Homeಮುಖಪುಟವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ...

ವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ…

- Advertisement -
- Advertisement -

ನೆರೆಮನೆಯ ಶಾಂತಮ್ಮ, ಎದುರು ಮನೆ ಅಣ್ಣು ಅಣ್ಣ, ಹಿಂಬದಿ ಮನೆ ಪೊರ್ಬುಲೇ… ನಮಸ್ಕಾರ…

ಮುಸಲ್ಮಾನರೆಂಬ ಏಕೈಕ ಕಾರಣಕ್ಕಾಗಿ ನಮ್ಮನ್ನು ದೇಶದಿಂದ ಹೊರ ಹಾಕುವ ಅಥವಾ ಡಿಟೆನ್ಷನ್ ಸೆಂಟರ್ ಗೆ ಹಾಕುವ ಹುನ್ನಾರ ನಡೀತಾ ಇರುವ ಬಗ್ಗೆ ನಿಮಗೆ ತಿಳಿದಿರಬಹುದು. ಇದರಿಂದ ಮುಸಲ್ಮಾನರಿಗೆ, ಹಿಂದುಗಳಿಗೆ ಏನೂ ಆಗುವುದಿಲ್ಲವೆಂದು ನಿಮ್ಮನ್ನು ನಂಬಿಸಿರಬಹುದು. ನೀವು ನೋಟ್ ಬ್ಯಾನ್, ಜಿಎಸ್ಟಿ, ಕಪ್ಪು ಹಣದಂತೆ ಇದನ್ನು ನಂಬಿರಲೂ ಬಹುದು. ಪರವಾಗಿಲ್ಲ ನಾನು ಹೋಗಲು ಸಿದ್ದನಿದ್ದೇನೆ. ಆದರೆ ನೀವು ನನ್ನನ್ನು ಹೋಗು ಎಂದರೆ ಮಾತ್ರ ಮರು ಮಾತಿಲ್ಲದೆ ನಿಮಗೆ ನಾನಿಲ್ಲದೆ ಸಂತೋಷ ,ನೆಮ್ಮದಿ ಮತ್ತಷ್ಟು ಹೆಚ್ಚು ಸಿಗುವುದಾದರೆ ಹೋಗಲು ಸಿದ್ದ. ಇದುವರೆಗೂ ಒಂದೇ ತಂದೆ ತಾಯಿಯ ಮಕ್ಕಳಂತೆ ಬದುಕಿದ್ದೇವೆ. ಸುಖ ದುಃಖ ಸಂತೋಷ ಸಂಭ್ರಮ ಹಂಚಿದ್ದೇವೆ. ನನ್ನ ನಿರ್ಗಮನದಿಂದ ನಿಮಗೆ ಮತ್ತಷ್ಟು ಸಂತೋಷ ಸಂಭ್ರಮ ಸಿಗುವುದಾದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೇನಿದೆ.

ಆದರೆ ಕುರ್ಚಿಗಾಗಿ, ಅಧಿಕಾರಕ್ಕಾಗಿ, ರಾಜಕೀಯದವರು ನನ್ನನ್ನು ಹೋಗಲು ಹೇಳಿದರೆ ಅದನ್ನು ಸ್ವೀಕರಿಸಲು ತಯಾರಿಲ್ಲ. ದೇಶದಲ್ಲಿ ಬದುಕಲು ಬಿಡದಿದ್ದರೂ ಸತ್ತು ದೇಶದ ಋಣ ತೀರಿಸುವೆ.
ನಿಮ್ಮೊಂದಿಗೆ ದ್ವೇಷ ಮಾಡಿ, ಪರಸ್ಪರ ನಾವು ವಿಭಜನೆಗೊಂಡು ಹೋಗಲು ನಾನು ಬಿಲ್ಕುಲ್ ಒಪ್ಪಲಾರೆ….

ನೀವು ಪ್ರೀತಿ ಪೂರ್ವಕ ಹೋಗು ಎಂದರೆ ಆ ಕ್ಷಣದಿಂದ ನಾನು ನಿಮ್ಮಿಂದ ದೂರ ಕಾಣದೂರಿಗೆ ಹೋಗಲು ತಯಾರಿದ್ದೇನೆ. ಜತೆ ಜತೆಯಲ್ಲಿ ಆಡಿ, ಹಾಡಿ ಬೆಳೆದ ನಾನು ಇಷ್ಟಾದರೂ ತ್ಯಾಗ ಮಾಡದಿದ್ದರೆ ನಾನು ಒಬ್ಬ ಮನುಷ್ಯನಾ?..

ಇನ್ನು ಪೌರತ್ವ ಕಾಯಿದೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪದೇ ಪದೇ ಮನವರಿಕೆ ಮಾಡಿಯಾರು. ಆದರೆ ದೇವರ ಮೇಲೆ ಆಣೆ ಹಾಕಿ ಹೇಳುತ್ತೇನೆ ಇದರಿಂದ ನಮ್ಮ ನಡುವಿನ ಪ್ರೀತಿ, ವಾತ್ಸಲ್ಯ, ಸೌಹಾರ್ದ ಹಾಳಾಗುವುದಂತೂ ಖಂಡಿತಾ. ರಾಜಕೀಯ ಪಕ್ಷದವರಿಗೆ ಬೇಕಾದದ್ದು ಕೂಡ ಇದೆ. ಕಳೆದ ಹಲವು ದಶಕಗಳಿಂದ ನಾವು ಅನುಭವಿಸುತ್ತಾ ಬಂದಿದ್ದೇವೆ. ನಿಜ ತಾನೇ..

