ಕ್ಯಾಮೆರಾ ಎಲ್ಲಿ ಇಡಬೇಕು?’
‘ಝೂಮ್ ಮಾಡಬೇಕಾ ಅಥವಾ ಡಾಲಿ ಮಾಡಬೇಕಾ?’
‘ಯಾವ ಲೆನ್ಸ್ ಹಾಕಬೇಕು?’
‘ಡೆಪ್ತ್ ಆಫ್ ಫೀಲ್ಡ್ ಎಷ್ಟಿರಬೇಕು?’
‘ಸಬ್ಜೆಕ್ಟ್ ಮೂವ್ ಮಾಡ್ತಿಲ್ಲ, ಸ್ಟ್ಯಾಟಿಕ್ ತಗೋಬೇಕಾ ಅಥವಾ ಟ್ರಾಲಿ ಬಳಸೋದಾ?’
‘ಒಂದು ಮಾಸ್ಟರ್ ಆಯ್ತಲ್ಲ, ಈಗ ಎಲ್ಲಾರದೂ ಒಂದೊಂದು ಕ್ಲೋಸ್ ಅಪ್ ತೊಗೊಂಡ್ರೆ ಸಾಕಲ್ವಾ?’
‘ಫಿಲ್ಟರ್ ಯಾವುದು ಹಾಕಬೇಕು? ಸೀರಿಯಸ್ ದೃಶ್ಯ, ಕೆಂಪು ಹಾಕುವಾ?’
ಹೀಗೆ ಹತ್ತಾರು ಪ್ರಶ್ನೆಗಳು ಚಿತ್ರ ನಿರ್ದೇಶನ ಮಾಡುವಾಗ ಕೊರೆಯುತ್ತವೆ. “ಇವುಗಳೆಲ್ಲ ತಾಂತ್ರಿಕ ಪ್ರಶ್ನೆಗಳು, ಡಿಓಪಿ ಇವನ್ನೆಲ್ಲಾ ನೋಡಿಕೊಳ್ಳುತ್ತಾನೆ. ಒಳ್ಳೇ ಡಿಓಪಿ ಇದ್ರೆ ಸಾಕು. ನಿರ್ದೇಶಕ ಕಲಾತ್ಮಕ ಅಂಶಗಳ ಮೇಲೆ ಕಾನ್ಸಂಟ್ರೇಟ್ ಮಾಡಿದರೆ ಸಾಕು, ಕಲೆಯ ಅಭಿವ್ಯಕ್ತಿಗೆ ತಾಂತ್ರಿಕತೆ ಅಡ್ಡಿಯಾಗಬಾರದು” ಹೌದಾ?
ಒಂದು ಚಿತ್ರ ರಚಿಸುವಲ್ಲಿ ತಾಂತ್ರಿಕ ಅಂಶಗಳೇ ಅಡ್ಡಿಯಾಗಬಲ್ಲವೇ? ಕೆಲವೊಂದು ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಎದ್ದುಕಾಣುತ್ತವೆ. ಕೆಲವು ಚಿತ್ರಗಳಲ್ಲಿ ಕಂಡುಬರುವ ತಾಂತ್ರಿಕ ದೋಷಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ, ಆ ಚಿತ್ರ ಇಷ್ಟವಾದರೆ ಅವುಗಳನ್ನು ಕ್ಷಮಿಸಲಾಗುತ್ತದೆ. ಆದರೆ, ಚಿತ್ರ ನಿರ್ದೇಶಕರಿಗೆ ತಾಂತ್ರಿಕ ಅಂಶಗಳು ಎಂದಿಗೂ ಅಡ್ಡಿಯಾಗಲಾರವು. ಚಲನಚಿತ್ರ ರಚಿಸುವುದು ಕಲೆಯ ಇತರ ಕಲೆಯ ಮಾಧ್ಯಮಗಳಂತೆ ನಮ್ಮ ಭಾವನೆಗಳ, ಕಥೆಗಳ, ಜೀವನದ ಮತ್ತು ಈ ಜಗತ್ತಿನ ಪ್ರಶ್ನೆಗಳ ಹುಡುಕಾಟ ಹಾಗೂ ಅದರ ಅಭಿವ್ಯಕ್ತಿಯ ಮಾಧ್ಯಮವೆಷ್ಟೋ, ಅಷ್ಟೇ ಸಂಕೀರ್ಣ ತಾಂತ್ರಿಕತೆಯ ಮಾಧ್ಯಮವೂ ಹೌದು. ತಾಂತ್ರಿಕತೆಯನ್ನು ಅಭಿವ್ಯಕ್ತಿಯಲ್ಲಿ ಅಡ್ಡಿ ಎಂದು ಭಾವಿಸುವುದು ಅಥವಾ ಅದನ್ನು ಕಡೆಗಣಿಸುವುದು ಒಬ್ಬ ಕಲಾವಿದ ತನ್ನ ಕುಂಚ ತನ್ನ ಕ್ಯಾನ್ವಾಸ್‍ನ್ನು ತಾನು ಬಿಡಿಸಬಯಸುವ ಚಿತ್ರಕ್ಕೆ ಅಡ್ಡಿ ಎಂದಹಾಗೆ. ಬರಹಗಾರನಿಗೆ ತನ್ನ ಭಾಷೆ ಮತ್ತು ಪದಗಳೇ ಅಡ್ಡಿಯಾದ ಹಾಗೆ.
ಸಿನೆಮಾ ಎಂದರೆ ಕತೆ ಹೇಳುವ ಮಾಧ್ಯಮ ಎಂದು ನಾವೀಗಾಗಲೇ ತಿಳಿದಿದ್ದೇವೆ; ಸಿನೆಮಾದ ಕಥೆ ಎಂದರೆ ಅದಕ್ಕೆ ತನ್ನದೇ ಆದ ಮಿತಿಗಳಿರುತ್ತವೆ ಹಾಗೂ ಅ ಮಿತಿಗಳನ್ನೇ ಚಿತ್ರದ ಸಾಮಥ್ರ್ಯಗಳೆಂದೂ ಪರಿಗಣಿಸಬಹುದಾಗಿದೆ. ಈ ವಿಷಯದ ಬಗ್ಗೆ ಮುಂಚೆ ಬರೆಯಲಾಗಿದೆ ಹಾಗಾಗಿ ಅದನ್ನು ವಿಸ್ತರಿಸುತ್ತಿಲ್ಲ.
ತಾಂತ್ರಿಕವಾಗಿ ಗಟ್ಟಿಯಾಗಿರುವ ಚಿತ್ರ ಎಂದರೆ ಹಾಲಿವುಡ್‍ನ ಸಾಹಸ ಚಿತ್ರಗಳಲ್ಲ, ಹೆಲಿಕಾಪ್ಟರ್‍ನಿಂದ ತೆಗೆದ ಶಾಟ್‍ಗಳಲ್ಲ, ಪರ್ವತದ, ಅನ್ಯಗ್ರಹಗಳ ಅದ್ಭುತ ಶಾಟ್‍ಗಳನ್ನು ಹೊಂದಿದ ಚಿತ್ರವಲ್ಲ, ಚಾಣಾಕ್ಷತೆಯಿಂದ ಮಾಡಿದ ಸಂಕಲನವಲ್ಲ. ಒಂದು ಸರಳವಾದ ದೃಶ್ಯವನ್ನು ಅಷ್ಟೇ ಸರಳವಾಗಿ ಪರದೆಯ ಮೇಲೆ ತೋರಿಸಿದರೂ ಅದನ್ನು ತಾಂತ್ರಿಕವಾಗಿ ಗಟ್ಟಿಯಾಗಿರುವ ದೃಶ್ಯ ಎನ್ನಬಹುದು.
