ಬೆಂಗಳೂರು ಅಭಿವೃದ್ದಿಯ ಹೆಸರು ಹೇಳಿ 17 ಹಳ್ಳಿಗಳಲ್ಲಿ ಬೆಂಗಳೂರು ಅಭಿವೃದ್ದ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಹೊರಟಿರುವ ‘ಶಿವರಾಮ ಕಾರಂತ ಬಡಾವಣೆ ಯೋಜನೆ’ಯ ವಿರುದ್ದ, ಅಲ್ಲಿನ ರೈತರು ಮತ್ತು ನಿವಾಸಿಗಳು ಸುಮಾರು 47 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ನೀಡಿದ್ದರೂ ಸಮಸ್ಯೆ ಪರಿಹಾರವಾಗದ ಕಾರಣ ಶುಕ್ರವಾರ(ನಾಳೆ)ದಂದು ಎಲ್ಲಾ 17 ಹಳ್ಳಿಗಳ ನಿವಾಸಿಗಳು ಯಲಹಂಕ ಸರ್ಕಾರಿ ಶಾಲೆಯ ಆವರಣದಲ್ಲಿ ಬಹಿರಂಗ ಸಭೆ ಮತ್ತು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ
ಬೆ೦ಗಳೂರು ಅಬಿವೃದ್ಧಿ ಪ್ರಾಧಿಕಾರವು, ‘ಡಾ| ಕೆ. ಶಿವರಾಮ ಕಾರಂತ ಬಡಾವಣೆ’ಗಾಗಿ ಬೆ೦ಗಳೂರು ಉತ್ತರ ತಾಲೂಕು ರಾಮಗೊಂಡನಹಳ್ಳಿಯ ಸುತ್ತಮುತ್ತಲಿನ 17 ಹಳ್ಳಿಗಳ 3546 ಎಕರೆ 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸುವುದಾಗಿ ಹೊರಟಿದೆ.
ಆದರೆ, ಅಲ್ಲಿನ ನಿವಾಸಿಗಳು ಮತ್ತು ರೈತರು ಇದನ್ನು ವಿರೋಧಿಸಿದ್ದು, ಅಭಿವೃದ್ದಿಯ ನೆಪದಲ್ಲಿ ಸಾವಿರಾರು ಎಕರೆ ರೈತರ, ಬಡವರ, ದಲಿತರ ಕೃಷಿ ಯೋಗ್ಯ ಭೂಮಿಯನ್ನು ಕಿತ್ತುಕೊಂಡು ಬೀದಿಪಾಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ನಮ್ಮ ಭೂಮಿಯನ್ನು ದೌರ್ಜನ್ಯದಿಂದ ವಶಪಡಿಸಿಕೊಳ್ಳಲು ಹೊರಟಿದೆ ಎಂದು ಆರೋಪಿಸಿರುವ ಅಲ್ಲಿನ ನಿವಾಸಿಗಳು ಸುಮಾರು 47 ದಿನಗಳಿ೦ದ ಪ್ರತಿಭಟನೆಯ ಮೂಲಕ ಧರಣಿ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ, ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಬಿಡಿಎ ಅಧಿಕಾರಿಗಳು ನಡೆಸುತ್ತಿರುವ ದೌರ್ಜ್ಯನ್ಯವನ್ನು ಖಂಡಿಸಿ, ರಾಮಗೊಂಡನಹಳ್ಳಿ ಗ್ರಾಮದ ರೈತರು ತಮ್ಮ ಜಾನುವಾರುಗಳೊಂದಿಗೆ ಕೃಷ್ಣಜನ್ಮಾಷ್ಠಮಿಯ ದಿನದಂದು ‘ವಿಧಾನಸೌಧ ಚಲೋ’ ಚಳವಳಿ ನಡೆಸಿ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ರಾಮಗೊಂಡನಹಳ್ಳಿ: ತಮ್ಮ ನೆಲವನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟಿಸಿದ ದನಗಳು!


