ತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆಗಳ ಹಾವಳಿ ಮಿತಿ ಮೀರಿದೆ. ರಕ್ತದ ರುಚಿಯನ್ನು ಕಂಡಿರುವ ಚಿರತೆಗಳು ಮನುಷ್ಯರ ಮೇಲೆ ಎರಗುತ್ತಲೇ ಇವೆ. ಚಿರತೆಗಳು ಕುಣಿಗಲ್, ತುಮಕೂರು ಮತ್ತು ಗುಬ್ಬಿ ತಾಲೂಕಿನಲ್ಲಿ ಮನುಷ್ಯರ ರಕ್ತಹೀರಿ ಕೊಂದಿದೆ. ಚಿರತೆ ದಾಳಿಗೆ ಇದುವರೆಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ. ಅರಣ್ಯ ಇಲಾಖೆಯವರು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆಯೇ ಹೊರತು ನರಭಕ್ಷ ಚಿರತೆ ಹಿಡಿಯುವ, ಅದನ್ನು ಗುರುತಿಸುವ ಗೋಜಿಗೆ ಹೋಗುತ್ತಿಲ್ಲ. ಚಿರತೆ ಮಾತ್ರ ಮರೆಸಿಮರೆಸಿ ದಾಳಿ ಮಾಡುತ್ತಲೇ ಇದೆ. ಅರಣ್ಯ ಸಿಬ್ಬಂದಿ ಹುಡುಕಿದಂತೆ ಮಾಡಿ ಮೌನವಾಗುತ್ತಿದ್ದಾರೆ. ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ ಕೇಳುವವರೇ ಇಲ್ಲ.
ಬಹುತೇಕ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಚಿರತೆಗಳ ಹಾವಳಿ ಇದೆ. ನಿತ್ಯವೂ ಒಂದಿಲ್ಲೊಂದು ತಾಲೂಕಿನಲ್ಲಿ ಕುರಿ, ಮೇಕೆ, ನಾಯಿಗಳನ್ನು ಚಿರತೆಗಳು ಹೊತ್ತೊಯ್ಯುತ್ತಲೇ ಇವೆ. ತಮ್ಮ ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುವ ರೈತರು ಹಾಗೂ ಗ್ರಾಮಸ್ಥರು ಚಿರತೆಗಳ ನಿಯಂತ್ರಣಕ್ಕೆ ಹಲವು ಬಾರಿ ಮನವಿಗಳನ್ನು ನೀಡಿದರೂ ಪ್ರಯೋಜನ ಮಾತ್ರ ಶೂನ್ಯ. ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ, ಮೊಂಡು ಬೀಳುವಿಕೆಗೆ ಬೇಸತ್ತಿದ್ದಾರೆ. ಎಷ್ಟು ಮನವಿ ಮಾಡಿದರೂ ಕಿವಿಗೇ ಹಾಕಿಕೊಳ್ಳುವುದಿಲ್ಲ. ಯಾರ ಮಾತು ಯಾರೂ ಕೇಳುತ್ತಿಲ್ಲ. ಸುಖಾಸುಮ್ಮನೆ ವೇತನ ಪಡೆಯುತ್ತಿದ್ದಾರೆ. ಜನರ ಸಂಕಟ, ನೋವು ಕೇಳದ ಅಧಿಕಾರಿಗಳು ಇದ್ದೂ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಫೆ.29ರಂದು ಸಂಜೆ 6 ಗಂಟೆಗೆ ತುಮಕೂರು ತಾಲೂಕು ಕಣಕುಪ್ಪೆ ಗ್ರಾಮದಲ್ಲಿ ಚಂದನಾ ಎಂಬ ಮೂರು ವರ್ಷದ ಮಗು ಮತ್ತು ಆಕೆಯ ತಾತ ಮತ್ತು ಗಂಗಚಿಕ್ಕಣ್ಣ ಆಟವಾಡಿಕೊಂಡು ಕುಳಿತಿದ್ದರು. ಕತ್ತಲು ಇನ್ನೂ ಆವರಿಸಿರಲಿಲ್ಲ. ಸೂರ್ಯ ಇನ್ನೂ ಮುಳುಗಿರಲಿಲ್ಲ.. ನೋಡನೋಡುತ್ತಿದ್ದಂತೆಯೇ ಬಾಲಕಿಯ ಮೇಲೆ ಚಿರತೆ ಎರಗಿತು. ಕಣಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ ಕೂಗಿಕೊಂಡರು. ಆದರೂ ಬಿಡದ ಚಿರತೆ ಅರ್ಧಕಿಲೋಮೀಟರ್ ದೂರದ ಪೊದೆಗೆ ಎಳೆದೊಯ್ದು ಬಾಲಕಿ ಕುತ್ತಿಗೆ ಸೀಳಿ ರಕ್ತ ಹೀರಿದೆ. ಮುಖ ಮತ್ತು ತೊಡೆಯ ಮಾಂಸ ಖಂಡ ತಿಂದು ಹೋಗಿದೆ. ಜನರು ಕೂಗುತ್ತ ಅಲ್ಲಿಗೆ ಹೋಗದಿದ್ದರೆ ಬಾಲಕಿಯನ್ನು ಸಂಪೂರ್ಣವಾಗಿ ಮುಗಿಸಿಬಿಡುತ್ತಿತ್ತು ಎನ್ನುತ್ತಾರೆ ಘಟನೆ ಕಂಡವರು.