ತಾಂತ್ರಿಕವಾಗಿ ಗಟ್ಟಿಯಾಗಿರುವ ನಾವೆಲ್ಲರೂ ನೋಡಿದ ಒಂದು ಕನ್ನಡ ಚಿತ್ರವನ್ನು ಹೆಸರಿಸಬೇಕಾದರೆ, ನನಗೆ ಮೊದಲು ಹೊಳೆಯುವುದು ರಾಮ್ ರೆಡ್ಡಿ ನಿರ್ದೇಶಿಸಿದ ‘ತಿಥಿ’. ಹೌದು, ತಾಂತ್ರಿಕವಾಗಿಯೂ ಅದೊಂದು ಅದ್ಭುತ ಚಿತ್ರ. ಆ ಚಿತ್ರದಲ್ಲಿ ಅದ್ಭುತ ಎನ್ನಿಸಬಹುದಾದ ಯಾವುದೇ ಶಾಟ್‍ಗಳಿಲ್ಲ; ಸಾಹಸ ದೃಶ್ಯಗಳಿಲ್ಲ, ಹಳ್ಳಿಗಾಡಿನ, ಪರಿಸರದ, ನದಿ ಬೆಟ್ಟದ ಮನಮೋಹಕ ಚಿತ್ರಣಗಳಿಲ್ಲ. ಚಿತ್ರದಲ್ಲಿ ಅದ್ಭುತವಾದ ಕ್ಯಾಮೆರಾ ಮೂವ್‍ಮೆಂಟ್‍ಗಳೂ ಕಾಣಿಸಿಕೊಳ್ಳುವುದಿಲ್ಲ ಆದರೂ ಅದೊಂದು ತಾಂತ್ರಿಕವಾಗಿ ಅದ್ಭುತ ಚಿತ್ರ. ತನ್ನ ಕಥೆಯನ್ನು ಹೇಳಲು ಏನು ಬೇಕಾಗುತ್ತದೆಯೋ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಆ ಚಿತ್ರ ನೋಡುವಾಗ ನೋಡುಗರು ಅದರಲ್ಲಿ ಬರುವ ಪಾತ್ರಗಳು, ಆಯಾ ಪಾತ್ರಗಳ ತೊಳಲಾಟ, ಕಥೆಯಲ್ಲಿ ಮುಂದೇನಾಗುತ್ತದೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು ಕ್ಯಾಮರಾ ಚಳಕದ ಕಡೆ ಅಲ್ಲ.
ಆದರೆ ಅದು ಸುಮ್ಮನೇ ಆಗಿದ್ದಲ್ಲ. ಪ್ರತಿಯೊಂದು ದೃಶ್ಯಕ್ಕೂ ಅದರ ತಿರುಳು ಅಥವಾ ಆತ್ಮ ಎಂಬುದೊಂದಿರುತ್ತದೆ. ಆ ತಿರುಳು ಅಥವಾ ಆತ್ಮವನ್ನು ಸಮರ್ಪಕವಾಗಿ ಸೆರೆ ಹಿಡಿಯಬೇಕೆಂದರೆ, ಯಾವ ಲೆನ್ಸ್ ಬಳಸಬೇಕು, ಫಿಲ್ಟರ್ ಬಳಸಬೇಕಾ, ಫೋಕಸ್ ಯಾರ ಮೇಲಿರಬೇಕು, ಆ ಒಂದು ದೃಶ್ಯಕ್ಕೆ ಎಷ್ಟು ಮತ್ತು ಯಾವ್ಯಾವ ಶಾಟ್ ತೆಗೆದುಕೊಳ್ಳಬೇಕು, ಆಯಾ ಶಾಟ್‍ನಲ್ಲಿ ಕ್ಯಾಮರ ಚಲಿಸಬೇಕೇ ಅಥವಾ ಒಂದೇ ಕಡೆ ಇರಬೇಕೇ ಎನ್ನುವ ಹಲವಾರು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಆಗ ಮಾತ್ರ ಆ ದೃಶ್ಯದ ಜೀವವು, ನಿರ್ದೇಶಕನು ಬಯಸಿದಂತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬರಹಗಾರರಿಗೆ ತನ್ನ ಭಾಷೆ, ಗಾಯಕನಿಗೆ ತನ್ನ ಕಂಠವು, ನಟನಿಗೆ ತನ್ನ ಇಡೀ ದೇಹ ತಾನು