ಹರಿದ್ವಾರದ ಮಾನಸ ದೇವಿ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ. ಬೆಳಿಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ.
ದೇವಾಲಯದ ಮಾರ್ಗದಲ್ಲಿ ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎಂಬ ವದಂತಿಯಿಂದ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ದೇವರ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಮೆಟ್ಟಿಲುಗಳ ಮೇಲೆ ಜಮಾಯಿಸಿದ್ದರು. ಈ ವೇಳೆ ಹಬ್ಬಿದ ವದಂತಿಯಿಂದ ಜನರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ. ಇದರಿಂದ ಕಾಲ್ತುಳಿತ ಉಂಟಾಗಿದೆ ಎಂದು ತಿಳಿದು ಬಂದಿದೆ.
ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ಆರು ಜನರ ಸಾವನ್ನು ದೃಢಪಡಿಸಿದ್ದು, ಘಟನೆಯ ಬೆನ್ನಲ್ಲೇ ಪೊಲೀಸರು ಮತ್ತು ಇತರ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎದು ಹೇಳಿದ್ದಾರೆ.
ಜಿಲ್ಲಾಡಳಿತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ಹೇಳಿದ್ದಾರೆ.
ಗಾಯಾಳುಗಳ ಸ್ಥಿತಿಯ ಬಗ್ಗೆ ವಿಚಾರಿಸಲು ಎಸ್‌ಎಸ್‌ಪಿ ದೋಭಾಲ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾಲ್ತುಳಿತದಲ್ಲಿ ಒಟ್ಟು 35 ಜನರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೆಲವು ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಹರಿದ್ವಾರದ ಮಾನಸ ದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕಾಲ್ತುಳಿತ ಸಂಭವಿಸಿರುವ ಬಗ್ಗೆ ತುಂಬಾ ದುಃಖಕರ ಸುದ್ದಿ ಬಂದಿದೆ. ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ” ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಸಮುದ್ರ ಮಟ್ಟದಿಂದ 500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಶಿವಾಲಿಕ್ ಬೆಟ್ಟಗಳ ತುದಿಯಲ್ಲಿರುವ ಮಾನಸ ದೇವಿ ದೇವಾಲಯವು, ಮಾನಸ ದೇವಿಗೆ ಅರ್ಪಿತವಾಗಿದೆ. ಇದು ಹರಿದ್ವಾರದ ಐದು ಪವಿತ್ರ ಸ್ಥಳಗಳು ಅಥವಾ ಪಂಚ ತೀರ್ಥಗಳಲ್ಲಿ ಒಂದಾಗಿದೆ.
ಬಂಗಾಳಿ ವಲಸೆ ಕಾರ್ಮಿಕನನ್ನು ಬಂದೂಕು ತೋರಿಸಿ ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಬಿಎಸ್‌ಎಫ್: ಕುಟುಂಬದಿಂದ ಗಂಭೀರ ಆರೋಪ


