ಶಕ್ತಿ, ಗೃಹಲಕ್ಷ್ಮಿ ಯೋಜನೆಗಳನ್ನು ಬಿಟ್ಟು ರಾಜ್ಯದ ಈ ವರ್ಷದ ಬಜೆಟ್‌ನಲ್ಲಿ ಮಹಿಳೆಯರಿಗೆಂದು ಯಾವುದೆ ಪಾಲನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಬುಧವಾರ ಹೇಳಿದರು. ಅವರು ‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಮಹಿಳಾ ಚಳವಳಿ ಆಗ್ರಹಗಳು’ ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಸಿದ್ದರಾಮಯ್ಯರ
“ಭೂಮಿ ಮಹಿಳೆಯರ ಹೆಸರಿನಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಮಹಿಳೆಯರನ್ನು ಅವಗಣನೆ ಮಾಡಲಾಗಿದೆ. ಸುಮಾರು 100 ಕ್ಕೆ 80% ಮಹಿಳೆಯರು ಸಾಲದ ಸುಳಿಯಲ್ಲಿ ಇದ್ದಾರೆ. ಮಹಿಳೆಯರು ಆಹಾರ, ಕೃಷಿ, ಆರೋಗ್ಯಕ್ಕೋಸ್ಕರ ಈ ಸಾಲ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಆಟಾಟೋಪಕ್ಕೆ ತಡೆ ನೀಡಿದ ಸರ್ಕಾರ, ಮಹಿಳೆಯರಿಗೆ ಯಾವುದೆ ಅನುದಾನ ನೀಡದೆ ಇದ್ದರೆ ಯಾವ ಲಾಭವಾಗಲಿದೆ? ಕೇವಲ ಗ್ಯಾರೆಂಟಿ ಯೋಜನೆಯನ್ನು ತೋರಿಸಿದರೆ ಸಾಕೆ?” ಎಂದು ಅವರು ಕೇಳಿದರು. ಸಿದ್ದರಾಮಯ್ಯರ
“ಸ್ತ್ರೀ ಶಕ್ತಿ ಸಂಘಗಳನ್ನು ಬಲಪಡಿಸಿ ಒಂದು ಗುಂಪಿಗೆ ಕನಿಷ್ಠ 10 ಲಕ್ಷ ಸಾಲವನ್ನು ನೀಡಿಬೇಕಿತ್ತು. ಅವರಿಗೆ ಸಾಲ ನೀಡಿ ಆಯಾ ಪ್ರದೇಶದಲ್ಲಿ ಸ್ವ-ಉದ್ಯೋಗ ಮಾಡುವ ತರಬೇತಿ ಕೊಟ್ಟು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಒದಗಿಸಿಕೊಡಬೇಕಿತ್ತು. ಆದರೆ ಸರ್ಕಾರ ಇದನ್ನು ಮಾಡಿಲ್ಲ. ಈ ಹಿಂದೆ ನಿರ್ಭಯ ಫಂಡ್ ಎಂದು ಅತ್ಯಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೋಸ್ಕರವೇ ಅನುದಾನವನ್ನು ಸರ್ಕಾರ ನೀಡುತ್ತಿತ್ತು. ಆದರೆ ಈಗ ಅದನ್ನು ನಿಲ್ಲಿಸಿದೆ.” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ವಿಧವೆ, ಪರಿತ್ಯಕ್ತ ಮತ್ತು ಮದುವೆ ಆಗದ ಮಳೆಯರಿಗೆ ಕೇವಲ 800 ರೂ.ಗಳನ್ನು ಮಾತ್ರ ಸರಕಾರ ನೀಡುತ್ತಿದೆ. ಈ ಹಣದಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ? ಈ ಬಗ್ಗೆ ಬಜೆಟ್‌ನಲ್ಲಿ ಯಾವುದೆ ಚರ್ಚೆ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಿಳಿಸಿದ್ದರೂ ಅವುಗಳ ಬಗ್ಗೆ ಅವರು ಬಜೆಟ್‌ನಲ್ಲಿ ಉಲ್ಲೇಖಿಸಿಲ್ಲ. ಸಾವಿರಾರು ಎಕರೆ ಭೂಮಿಯನ್ನು ಕಾರ್ಪೋರೇಟ್‌ಗಳಿಗೆ ನೀಡುವ ಸರ್ಕಾರ ಬಡವರು ನಿವೇಶನಕ್ಕಾಗಿ ಭೂಮಿ ಕೇಳಿದಾಗ ಭೂಮಿ ಇಲ್ಲ ಎಂದು ಹೇಳುತ್ತದೆ” ಎಂದು ಅವರು ಹೇಳಿದರು.
ಗರ್ಭಕೋಶದ ಕಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಅವರಿಗೆ ಯಾವುದೆ ಅನುದಾನವನ್ನು ಸರ್ಕಾರ ಬಜೆಟ್‌ನಲ್ಲಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಬಾಲ್ಯವಿವಾಹ, ಭ್ರೂಣ ಹತ್ಯೆ, ಮರ್ಯಾದಗೇಡು ಹತ್ಯೆ ನಡೆಯುತ್ತಿವೆ. ಹೆಣ್ಣು ಭ್ರೂಣ ಹತ್ಯೆಯಂತೂ ರಾಜ್ಯದಾದ್ಯಂತ ನಡೆಯುತ್ತಿವೆ. ಬಾಲ್ಯ ವಿವಾಹದಲ್ಲಿ ರಾಜಸ್ಥಾನದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇವುಗಳನ್ನು ಉದ್ದೇಶಿಸಿ ಬಜೆಟ್ ಮಂಡಿಸದ ಸರ್ಕಾರ, ಕೇವಲ ಶಕ್ತಿ ಮತ್ತು ಗೃಹ ಲಕ್ಷ್ಮಿ ಯೋಜನೆಯನ್ನು ಮಾತ್ರ ತೋರಿಸುತ್ತಿವೆ. ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಹಿಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲೆ ಮಹಿಳೆಯರು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕಾಣೆಯಾಗಿದ್ದಾರೆ” ಎಂದು ಅವರು ಹೇಳಿದರು.