ಹೇಳುವುದನ್ನು ಮುಟ್ಟಿಸುವ ಸಾಧನವಾದ ಹಾಗೆ ಚಲನಚಿತ್ರ ನಿರ್ದೇಶಕರಿಗೆ ಸಿನೆಮಾದ ತಾಂತ್ರಿಕತೆಯೇ ಸಾಧನ. ಸಿನೆಮಾ ಮಾಧ್ಯಮವು ಸಂಕೀರ್ಣವೆನಿಸುವುದು ಇದೇ ಕಾರಣಕ್ಕಾಗಿ. ಸ್ಟೀವನ್ ಸ್ಪೀಲ್‍ಬರ್ಗ್‍ನಿಂದ ಹಿಡಿದು ವಿಶ್ವದ ಬಹುತೇಕ ನಿರ್ದೇಶಕರು, ತಮ್ಮ ಚಿಕ್ಕವಯಸ್ಸಿನಿಂದಲೇ ಕ್ಯಾಮೆರ ಜೊತೆಗೆ ಆಟವಾಡಿದರು; ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದರು, ಕ್ಯಾಮರಾದ, ಚಿತ್ರ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಕಂಡು ಬೆರಗುಗೊಂಡರು. ಅವರಲ್ಲಿ ಹೆಚ್ಚಿನವು ತಾವು ಹೇಳಬಯಸಬಹುದಾದ ಕಥೆಗಳಿಗಿಂತಲೂ ಕ್ಯಾಮರ ಸೃಷ್ಟಿಸುವ ಮ್ಯಾಜಿಕ್ ಅನ್ನು ಪ್ರೀತಿಸಿದವರು. ಹಾಗಾಗಿಯೇ ಅವರ ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಕೇವಲ ತಾಂತ್ರಿಕ ಶ್ರೇಷ್ಠತೆಯೂ ಕಾಣಿಸಿಕೊಳ್ಳುವುದಿಲ್ಲ.
ಚಿತ್ರ ನಿರ್ದೇಶನಕ್ಕೆ ಕ್ಯಾಮರ ಚಳಕ ಮಾತ್ರ ತಾಂತ್ರಿಕ ಅಂಶವಲ್ಲ. ಅದರೊಂದಿಗೆ ಚಿತ್ರದ ಕಲಾ ನಿರ್ದೇಶನ (ಆರ್ಟ್ ಡೈರೆಕ್ಷನ್), ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್ಸ್ ಮುಂತಾದ ಹಲವಾರು ತಾಂತ್ರಿಕ ಅಂಶಗಳಿರುತ್ತವೆ. ಅವೆಲ್ಲವೂ ಆ ಚಿತ್ರದ ಜೀವಕ್ಕೆ, ಆಯಾ ದೃಶ್ಯದ ಜೀವಕ್ಕೆ ಹೇಗೆ ಪೂರಕವಾಗಿಸಬಹುದು ಮತ್ತು ಅವುಗಳೇ ದೃಶ್ಯದ ಜೀವವನ್ನು ಮೀರಿ ನೋಡುಗರು ಆ ತಾಂತ್ರಿಕ ಅಂಶಗಳನ್ನೇ ಮೆಚ್ಚಬಹುದಾದ ಸನ್ನಿವೇಶ ಹೇಗೆ ತಡೆಯಬೇಕು ಎನ್ನುವುದನ್ನೂ ಆಯಾ ವಿಭಾಗಗಳ ತಾಂತ್ರಿಕತೆಯನ್ನು ಅಭ್ಯಸಿಸಿದಾಗ ಮಾತ್ರ ತಿಳಿಯುವುದು.
ಈ ಎಲ್ಲ ತಾಂತ್ರಿಕತೆಗಳನ್ನು ತಾನು ಹೇಳಬೇಕಾದ ಕಥೆಯನ್ನು ತಾಂತ್ರಿಕತೆ ಎದ್ದುಕಾಣದಂತೆ, ತಾಂತ್ರಿಕ ದೋಷಗಳಂತೂ ನುಸುಳದಂತೆ ಸರಳವಾಗಿ ಹೇಳಲು ಬಳಸಿಕೊಂಡಿರುವುದಕ್ಕೆ ತಿಥಿ ಎಂಬ ಚಿತ್ರ ಒಂದು ಒಳ್ಳೆಯ ಉದಾಹರಣೆ.


