ಬೆಂಗಳೂರು: “ನಮ್ಮ ಭೂಮಿ ನಮ್ಮ ಹಕ್ಕು! ನಮ್ಮ ಭೂಮಿ ನಮ್ಮ ಹಕ್ಕು! ಎಲ್ಲಿಯತನಕ ಹೋರಾಟ? ಗೆಲ್ಲುವ ತನಕ ಹೋರಾಟ!” – ಫ್ರೀಡಂ ಪಾರ್ಕ್‌ನಲ್ಲಿ ಇಂದು (ಜುಲೈ 4) ನಡೆದ ‘ನಾಡ ಉಳಿಸಿ ಸಮಾವೇಶ’ದ ವೇದಿಕೆಯಲ್ಲಿ ಮೊಳಗಿದ ಈ ಘೋಷಣೆಗಳು, ನೆರೆದಿದ್ದ ನೂರಾರು ಹೋರಾಟಗಾರರಲ್ಲಿ ರೋಮಾಂಚನ ಮೂಡಿಸಿತು. ಚನ್ನರಾಯಪಟ್ಟಣ ಭೂಸ್ವಾಧೀನ ವ್ಯಾಪ್ತಿಯ ರೈತ ಮಹಿಳೆ ಲಕ್ಷ್ಮಮ್ಮ ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಈ ನುಡಿಗಳು, ಅವರ ಹೋರಾಟದ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದ್ದವು.
“ನಾನು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದ ಲಕ್ಷ್ಮಮ್ಮ. ಈಗ ನಾವು ಹೋರಾಟ ಮಾಡುತ್ತಾ ಇದ್ದು 1188 ದಿನ ಆಗೈತೆ, ನಾವು ಬೇಕಾದಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಸರಕಾರಕ್ಕೆ ಕಣ್ಣೂ ಕಾಣ್ಸೋಲ್ಲ, ಕಿವಿನೂ ಕೇಳ್ಸೋಲ್ಲ, ಏನೂ ಕಾಣ್ಸೋಲ್ಲ. ನಾವು ಪಟ್ಟ ಕಷ್ಟ ಯಾವ ರೈತರಿಗೂ ಬರಬಾರದು,” ಎಂದು ತಮ್ಮ ಗ್ರಾಮೀಣ ಶೈಲಿಯಲ್ಲೇ ನೋವನ್ನು ಹಂಚಿಕೊಂಡರು.
‘ಕಂಪ್ಯೂಟರ್ ತಿಂದು ಬದುಕುತ್ತೀರಾ? ಅನ್ನ ಕೊಡೋದು ರೈತರು!’ “ನಾವು ರೈತರು ಹೂವು ಬೆಳೆಯುತ್ತೇವೆ, ಹಾಲು ಕರೆಯುತ್ತೇವೆ, ತರಕಾರಿ ಬೆಳೆಯುತ್ತೀವಿ, ಹಣ್ಣುಹಂಪಲ, ದ್ರಾಕ್ಷಿ ಬೆಳೆಯುತ್ತೇವೆ. ಹೀಗೆ ಎಲ್ಲ ಬೆಳೆದು ಬೆಂಗಳೂರಿಗೆ ಕಳುಹಿಸುತ್ತೇವೆ. ಇವರು ಅದನ್ನು ಅರ್ಥಮಾಡಿಕೊಳ್ಳಬೇಕು! ಕಂಪ್ಯೂಟರ್ ಮುಂದೆ ಕುಳಿತುಕೊಂಡರೆ ಏನು ಬೆಳೆವುದಕ್ಕೆ ಸಾಧ್ಯ? ಬೆಂಗಳೂರು ಜನ ಏನು ತಿಂತಾರೆ? ಇವರೆನೂ ಕಂಪ್ಯೂಟರ್ ಕೊಟ್ಟ ಆಹಾರ ತಿಂತಾರ? ರೈತರು ಕೊಟ್ಟ ಆಹಾರನಲ್ಲವಾ ಇವರು ತಿನ್ನೋದು! ಅದಕ್ಕೆ ಸರಕಾರ ರೈತರ ಪರ ಇರಬೇಕು ಅಂತ ನಾವು ಹೇಳುತ್ತಾ ಇದ್ದೇವೆ,” ಎಂದು ಲಕ್ಷ್ಮಮ್ಮ ಸರಕಾರಕ್ಕೆ ತೀಕ್ಷ್ಣ ಪ್ರಶ್ನೆಗಳನ್ನು ಎಸೆದರು.
