ಉತ್ತರ ಪ್ರದೇಶದ ನೋಯ್ಡಾ ಆಡಳಿತವು ಮೂರು ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ಏಳು ಮೇಲ್ವಿಚಾರಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಬಹ್ರೈಚ್‌ನಲ್ಲಿ ಇಬ್ಬರು ಬಿಎಲ್‌ಒಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಮತ್ತು ಬಿಜೆಪಿ ನಾಯಕರ ದೂರಿನ ಮೇರೆಗೆ ಮತ್ತೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನೋಯ್ಡಾದಲ್ಲಿ, 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 32ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ನೋಯ್ಡಾದ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಅವರ ಆದೇಶದ ಮೇರೆಗೆ, ನೋಯ್ಡಾದ ಮೂರು ವಿಧಾನಸಭಾ ವಿಭಾಗಗಳ ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ನಿಯಮ ಪಾಲಿಸದ ಬಿಎಲ್‌ಒಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಿದ್ದಾರೆ.
ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಹಂತ-IIರ ಭಾಗವಾಗಿ ಒಂದು ತಿಂಗಳ ಮನೆ ಮನೆ ಎಣಿಕೆ ಪ್ರಕ್ರಿಯೆ ಮುಗಿಸಲು ಡಿಸೆಂಬರ್ 4ರ ಗಡುವು ವಿಧಿಸಲಾಗಿದೆ. ಈ ಅವಧಿಯಲ್ಲಿ ಬಿಎಲ್‌ಒಗಳು ಫಾರ್ಮ್‌ಗಳ ವಿತರಣೆ ಮತ್ತು ಸಂಗ್ರಹಣೆ ಮಾಡಬೇಕಿದೆ.
ಮೊದಲ ಹಂತದಲ್ಲಿ ನಡೆದ ಬಿಹಾರದ ಎಸ್‌ಐಆರ್ ಪ್ರಕ್ರಿಯೆಗಿಂತ ಭಿನ್ನವಾಗಿ, ಮನೆ ಮನೆ ಎಣಿಕೆ ಹಂತದಲ್ಲಿಯೇ ಮತದಾರರ ಅಥವಾ ಅವರ ಪೋಷಕರ ಹಳೆಯ ಮತದಾರರ ಪಟ್ಟಿಯೊಂದಿಗೆ ಫಾರ್ಮ್‌ಗಳಲ್ಲಿನ ಮತದಾರರ ವಿವರಗಳನ್ನು ಹೊಂದಿಸುವ ಜವಾಬ್ದಾರಿಯನ್ನು ಬಿಎಲ್‌ಒಗಳಿಗೆ ವಹಿಸಲಾಗಿದೆ.
ನೋಯ್ಡಾ ಆಡಳಿತದ ಪ್ರಕಾರ, ಪದೇ ಪದೇ ಸೂಚನೆ ಮತ್ತು ಎಚ್ಚರಿಕೆಗಳನ್ನು ನೀಡಿದರೂ, ಹಲವಾರು ಬಿಎಲ್‌ಒಗಳು ತಮ್ಮ ನಿಯೋಜಿತ ಪ್ರದೇಶಗಳಿಗೆ ವರದಿ ಮಾಡಿಲ್ಲ ಮತ್ತು ಹಿರಿಯ ಅಧಿಕಾರಿಗಳು ನೀಡಿದ ಆದೇಶಗಳನ್ನು ಪಾಲಿಸಲು ವಿಫಲರಾಗಿದ್ದಾರೆ.
ಒಟ್ಟು ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಎರಡು ದಾದ್ರಿಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ 18 ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಒಂದರಲ್ಲಿ 12 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸರ್ಕಾರಿ ಶಾಲಾ ಶಿಕ್ಷಕರು, ಮತ್ತು ಇನ್ನೊಂದರಲ್ಲಿ ಮೇಲ್ವಿಚಾರಕರಾಗಿ ನೇಮಕಗೊಂಡ ಆರು ಮಂದಿಯ ಹೆಸರಿದೆ ಎಂದು ವರದಿಯಾಗಿದೆ.
