ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಾರ್ಯವೈಖರಿ ವಿರುದ್ದ ಶಿವಸೇನೆಯ 35 ಮಂದಿ ಶಾಸಕರು ಅತೃಪ್ತಿ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ಸಂಸದ ನಾರಾಯಣರಾಣೆ ಹೇಳಿದ್ದಾರೆ.
ಈ ಮೂಲಕ ಅವರು ಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಇದೇ ರೀತಿ ಹಲವು ಶಾಸಕರನ್ನು ರಾಜೀನಾಮೆ ಕೊಡಿಸಿ ನಂತರ ತಮ್ಮ ಪಕ್ಷದಿಂದ ಗೆಲ್ಲಿಸಿ ಬಿಜೆಪಿ ಸರ್ಕಾರ ರಚಿಸಿತ್ತು.
ಧಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಅವರು ಶಿವಸೇನೆಯ ಶಾಸಕರು ತನ್ನ ನಾಯಕತ್ವದ ವಿರುದ್ಧ ಅತೃಪ್ತಿ ಹೊಂದಿದ್ದಾರೆ. ಉದ್ದವ್ ಠಾಕ್ರೆ ನಡೆಯ ಕುರಿತು ಶಿವಸೇನೆಯ 35 ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಬಳಿ ಶಿವಸೇನೆಯ ನಾಯಕತ್ವದ ವಿರುದ್ಧ ಬೇಸರ ತೋಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ರಚನೆಯಾಗಿ ಐದು ವಾರಗಳು ಕಳೆದವು. ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಉದ್ದವ್ ಠಾಕ್ರೆಗೆ ಸರ್ಕಾರ ನಡೆಸಲು ಬರುವುದಿಲ್ಲ ಎಂಬುದು ಅವರ ನಡವಳಿಕೆಯಿಂದ ತಿಳಿಯುತ್ತದೆ ಎಂದು ನಾರಾಯಣರಾಣೆ ಹೇಳಿದ್ದಾರೆ.
ನಾರಾಯಣ ರಾಣೆ ಹಿಂದೆ ಕಾಂಗ್ರೆಸ್ ಮತ್ತು ಶಿವಸೇನೆಯಲ್ಲಿ ಕೆಲಸ ಮಾಡಿದ್ದವರು. ಈಗ ಬಿಜೆಪಿಯಲ್ಲಿ ಸಂಸದರಾಗಿದ್ದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ರಚನೆಗೂ ಮೊದಲು ರೈತರ ಸಾಲ ಮನ್ನಾ ಮಾಢುವುದಾಗಿ ಭರವಸೆ ನೀಡಿದ್ದರು. ಸಾಲ ಮನ್ನಾ ಮಾಡುವ ಬಗ್ಗೆ ಇದುವರೆಗೂ ಸಮಯ ನಿಗದಿಪಡಿಸಿಲ್ಲ ಎಂದು ದೂರಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.