‘ಅನ್ನರಾಮಯ್ಯ’ನವರೇ, ನಮಗೆ ಭೂಮಿ ಉಳಿಸಿ! ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು “ನಾವೆಲ್ಲಾ ಅನ್ನರಾಮಯ್ಯ ಎಂದು ಕರೆಯುತ್ತೇವಿ. ಅವರು ಬಡವರಿಗೆ ಅಕ್ಕಿ ಕೊಟ್ರೂ, ಬಡವರೆಲ್ಲಾ ಊಟ ತಿಂದ್ರೂ, ಗಂಜಿ ಕೊಟ್ರೂ ಒಳ್ಳೆಯ ಕೆಲಸ ಮಾಡಿದ್ರೂ. ಇವಾಗಲೂ ಹಾಗೆಯೇ ನಮಗೆ ನಮ್ಮ ಭೂಮಿ ಕೊಟ್ರೆ ನಮ್ಮ ರೈತರಿಗೆ ಒಂದು ಒಳ್ಳೆಯ ಕೆಲಸ ಅಂತ ಆಗುತ್ತದೆ. ನಾವು ಜಮೀನಿನಲ್ಲಿ ಬೆಳೆ ಬೆಳೆದು ನಾಲ್ಕು ಜನಕ್ಕೆ ಊಟ ಹಾಕುತ್ತೇವೆ. ಎಷ್ಟು ಜನ ಬಂದ್ರೂ ಊಟ ಹಾಕುವ ಸಾಮರ್ಥ್ಯ ನಮಗೆ ಇದೆ. ನಾವು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ. ಭೂಮಿ ತಾಯಿ ನಮಗೆ ತಾಯಿ ಇದ್ದಂಗೆ. ನಾವು ಭೂಮಿಯೊಳಗೆ ಬೆಳೆದು ತಿನ್ನುವ ರೈತರು. ಬಿಸಿಲು, ಚಳಿ ಎನ್ನದೆ ನಾವು ದುಡಿಯುತ್ತೇವೆ, 10 ಜನಕ್ಕೆ ಊಟ ಹಾಕುತ್ತೇವೆ,” ಎಂದು ತಮ್ಮ ಬದುಕಿನ ಆಧಾರವನ್ನು ವಿವರಿಸಿದರು.
“ಏನಾದ್ರೂ ಮಾಡಿ ನಮ್ಮ ಭೂಮಿಯನ್ನು ನಮಗೆ ಉಳಿಸಿ ಕೊಡಬೇಕು ಸಿದ್ದರಾಮಣ್ಣೊವ್ರೇ. ನಾವು ಜನಕ್ಕೆ ಊಟ ಹಾಕುತ್ತಿದ್ದೇವೆ. ನಮ್ಮ ಭೂಮಿ ತಂಟೆಗೆ ಬರಬೇಡಿ,” ಎಂದು ಲಕ್ಷ್ಮಮ್ಮ ಸಭೆಯಲ್ಲಿ ಗುಡುಗಿದರು. ಅವರ ಈ ಮಾತುಗಳು ರೈತ ಸಮುದಾಯದ ಅಸಹಾಯಕತೆ ಮತ್ತು ದೃಢ ನಿಲುವನ್ನು ಏಕಕಾಲಕ್ಕೆ ಪ್ರತಿಬಿಂಬಿಸಿದವು.
‘ನಾಡ ಉಳಿಸಿ ಸಮಾವೇಶ’: ದೇವನಹಳ್ಳಿ ರೈತರ ಭೂಮಿಗೆ ಕೈ ಹಾಕಿದರೆ ಸರಕಾರಕ್ಕೆ ಗಂಡಾಂತರ – ಬಡಗಲಪುರ ನಾಗೇಂದ್ರ ಎಚ್ಚರಿಕೆ!


