Homeಮುಖಪುಟಪ್ರಕೃತಿ ಸಹಜ ಕೃಷಿಯಿಂದ ಮಾತ್ರ ಲಾಭ ಸಾಧ್ಯ : ಅವಿನಾಶ್

ಪ್ರಕೃತಿ ಸಹಜ ಕೃಷಿಯಿಂದ ಮಾತ್ರ ಲಾಭ ಸಾಧ್ಯ : ಅವಿನಾಶ್

- Advertisement -
- Advertisement -

ನನ್ನ ಗುರುಗಳಾದ ನಾಡೋಜ ಶ್ರೀ ನಾರಾಯಣರೆಡ್ಡಿಯವರ ಒಂದು ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ‘ನಮಗೆ ಈ ಸಬ್ಸಿಡಿಗಳು, ಈ ಡ್ಯಾಂಗಳು, ಸಾಲಸೋಲಗಳು ಯಾವುದೂ ಬೇಡ. ಭೂಮಿಯಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಂಗೆ ಹ್ಯೂಮಸ್ ಉತ್ಪತ್ತಿ ಮಾಡಿ, ಜೀವಾಣುಗಳನ್ನು ಹೆಚ್ಚಿಗೆ ಮಾಡುವಂಗೆ ಮಣ್ಣಿನಲ್ಲಿ ಸೂಕ್ಷ್ಮವಾತಾವರಣ ಸೃಷ್ಟಿ ಮಾಡುವುದು ಹಾಗು ಸಾವಯವ ಇಂಗಾಲವನ್ನು ಶೇ 4ಕ್ಕಿಂತ ಹೆಚ್ಚಾಗಂಗೆ ಮಾಡುವುದನ್ನು ನಮ್ಮ ರೈತರಿಗೆ ಹೇಳ್ಕೊಟ್ಟುಬಿಟ್ರೇ ನೆಮ್ಮದಿಯಿಂದ ಬದುಕುತ್ತಾರೆ’ ಅಂತ.

ನಾನು ಪ್ರತಿ ಬಾರಿ ಅವರನ್ನು ಭೇಟಿಯಾದಾಗಲೂ ಪ್ರಶ್ನೆಗಳ ಸರಮಾಲೆಯನ್ನೇ ಹೊತ್ತೊಯ್ಯುತ್ತಿದ್ದೆ. ಕೃಷಿ ವಿಜ್ಞಾನವನ್ನು ಬಹಳ ಸುಲಭವಾಗಿ ನಮಗೆ ಅರ್ಥಮಾಡಿಸುತ್ತಿದ್ದರು. ‘ಬೇರುಗಳು ಭೂಮಿಯಲ್ಲಿ ಬೆಳೆಯುವುದು, ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಅಂದರೆ ರಂಧ್ರಗಳನ್ನು ಮಾಡುವುದು, ಓಡಾಡುವುದು… ಭೌತಿಕಕ್ರಿಯೆ’. ‘ಬೇರುಗಳ ರಸ ಮತ್ತು ಜೀವಾಣುಗಳು ಬಿಡುವ ಜೊಲ್ಲು… ರಾಸಾಯನಿಕ ಕ್ರಿಯೆ’. ‘ಜೀವಾಣುಗಳು, ಎರೆಹುಳುಗಳು, ಕೀಟಗಳು ಇತ್ಯಾದಿ ಮಣ್ಣಿನಲ್ಲಿ ಸಹಜವಾಗಿ ಸತ್ತರೆ ಅದು ಜೈವಿಕ ಕ್ರಿಯೆ’ ಎಂದು.