ದುರಂತವೆಂದರೆ ತುಮಕೂರು ತಾಲೂಕು ಹೆಬ್ಬೂರು ಹೋಬಳಿಯಲ್ಲೇ ಚಿರತೆ ಮೂರು ಬಲಿ ಪಡೆದುಕೊಂಡಿದೆ. ಪ್ರತಿ ದಾಳಿ ನಡೆದಾಗಲೂ ಜನರು ಹೆಬ್ಬೂರಿನಲ್ಲಿ ಪ್ರತಿಭಟನೆ ನಡೆಸಿ ಚಿರತೆಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ರಸ್ತೆ ತಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹಿಡಿಸುವ ಭರವಸೆ ನೀಡಿಯೂ ಬಂದಿದ್ದರು. ಮತ್ತೆ ಚಿರತೆ ದಾಳಿ ನಡೆಸಿದ್ದು ಜನರನ್ನು ಮತ್ತಷ್ಟು ಕೆರಳುವಂತೆ
ಮಾಡಿದೆ. ಚಿರತೆ, ಕರಡಿ, ಆನೆಗಳು ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಹೆಜ್ಜೆ ಗುರುತು ಫೋಟೋ ತೆಗೆದ ಕಳಿಸಿ, ಚಿರತೆಯ ಪೋಟೋ ಕಳಿಸಿ ಎಂದು ಹೇಳುತ್ತಾರೆ. ತಮ್ಮ ಕರ್ತವ್ಯ ಮರೆಯುತ್ತಾರೆ. ನಾವು ಫೋಟೋಗಳ ತೆಗೆಯಲು ಕ್ಯಾಮೆರಾಗಳನ್ನು ಎಲ್ಲಿಗೆ ಹುಡುಕಿಕೊಂಡು ಹೋಗಬೇಕು ಎನ್ನುತ್ತಾರೆ ಚಿಕ್ಕವೆಂಕಟಪ್ಪ.
ಇದನ್ನೂ ಓದಿ: ತುಮಕೂರಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ವ್ಯಾಪಕ ಬಲಿ: ಕ್ರಮಕ್ಕೆ ಮುಂದಾಗದ ಸರ್ಕಾರ…
ಅರಣ್ಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ರೈತರು ಸಮಸ್ಯೆ ಹೇಳಿಕೊಂಡರೂ ಕೇಳುವುದಿಲ್ಲ. ಚಿರತೆ ದಾಳಿ ಮಾಡಿದಾಗ ಕೇವಲ ಬೋನಿಟ್ಟು ಹೋಗುತ್ತಾರೆ. ಅದು ಬಿದ್ದ ಮೇಲೆ ಅರಣ್ಯಕ್ಕೆ ಬಿಟ್ಟು ಬರುತ್ತಾರೆ. ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮಾನವ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಡಲ್ಲಿ ಗುಂಡಿಕ್ಕು ಆದೇಶ ಜಾರಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೆಬ್ಬರೂ ವ್ಯಾಪ್ತಿಯಲ್ಲೇ ಹೆಚ್ಚು ಇಂತಹ ದಾಳಿಗಳು ನಡೆಯುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಚಿರತೆಗಳು ಯಾವಾಗ ಮೇಲೆರಗುತ್ತವೋ ಎಂಬ ಭೀತಿಯಲ್ಲಿ ಜನ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಒಂದು ಕಡೆಯಾದರೆ ಕರಡಿಗಳು ಮತ್ತು ಆನೆಗಳ ದಾಳಿಯ ಭೀತಿ ಕೂಡ ಜನರಲ್ಲಿದೆ. ವನ್ಯಜೀವಿಗಳ ಹಾವಳಿ ಹೆಚ್ಚಿದಂತೆಲ್ಲ ಬೆಳೆ ಹಾನಿ, ಜೀವಹಾನಿ ಆಗುತ್ತಲೇ ಇದ್ದು ಅರಣ್ಯ ಇಲಾಖೆ ಯಾವುದೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಇದುವರೆಗೂ ಆಗಿಲ್ಲ.


