Homeಚಳವಳಿಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

ಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

- Advertisement -
- Advertisement -

“ಜೀವವನ್ನಾದರೂ ಬಿಟ್ಟೇವು, ತುತ್ತು ನೀಡುತ್ತಿರುವ ಭೂಮಿ ಬಿಡಲಾರೆವು” ಎನ್ನುತ್ತಿದ್ದಾರೆ ಅಂಕೋಲಾ ತಾಲ್ಲೂಕಿನ ಅಲಗೇರಿ ಮತ್ತದರ ಆಚೀಚೆಯ ಹಳ್ಳಿಗರು ಒಕ್ಕೊರಳಲ್ಲಿ!! ಎಷ್ಟೆಂತ ತ್ಯಾಗ ಮಾಡೋದು? ಈ ಮಂದಿ ನೌಕಾನೆಲೆ, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ನಮ್ಮ ಬದುಕಿಗಾಧಾರವಾದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಈಗ ಮತ್ತೆ ವಿಮಾನ ನಿಲ್ದಾಣಕ್ಕಾಗಿ ಜಮೀನು ಕೊಡಿ, ಮನೆ-ಮಠ ಬಿಡಿಯೆಂದರೆ ಹೇಗೆ? ಬದುಕುವುದಾದರೂ ಹೇಗೆ? ಸದ್ರಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಅಲಗೇರಿ ಅಂಕೋಲೆಯ ಭೂಪಟದಿಂದ ಅಳಿಸಿ ಹೋಗುತ್ತದೆ!

ಸಹಜವಾಗೇ ಅಲಗೇರಿಯ ಆತಂಕಿತ ಜನರೀಗ ಕೆರಳಿ ಕೆಂಡವಾಗಿದ್ದಾರೆ. ಆಡಳಿತಗಾರರು ಗುಪ್ತವಾಗಿ ಸರ್ವೆ ನಡೆಸುತ್ತಿರುವುದು ಹಳ್ಳಿಗರನ್ನು ದಿಕ್ಕೆಡಿಸಿಬಿಟ್ಟಿದೆ. ಹಾಗೊಮ್ಮೆ ಆಳುವವರು ಹಠದಿಂದ ನಮ್ಮ ಭೂಮಿ ಕಸಿದುಕೊಳ್ಳುತ್ತಾರೆಂದರೆ, ವಿಮಾನ ನಿಲ್ದಾಣ ನಮ್ಮೂರಿನ ಸಮಾಧಿ ಮೇಲೆ ಆಗಲಿ ಎಂದಬ್ಬರಿಸುತ್ತಿದ್ದಾರೆ. ದಿವಂಗತ ರೈತ-ಕಾರ್ಮಿಕ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ನೆಚ್ಚಿ ದಾಖಲಾಗಿರುವ ವಿಶಿಷ್ಟ ಗ್ರಾಮ ಇದು. ವಿಪರ್ಯಾಸ ನೋಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರೀಗ ಅತಂತ್ರರಾಗುವಂತಾಗಿದೆ! ಸಂತ್ರಸ್ತರಾಗುವ ಸಂಕಟದಲ್ಲಿರುವ ಅಲಗೇರಿ ಭಾಗದವರು ಹೋರಾಟ-ಪ್ರತಿಭಟನೆಗೆ ಅಣಿಯಾಗಿದ್ದಾರೆ.

ಅಂಕೋಲ-ಕಾರವಾರ ನಡುವೆ ಏಷ್ಯಾದಲ್ಲೇ ಅತ್ಯಂತ ದೊಡ್ಡ ನೌಕಾನೆಲೆ ತಲೆಯೆತ್ತಿದೆ. ಅಂದರೆ ಅಲಗೇರಿ ಅಂಚಿನಲ್ಲಿ ನಿಂತಿದೆ. ಈ ಕದಂಬ ನೌಕಾನೆಲೆಗೆ ಯುದ್ಧ ವಿಮಾನ ನಿಲ್ದಾಣ ಜರೂರ್ ಬೇಕಾಗಿದೆ. ಯುದ್ಧ ವಿಮಾನ ನಿಲ್ದಾಣ ಎಂದರೆ ಜನ ತಿರುಗಿ ಬೀಳಬಹುದೆಂಬ ಲೆಕ್ಕಾಚಾರ ಹಾಕಿರುವ ಪ್ರಭುತ್ವ ಪಂಡಿತ ಶಿಖಾಮಣಿಗಳು ಈ ವಿಮಾನ ನಿಲ್ದಾಣ ಟೂ ಇನ್ ಒನ್ ಎನ್ನುತ್ತಿದ್ದಾರೆ. ಈ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ನಾಗರಿಕ ಯಾನ ಏರ್‌ಪೋರ್ಟ್‌ಗೂ ಅವಕಾಶವಿದೆ ಅಂತಿದ್ದಾರೆ. ಅಲಗೇರಿ, ಭಾವಿಕೇರಿ, ಬೆಲೇಕೇರಿ ಏರಿಯಾದ ಬರೋಬ್ಬರಿ 202 ಎಕರೆ ಭೂಸ್ವಾಧೀನಕ್ಕೆ ರಕ್ಷಣಾ ಇಲಾಖೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಅಲಗೇರಿಯ 160 ಎಕರೆ, ಭಾವಿಕೇರಿಯ 12 ಎಕರೆ ಮತ್ತು ಬೇಲೇಕೇರಿಯ 30 ಎಕರೆ ಭೂ ಪ್ರದೇಶದಲ್ಲಿ ಸರ್ವೆ ಕೂಡ ಮಾಡಿಮುಗಿಸಿಲಾಗಿದೆ.