ಮುಂದೆ ಅವರು ತಮ್ಮ ಮಾತನ್ನು ಮುಂದುವರಿಸುತ್ತ ‘ಈ ಮೂರು ಕ್ರಿಯೆಗಳು ಭೂಮಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಅದರ ಜೊತೆ ಬೇರುಗಳು ಹೊರಸೂಸುವ ರಸ (ರಾಸಾಯನಿಕಗಳು) ಸೇರಿದರೆ ಫ್ಲೋರಿಕ್ ಆಸಿಡ್ ತಯಾರಾಗುತ್ತದೆ. ಈ ಫ್ಲೋರಿಕ್ ಆಸಿಡ್ ಕಲ್ಲನ್ನು ಕರಗಿಸುವ ಶಕ್ತಿಯನ್ನು ಹೊಂದಿರುತ್ತದೆ. ಭೂಮಿಯಲ್ಲಿ ಸಹಜವಾಗಿ ಲಭ್ಯವಿರುವ ಹಲವು ಬಣ್ಣದ ಕಲ್ಲಿನಲ್ಲಿ ಸಸ್ಯ ಪೋಷಕಾಂಶಗಳಿರುತ್ತವೆ. ಒಂದು ಕೆ.ಜಿ ಕಲ್ಲಿನಲ್ಲಿ 350ರಿಂದ 500 ಗ್ರಾಮ್ ವಿವಿಧ ಸಸ್ಯ ಪೋಷಕಾಂಶಗಳು ಲಭ್ಯವಿರುತ್ತವೆ. ಈ ಫ್ಲೋರಿಕ್ ಆಸಿಡ್ ಭೂಮಿಯೊಳಗಡೆಯಿರುವ ಕಲ್ಲುಗಳನ್ನು ನಿರಂತರವಾಗಿ ಕರಗಿಸುತ್ತದೆ ಹಾಗೂ ಈ ಪೋಷಕಾಂಶಗಳನ್ನು ಜೀವಾಣುಗಳು ವಾಹಕದಂತೆ ಬೇರುಗಳಿಗೆ ರವಾನಿಸುತ್ತದೆ. ಇದರಿಂದ ಸಸ್ಯಗಳಿಗೆ ಪೋಷಕಾಂಶಗಳು ನಿರಂತರವಾಗಿ ಲಭ್ಯವಾಗಿ ಹೆಚ್ಚು ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಸರಳವಾದ ವಿಜ್ಞಾನ’ ಎಂದು ಹೇಳುತ್ತಿದ್ದರು. ಇದನ್ನರಿಯದ ನಾವು ನಮ್ಮಲ್ಲಿರುವ ಕಲ್ಲುಗಳನ್ನು ಕೈಗೆಟುಕದ ಸ್ಥಳದಲ್ಲಿ ಬಿಸಾಡಿದ್ದೇವೆ.

ಹಾಗೆಯೇ ಹ್ಯೂಮಸ್ ಹಾಗು ಸಾವಯವ ಇಂಗಾಲವನ್ನು ವೃದ್ಧಿಸಲಿಲ್ಲ. ಇದರಿಂದ ಪೋಷಕಾಂಶಗಳ ಕೊರತೆಯುಂಟಾಗಿದೆ. ಸಹಜವಾದ ಕೃಷಿ ನಮ್ಮ ಕೈ ತಪ್ಪಿದೆ. ಸಹಜವಾಗಿ ಪೋಷಕಾಂಶಗಳನ್ನು ಪೂರೈಸುವ ವಿಧಾನಗಳನ್ನು ಹೇಳಿಕೊಡುವುದನ್ನು ಬಿಟ್ಟು ಕಂಪನಿಗಳಿಂದ ಉತ್ಪಾದಿಸಿ ನಮಗೆ ದೊರೆಯುವಂತೆ ಮಾಡುತ್ತಿದ್ದಾರೆ. ವಾತಾವರಣದಲ್ಲಿರುವ ಸಾರಜನಕವನ್ನು ಯೂರಿಯಾ ಬ್ಯಾಗ್‍ನಲ್ಲಿ, ಭೂಮಿಯಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಡಿಎಪಿ ಮತ್ತು ಮುಂತಾದ ಹೆಸರಿನ ಬ್ಯಾಗ್‍ನಲ್ಲಿ, ಸಹಜವಾಗಿ ನಮ್ಮದೇ ಭೂಮಿಯಲ್ಲಿ ನೆಲೆಸುತ್ತಿದ್ದ ಎರೆಹುಳುಗಳು, ಜೀವಾಣುಗಳನ್ನು ಬಾಟಲ್‍ನಲ್ಲಿಟ್ಟು ಕೊಂಡುಕೊಳ್ಳುವಂತೆ ಮಾಡಿದ್ದಾರೆ. ರಾಸಾಯನಿಕಗಳ ಬಳಕೆಯಿಂದ ಪ್ರಕೃತಿದತ್ತವಾಗಿ ಲಭ್ಯವಿದ್ದ ಎಲ್ಲವನ್ನೂ ಕೊಲ್ಲುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ? ಕಂಪನಿಗಳು, ಮಾರುಕಟ್ಟೆ ತಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡುತ್ತವೆಯೇ ಹೊರತು ರೈತನ ಹಿತಾಸಕ್ತಿಗಾಗಿ ಅಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಕೃಷಿ ವಿಜ್ಞಾನಿಗಳಾಗಲಿ, ಸರ್ಕಾರಗಳಾಗಲಿ ಈ ನೈಜ ಸಮಸ್ಯೆಯ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಕಳೆದ ಇಪ್ಪತ್ತು ವರ್ಷಗಳ ಕೆಳಗೆ ಶೇ 70ಕ್ಕಿಂತ ಹೆಚ್ಚಿದ್ದ ಕೃಷಿಕರ ಸಂಖ್ಯೆ ಇಂದು ಶೇ 55ಕ್ಕೆ ಇಳಿದಿದೆ. ಯುವಜನತೆ ಕೃಷಿಯಲ್ಲಿ ಯಶಸ್ಸಿಲ್ಲ, ಆದಾಯವಿಲ್ಲ ಎನ್ನುವ ಕಾರಣಕ್ಕೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪ್ರಸ್ತುತ ಕೃಷಿಯನ್ನು ಮಾಡುತ್ತಿರುವವರಲ್ಲಿ ಬಹಳಷ್ಟು ಮಂದಿಯ ವಯಸ್ಸು 40ರಿಂದ 60 ವರ್ಷಗಳು. ಇವರ ಕಾರ್ಯಕ್ಷಮತೆ ಇನ್ನು ಹೆಚ್ಚೆಂದರೆ 20ರಿಂದ 30 ವರ್ಷಗಳ ಕಾಲವಿರಬಹುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಮುಂದಿನ ದಿನಗಳಲ್ಲಿ ಆಹಾರದ ಕ್ಷಾಮಕ್ಕೆ ತುತ್ತಾಗುತ್ತಿದ್ದೆವೇನೋ ಅನ್ನಿಸುತ್ತಿದೆ. ಹಸಿರುಕ್ರಾಂತಿಯ ಆ ದಿನಗಳಲ್ಲಿ ನಮ್ಮ ದೇಶಕ್ಕೆ ಆಹಾರ ಪದಾರ್ಥಗಳನ್ನು ಒದಗಿಸಲು ಹಲವಾರು ದೇಶಗಳ ಮುಂದೆ ಕೈಚಾಚಬೇಕಿತ್ತು. ಕಡೆಗೂ ಅಂದಿನ ಸಂಕಷ್ಟದ ದಿನಗಳಿಂದ ಪಾರಾಗಿ ಹೊರಬಂದೆವು.

