“ಶಿವಸೇನೆ ನಮಗೆ ಸೇರಿದ್ದು” ಎಂದು ಹಕ್ಕು ಪ್ರತಿಪಾದಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಸಿಂಧೆ ಬಣವು, “ಶಾಸಕಾಂಗ ಪಕ್ಷವು ಅವಿಭಾಜ್ಯವಾಗಿದೆ ಮತ್ತು ರಾಜಕೀಯ ಪಕ್ಷದೊಂದಿಗೆ ಸಾವಯವವಾಗಿ ಸಂಪರ್ಕ ಹೊಂದಿದೆ” ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದೆ.
ಶಿಂಧೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್‌ಕೆ ಕೌಲ್, “ಪ್ರತಿಸ್ಪರ್ಧಿ ನಾಯಕರಿಗೆ ಸಚಿವ ಸಂಪುಟದಲ್ಲಿ ಇನ್ನು ನಂಬಿಕೆ ಇಲ್ಲ” ಎಂದು ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠಕ್ಕೆ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ.ಆರ್.ಷಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ವಿಷಯದ ಕುರಿತು ವಿಚಾರಣೆ ನಡೆಸುತ್ತಿದೆ.
ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ನರಸಿಂಹ ಅವರು ಶಿಂಧೆ ಬಣವನ್ನು ಪ್ರಶ್ನಿಸಿದ್ದು, “ರಾಜಕೀಯ ಬಹುಮತವಿದೆ ಎಂಬುದನ್ನು ತೋರಿಸಬೇಕೇ ಹೊರತು ಶಾಸಕಾಂಗದ ಬಹುಮತವಲ್ಲ” ಎಂದಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯಲ್ಲಿ ತಿಳಿಸುವುದಾಗಿ ಹಿರಿಯ ವಕೀಲ ಎನ್.ಕೆ.ಕೌಲ್ ಅವರು ನ್ಯಾಯಾಲಯಕ್ಕೆ ಉತ್ತರಿಸಿದ್ದಾರೆ.
ಹಲವು ತೀರ್ಪುಗಳ ಕಾನೂನು ದೃಷ್ಟಿಕೋನಗಳ ಕುರಿತು, ಪಕ್ಷಾಂತರ ಮತ್ತು ಬಹುಮತ ಸಾಬೀತನ್ನು ವಿಭಿನ್ನವಾಗಿ ಹೇಗೆ ನೋಡಬೇಕೆಂಬುದರ ಸಂಬಂಧ ಹಲವಾರು ಪ್ರಶ್ನೆಗಳನ್ನು ನ್ಯಾಯಾಲಯ ಶಿಂಧೆ ಬಣಕ್ಕೆ ಕೇಳಿದೆ.
ಸಿಜೆಐ ಚಂದ್ರಚೂಡ್ ಅವರು ಹತ್ತನೇ ಷಡ್ಯೂಲ್ ಉಲ್ಲಂಘನೆಯ ಪ್ರಸ್ತಾಪ ಮಾಡಿದ್ದಾರೆ. ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಅನುಮತಿಸದ ಪಕ್ಷಾಂತರವನ್ನು ಅವರು ಕಾನೂನುಬದ್ಧಗೊಳಿಸುತ್ತಿದ್ದಾರೆಯೇ ಎಂದು ತಿಳಿಯಲು ನ್ಯಾಯಾಲಯವು ಕೋರಿದೆ.
ವಕೀಲರು ಪ್ರತಿಕ್ರಿಯಿಸಿ, “ತಮ್ಮ ಪ್ರಕರಣವು ಹತ್ತನೇ ಶೆಡ್ಯೂಲ್ ಅಡಿಯಲ್ಲಿ ವಿಭಜನೆಯಾದ ಪ್ರಕರಣವಲ್ಲ, ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಪಕ್ಷದೊಳಗಿನ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ, ಪಕ್ಷವು ನಮ್ಮ ಬಣಕ್ಕೆ ಸೇರಿದೆ” ಎಂದು ಪ್ರತಿಪಾದಿಸಿದ್ದಾರೆ.
ಬಹುಮತ ಅಗತ್ಯಕ್ಕೆ ಸಂಬಂಧಿಸಿದ ಸಮಸ್ಯೆಯು ಪಕ್ಷಾಂತರ ಆರೋಪದೊಂದಿಗೆ ಥಳುಕು ಹಾಕಿಕೊಂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ಅನರ್ಹತೆಯ ಪ್ರಕ್ರಿಯೆಯೊಂದಿಗೆ ವಿಶ್ವಾಸ ಮತವೂ ಅಂತರ್ಗತವಾಗಿ ಸಂಬಂಧಿಸಿರುವುದರಿಂದ ಸಮಸ್ಯೆ ಉದ್ಭವಿಸುತ್ತದೆ ಎಂದಿದೆ.
ಇದು ಆಂತರಿಕ ಭಿನ್ನಾಭಿಪ್ರಾಯದ ಪ್ರಕರಣವಾಗಿದ್ದು, ಶಿಂಧೆ ಗುಂಪು ಶಿವಸೇನೆಯನ್ನು ಪ್ರತಿನಿಧಿಸುವ ಬಣವಾಗಿದೆ. ಇದನ್ನು ಭಾರತದ ಚುನಾವಣಾ ಆಯೋಗ ನಿರ್ಧರಿಸಬಹುದು ಎಂದು ಹಿರಿಯ ವಕೀಲ ಕೌಲ್ ಹೇಳಿದ್ದಾರೆ.
ಮುಖ್ಯಮಂತ್ರಿಗೆ ವಿಶ್ವಾಸವಿದೆಯೇ ಎಂಬ ವಿಷಯಕ್ಕೆ ಮಾತ್ರ ಬಹುಮತ ಸಾಬೀತು ವಿಚಾರ ಸಂಬಂಧಿಸಿದೆ ಎಂದು ಕೌಲ್ ವಾದಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯಿಂದ ಹಿಂದೆ ಸರಿಯುತ್ತಿರುವುದಾಗಿ ರಾಜಕೀಯ ಪಕ್ಷದ ಮುಖ್ಯಸ್ಥರು ರಾಜ್ಯಪಾಲರಿಗೆ ಮಾಹಿತಿ ನೀಡಿಲ್ಲ ಎಂದು ನ್ಯಾಯಾಲಯ ಪ್ರತಿಕ್ರಿಯಿಸಿದೆ.
“55ರಲ್ಲಿ 34 ಮಂದಿ ಈ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ” ಎಂದು ಕೌಲ್ ಉತ್ತರಿಸಿದ್ದಾರೆ.
ಈ ಹಿಂದೆ ಉದ್ಧವ್ ಠಾಕ್ರೆ ಬಣವು ಹತ್ತನೇ ಶೆಡ್ಯೂಲ್ ಪ್ರಕಾರ ಎದುರು ಪಾಳಯಕ್ಕೆ ಯಾವುದೇ ರಕ್ಷಣೆ ಇಲ್ಲ ಎಂದು ತಿಳಿಸಿತ್ತು.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಸ್ಪರ್ಧಿ ಬಣಗಳಾದ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಲ್ಲಿಸಿದ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ.


