Homeಮುಖಪುಟಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

- Advertisement -
- Advertisement -

ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್ ಜಾಖರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರ ಮಗನಿಗೆ ಟಿಕೆಟ್ ನೀಡುವುದು ಮಹಿಳಾ ಕುಸ್ತಿಪಟುಗಳಿಗೆ ಅವಮಾನವಾಗಿದೆ. ನನಗೆ ದೇಶದ ಗೌರವ ಮೊದಲು ಎಂದು ರೋಹಿತ್ ಜಾಖರ್ ಹೇಳಿದ್ದಾರೆ.

ನಾನು ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ಹುದ್ದೆಗೆ ಮತ್ತು ರಾಷ್ಟ್ರೀಯ ಲೋಕದಳದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಈ ಕುರಿತ ರಾಜೀನಾಮೆ ಪತ್ರವನ್ನು ಶುಕ್ರವಾರ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರಿಗೆ ಕಳುಹಿಸಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ, ಸಾಮಾಜಿಕ ಸಮಸ್ಯೆಗಳಿಗಾಗಿ ನನ್ನ ಹೋರಾಟ ಮೊದಲಿನಂತೆ ಮುಂದುರಿಯಲಿದೆ ಎಂದು ರೋಹಿತ್ ಜಾಖರ್ ಹೇಳಿದ್ದಾರೆ.

ರೋಹಿತ್ ಜಾಖರ್ RLDಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ರಾಷ್ಟ್ರೀಯ ಜಾಟ್ ಫೆಡರೇಶನ್‌ನ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಒಂದು ದಶಕದಿಂದ ಆರ್‌ಎಲ್‌ಡಿ ಮತ್ತು ರೈತ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು.

ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಗುರುವಾರ ಕರಣ್ ಭೂಷಣ್ ಸಿಂಗ್ ಅವರನ್ನು  ಲೋಕಸಭೆಯ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಕುಸ್ತಿ ಪಟುಗಳಿಗೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಟಿಕೆಟ್‌ ನೀಡದೆ ಇದ್ದರೂ, ಅವರ ಪುತ್ರನಿಗೆ ಟಿಕೆಟ್‌ ನೀಡಲಾಗಿದೆ. ಇದರ ಬೆನ್ನಲ್ಲಿ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ಬಜರಂಗ್ ಪುನಿಯಾ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಕರಣ್‌ ಸಿಂಗ್‌ಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಭಾರತದ ಹೆಣ್ಣುಮಕ್ಕಳು ಸೋತಿದ್ದಾರೆ, ಬ್ರಿಜ್ ಭೂಷಣ್ ಗೆದ್ದಿದ್ದಾರೆ. ನಾವೆಲ್ಲರೂ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ, ಬೀದಿಯಲ್ಲಿ ದಿನಗಳನ್ನು ಕಳೆದಿದ್ದೇವೆ. ಬ್ರಿಜ್ ಭೂಷಣ್ ಅವರನ್ನು ಇನ್ನೂ ಬಂಧಿಸಿಲ್ಲ. ನಾವು ಯಾವತ್ತೂ ಕೇಳಿದ್ದು ನ್ಯಾಯ ಮಾತ್ರ. ಆದರೆ ಬಂಧಿಸುವುದು ಬಿಡಿ, ಅವರ ಮಗನಿಗೆ ಟಿಕೆಟ್ ಸಿಕ್ಕಿದ್ದು ಅದು ಭಾರತದ ಕೋಟ್ಯಂತರ ಹೆಣ್ಣುಮಕ್ಕಳ ಉತ್ಸಾಹವನ್ನು ಮುರಿದಿದೆ. ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಒಬ್ಬ ವ್ಯಕ್ತಿಯ ಮುಂದೆ ಸರ್ಕಾರ ಏಕೆ ದುರ್ಬಲವಾಗಿದೆ? ನಿಮಗೆ ಬೇಕಾಗಿರುವುದು ಭಗವಾನ್ ರಾಮನ ಹೆಸರಿನಲ್ಲಿ ಮತಗಳು, ಅವರ ನೀತಿಗಳನ್ನು ಅನುಸರಿಸುವ ಬಗ್ಗೆ ನಿಮ್ಮ ನಿಲುವು ಏನು? ಎಂದು ಸಾಕ್ಷಿ ಮಲಿಕ್‌ ಪ್ರಶ್ನಿಸಿದ್ದರು.

ಕುಸ್ತಿಪಟು ಬಜರಂಗ್ ಪುನಿಯ ಈ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಮಹಿಳೆಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ವಂಶಪಾರಂಪರ್ಯ ರಾಜಕಾರಣ ಆಡಳಿತಾರೂಢ ಬಿಜೆಪಿಯಲ್ಲೂ ಬೇರೂರಿದೆ ಎಂದು ಹೇಳಿದ್ದರು.

ಇದನ್ನು ಓದಿ: ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read