ಉತ್ತರ ಕನ್ನಡದ ಘಟ್ಟದ ಮೇಲಿನ ಖಾಲಿಬರಡು ರಾಜಕಾರಣ ಅದ್ಯಾಕೋ ಅನರ್ಹ-ಅಯೋಗ್ಯ ಶಾಸಕ ಶಿವರಾಮ್ ಹೆಬ್ಬಾರ್ ಸುತ್ತಲೆ ಗಿರಗಿಟ್ಲೆ ಹೊಡೆಯುತ್ತಿದೆ. ಯಲ್ಲಾಪುರ ಉಪಚುನಾವಣೆಗೆ ರಂಗ ತಾಲೀಮು, ಬನವಾಸಿ ಅಪಹರಿಸಲು ಸಿಎಂ ಯಡ್ಡಿ ಕುಟುಂಬ ಕರಾಮತ್ತು ಮಾಡುತ್ತಿದ್ದರೂ ಹೆಬ್ಬಾರ್ ಉದಾಸೀನದಿಂದ ಇದ್ದಾರೆ. ಶಿರಸಿ ಜಿಲ್ಲೆ ರಚನೆ ಹೋರಾಟ ದಿಕ್ಕೆಡಿಸಲು ಹೆಬ್ಬಾರ್ ಹಿಕಮತ್ತು ನೇಡಸಿದ್ದನೆಂಬ ಭಾವನೆ ಜನರಲ್ಲಿದೆ. ಮತ್ತು ಹೆಬ್ಬಾರ್‌ಗೆ ಬಿಜೆಪಿ ಟಿಕೆಟ್ ಸಿಗದಂತೆ ಅಡ್ಡಗಾಲು ಹಾಕುವ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ಪುಟಗೋಸಿ ನಿಗಮದ ಕಾರು ಇನಾಮಾಗಿ ದಕ್ಕಿರುವುದು ಇಡೀ ಉತ್ತರಕನ್ನಡದಲ್ಲಿ ಬಿಸಿ ಬಿಸಿ ಚರ್ಚೆ ಹುಟುಹಾಕಿದೆ..
ಬನವಾಸಿಗೆ ಅವಿನಾ ಸಂಭಂದ ಶಿರಸಿಗಿದೆ. ಈ ಕನ್ನಡದ ಮೊದಲ ರಾಜಧಾನಿ ಜತೆ ಘಟ್ಟದ ಮೇಲಿನವರಿಗಷ್ಟೇ ಅಲ್ಲ ಉತ್ತರ ಕನ್ನಡದ ಕರಾವಳಿ ಭಾಗಕ್ಕೂ ಭಾವನಾತ್ಮಕ ನಂಟು ಅಂಟಿಕೊಂಡಿದೆ. ಇಂತ ಬನವಾಸಿಯನ್ನು ಯಡ್ಡಿ ಮತ್ತವರ ಮಗ ಶಿವಮೊಗ್ಗದ ಸಂಸದ ರಾಘವೇಂದ್ರ ತಮ್ಮ ರಾಜಕೀಯ ಫಾಯ್ದೆಗಾಗಿ ಅಪಹರಿಸಲು ಹವಣಿಸುತ್ತಿದ್ದಾರೆಂದು ಇಡೀ ಜಿಲ್ಲೆ ಕೆಂಡವಾಗಿದೆ. ಆದರೆ ಮೊನ್ನೆ ಮೊನ್ನೆಯವರೆಗೂ ಈ ಬನವಾಸಿ ಸೀಮೆಯ ಶಾಸಕನಾಗಿದ್ದ ಅನರ್ಹ ಹೆಬ್ಬಾರ್ ಇದೆಲ್ಲಾ ಕಂಡು ಕಾಣದಂತಿದ್ದಾನೆ. ಜನರು ಬನವಾಸಿಗಾಗಿ ಬೀದಿಗಿಳಿದು ಬೊಬ್ಬೆ ಹೊಡೆದಾಗ ಬೆಚ್ಚಿಬಿದ್ದ ಹೆಬ್ಬಾರ್ ಅಂಥ ಪ್ರಯತ್ನವೇ ನಡೆದಿಲ್ಲ ಎಂದು ಸುಳ್ಳು ಸಬೂಬು ಹೇಳುತ್ತಿದ್ದಾನೆ. ಯಡ್ಡಿಯ ಕೆಂಗಣ್ಣಿಗೆ ತುತ್ತಾಗುವ ಭಯದಿಂದ ಹೆಬ್ಬಾರ್ ಬಯಲಾಟ ಆಡುತ್ತಿದ್ದಾನೆಂಬುದು ಯಲ್ಲಾಪುರ-ಶಿರಸಿ ಏರಿಯಾದಲ್ಲಿ ಎಲ್ಲರಿಗೂ ಗೊತ್ತಾಗಿದೆ.

