Homeಮುಖಪುಟಪಂಜಾಬ್: ಖಾಸಗಿ ಮಂಡಿಗಳಲ್ಲಿ ಕಡಿಮೆ ದರಕ್ಕೆ ಹತ್ತಿ ಮಾರಲು ಒತ್ತಾಯ - ರೈತರ ಪ್ರತಿಭಟನೆ

ಪಂಜಾಬ್: ಖಾಸಗಿ ಮಂಡಿಗಳಲ್ಲಿ ಕಡಿಮೆ ದರಕ್ಕೆ ಹತ್ತಿ ಮಾರಲು ಒತ್ತಾಯ – ರೈತರ ಪ್ರತಿಭಟನೆ

- Advertisement -
- Advertisement -

ಖಾಸಗಿ ಕಂಪನಿಗಳು ಮಂಡಿಗಳಲ್ಲಿ ಹತ್ತಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಒತ್ತಾಯಿಸುತ್ತಿವೆ ಎಂದು ಆರೋಪಿಸಿ ರೈತರು ಪಂಜಾಬ್‌ನ ಬಟಿಂಡಾದ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ಮಾಳ್ವಾ ಜಿಲ್ಲೆಯ ಕೆಲವು ಮಂಡಿಗಳಲ್ಲಿ ಹತ್ತಿ ಬೆಳೆಗಾರರಿಗೆ ಎಂಎಸ್ಪಿ ಕೂಡ ಸಿಗುತ್ತಿಲ್ಲ. ರೈತರ ಬೆಳೆದ ಹತ್ತಿಯನ್ನು ಕಳಪೆ ಗುಣಮಟ್ಟ ಎಂದು ಉಲ್ಲೇಖಿಸುತ್ತಿರುವ ಖಾಸಗಿ ಕಂಪನಿಗಳು, ಬೆಳೆಗೆ ಕಡಿಮೆ ಬೆಲೆ (ಎಂಎಸ್ಪಿಗಿಂತ) ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಳ್ವಾ ಪ್ರದೇಶದಲ್ಲಿನ ರೈತರು ಬೆಳೆದ ಹತ್ತಿಗೆ ಈ ಋತುವಿನಲ್ಲಿ ಸಾರ್ವಕಾಲಿಕ ಹೆಚ್ಚಿನ ಬೆಲೆ ಅಂದರೆ ಕ್ವಿಂಟಾಲ್‌ಗೆ 9,400 ರೂ ಇದೆ. ಅಕಾಲಿಕ ಮಳೆ ಹಾಗೂ ಗುಲಾಬಿ ಬೂದಿ ಹುಳುವಿನ ದಾಳಿಯಿಂದಾಗಿ ಈ ಪ್ರದೇಶದಲ್ಲಿ ಹತ್ತಿ ಬೆಳೆಗೆ ಗಣನೀಯ ಹಾನಿ ಉಂಟಾಗಿದ್ದು, ಇದು ಹತ್ತಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ಬಟಿಂಡಾ ಜಿಲ್ಲೆಯ ಶೇರ್ಗಡ ಗ್ರಾಮದ ರೈತ ಸಂದೀಪ್ ಸಿಂಗ್ ಮಾತನಾಡಿ, ‘ಒಂದು ವಾರದ ಹಿಂದೆಯಷ್ಟೆ ಹತ್ತಿ ಪ್ರತಿ ಕ್ವಿಂಟಾಲ್‌ಗೆ 8,500 ರೂಗೆ ಮಾರಾಟವಾಗಿತ್ತು. ಆದರೆ ಪ್ರಸ್ತುತ ಉತ್ತಮ ಗುಣಮಟ್ಟದ ಹತ್ತಿಯು 7,500 ರೂಗಿಂತ ಹೆಚ್ಚು ದರಕ್ಕೆ ಮಾರಾಟವಾಗುತ್ತಿಲ್ಲ. ಹತ್ತಿಯು ಉತ್ತಮ ಗುಣಮಟ್ಟದ್ದಾಗಿದ್ದು, ಕಡಿಮೆ ದರಕ್ಕೆ ನಾವು ಮಾರಾಟ ಮಾಡಲು ನಾವು ಸಿದ್ಧರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈ ಸಿಂಗ್ವಾಲ ಗ್ರಾಮದ ಮತ್ತೊಬ್ಬ ರೈತರಾದ ಜಗದೇವ್ ಸಿಂಗ್ ಮಾತನಾಡಿ, ‘ಕೆಲ ಸಮಯದ ಹಿಂದೆ ಹತ್ತಿ ಪ್ರತಿ ಕ್ವಿಂಟಾಲ್ಗೆ 9,400 ರೂಗೆ ಖರೀದಿಸಲಾಗಿತ್ತು. ಆದರೆ ಈಗ ಉದ್ದೇಶಪೂರ್ವಕವಾಗಿ ಖಾಸಗಿಯವರು ಬೆಲೆಯನ್ನು ಕಡಿಮೆ ಮಾಡಿದ್ದಾರೆ. ನಾನು ತಂದ ಉತ್ತಮ ಗುಣಮಟ್ಟದ ಹತ್ತಿಗೆ ಅವರು ಕೇವಲ 7,490 ರೂ ಕೊಡುತ್ತೇವೆ ಎಂದರು ನಾನು ಮಾರಲು ನಿರಾಕರಿಸಿದೆ. ಅವರು ಬೆಲೆ ಏರಿಸದಿದ್ದರೆ, ನಾನು ಬೇರೆ ಮಂಡಿಗೆ ಹೋಗಿ ಅಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾನ್ಸಾ ಜಿಲ್ಲೆಯಲ್ಲಿ, ಖಾಸಗಿಯವರು ಹತ್ತಿಯನ್ನು ಕ್ವಿಂಟಲ್ಗೆ 5,200 ರೂಗೆ ಖರೀದಿಸಿದ್ದಾರೆ. ಇದು ಈ ವರ್ಷ ನಿಗದಿಪಡಿಸಿರುವ ಎಂಎಸ್ಪಿ (ಕನಿಷ್ಟ ಬೆಂಬಲ ಬೆಲೆ) 5,925 ರೂ ಗಿಂತ ಕಡಿಮೆಯಾಗಿದೆ.
ಖಾಸಗಿಯವರ ಈ ನಿರಂಕುಶ ಧೋರಣೆ ವಿರುದ್ಧ ಹತ್ತಿ ಬೆಳೆಗಾರರು ಕೆಲ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಖಾಸಗಿ ಕಂಪನಿಗಳು ಖರೀದಿಸುತ್ತಿರುವ ಹತ್ತಿಯ ಬೆಲೆಯಲ್ಲಿ ಖಂಡಿತವಾಗಿಯೂ ಇಳಿಕೆಯಾಗಿದೆ ಎಂದು ಭಾರತೀಯ ಹತ್ತಿ ನಿಗಮದ (ಸಿಸಿಐ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಖಾಸಗಿ ಕಂಪನಿಗಳು ಒಟ್ಟುಗೂಡಿ ‘ಪೂಲ್’ ಅನ್ನು ರಚಿಸಿಕೊಂಡಿವೆ. ಅವರು ಮುಂಚೆಯೇ ಮಾತಾಡಿಕೊಂಡಿದ್ದು ಉತ್ತಮ ಗುಣಮಟ್ಟದ ಹತ್ತಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ಉಲ್ಲೇಖಿಸದಿರಲು ನಿರ್ಧರಿಸಿದ್ದಾರೆ’ ಎಂದು ಅವರು ಹೇಳಿದರು.

