ಧರ್ಮಸ್ಥಳದಲ್ಲಿ ಶವ ಶೋಧ ಮುಂದುವರಿಸಬೇಕೇ ಬೇಡವೇ? ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ತೀರ್ಮಾನಿಸಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಸೋಮವಾರ (ಆ.18) ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಅವರು,”ಇದುವರೆಗೆ ಆಗಿರುವುದು ಶವಗಳ ಶೋಧ ಮಾತ್ರ, ಸರಿಯಾದ ತನಿಖೆ ಇನ್ನೂ ಪ್ರಾರಂಭಗೊಂಡಿಲ್ಲ. ಶವ ಶೋಧ ಮುಕ್ತಾಯಗೊಂಡು, ಈಗ ಸಿಕ್ಕಿರುವ ಅಸ್ತಿಪಂಜರ ಮತ್ತು ಮುಂದೆ ಸಿಕ್ಕರೆ ಅವುಗಳ ಎಫ್‌ಎಸ್‌ಎಲ್ ಪರೀಕ್ಷೆ ನಡೆಸಿ ವರದಿ ಬರಬೇಕು. ಆ ಬಳಿಕ ನಿಜವಾದ ತನಿಖೆ ಆರಂಭಗೊಳ್ಳಲಿದೆ ಎಂದರು.
ಇದುವರೆಗೆ ಶೋಧದ ವೇಳೆ ಒಂದು ಕಡೆ ಮಾನವನ ತಲೆ ಬುರುಡೆ, ಮೂಳೆಗಳು ಸಿಕ್ಕಿವೆ. ಮತ್ತೊಂದೆಡೆ ಅಸ್ತಿ ಪಂಜರ ದೊರೆತಿದೆ. ಅವುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿನ ಮಣ್ಣನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮಾಡಿರುವ ಸಾಕ್ಷಿ ರಕ್ಷಣಾ ಕಾಯ್ದೆಯಡಿ ದೂರುದಾರನಿಗೆ ಎಸ್‌ಐಟಿ ಎಲ್ಲಾ ರೀತಿಯ ರಕ್ಷಣೆ ಒದಗಿಸಿದೆ. ಪ್ರಧಾನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಕ್ಷಣೆ ಒದಗಿಸುವ ನಿರ್ದೇಶನ ನೀಡಿದ್ದಾರೆ. ದೂರುದಾರನನ್ನು ಅವರು ‘ವಿ’ ಎಂದು ಗುರುತಿಸಿದ್ದಾರೆ. ಅದರಂತೆ ಎಸ್‌ಐಟಿ ರಕ್ಷಣೆ ನೀಡಿದೆ ಎಂದು ಹೇಳಿದರು.
ಸಾಕ್ಷಿ ರಕ್ಷಣಾ ಕಾಯ್ದೆಯಡಿ ದೂರುದಾರನಿಗೆ ರಕ್ಷಣೆ ನೀಡಿರುವ ಹಿನ್ನೆಲೆ, ಆತನನ್ನು ಬಂಧಿಸಲು ಅಥವಾ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಸಾಧ್ಯವಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಎಸ್‌ಐಟಿ ಅಧಿಕಾರಿಗಳು ಈಗ ಸಿಕ್ಕಿರುವ ಮೂಳೆ, ಅಸ್ತಿ ಪಂಜರವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲಿಯವರೆಗೆ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ವರದಿ ಬಂದ ಬಳಿಕ ಮುಂದಕ್ಕೆ ಹೋಗಬೇಕಾ (ಶೋಧ ಮುಂದುವರಿಸಬೇಕಾ) ಎನ್ನುವ ತೀರ್ಮಾನ ಅವರು ಮಾಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.
ನಾನು ಈಗ ಹೇಳಿರುವುದು ಪ್ರಕರಣದ ವಸ್ತುಸ್ಥಿತಿ ಮಾತ್ರ. ಮಧ್ಯಂತರ ವರದಿ ಇನ್ನೂ ಬಂದಿಲ್ಲ. ಕಾಲ ಮಿತಿಯಲ್ಲಿ ತನಿಖೆ ಮುಗಿಸಿ ಎಂದು ಎಸ್‌ಐಟಿ ಹೇಳಲು ಸಾಧ್ಯವಿಲ್ಲ ಎಂದರು.
ನಾವು ನೆಲದ ನ್ಯಾಯವನ್ನು ಗೌರವಿಸೋಣ. ಸತ್ಯ ಹೊರಗೆ ಬರಲಿ, ಸತ್ಯ ಹೊರಗೆ ಬಂದರೆ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ, ವಿವಿಧ ರೀತಿಯ ಹೇಳಿಕೆಗಳನ್ನು ನೀಡುವುದು ಒಳ್ಳೆಯದಲ್ಲ. ಏನೂ ಆಗಿಲ್ಲ ಅಂದರೆ ಧರ್ಮಸ್ಥಳದ ಗೌರವ ಹೆಚ್ಚುತ್ತದೆ. ಆಗಿದೆ, ಎಂದರೆ ಸತ್ಯ ಹೊರ ಬರುತ್ತದೆ. ವಿರೋಧ ಪಕ್ಷದವರು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಸರ್ಕಾರ ಯಾರನ್ನೂ ದೂಷಿಸುವುದಿಲ್ಲ. ಯಾರ ಒತ್ತಡಕ್ಕೆ ಮಣಿದೂ ಎಸ್‌ಐಟಿ ರಚನೆ ಮಾಡಿಲ್ಲ, ಪರಿಸ್ಥಿತಿ ನೋಡಿ ಮಾಡಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಬಿಹಾರ| ಮತದಾರರ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಹೆಸರುಗಳನ್ನು ಬಹಿರಂಗಪಡಿಸಿದ ಚು.ಆಯೋಗ