1983ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೌಕಾನೆಲೆಗೆ ಅಡಿಗಲ್ಲು ಇಡುವಾಗಿ “ನಿರಾಶ್ರಿತರಾಗುವ ಮಂದಿಯ ಕಣ್ಣಲ್ಲಿ ಒಂದೇ ಒಂದು ಹನಿ ನೀರು ಬರದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದರು. ಆದರೆ ನೌಕಾನೆಲೆ ಕಾಮಗಾರಿ ಶುರುವಾಗುತ್ತಿದ್ದಂತೆಯೇ ಕಾರವಾರ-ಅಂಕೋಲೆಯಲ್ಲಿ ಸಂತ್ರಸ್ತರ ಕಂಬನಿಯ ಕೋಡಿಯೇ ಮೂರು ದಶಕಗಳ ಕಾಲ ಹರಿದಿದೆ!! ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡ ರಕ್ಷಣಾ ಇಲಾಖೆ ನಿಗದಿ ಪಡಿಸಿದ ಪರಿಹಾರ ಮೊತ್ತ ಎಷ್ಟು ಗೊತ್ತೇ? ಪ್ರತಿ ಗುಂಟೆಗೆ ಕೇವಲ 150ರೂ!!!

ಅಮಾಯಕ ನಿರಾಶ್ರಿತರನ್ನು ಬೆಳೆ ತೆಗೆಯಲಾಗದ, ಕುಲಕಸುಬು ಕಟ್ಟಿಕೊಳ್ಳಲಾಗದ ಬರಡು ಪುನರ್ವಸತಿ ಕೇಂದ್ರಕ್ಕೊಯ್ದು ಬಿಡಲಾಗಿತ್ತು. ಅಕ್ಷರಶಃ ನೀರಿಂದ ತೆಗೆದು ದಂಡೆಗೊಗೆದ ಮೀನಿನಂತಾಗಿದ್ದ ಈ ನಿರಾಶ್ರಿತರ ನೆರವಿಗೆ ಯಾವ ಅಧಿಕಾರಸ್ಥ ಪುಢಾರಿಯೂ ಬರಲಿಲ್ಲ. ಮನೆಗೊಂದು ಉದ್ಯೋಗ, ಸೂಕ್ತ ಪರಿಹಾರ, ನಿರಾಶ್ರಿತರ ಕೋಟಾ ಘೋಷಣೆ ಮಾಡಿದ್ದ ನಾಲಾಯಕ್ ಜನಪ್ರತಿನಿಧಿಗಳು, ಹೊಣೆಗೇಡಿ ಅಧಿಕಾರಗಳು ನಾಪತ್ತೆಯಾಗಿದ್ದರು. ದೇಶ ಕಟ್ಟಲಿಕ್ಕೇ ಹುಟ್ಟಿದ್ದೇನೆಂಬಂತೆ ಪೊಕ್ಕು ವೀರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗಂತೂ ಈ ನೆಲೆ ಕಳಕೊಂಡವರ ಗೋಳು ಕೊನೆವರೆಗೂ ಕೇಳಿಸಲಿಲ್ಲ.