ಘಟ್ಟದ ಮೇಲಿನ ಆರೇಳು ತಾಲ್ಲೂಕು ಉತ್ತರ ಕನ್ನಡದಿಂದ ಬೇರ್ಪಡಿಸಿ ಹೊಸ ಶಿರಸಿ ಜಿಲ್ಲೆ ರಚಿಸಬೇಕೆಂದು ಕೂಗೆದ್ದಿದೆ. ಶಿರಸಿಯೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವೆಂಬುದು ಜನಾಭಿಪ್ರಾಯ. ವಾಣಿಜ್ಯ, ರಾಜಕೀಯ, ಜಿಲ್ಲಾಮಟ್ಟದ ಹಲವು ಕಛೇರಿ, ಕಾಲೇಜು, ಅರಣ್ಯ -ತೋಟಗಾರಿಕೆಯಂತಹ ಮಹತ್ವದಿಂದ ಶಿರಸಿ ಜಿಲ್ಲಾ ಕೇಂದ್ರವಾಗಲಿ ಎಂದೆಲ್ಲರೂ ಇದುವರೆಗೆ ಹೇಳುತ್ತಿದ್ದರು. ಆದರೆ ಸ್ಪಿಕರ್ ಕಾಗೇರಿಯಂತಹ ಸಿನಿಯರ್ ಶಾಸಕರಿಂದ ಹಿಡಿದು ತ್ರಿಶಂಕು ಜೂನಿಯರ್ ಶಾಸಕ ಹೆಬ್ಬಾರ್‍ವರೆಗಿನ ಘಟ್ಟದ ಮೇಲಿನ ಜನಪ್ರತಿನಿಧಿಗಳ್ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ.್ಲ ಮೂವತ್ತು ವರ್ಷದಿಂದ ಆಯಾಕಟ್ಟಿನ ಅಧಿಕಾರ ಅನುಭವಿಸಿದ ತಲೆ ಮಾಸಿದ ದೇಶಪಾಂಡೆಯೂ ಇತ್ತ ತಲೆಹಾಕಲಿಲ್ಲ. ಎಂಪಿ ಎಮ್ಮೆಲ್ಲೆ ಮಿನಿಸ್ಟರ್‍ಗಳ ರಾಜಕೀಯ ಹೇತ್ಲಾಂಡಿತನದಿಂದ ಶಿರಸಿ ಜಿಲ್ಲೆ ರಚನೆ ಆಗುತ್ತಿಲ್ಲ.