ಗ್ರೇಟರ್ ನೋಯ್ಡಾದ ಇಕೋಟೆಕ್ ಹಂತ 1 ಪೊಲೀಸ್ ಠಾಣೆಯಲ್ಲಿ, 33 ಬಿಎಲ್‌ಒಗಳು ಮತ್ತು ಒಬ್ಬ ಮೇಲ್ವಿಚಾರಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜೆವರ್ ಪೊಲೀಸ್ ಠಾಣೆಯಲ್ಲಿ, ಅಧಿಕಾರಿಗಳು 17 ಬಿಎಲ್‌ಒಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಯೊಂದು ಎಫ್‌ಐಆರ್ ಅನ್ನು ಆಯಾ ಪ್ರದೇಶದ ಎಸ್‌ಡಿಎಂ ದಾಖಲಿಸಿದ್ದಾರೆ. ಎಸ್‌ಡಿಎಂಗಳು ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಆಗಿ ಕಾರ್ಯನಿರ್ವಹಿಸಲು ನೇಮಕಗೊಂಡಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಸೂಚನೆಗಳಿಗೆ ಅನುಗುಣವಾಗಿ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ‘ವಾರ್ ರೂಮ್’ ನೀಡಿದ ವಿವರವಾದ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಶನಿವಾರ, ಜಿಲ್ಲಾಧಿಕಾರಿ ರೂಪಮ್ ಅವರು ಕಲೆಕ್ಟರೇಟ್‌ನಲ್ಲಿ ಸೆಕ್ಟರ್ ಮತ್ತು ವಲಯ ಮ್ಯಾಜಿಸ್ಟ್ರೇಟ್‌ಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ಪರಿಷ್ಕರಣಾ ಕಾರ್ಯವನ್ನು ಪರಿಣಾಮಕಾರಿ, ಪಾರದರ್ಶಕ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ. ಪ್ರತಿಯೊಬ್ಬ ಬಿಎಲ್‌ಒ ತಮ್ಮ ಪ್ರದೇಶವನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು, ಮನೆ ಮನೆಗೆ ಭೇಟಿ ನೀಡಬೇಕು ಮತ್ತು ಹೊಸ ಮತದಾರರಿಗೆ ಫಾರ್ಮ್ 6 ಮತ್ತು ವರ್ಗಾವಣೆ ಅಥವಾ ತಿದ್ದುಪಡಿಗಳಿಗಾಗಿ ಫಾರ್ಮ್ 8 ಅನ್ನು ಭರ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯ ಮಾಡಿದರೆ ನೋಟಿಸ್ ಜಾರಿ ಮಾಡಲಾಗುವುದು ಮತ್ತು ಸ್ಪಷ್ಟೀಕರಣ ಕೇಳಲಾಗುವುದು. ಪದೇ ಪದೇ ಆದೇಶ ಪಾಲಿಸದಿರುವುದು ವೇತನ ತಡೆಹಿಡಿಯುವಿಕೆ ಮತ್ತು ಶಿಸ್ತು ಕ್ರಮಕ್ಕೆ ಕಾರಣವಾಗಬಹುದು ಎಂದು ಆಡಳಿತವು ಈ ಹಿಂದೆ ಎಚ್ಚರಿಸಿತ್ತು.
ಬಹ್ರೈಚ್‌ನ ಬೇಸಿಕ್ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಆಶಿಶ್ ಕುಮಾರ್ ಸಿಂಗ್ ಮಾತನಾಡಿ, ಬಿಎಲ್‌ಒ ಆಗಿ ನೇಮಕಗೊಂಡಿದ್ದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಮಾ ನಫೀಸ್, ಹಿರಿಯ ಅಧಿಕಾರಿಗಳು ನೀಡಿದ ಜ್ಞಾಪನೆಗಳನ್ನು ಲೆಕ್ಕಿಸದೆ ಕರ್ತವ್ಯಕ್ಕೆ ವರದಿ ಮಾಡುವಂತೆ ಸೂಚಿಸಿದ ಲಿಖಿತ ಸೂಚನೆಗಳು ಮತ್ತು ಪದೇ ಪದೇ ಫೋನ್ ಕರೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿದ್ದಾರೆ. ಅದೇ ರೀತಿ, ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ಅನುರಾಗ್, ಎಸ್‌ಐಆರ್ ಅಡಿಯಲ್ಲಿ ತನಗೆ ನಿಯೋಜಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ನಡುವೆ, ಬಿಜೆಪಿ ನಾಯಕ ಅಂಕಿತ್ ಕುಮಾರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಾಥಮಿಕ ಶಾಲೆಯ ಬೋಧಕ ಬಿಎಲ್‌ಒ ಅಭಿಷೇಕ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