ಹೆಚ್ಚುವರಿ ಪರಿಹಾರಕ್ಕಾಗಿ ಸಂತ್ರಸ್ತರು 35 ವರ್ಷ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ. ಈಗ ಪರಿಹಾರ ಪಡೆಯುತ್ತಿದಾರೆ. ಈ ಕ್ರೆಡಿಟ್ ತಮ್ಮದೆಂದು ಸಂಸದ ಮಾಣಿ, ಮಾಜಿ ಮಂತ್ರಿ ದೇಶಪಾಂಡೆ ಹಲಬುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದೇ ಸಮುದಾಯವನ್ನು ವಿಮಾನ ನಿಲ್ದಾಣದ ಗುಮ್ಮ ಕಾಡತೊಡಗಿದೆ. ವಿಮಾನ ನಿಲ್ದಾಣಕ್ಕೆ 500 ಎಕರೆ ಭೂಮಿ ಬೇಕು. ಒಂದು ಗುಂಟೆ ಜಾಗದಲ್ಲಿ ಎರಡು-ಮೂರು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಬದುಕುತ್ತಿವೆ. ಫಲವತ್ತಿದ ಕೃಷಿ ಭೂಮಿ, ತೆಂಗಿನ ಮರಗಳ ತೋಟವಿದೆ. ಕೂಲಿ ನಾಲಿ ಮಾಡಿ, ಮೀನುಗಾರಿಕೆ ನಡೆಸಿ, ಸಣ್ಣ-ಪುಟ್ಟ ಉದ್ಯಮ ನಡೆಸಿ ತಲತಲಾಂತರದಿಂದ ಜನ ಜೀವಿಸುತ್ತಿದ್ದಾರೆ. ಇದನ್ನೆಲ್ಲಾ ವಿಮಾನ ನಿಲ್ದಾಣ ಆಪೋಷನ ಪಡೆಯಲಿದೆ.

ಈ ವಿಮಾನ ನಿಲ್ದಾಣದ ಬಗ್ಗೆ ಯಾವ ವರದಿ, ಯೋಜನೆ ನಕ್ಷೆ ಸ್ವಾಧೀನವಾಗುವ ಭೂಮಿ ಬಗ್ಗೆ ಯಾವ ವಿವರವನ್ನೂ ಆಳುವವರು ಮತ್ತವರ ಅಧಿಕಾರ ಗ್ಯಾಂಗು ಬಹಿರಂಗ ಪಡಿಸುತ್ತಿಲ್ಲ. ಜಿಲ್ಲಾಡಳಿತ ಅಧ್ಯಯನ ವರದಿಯನ್ನು ಜನರ ಮುಂದಿಡುತ್ತಿಲ್ಲ. ಎಲ್ಲವೂ ಗುಪ್ತ ಗುಪ್ತ ಏಕೆ? ಕೃಷಿಯನ್ನೇ ನಂಬಿ ಬದುಕಿರುವ ಜನರ ಬೀದಿಪಾಲು ಮಾಡುವ ಈ ಪ್ರಳಯಾಂತಕ ಯೋಜನೆ ಬಂದರೆ 500 ಎಕರೆ ಪ್ರದೇಶದಲ್ಲಿ ಕಾಂಕ್ರಿಟ್ ಮೈದಾನ ಆಗುತ್ತದೆ. ಮಳೆಗಾಲದಲ್ಲಿ ನೀರಿಂಗಲು ಅವಕಾಶವೇ ಇರದು. ಈಗ ಬೀಳುವ ಮಳೆಗೆ ಕೇಣಿ ಹಳ್ಳ, ಬಾಳೆಗುಳಿ ಹೊಳೆಗೆ ಪ್ರವಾಹ ಬಂದು ಸುತ್ತಲಿನ ಊರು-ಕೇರಿ ಮುಳುಗುತ್ತದೆ. ವಿಮಾನ ನಿಲ್ದಾಣವಾದರೆ ಅಂಕೋಲೆಯಲ್ಲಿ ಜಲಪ್ರಳಯ ಗ್ಯಾರಂಟಿ.

ಹಲವು ಹಾನಿಗೆ ಕಾರಣವಾಗುವ ಈ ಸದ್ರಿ ವಿಮಾನ ನಿಲ್ದಾಣ ಬೇಡವೆಂದು ಜನ ಪ್ರತಿಭಟನೆಗೆ ಇಳಿದಿದ್ದಾರೆ. ಶಾಂತವಾಗಿರುವ ಅಂಕೋಲೆಯಲ್ಲಿ ಕ್ರಾಂತಿ ಆಗುವ ಮೊದಲೆ ಜಿಲ್ಲಾಡಳಿತ, ಸ್ಥಳೀಯ ಶಾಸಕಿ ರೂಪಾಲಿಯಮ್ಮ ಎಚ್ಚೆತ್ತುಕೊಳ್ಳುವರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಜಿಲ್ಲಾಧಿಕಾರಿಗಳಿಗೆ ಅನಾವಶ್ಯಕ ಕಿರುಕುಳ: ED ಅಧಿಕಾರಿಗಳಿಗೆ ಸುಪ್ರೀಂಕೋರ್ಟ್‌ ತರಾಟೆ

0
ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಸಮನ್ಸ್ ಪಡೆದಿರುವ ಜಿಲ್ಲಾಧಿಕಾರಿಗಳಿಗೆ ತಮ್ಮ ಕಚೇರಿಯ ಹೊರಗೆ ಬಹಳ ಗಂಟೆಗಳ ಕಾಲ ಕಾಯುವಂತೆ "ಅನಾವಶ್ಯಕ ಕಿರುಕುಳ" ನೀಡಬೇಡಿ ಎಂದು ಸುಪ್ರೀಂಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆಯನ್ನು...