ಹುಟ್ಟಿದ ಮೇಲೆ ಸಾಯುವುದು ಶತಸಿದ್ದ. ಆದರೆ ಎಲ್ಲಿ ಹುಟ್ಟಬೇಕು, ಯಾವ ತಾಯಿಯ ಗರ್ಭದಲ್ಲಿ ಹುಟ್ಟಬೇಕು, ಯಾವ ಧರ್ಮದಲ್ಲಿ ಹುಟ್ಟಬೇಕು ಹಾಗೆಯೇ ಎಲ್ಲಿ ಸಾಯಬೇಕು, ಯಾವಾಗ ಸಾಯಬೇಕು ನಾವು ತೀರ್ಮಾನಿಸಲಿಲ್ಲ. ತೀರ್ಮಾನಿಸುವ ಹಕ್ಕು ನಮಗಿಲ್ಲ. ಅದು ದೇವನ ಇಚ್ಚೆ. ಅವನ ತೀರ್ಮಾನ. ಧರ್ಮಗಳು ಯಾವುದೇ ಇರಲಿ ಮನುಷ್ಯ ಧರ್ಮ ಮೊದಲು. ಆದರೆ ಬರಬರುತ್ತಾ ಸ್ವಾರ್ಥ ರಾಜಕಾರಣಿಗಳ ಮಂಕು ಮರಳು ಮಾತಿಗೆ ಬಲಿಯಾದೆವು. ಹರಕೆಯ ಕುರಿಯಾದೆವು. ನೂರಾರು ಘಟನೆಗಳು ಪುನರಾವರ್ತಿಸಿಯೂ ನಾವು ಮರಳಿ ಮನುಷ್ಯ ಧರ್ಮದತ್ತ, ಮನುಜ ಮತದತ್ತ ಮರಳಲಿಲ್ಲ. ಮರಳಲಾರದಷ್ಟು ದೂರ ನಾವು ಸಾಗಿ ಆಗಿದೆ.. ಏನೇ ಇರಲಿ ನಿಮ್ಮ ಪ್ರೀತಿ, ಸಹಕಾರ, ಆರ್ಥಿಕ ಸಹಾಯ, ನಿಮ್ಮ ಮಮತೆ ಎಂದೂ ಮರೆಯಲಾಗದು.

ಅದರ ಋಣ ತೀರಿಸಲೂ ಆಗದು. ನೀವು ಜಾತಿ ಧರ್ಮವನ್ನು ನೋಡದೆ ಜತೆ ಜತೆಯಾಗಿ ಒಂದೇ ಮನೆಯ ಕುಟುಂಬವಾಗಿ ಬದುಕಿದ ದಿನಗಳು ಮುಂದೆ ಮರೀಚಿಕೆಯಷ್ಟೇ. ಮತ್ತೊಮ್ಮೆ ನೀನು ಇಲ್ಲಿಂದ ಹೋಗು ಎಂದರೆ ಮಾತನಾಡದೇ ಉಟ್ಟ ಉಡುಗೆಯಲ್ಲಿ ಹೋಗಲು ನಾನು ತಯಾರು… ಆದರೆ ಸ್ವಾರ್ಥ ರಾಜಕಾರಣಿಗಳು ಹೇಳಿದರೆ ಬದುಕಲಾಗದಿದ್ದರೆ ಸಾಯಲು ನಾನು ತಯಾರು. ಬೀತಿಯಿಲ್ಲ,ಭಯವಿಲ್ಲ, ದೇಶವೇನು ಒಂದು ದಿನ ದೇಹವನ್ನೇ ಬಿಟ್ಟು ಹೋಗುವವರು…

ಅಂದು ನಾವು ನೆಟ್ಟು ಪೋಷಿಸಿದ ಸೌಹಾರ್ದ ಗಿಡ ಇಂದು ಮರವಾಗಿದೆ. ಇಂದು ಕಟುಕರು ಮರದ ಬುಡವ ಕತ್ತರಿಸಲು ಬಂದಿದ್ದಾರೆ. ಹೃದಯ ತುಂಡಾಗಿದೆ. ಮನಸ್ಸು ಮಲಿನಲಾಗಿದೆ..

ಸಂಜೆ ಆದಾಗ ಕಡಲಲ್ಲಿ ರವಿ ಮರೆಯಾದಂತೆ ನಿಮಗಾಗಿ ನಿಮ್ಮ ನೆನಪಲ್ಲಿ ನಾನೂ ಮರೆಯಾಗುತ್ತೇನೆ. ಕಡಲ ತೆರೆ ಶಾಂತವಾಗಿ ಸದಾ ನರ್ತಿಸುತ್ತಿರಲಿ. ಕೋಮುವಾದದ ಸುನಾಮಿಯಲ್ಲಿ ದೇಶ ಬರ್ಬಾದ್ ಆಗದಿರಲಿ. ಇದೇ ನನ್ನ ಪ್ರಾರ್ಥನೆ, ಇದೇ ನನ್ನ ಹಾರೈಕೆ. ಕೊನೆಗೂ ಒಂದು ವಿನಂತಿ…. ನನ್ನದು ಎನ್ನುವ ದೇಶದಲ್ಲಿ ನನ್ನ ಪುಟ್ಟ ಅರಮನೆಯೊಂದಿದೆ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಬಡಬಗ್ಗರಿಗೆ, ಅಲೆಮಾರಿಗಳಿಗೆ, ರೋಡ್ ಸೈಡಲ್ಲಿ ಮಲಗುವವರಿಗೆ, ದರಿದ್ರರಿಗೆ ನೀಡಿಬಿಡಿ.

ಪ್ರೀತಿ ಸದಾ ಇರಲಿ.
ಜಲೀಲ್ ಮುಕ್ರಿ.

(ಜಲೀಲ್‌ ಮುಕ್ರಿಯವರ ಫೇಸ್‌ಬುಕ್‌ ಗೋಡೆಯಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...