ಬಿಜೆಪಿ ಸರ್ಕಾರ ಸ್ಥಾಪನೆಗೆ “ತ್ಯಾಗ” ಮಾಡಿರುವ ಮಂತ್ರಿಗಿರಿ ಬೋಗಾಭಿಲಾಷಿ ಹೆಬ್ಬಾರ್ ಮನಸ್ಸು ಮಾಡಿದರೆ ಶಿರಸಿ ಜಿಲ್ಲೆ ಸ್ಥಾಪನೆಗೆ ಚಾಲನೆ ನೀಡಬಹುದೆಂದು ಜನರಾಡಿಕೊಳ್ಳುತ್ತಿದ್ದಾರೆ. ಯಡ್ಡಿ ಆಸ್ಥಾನದಲ್ಲಿ ಹೆಬ್ಬಾರ್ ಮಾತಿಗೆ ವಜನಿದೆ: ತನ್ನನ್ನು ಸಿಎಂ ಮಾಡಿದ ಅನರ್ಹ ಗ್ಯಾಂಗಿನ ಮುಂಚೂಣಿ ಸದಸ್ಯ ಹೆಬ್ಬಾರ್ ಎಂಬ “ಗೌರವ” ಯಡ್ಡಿಗಿದೆ. ಬಳ್ಳಾರಿಯ ಆನಂದ್‍ಸಿಂಗ್ ಮನದಿಚ್ಛೆಯಂತೆ ವಿಜಯನಗರ ಜಿಲ್ಲೆ ರಚನೆಗೆ ರಡಿಯಾಗಿರುವ ಯಡ್ಡಿ ಏಕಾಏಕಿ ಹೆಬ್ಬಾರ್ ಬೇಡಿಕೆ ತಿರಸ್ಕರಿಸಲು ಹೇಗೆ ಸಾಧ್ಯ? ಅವಕಾಶವಿದ್ದರೂ ಹೆಬ್ಬಾರ್‍ಗೆ ಇಚ್ಛಾಶಕ್ತಿ ಇಲ್ಲ ಎಂದು ಜನ ಹೇಳುತ್ತಿದ್ದಾರೆ.
ಹೆಬ್ಬಾರ್ ತನ್ನ ಯಲ್ಲಾಪುರ ಕ್ಷೇತ್ರ ಒಳಗೊಂಡ ಶಿರಸಿ ಜಿಲ್ಲೆ ರಚನೆಗೆ ಪ್ರಯತ್ನಿಸುವುದಿರಲಿ, ಜಿಲ್ಲಾ ರಚನಾ ಹೋರಾಟವನ್ನೇ ಹಾಳುಮಾಡುವ ಕುತಂತ್ರ ನಡೆಸಿದ್ದಾನೆ. ಶಿರಸಿ ಜಿಲ್ಲಾ ಕೇಂದ್ರ ಆಗೋದು ಬೇಡ; ಯಲ್ಲಾಪುರ ಜಿಲ್ಲಾ ಕೇಂದ್ರಕ್ಕೆ ಸೂಕ್ತವೆಂಬ ಹೊಸ ವರಾತ ಈಚೆಗೆ ಶುರುವಾಗಿದ್ದೇ ಹೆಬ್ಬಾರ್ ಕಿತಾಪತಿಯಿಂದ ಎಂದು ಘಟ್ಟದ ಮೇಲಿನವರ ಅಭಿಪ್ರಾಯ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉದುರಿಸುವ ದೂರಾಲೋಚನೆ ಹೆಬ್ಬಾರ್‍ದು. ಹಾಗೊಮ್ಮೆ ಯಲ್ಲಾಪುರ ಜಿಲ್ಲಾ ರಾಜಧಾನಿಯಾದರೆ ಆ ಕ್ರೆಡಿಟ್ ತನಗೆ ಬರುತ್ತದೆ. ಈ ವಿವಾದದಲ್ಲಿ ಜಿಲ್ಲಾ ರಚನೆ ನೆನೆಗುದಿಗೆ ಬಿದ್ದರೆ ಅಖಂಡ ಉತ್ತರಕನ್ನಡದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕಾರುಬಾರು ನೆಡೆಸಬಹುದೆಂಬ ಲೆಕ್ಕಾಚಾರ ಹೆಬ್ಬಾರ್‍ದು. ಅಧಿಕಾರದ ತೆವಲಿಗೆ ಬಿದ್ದಿರುವ ಹೆಬ್ಬಾರ್‍ಗೆ ಹೊಸಜಿಲ್ಲೆ, ಹಳೆಜಿಲ್ಲೆ, ಕ್ಷೇತ್ರ, ಬನವಾಸಿ ಹೀಗೆ ಜನರ ಬೇಕು ಬೇಡುಗಳೆಲ್ಲವು ಜುಜುಬಿಯೇ..
