ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ತನ್ನ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದೆ. ಆದರೆ ಎಂಎಸ್‌ಪಿ (MSP) ಖಾತ್ರಿಗೆ ಕಾನೂನು ಜಾರಿ ಮಾಡಬೇಕೆಂದು ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಎಂಎಸ್‌ಪಿ ಸಾದ್ಯವಿಲ್ಲ, ಈಗಾಗಲೇ ಜಾರಿಯಲ್ಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಹಲವರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಅವೆಲ್ಲ ಸುಳ್ಳು ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಮತ್ತು ಹಿರಿಯ ರೈತ ಮುಖಂಡರಾದ ಯೋಗೇಂದ್ರ ಯಾದವ್ ಬಯಲು ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಮಾಹಿತಿಯ ಕನ್ನಡ ಅನುವಾದ ಇಲ್ಲಿದೆ.
1ನೇ ಸುಳ್ಳು: ರೈತರು ತಮ್ಮ ಹಕ್ಕೊತ್ತಾಯವನ್ನು ಬದಲಾಯಿಸಿದ್ದಾರೆ
ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುತ್ತಿದ್ದರು. ಸರ್ಕಾರ ಅವನ್ನು ಹಿಂಪಡೆದುಕೊಂಡಿದೆ. ಆದರೆ ರೈತರು ಈಗ ತಮ್ಮ ಹಕ್ಕೊತ್ತಾಯ ಬದಲಿಗೆ ಎಂಎಸ್‌ಪಿಗೆ ಕಾನೂನು ಗ್ಯಾರಂಟಿ ಕೇಳುತ್ತಿದ್ದಾರೆ.
ವಾಸ್ತವ: ಎಂಎಸ್‌ಪಿಗಾಗಿನ ಹಕ್ಕೊತ್ತಾಯವು ರೈತ ಹೋರಾಟದ ಆರಂಭದಿಂದಲೂ, ಪ್ರತಿ ಹಂತದಲ್ಲಿಯೂ ಕೇಳಿಬಂದಿದೆ. ಕೃಷಿ ಕಾಯ್ದೆಗಳು ರದ್ದಾಗಬೇಕು ಮತ್ತು ಎಂಎಸ್‌ಪಿ ಖಾತ್ರಿಯಾಗಬೇಕು ಎಂಬುದು ರೈತ ಹೋರಾಟದ ಘೋಷಣೆಯಾಗಿದೆ. ಕೇಂದ್ರ ಸರ್ಕಾರದೊಂದಿಗೆ ರೈತರ ಮೊದಲ ಮಾತುಕತೆಯಲ್ಲಿ ಕೊಟ್ಟ ಹಕ್ಕೊತ್ತಾಯ ಪತ್ರದಲ್ಲಿಯೂ ಇದು ಸೇರಿದೆ. ಕಿಸಾನ್ ಸಂಸತ್ತು ಹೋರಾಟದಲ್ಲಿಯೂ ಚರ್ಚೆಯಾಗಿದೆ.
2ನೇ ಸುಳ್ಳು: ಎಂಎಸ್‌ಪಿ ಈಗಾಗಲೇ ಜಾರಿಯಲ್ಲಿದೆ? ಅದಕ್ಕೆ ಕಾನೂನಿನ ಮಾನ್ಯತೆಯೇಕೆ?
ವಾಸ್ತವ: ಎಂಎಸ್‌ಪಿ ಎಂಬುದು ಕೇವಲ ಕಾಗದದ ಮೇಲಿದೆ. ಇದನ್ನು ಸರ್ಕಾರದ ಅಂಕಿ ಅಂಶಗಳೆ ಹೇಳುತ್ತವೆ. ದೇಶದ ಶೇ.6% ರೈತರು ಮಾತ್ರ ಎಂಎಸ್‌ಪಿಯ ಪ್ರಯೋಜನ ಪಡೆಯುತ್ತಿದ್ದಾರೆ.
