ರೈತರು ಬೆಳೆದ ಜೋಳವನ್ನು ಸಂಪೂರ್ಣವಾಗಿ ಸರ್ಕಾರ ಖರೀದಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು, ಜೋಳ ಬೆಳೆಗಾರರ ಒಕ್ಕೂಟ ಹಾಗೂ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಸಿಂಧನೂರು ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕಳೆದ ಮೂರು ದಿನಗಳಿಂದ ಮಿನಿವಿಧಾನಸೌಧದ ಆವರಣದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವು ಸೋಮವಾರ ‘ಸಿಂಧನೂರು ಬಂದ್’ ಚಳವಳಿಯಾಗಿ ಮಾರ್ಪಟ್ಟಿತು. ಬೆಳಿಗ್ಗೆ 9 ಗಂಟೆಗೆ ರೈತ ಹಾಗೂ ಕ್ರಾಂತಿ ಗೀತೆಗಳೊಂದಿಗೆ ಆರಂಭಗೊಂಡ ಪ್ರತಿಭಟನೆಗೆ ಪ್ರಗತಿಪರ, ದಲಿತಪರ, ಕನ್ನಡಪರ, ಮಹಿಳಾಪರ ಸಂಘಟನೆಗಳ ಒಕ್ಕೂಟ, ಎಪಿಎಂಸಿ ವರ್ತಕರು, ಕಮ್ಯುನಿಸ್ಟ್ ಪಕ್ಷಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು.
ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ರಾಮನಗೌಡ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಕೋರ್ಟ್‌ನಿಂದಲೇ ಮೆರವಣಿಗೆ ಮೂಲಕ ಬಂದು ಧರಣಿಗೆ ಬೆಂಬಲ ಘೋಷಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ 13,175 ರೈತರಿಂದ ಸುಮಾರು 1.02 ಲಕ್ಷ ಟನ್ ಜೋಳ ಖರೀದಿಸಲು ಈಗಾಗಲೇ ನೊಂದಾಯಿಸಲಾಗಿದೆ. ಆದರೆ ಖರೀದಿ ಪ್ರಕ್ರಿಯೆ ಏಕಾಏಕಿ ನಿಲ್ಲಿಸಿರುವುದು ಖಂಡನೀಯ. ಜೋಳವನ್ನು ಬೆಳೆದು ನಾಲ್ಕು ತಿಂಗಳಾದರೂ ಸರ್ಕಾರ ಇನ್ನೂ ಖರೀದಿ ಮಾಡಿಲ್ಲ. ಈ ನಡುವೆ ಮುಂಗಾರು ಬಿತ್ತನೆ ಪ್ರಕ್ರಿಯೆ ಶುರುವಾಗಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಮಾಡಿದ ಸಾಲದ ಮರುಪಾವತಿಗೆ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಕೊಡುತ್ತಿದ್ದು, ಇದರಿಂದ ರೈತರಿಗೆ ಕಷ್ಟವಾಗಿದೆ. ಆದ್ದರಿಂದ ಜೂ.4ರ ಸಂಜೆಯೊಳಗೆ ಸರ್ಕಾರ ಜೋಳವನ್ನು ಖರೀದಿಸುವ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ರೈತರು ದಂಗೆ ಏಳುವುದು ಖಚಿತವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳ ಹಠಮಾರಿ ಧೋರಣೆ ಮತ್ತು ಅವೈಜ್ಞಾನಿಕ ಮಾನದಂಡಗಳಿಂದ ಸಿಂಧನೂರು, ಮಾನ್ವಿ ತಾಲೂಕು ಸೇರಿದಮತೆ ಜಿಲ್ಲೆಯ ಸಾವಿರಾರು ರೈತರು ಬೆಳೆದ ಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲಾಗದೆ ಕಳೆದ ನಾಲ್ಕು ತಿಂಗಳಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಖರೀದಿಯ ಮೂಲಕ 1.30 ಲಕ್ಷ ಟನ್ ಜೋಳ ಖರೀದಿಸಲು 18446 ರೈತರು ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1 ಲಕ್ಷ ಟನ್ ಖರೀದಿಸಿ, ಉಳಿದಂತೆ ಎಕರೆಗೆ 10 ಕ್ವಿಂಟಲ್ ನಿಗದಿಗೊಳಿಸಿದ್ದರಿಂದ 4,100 ಸಣ್ಣ, ಅತಿಸಣ್ಣ ರೈತರಿಗೆ ಅನ್ಯಾಯವಾಗಿದೆ. ಹಾಗಾಗಿ ಎಕರೆಗೆ 20 ಕ್ವಿಂಟಲ್‌ನಂತೆ ಉಳಿದ ಎಲ್ಲ ಜೋಳವನ್ನು ತಕ್ಷಣ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಆಗ್ರಹಿಸಿದರು.

ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ್ ಮಾತನಾಡಿ, ಜೋಳ ಖರೀದಿಸಿದ ವಾರದ ಒಳಗಾಗಿ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕು. ಪ್ರತಿವರ್ಷ ಬೆಂಬಲ ಬೆಲೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ರಾಶಿ ಮಾಡುವ ಮುಂಚಿತವಾಗಿಯೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಜೋಳ ಮಾರಾಟ ವಿಳಂಬ ಆಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ವಸೂಲಾತಿಗೆ ನೋಟಿಸ್ ಕಳುಹಿಸದಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಆಧಾರದಲ್ಲಿ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಯ ನಿಗದಿಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್, ಗ್ರಾಮೀಣ ಕೃಷಿಕೂಲಿಕಾರರ ಸಂಘದ ಸಂಚಾಲಕಿ ವಿರುಪಮ್ಮ ಉದ್ಬಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ರೈತ ಮುಖಂಡರಾದ ಬಸವರಾಜ ಹಂಚಿನಾಳ, ನಾಗನಗೌಡ ಪೋತ್ನಾಳ ಮಾತನಾಡಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ರೈತರು ಮತ್ತು ಇತರರು ಭಾಗವಹಿಸಿದ್ದರು.
ಹಾವೇರಿ | ಹೆಚ್ಚುವರಿ ಶಾಲಾ ಕೊಠಡಿ ಕೇಳಿದ್ದ ಶಿಕ್ಷಕನ ಅಮಾನತು ವಿರೋಧಿಸಿ ಪ್ರತಿಭಟನೆ