ಅದೆಷ್ಟೇ ಅಡ್ಡ ಸರ್ಕಸ್ ಮಾಡಿದರೂ ಹೆಬ್ಬಾರ್‌ಗೆ ನಿದ್ದೆ ಬೀಳುತ್ತಿಲ್ಲ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹತೆ ವಿಚಾರಣೆ ನಡೆಯುತ್ತಿದೆ. ಇತ್ತ ಉಪಚುನಾವಣೆ ಎದೆಮೆಲೆ ಬಂದು ಕೂತಿದೆ. ಬಿಜೆಪಿ ಟಿಕೆಟ್ ತರಲು ತೊಂದರೆ ಕೊಡುವ ಸ್ಥಳೀಯ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷತೆ ಯಡ್ಡಿಯಿಂದ ಕೊಡಿಸಿ ಪಳಗಿಸಲು ಹೆಬ್ಬಾಳ್ ಪ್ರಯತ್ನಿಸುತ್ತಿದ್ದಾನೆ. ಸುಪ್ರೀಮ್ ತನ್ನ ಅನರ್ಹತೆ ಪಕ್ಕಾ ಮಾಡಿದರೆ ತನ್ನ ಮಗ ಅಥವಾ ಹೆಂಡತಿಗೆ ಬಿಜೆಪಿ ಕ್ಯಾಂಡಿಡೇಟ್ ಮಾಡುವ ಆಸೆ ಹೆಬ್ಬಾರ್‍ಗೆ. ತನ್ನ ಎ ಪ್ಲಾನ್‍ಗಷ್ಟೇ ಅಲ್ಲ ಪ್ಲಾನ್ ಬಿಗೂ ಪಾಟೀಲ್ ಅಪಸ್ವರ ಎತ್ತಬಾರದೆಂದು ಹೆಬ್ಬಾರ್ ಒತ್ತಾಯಿಸುತ್ತಿದ್ದಾನೆ.
ಆದರೆ ಪಾಟೀಲ್ ಅರ್ಧ ಪಳಗಿದ್ದಾರಷ್ಟೆ. ಸಾರಿಗೆ ನಿಗಮದ ಅಧ್ಯಕ್ಷತೆ ವಹಿಸಿಕೊಂಡ ಕ್ಷಣವೇ “ನಾನು ಬಿಜೆಪಿ ಸರ್ಕಾರಕ್ಕಾಗಿ ತ್ಯಾಗ ಮಾಡಿದ ಹೆಬ್ಬಾರ್‍ಗೆ ಕ್ಷೇತ್ರ ತ್ಯಾಗ ಮಾಡಿದ್ದೆನೆ..,. ಆದರೆ ಹೆಬ್ಬಾರ್ ಹೊರತಾಗಿ ಬೇರ್ಯಾರಾದರು ಬಿಜೆಪಿ ಕೇಳಿದರೆ, ನನ್ನ ಕ್ಲೇಮು ಇದ್ದೇ ಇದೆ” ಎಂದು ಹೆಬ್ಬಾರ್ ಪರಿವಾರಕ್ಕೆ ಶಾಕ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಒಲ್ಲದ ಮನಸ್ಸಿನಿಂದ ಇದೆ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದ ಹೆಬ್ಬಾರ್ ವಿದ್ರೋಹ ನಿಲ್ಲಿಸಿರಲಿಲ್ಲ. ಅಂಥದ್ದೇ ಪರಿಸ್ಥಿತಿ ಈಗ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಪಾಟೀಲ್ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದರೂ ಯಲ್ಲಾಪುರ ಬೈ ಇಲೆಕ್ಷನ್‍ನಲ್ಲಿ ಸ್ಪರ್ಧಿಸುವ ಉಮೇದು ಬಿಟ್ಟಿಲ್ಲ. ಆಕಸ್ಮಾತ್ ಹೆಬ್ಬಾರ್ ಮಗ ಅಥವಾ ಹೆಂಡತಿಯಾದರೆ ಪಾಟೀಲ್ ಕಾಂಗ್ರೆಸ್ ಕ್ಯಾಂಡಿಡೇಟಾಗೋದು ಖಾತ್ರಿ. ಕಾಂಗ್ರೆಸ್ ಕಿಂಗ್‍ಗಳ ಜೊತೆ ಪಾಟೀಲ್ ರಹಸ್ಯ ಸಂಪರ್ಕ ಚಲೋ ಇಟ್ಟಿದ್ದಾರೆ.


