ಬಜರಂಗದಳ ಮುಖಂಡನಿಂದ ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ದಿನೇಶ್ ಕನ್ಯಾಡಿ ಅವರ ಮನೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತ್ವಾನ ಹೇಳಿದ್ದಾರೆ.
ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂ.ಗಳನ್ನು ಮೃತನ ಕುಟುಂಬದವರಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಜರಿದ್ದರು.
ಪ್ರಕರಣದ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಅವರು, ಧರ್ಮಸ್ಥಳದಲ್ಲಿ ದಿನೇಶ್ ಎಂಬ ದಲಿತ ಯುವಕನನ್ನು ಹತ್ಯೆಗೈದ ಬಜರಂಗದಳ ಮುಖಂಡನನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದರು. ಈ ಕೂಡಲೇ ದಲಿತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು, “ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಬಜರಂಗದಳದ ನಾಯಕನಾಗಿರುವ ಕಾರಣಕ್ಕೆ ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯದೆ ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದ್ದರು.
“ಹಿಂದೂಗಳ ರಕ್ಷಣೆಯ ಮಂತ್ರ ಜಪಿಸುತ್ತಿರುವ ಬಿಜೆಪಿಯು ಧರ್ಮಸ್ಥಳದ ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾವಿನ ರಾಜಕೀಯ ಮಾಡಲು ಹೋಗದೆ ಮೃತಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದರು.
ಫೆಬ್ರವರಿ 23 ರಂದು ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಕನ್ಯಾಡಿಯ ಕೃಷ್ಣ ಎಂಬ ಬಜರಂಗದಳದ ಮುಖಂಡ ಅದೇ ಗ್ರಾಮದ ದಿನೇಶ್ ಎಂಬ ದಲಿತ ಯುವಕನ ಮೇಲೆ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿದ್ದನು. ಆ ದೃಶ್ಯಗಳು ಸಿಸಿಕ್ಯಾಮೆರಾದಲ್ಲಿ ದಾಖಲಾಗಿದ್ದು, 45 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆನಂತರ ಫೆಬ್ರವರಿ 24 ರಂದು ಆಸ್ಪತ್ರೆಗೆ ಸೇರಿಸಲಾಯಿತಾದರೂ ಫೆಬ್ರವರಿ 25 ರಂದು ದಿನೇಶ್ ಸಾವನಪ್ಪಿದ್ದರು.
ಈ ಕುರಿತು ಮೃತನ ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆ, ಕೊಲೆ ಪ್ರಕರಣ ದಾಖಲಾಗಿತ್ತು.

ವಿವಿಧ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿ
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ “ಯುವಕರ ನಡೆ ಸಾಮರಸ್ಯದ ಕಡೆ” ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಸಂವಿಧಾನದ ಮೂಲ ಆಶಯವಾದ ಸೌಹಾರ್ದಯುತ, ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ಸದಾ ಬದ್ಧವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಭೂ ಸುಧಾರಣೆ ಕಾಯಿದೆ ಜಾರಿಯಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ ಹಿರಿಯಡಕದಲ್ಲಿ ಇಂದು ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮೊಯಿದ್ದೀನ್ ಬಾವಾ, ಐವಾನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಹಾಜರಿದ್ದರು.
ಇದನ್ನೂ ಓದಿರಿ: ದಲಿತ ಯುವತಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್


