ಲೋಕಸಭೆ ಚುನಾವಣೆಯ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಾರಿ ಕೇಂದ್ರದ ಹಾಲಿ 16 ಸಚಿವರು ಸೋಲನ್ನು ಕಂಡಿದ್ದಾರೆ.
ಅಮೇಥಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಮೋಹನ್‌ಲಾಲ್‌ಗಂಜ್ ಕ್ಷೇತ್ರದಲ್ಲಿ ಕೇಂದ್ರ ವಸತಿ ಖಾತೆ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಸಮಾಜವಾದಿ ಪಕ್ಷದ ಆರ್.ಕೆ. ಚೌಧರಿ ವಿರುದ್ಧ ಸೋಲನ್ನು ಕಂಡುಕೊಂಡಿದ್ದಾರೆ. ಚಂದೌಲಿ ಕ್ಷೇತ್ರದಲ್ಲಿ ಕೈಗಾರಿಕೆ ಖಾತೆ ಸಚಿವ ಮಹೇಂದ್ರ ನಾಥ್ ಪಾಂಡೆ ಸಮಾಜವಾದಿ ಪಕ್ಷ ಎಸ್‌ಪಿಯ ಬೀರೇಂದ್ರ ಸಿಂಗ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ತಿರುವನಂತಪುರಂ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಹಾಲಿ ಸಚಿವರಾದ ರಾಜೀವ್ ಚಂದ್ರಶೇಖರ್ ಕಾಂಗ್ರೆಸ್ ನಾಯಕ ಶಶಿತರೂರ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಲಖಿಂಪುರ ಖೇರಿ ಕ್ಷೇತ್ರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಬಂಕುರಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ, ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್, ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಅರೂಪ್ ಚಕ್ರವರ್ತಿ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಕುಂತಿ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ರೈತ ಮತ್ತು ಕೃಷಿ ಕಲ್ಯಾಣೆ ಖಾತೆ ಸಚಿವ ಅರ್ಜುನ್ ಮುಂಡಾ ಕಾಂಗ್ರೆಸ್‌ನ ಕಾಳಿಚರಣ್ ಮುಂಡಾ ವಿರುದ್ಧ ಸೋತಿದ್ದಾರೆ.
ಬೀದರ್‌ನಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಸೋಲಿಸಿದ್ದಾರೆ. ರಾಜಸ್ಥಾನದ ಬಾರ್ಮರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಮ್ ಬೆನಿವಾಲ್ ವಿರುದ್ಧ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಸೋಲನ್ನು ಕಂಡಿದ್ದು, ಮೂರನೇ ಸ್ಥಾನಕ್ಕೆ ತಲ್ಲಲ್ಪಟ್ಟಿದ್ದಾರೆ.
ಕೂಚ್ ಬೆಹಾರ್ ಕ್ಷೇತ್ರದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಟಿಎಂಸಿಯ ಜಗದೀಶ್ ಚಂದ್ರ ಬಸುನಿಯಾ ವಿರುದ್ಧ ಸೋಲನ್ನು ಕಂಡಿದ್ದಾರೆ. ಮುಜಾಫರ್ ನಗರದಲ್ಲಿ ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ಮಲಿಕ್ ವಿರುದ್ಧ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಸೋಲನ್ನು ಅನುಭವಿಸಿದ್ದಾರೆ. ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಕೇರಳದ ತಿರುವನಂತಪುರಂನಲ್ಲಿ ಸೋಲು ಕಂಡಿದ್ದಾರೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಲ್ ಮುರುಗನ್ ಅವರು ತಮಿಳುನಾಡಿನ ನೀಲಗಿರಿಯಲ್ಲಿ ಡಿಎಂಕೆಯ ಎ ರಾಜಾ ವಿರುದ್ಧ 2,40,585 ಮತಗಳ ಗಣನೀಯ ಅಂತರದಿಂದ ಸೋತಿದ್ದಾರೆ.
ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಯುಪಿಯ ಫತೇಪುರ್‌ನಲ್ಲಿ ಸೋತಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಮಹಾರಾಷ್ಟ್ರದ ಜಲ್ನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಲ್ಯಾಣ ವೈಜನಾಥ್ ರಾವ್ ಕಾಳೆ ವಿರುದ್ಧ ಸೋತಿದ್ದಾರೆ. ಸಂಪುಟ ಸಚಿವ ಆರ್‌ಕೆ ಸಿಂಗ್ ಅವರು ಬಿಹಾರದ ಅರ್ರಾದಿಂದ ಸಿಪಿಐ(ಎಂಎಲ್)ನ ಸುದಾಮ ಪ್ರಸಾದ್ ವಿರುದ್ಧ ಸೋತಿದ್ದಾರೆ.
ಇದನ್ನು ಓದಿ: ಮೋದಿ ನೇತೃತ್ವದ ಎನ್‌ಡಿಎಗೆ ಬೆಂಬಲಿಸಬೇಡಿ: ನಿತೀಶ್, ನಾಯ್ಡುಗೆ ಮಮತಾ ಬ್ಯಾನರ್ಜಿ ಮನವೊಲಿಸಲು ಪ್ರಯತ್ನ


