಳಿಗೆ ಕರೆದೊಯ್ದಿದ್ದಾನೆ; ಆಕೆಗೆ ಅಲೌಕಿಕ ಶಕ್ತಿ ಇದೆ ಎಂದು ಆತ ನಂಬಿದ್ದ. ಗ್ರಾಮದಲ್ಲಿ ದೆವ್ವ ಬಿಡಿಸುವುದಕ್ಕೆ ಹೆಸರುವಾಸಿಯಾದ ಆಶಾ, ಗೀತಮ್ಮ ಅವರನ್ನು ಸುಮಾರು ಆರು ಗಂಟೆಗಳ ಕಾಲ ಹೊಡೆದಿದ್ದಾಳೆ ಎನ್ನಲಾಗಿದೆ. ಹಲ್ಲೆಯ ಸಮಯದಲ್ಲಿ ಉಂಟಾದ ಗಾಯಗಳಿಂದ ಗೀತಮ್ಮ ಸಾವನ್ನಪ್ಪಿದ್ದಾರೆ.
ಹೊಳೆಹೊನ್ನೂರು ಪೊಲೀಸರು ಆಶಾ ಮತ್ತು ಸಂಜಯ್ ಇಬ್ಬರನ್ನೂ ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ.
“ಗೀತಮ್ಮನ ಮೈಯಲ್ಲಿ ದೆವ್ವವೊಂದು ಸೇರಿಕೊಂಡಿದ್ದು, ಅದನ್ನು ಹೊರ ಹಾಕುತ್ತೇನೆ ಎಂದು ಆಶಾ ಹಾಗೂ ಆಕೆಯ ಪತಿ ತಿಳಿಸಿದ್ದರು; ಮಾತನ್ನು ನಂಬಿ ಅವರ ಮನೆಗೆ ಕರೆದೊಯ್ದಿದ್ದೆವು. ಆರಂಭದಲ್ಲಿ ದೇವರ ಪೂಜೆ ಮಾಡಿ, ನಂತರ ದೆವ್ವ ಓಡಿಸುತ್ತೇನೆ ಎಂದು ತಲೆಮೇಲೆ ಕಲ್ಲು ಹೊರಿಸಿ, ಗ್ರಾಮದ ಹೊರಗಿನ ಮರವೊಂದರ ಬಳಿಗೆ ಕರೆದೊಯ್ದರು. ಅದೇ ಮರದ ರೆಂಬೆಯೊಂದರಿಂದ ಮನಬಂದಂತೆ ಥಳಿಸಿದರು. ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಇರುವಾಗಲೇ ಪಕ್ಕದ ಕಾಲುವೆಯಲ್ಲಿದ್ದ ತಣ್ಣೀರು ಎರಚಿದರು. ಇದರಿಂದ ಚಳಿ ತಾಳಲಾಗದೇ ನಡುಗುತ್ತಿದ್ದ ಅಮ್ಮ ಕುಸಿದು ಬಿದ್ದರು” ಎಂದು ಸಂಜಯ್ ಹೊಳೆಹೊನ್ನೂರು ಠಾಣೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ
ಗೀತಮ್ಮ ಕುಸಿದುಬಿದ್ದ ಬಳಿಕ, ‘ಅವರ ಮೈನಲ್ಲಿದ ಆತ್ಮ ಹೊರಹೋಗಿದೆ’ ಎಂದು ಮಂತ್ರವಾದಿ ಆಶಾ ಹೇಳಿದ್ದರು. ‘ಮುಂದೆ ಯಾವುದೇ ತೊಂದರೆ ಇಲ್ಲ; ಎಲ್ಲವೂ ಸರಿಯಾಗಿದೆ’ ಎಂದು ಹೇಳಿ ಮನೆಗೆ ಕಳಿಸಿದರು. ಆದರೆ, ಈ ವೇಳೆ ತೀವ್ರ ಅಸ್ವಸ್ಥವಾಗಿದ್ದ ಅವರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


