ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಲವ್ ಜಾಸ್ತಿ. ಅವರು ನನ್ನ ವೆಲ್ ವಿಶರ್ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಹಿರಿಯರು. ಏನೋ ಒಂದಿಷ್ಟು ಸಲಹೆ ನೀಡಿರುತ್ತಾರೆ. ಅವರು ಹಾಗೆಲ್ಲಾ ಮಾತನಾಡೋಕೆ ಸಾಧ್ಯವಿಲ್ಲ. ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ. ಸಿದ್ದರಾಮಯ್ಯ ನನ್ನ ವೆಲ್ ವಿಶರ್ ಅಂತಾ ಹೇಳಿದ್ರು.
ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬಂದ ದಿನ ಹಲವು ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಈ ವೇಳೆ ಜೆಡಿಎಸ್ ಮುಖಂಡರು ಕೊಟ್ಟ ಜೆಡಿಎಸ್ ಬಾವುಟವನ್ನು ಡಿಕೆಶಿ ಹಿಡಿದಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಡಿಯೋ ಒಂದು ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ, ಸಿದ್ದರಾಮಯ್ಯ ಅವರು ನನ್ನ ವೆಲ್ ವಿಶರ್ ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್ ಸೇರಿದಂತೆ ಕೆಲವು ಆಪ್ತರ ಜತೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದರು. ಈ ವೇಳೆ ಡಿಕೆಶಿ ಅವರು ಜೆಡಿಎಸ್ ಬಾವುಟ ಹಿಡಿದು ಬಂದರೆ ಏನರ್ಥ ಎಂಬ ಮಾತು ಕೇಳಿ ಬಂದಿತು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ‘ನಾನು ಈಗಾಗಲೇ ಜೆಡಿಎಸ್ ಜತೆಗಿನ ಸಂಬಂಧ, ಮೈತ್ರಿ ಕಡಿದು ಹೋಗಿದೆ ಎಂದು ಘೋಷಿಸಿದ್ದೇನೆ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಸೋರಿಕೆಯಾಗಿತ್ತು.