3ನೇ ಸುಳ್ಳು: ಎಂಎಸ್‌ಪಿ ಕಾನೂನು ಖಾತ್ರಿ ಮಾಡಿದರೆ ಅತಿ ಹೆಚ್ಚು ನೀರಾವರಿ ಬೇಡುವ ಬೆಳೆಯಾದ ಭತ್ತದ ಅತೀ ಉತ್ಪಾದನೆಯಾಗುತ್ತದೆ ಮತ್ತು ಅಗತ್ಯ ವೈವಿಧ್ಯಮಯ ಬೆಳೆಗಳು ವಿಳಂಬವಾಗುತ್ತವೆ.
ವಾಸ್ತವ: ಭತ್ತದ ಮೇಲಿನ ರೈತರ ಅತಿಯಾದ ಅವಲಂಬನೆಗೆ ಎಂಎಸ್‌ಪಿ ಕೊಡುತ್ತಿರುವುದು ಕಾರಣವಲ್ಲ. ಅಸಮರ್ಪಕ ಖರೀದಿ ಪ್ರಕ್ರಿಯೆ ಅದಕ್ಕೆ ಕಾರಣ. ಇದಕ್ಕೆ ಎಂಎಸ್‌ಪಿ ಹಿಂತೆಗೆದುಕೊಳ್ಳುವುದು ಪರಿಹಾರವಲ್ಲ. ಬದಲಿಗೆ ಕಡಲೇ ಕಾಳು, ಮೆಕ್ಕೆ ಜೋಳ, ಗೋವಿನ ಜೋಳ, ವಿವಿಧ ಬೇಳೆ ಕಾಳುಗಳಿಗೆ ಎಂಎಸ್‌ಪಿ ದೊರೆಯುತ್ತದೆ ಎಂದು ರೈತರಿಗೆ ಖಾತರಿ ನೀಡುವುದು ಸೂಕ್ತ ಪರಿಹಾರವಾಗಿದೆ.
4ನೇ ಸುಳ್ಳು: ಬೆಳೆಗಳಿಗೆ ಎಂಎಸ್‌ಪಿ ನೀಡಿದರೆ ಮಾರುಕಟ್ಟೆ ಬಿದ್ದುಹೋಗುತ್ತದೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಆತಂಕವಿದೆ.
ವಾಸ್ತವ: ವಾಸ್ತವವೆಂದರೆ ಸಾಮಾಜಿಕ ಉದ್ದೇಶಗಳನ್ನು ಪೂರೈಸಲು ಮುಕ್ತ ಮಾರುಕಟ್ಟೆಯನ್ನು ಪ್ರಪಂಚದಾದ್ಯಂತ ನಿಯಂತ್ರಿಸಲ್ಪಡಬೇಕು. ಬೆಲೆ ಖಾತ್ರಿಯೂ ಕೆಟ್ಟದಾದರೆ ಈಗಾಗಲೇ ಎಂಎಸ್‌ಪಿ ಏಕೆ ಘೋಷಿಸಲಾಗಿದೆ?
ಆಹಾರದ ಬೆಲೆ ಏರಿಕೆಯನ್ನು ನಿಯಂತ್ರಿಸುವ ಮಾರ್ಗವೆಂದರೆ ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರದ ನೀಡುವುದೇ ಹೊರತು, ರೈತರಿಗೆ ನ್ಯಾಯಯುತ ಬೆಲೆಗಳನ್ನು ನಿರಾಕರಿಸುವುದು ಅಲ್ಲ.