ಮಾನ್ಸಾ ಜಿಲ್ಲೆಯ ಬಿಕೆಯು (ದಕೌಂಡ)ದ ಮುಖಂಡ ಗೋರಾ ಸಿಂಗ್ ಭೈನಿ ಬಾಘಾ ಮಾತನಾಡಿ, ‘ಕೆಲವೇ ದಿನಗಳ ಹಿಂದೆ ಉತ್ತಮ ಗುಣಮಟ್ಟದ ಹತ್ತಿ ಕ್ವಿಂಟಲ್‌ಗೆ 8,500 ರಿಂದ 9,400 ರೂ ಸಿಗುತ್ತಿತ್ತು. ಈಗ ಇದ್ದಕ್ಕಿದ್ದಂತೆ ಬೆಲೆ ಕುಸಿದಿರುವುದು ಹೇಗೆ? ಕೀಟಬಾಧೆ ಹಾಗೂ ಅಕಾಲಿಕ ಮಳೆಯಿಂದ ಹತ್ತಿ ಬೆಳೆಗಾರರು ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡದಿದ್ದರೆ, ನಾವು ಶೀಘ್ರದಲ್ಲೇ ಅನಿರ್ದಿಷ್ಟ ಹೋರಾಟವನ್ನು ಪ್ರಾರಂಭಿಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...