ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಮಾತುಗಳು ಈ ಕೆಳಗಿನಂತಿವೆ..
ಕನ್ನಡ ನಾಡು-ನುಡಿ ಬಗೆಗಿನ ಮಲತಾಯಿ ಧೋರಣೆಯಿಂದ ಕೇಂದ್ರ ಸರ್ಕಾರ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುತ್ತಿದೆ. ಹಿಂದಿ ಹೇರಿಕೆ, ನಾಡ ಧ್ವಜಕ್ಕೆ ಅಡ್ಡಗಾಲು, ನೆರೆಪರಿಹಾರದಲ್ಲಿ ನಿರ್ಲಕ್ಷ್ಯ…
ಕರ್ನಾಟಕದ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ಕನ್ನಡಿಗರ ಔದಾರ್ಯ ಮತ್ತು ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ.
ರಾಜ್ಯದಿಂದ ಇಪ್ಪತ್ತೈದು ಜನ ಸಂಸದರು ಆಯ್ಕೆಯಾಗಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದೇ ಸರ್ಕಾರವಿದೆ. ಹೀಗಿದ್ದರೂ ಐಬಿಪಿಎಸ್ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗದಿರುವುದು ಕನ್ನಡಿಗರಿಗೆ ಬಗೆದ ದ್ರೋಹ.
ಕನ್ನಡಿಗರು ಇದನ್ನು ಸಹಿಸರು. #IBPSmosa
ಕೇಂದ್ರ ಸರ್ಕಾರ ಮತ್ತೆ ಕರ್ನಾಟಕದ ಜನರಿಗೆ ಮೋಸ ಮಾಡಿದೆ. ನಿರ್ಮಲಾ ಸೀತಾರಾಮನ್ ಮತ್ತು ತೇಜಸ್ವಿ ಸೂರ್ಯ ಕೊಟ್ಟಿದ್ದ ಭರವಸೆಗೆ ಯಾವ ಅರ್ಥವೂ ಇಲ್ಲವಾಗಿದೆ.
ಹಿಂದಿ ಅಲ್ಲದ ಜನರಿಗೆ ಬ್ಯಾಂಕ್ ಉದ್ಯೋಗ ಸಿಗದಂತೆ ತಡೆಯುವ ಪಿತೂರಿ ಇದು. ಭಾಷಾ ವೈವಿಧ್ಯತೆಯ ಶಕ್ತಿಯ ಬಗ್ಗೆ ನಾವು ಬಿಜೆಪಿಗೆ ಪಾಠ ಕಲಿಸಬೇಕಾಗಿದೆ. ಬಿಜೆಪಿಯ ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ? ಹಿಂದಿಯ ಶ್ರೇಷ್ಠತೆಯ ಕಲ್ಪನೆಗೆ ಅವರು ನೀರೆರೆಯುತ್ತಿದ್ದಾರೆಯೇ? ನಾಚಿಕೆಗೇಡು!! ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