5ನೇ ಸುಳ್ಳು: ಎಂಎಸ್‌ಪಿ ಎಂಬುದು ಒಳ್ಳೆಯ ಕಲ್ಪನೆ: ಆದರೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ
ವಾಸ್ತವ: ಎಲ್ಲಾ ರೈತರಿಗೆ ಎಂಎಸ್‌ಪಿ ಖಾತ್ರಿಗೊಳಿಸಲು ಹಲವಾರು ವಿಧಾನಗಳಿವೆ. ಮೊದಲನೇಯದಾಗಿ ಸರ್ಕಾರವು ಈಗ ಖರೀದಿಸುತ್ತಿರುವುದಕ್ಕಿಂತ ಹೆಚ್ಚು ಖರೀದಿಸಬೇಕು. ಮುಖ್ಯವಾಗಿ ಬೇಳೆಕಾಳುಗಳು, ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಖರೀದಿಸಿದರೆ ಸಾಕು ಉಳಿದವುಗಳನ್ನು ಖರೀದಿಸಬೇಕಾಗಿಲ್ಲ. ಬದಲಿಗೆ ಎಂಎಸ್‌ಪಿ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ಕೊರತೆಯನ್ನು ಸರ್ಕಾರ ತುಂಬಿಕೊಟ್ಟರೆ ಸಾಕು.
ಸರ್ಕಾರವು ಅಗತ್ಯಬಿದ್ದಾಗ ಮಾರುಕಟ್ಟೆಯಲ್ಲಿ ಹಸ್ತಕ್ಷೇಪವನ್ನು ಮಾಡಬಹುದು ಅಥವಾ ಬೆಲೆಗಳು ಕುಸಿಯದಂತೆ ತಡೆಯಲು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ಷಣಾ ನೀತಿಗಳನ್ನು ಬಳಸಬಹುದು. ಮತ್ತ, ಕೊನೆಯದಾಗಿ MSP ಗಿಂತ ಕಡಿಮೆ ದರದಲ್ಲಿ ಕೊಳ್ಳುವುದನ್ನು ನಿಯಂತ್ರಿಸಲು ಸರ್ಕಾರವು ದಂಡನಾತ್ಮಕ ಕ್ರಮಗಳನ್ನು ಬಳಸಬಹುದು.
6ನೇ ಹಣಕಾಸಿನ ಸುಳ್ಳು: ಭಾರತ ದಿವಾಳುತ್ತದೆ!
ವಾಸ್ತವ: 2017-18 ರ ನಮ್ಮ ಲೆಕ್ಕಾಚಾರದ ಪ್ರಕಾರ ಕೃಷಿ ಮೇಲಿನ ಒಟ್ಟಾರೆ ವೆಚ್ಚವು 47,764 ಕೋಟಿ ರೂಪಾಯಿ ಎಂದು ತೋರಿಸಿದೆ (ಆ ವರ್ಷದ ಕೇಂದ್ರ ಬಜೆಟ್‌ನ ಕೇವಲ ಶೇ.1.6 ಮತ್ತು ಜಿಡಿಪಿಯ ಶೇಕಡಾ 0.3 ಕ್ಕಿಂತ ಕಡಿಮೆ). ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದ ಮಟ್ಟಕ್ಕೆ ಎಂಎಸ್‌ಪಿಯನ್ನು ಏರಿಸಿದರೆ, ಅದಕ್ಕೆ ಇನ್ನೂ 2.28 ಲಕ್ಷ ಕೋಟಿ ರೂ. (ಬಜೆಟ್‌ನ ಸುಮಾರು ಶೇ.7.8 ಮತ್ತು ಜಿಡಿಪಿಯ ಶೇಕಡಾ 1.2) ವೆಚ್ಚವಾಗುತ್ತದೆ.
ಭಾರತವು ತನ್ನ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರ ಕಲ್ಯಾಣಕ್ಕಾಗಿ ಇದನ್ನು ಭರಿಸಬಹುದೇ? ಅದು ದೇಶ ಎದುರಿಸಬೇಕಾದ ನಿಜವಾದ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಪಂಜಾಬ್: ಖಾಸಗಿ ಮಂಡಿಗಳಲ್ಲಿ ಕಡಿಮೆ ದರಕ್ಕೆ ಹತ್ತಿ ಮಾರಲು ಒತ್ತಾಯ – ರೈತರ ಪ್ರತಿಭಟನೆ