ಕೇಂದ್ರದ ಹಣಕಾಸಿನ ಮಂತ್ರಿಯ ತಲೆಯಲ್ಲಿ ಸಗಣಿ, ಗಂಜಲ ಅಷ್ಟೆ ಇದೆ: ಹೋರಾಟಗಾರ್ತಿ ಗೌರಿ ಆಕ್ರೋಶ
ಮಹಿಳಾ ಮುನ್ನಡೆ ರಾಜ್ಯ ಸಮನ್ವಯಕಾರರಾದ ಗೌರಿ ಮಾತನಾಡಿ, “ತೊಗರಿಬೇಳೆಗೆ 18% ಜಿಎಸ್‌ಟಿ ಹಾಕುವ ಸರ್ಕಾರ ವಜ್ರಗಳಿಗೆ 1% ಜಿಎಸ್‌ಟಿ ಹಾಕುತ್ತಿದೆ. ಕೇಂದ್ರದ ಹಣಕಾಸಿನ ಮಂತ್ರಿಯ ತಲೆಯಲ್ಲಿ ಸಗಣಿ, ಗಂಜಲ ಅಷ್ಟೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ದಲಿತ, ಮಹಿಳೆ, ಟ್ರಾನ್ಸ್‌ಜೆಂಡರ್‌ಗಳ ಪರಿಸ್ಥಿತಿ ಕೆಟ್ಟದಾಗಿದೆ. ಬಜೆಟ್ ಪೂರ್ವ ಸಭೆಯಲ್ಲಿ ಮಹಿಳೆಯರನ್ನು ಕೆರೆದು ಅವರ ಆಗ್ರಹವನ್ನು ಕೇಳುತ್ತಿಲ್ಲ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಮುಂದಿಟ್ಟು ಮಹಿಳೆಯರು ಸರ್ವತೋಮುಖ ಅಭಿವೃದ್ಧಿ ಆಗಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ” ಎಂದು ಅವರು ಹೇಳಿದರು.
“ಸಾಂಸ್ಕೃತಿಕ ವಿಚಾರಗಳು ಮಹಿಳೆಯರನ್ನು ಅಲುಗಾಡಿಸುತ್ತಿವೆ. ಟಿವಿ ಸೀರಿಯಲ್‌ಗಳು ನಮ್ಮ ಸಮಾಜವನ್ನು ಹಾಳು ಮಾಡುತ್ತಿದ್ದು, ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯವನ್ನು ಪ್ರೋತ್ಸಾಹಿಸುತ್ತಿವೆ. ಬಲಾಢ್ಯರು ಮಹಿಳಾ ದೌರ್ಜನ್ಯ ಎಸಗಿದರೆ ಅದರಿಂದ ತಪ್ಪಿಸಿಕೊಳ್ಳಬಹುದು ಎಂದು ಸೌಜನ್ಯ ಪ್ರಕರಣ ಸಾಬೀತು ಮಾಡಿದೆ. ಇಂತಹ ದೊಡ್ಡವರನ್ನು ಯಾಕೆ ಸರ್ಕಾರ ಬಂಧಿಸಿಲ್ಲ ಎಂಬುವುದಕ್ಕೆ ಉತ್ತರ ಸಿಗಬೇಕಿದೆ” ಎಂದರು.
“ದೇವದಾಸಿಯರ ಮಕ್ಕಳು ತಮ್ಮ ತಂದೆಯ ಹೆಸರಿನ ಕಾಲಂನಲ್ಲಿ ಹೆಸರು ಹಾಕುವುದಿಲ್ಲ ಎಂಬ ಚಿಕ್ಕ ವಿಷಯಕ್ಕೂ ಈಗಲೂ ಹೋರಾಟ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ನೀಡುವ ಗ್ಯಾರೆಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ನೀಡುವ ಕಾರ್ಯಕ್ರಮಗಳ ಬಗ್ಗೆ ಕೂಡಾ ಸರ್ಕಾರ ಸಮರ್ಥನೆ ಮಾಡುತ್ತಿಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಹೆಣ್ಣು ಮಕ್ಕಳು ಇನ್ನೂ ಅತ್ಯಾಚಾರಕ್ಕೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ ನಾಗರೀಕ ಸಮಾಜ ಸಮಾಧಾನದಿಂದ ನಿದ್ದೆ ಮಾಡಲು ಸಾಧ್ಯವಿಲ್ಲ” ಎಂದು ಗೌರಿ ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೀಸಲಾತಿ ವಿಚಾರದಲ್ಲಿ ದಲಿತರನ್ನು ಗತಿಗೆಟ್ಟವರು ಎಂದು ಅವಮಾನಿಸಲಾಗುತ್ತಿದೆ: ಹೋರಾಟಗಾರ ಮಾವಳ್ಳಿ ಶಂಕರ್
ಮೀಸಲಾತಿ ವಿಚಾರದಲ್ಲಿ ದಲಿತರನ್ನು ಗತಿಗೆಟ್ಟವರು ಎಂದು ಅವಮಾನಿಸಲಾಗುತ್ತಿದೆ: ಹೋರಾಟಗಾರ ಮಾವಳ್ಳಿ ಶಂಕರ್

