ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಯತ್ನಾಳ್ ಶಾಸಕರಾಗಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸುವುದು ಬಿಜೆಪಿ ಮತ್ತು ಸಂಘಪರಿವಾರದ ಸಂಸ್ಕೃತಿಯಾಗಿದೆ. ಹಾಗಾಗಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಹಾಗಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವರಿಗೆ ಎಳ್ಳಷ್ಟು ಗೌರವವಿಲ್ಲ. ಇದೊಂದು ಷಡ್ಯಂತ್ರವಾಗಿದ್ದು, ಈ ಹೇಳಿಕೆಯ ಹಿಂದೆ ಬಿಜೆಪಿಯ ಹಲವು ನಾಯಕರ ಕುಮ್ಮಕ್ಕಿದೆ ಎಂಬ ಅನುಮಾನವಿದೆ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಜರುಗಿಸುವಂತೆ ಇಂದು ಮನವಿ ಮಾಡಿದ್ದೇವೆ. ರಾಜ್ಯಪಾಲರು ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯತ್ನಾಳ್‌ರಂತಹ ನಾಯಕರು ಇಂದಿನ ಸಮಾಜಕ್ಕೆ ಮಾದರಿಯಾಗಬಾರದು, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಬೇಕೆಂಬ ಸಂದೇಶ ಸಮಾಜಕ್ಕೆ ತಲುಪಬೇಕೆಂಬುದಷ್ಟೇ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.



ನಾವು ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ. ಸಂವಿಧಾನದ ಪರಿಚ್ಚೇದ 175ರಡಿ ತಪ್ಪು ಮಾಡಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಅಧಿಕಾರ ಇದೆ. ಅದನ್ನಷ್ಟೇ ಕೇಳಿಕೊಂಡಿದ್ದೇವೆ. ಈ ಬಗ್ಗೆ ತಪ್ಪು ಮಾಹಿತಿ ಬೇಡ. ನಮ್ಮ ಪ್ರತಿಭಟನೆಯನ್ನು ಬಳಸಿಕೊಂಡು ಜನವಿರೋಧಿಯಾಗಿರುವ ಕೆಲವು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ನಮ್ಮ ಧರಣಿ ವಾಪಸು ಪಡೆದು ಕಲಾಪದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಜೆಪಿ ಮೂಲತಃ ಸಂವಿಧಾನ ವಿರೋಧಿ ಪಕ್ಷ. ಏಕಪಕ್ಷೀಯ ಚರ್ಚೆಯ ನೆಪದಲ್ಲಿ ಸಂವಿಧಾನದ ಬಗ್ಗೆ ಅವರು ಸುಳ್ಳು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುವ ಸಾಧ್ಯತೆ ಇದೆ. ಈ ಕುತಂತ್ರವನ್ನು ವಿಫಲಗೊಳಿಸಲು ಚರ್ಚೆಯಲ್ಲಿ ಭಾಗವಹಿಸಲು ಧರಣಿ ವಾಪಸು ಪಡೆದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