ಆದರೆ ಇಂದು, ಪ್ರಪಂಚದಲ್ಲಿರುವ 195 ದೇಶಗಳ ಪೈಕಿ 90ರಿಂದ 100 ದೇಶಗಳು ಮಾತ್ರ ಆಹಾರೋತ್ಪಾದನೆಯಲ್ಲಿ ತೊಡಗಿವೆ. ಅಂದರೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿವೆ. ಮುಂದಿನ ದಿನಗಳಲ್ಲಿ ಈ ದೇಶಗಳಿಂದಷ್ಟೇ ಆಹಾರವನ್ನು ಒದಗಿಸುವುದು ಕಷ್ಟ ಸಾಧ್ಯವಾದ ಮಾತು. ಒಂದು ಕಡೆ ಕೃಷಿಯು ಕಂಪನಿಗಳ ಪಾಲಾಗುತ್ತಿದ್ದರೆ ಇನ್ನೊಂದು ಕಡೆ ನಾವು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಯೂ ನಮ್ಮ ಕೈ ಹಿಡಿಯುತ್ತಿಲ್ಲ. ಕಳೆದ 20 ವರ್ಷಗಳಿಗೆ ಹೋಲಿಸಿದರೆ ಇಂದು ನಮ್ಮ ವ್ಯವಸಾಯ ಭೂಮಿ ಶೇ 20ಕ್ಕಿಂತ ಹೆಚ್ಚು ಪ್ರದೇಶ ಬೆಳೆಗಳಿಲ್ಲದೆ ಪಾಳುಬಿದ್ದಿದೆ. ಇದರ ಜೊತೆಯಲ್ಲಿ ನೂರಾರು ರೈತರು ತಾವು ಬೆಳೆದ ಬೆಳೆಗಳನ್ನು ಸುಟ್ಟುಹಾಕುತ್ತಿದ್ದಾರೆ; ಕ್ರಿಮಿನಾಶಕಗಳನ್ನು ಸಿಂಪಡಿಸುವಾಗ ರೈತರು ಸತ್ತಿದ್ದಾರೆ; ರೈತರ ದೇಹದಲ್ಲಿ ರಾಸಾಯನಿಕಗಳು ಸೇರುತ್ತಿವೆ ಎನ್ನುವ ಹಲವಾರು ವರದಿಗಳು ನಮ್ಮ ಇಂದಿನ ಆಧುನಿಕ ಕೃಷಿಗೆ ಹಿಡಿದ ಕನ್ನಡಿಯಾಗಿದೆ.

ಈ ಸಮಸ್ಯೆಯಿಂದ ನಾವು ಪಾರಾಗಬೇಕಾದರೆ ಸಹಜ ಕೃಷಿಯ ಪರಿಚಯವನ್ನು ಮಾಡಿಕೊಡಬೇಕು. ಯುವಶಕ್ತಿಗೆ ಕೃಷಿಯಲ್ಲಿ ನೆಮ್ಮದಿಯ ಬದುಕಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ಇದರ ಜೊತೆಜೊತೆಯಲ್ಲಿ ರೈತರ ಸಣ್ಣಸಣ್ಣ ಗುಂಪುಗಳನ್ನು ಮಾಡಿ, ಅವರು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡುತ್ತಾ, ನಮ್ಮ ಅಕ್ಕಪಕ್ಕದಲ್ಲೆ ಮಾರುಕಟ್ಟೆಯನ್ನು ಸೃಷ್ಟಿಮಾಡುವತ್ತ ಆಲೋಚಿಸಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...