ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇಪ್ಪ ಸಭೆಯ ಅಂಗೀಕಾರ ಕೋರಿ ವಿಧೇಯಕವನ್ನು ಪರ್ಯಾಲೋಚನೆಗೆ ತಂದರು.
ಅಸಂವಿಧಾನಿಕ ಆಚರಣೆಗಳಾದ ಜಾತಿ ಪಂಚಾಯಿತಿಗಳು ಹೇರುವ ಸಾಮಾಜಿಕ ಬಹಿಷ್ಕಾರ, ಕಿರುಕುಳ, ವಿವಿಧ ರೀತಿಯ ಶಿಕ್ಷೆಗಳನ್ನು ತಡೆಗಟ್ಟಿ ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡುವುದಕ್ಕಾಗಿ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025ನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ದ್ವೇಷ ಭಾಷಣ ವಿಧೇಯ ಅಂಗೀಕಾರ
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಕೂಡ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ವಿಧೇಯಕವು ವ್ಯಕ್ತಿಗಳ, ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂತಹ ಅಪರಾಧಗಳಿಗೆ ದಂಡನೆಯನ್ನು ಉಪಬಂದಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಈ ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕವನ್ನು ತರಲಾಗಿದೆ ಎಂದು ತಿಳಿಸಿದರು.
ದ್ವೇಷ ಭಾಷಣ ಪುನರಾವರ್ತನೆಗೆ ಗರಿಷ್ಠ ಶಿಕ್ಷೆ 10 ವರ್ಷದ ಬದಲಾಗಿ 7 ವರ್ಷ ಜೈಲು ಶಿಕ್ಷೆ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ ಮುದ್ರಿತ ಪುಸ್ತಕಗಳಿಗೂ ಅನ್ವಯ
ವಿಧೇಯಕದ ಕುರಿತು ಚರ್ಚಿಸುವಾಗ, ಈಗಾಗಲೇ ಮುದ್ರಿತವಾಗಿರುವ ಪುಸ್ತಕ, ಗ್ರಂಥದಲ್ಲಿ ದ್ವೇಷದ ಮಾತುಗಳು ಇವೆ ಎಂದಾದರೆ ಏನು ಕ್ರಮ? ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಪರಮೇಶ್ವರ್, “ಹಳೆ ಪುಸ್ತಕದಲ್ಲಿ ಇಂತಹ ಅಂಶ ಇದ್ದರೆ, ಅದು ಕೂಡಾ ಈ ಕಾನೂನಿನ ವ್ಯಾಪ್ತಿಯಲ್ಲಿ ಬರಲಿದೆ. ಅಂತವನ್ನು ಬ್ಯಾನ್ ಮಾಡುವ ಪ್ರಕ್ರಿಯೆಗೆ ಅವಕಾಶ ಇದೆ ಎಂದು ತಿಳಿಸಿದರು.
ವಿಧೇಯಕವನ್ನು ಪರ್ಯಾಲೋಚಿಸಿ ಅನುಮೋದನೆ ನೀಡುವಂತೆ ಕೋರಿದರು. ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಪ್ರತಿಪಕ್ಷ ಸದಸ್ಯರು ವಿಧೇಯಕ ಪ್ರತಿಗಳನ್ನು ಹರಿದು ತೀವ್ರ ವಿರೋಧ ವ್ಯಕ್ತಪಡಿಸಿದರು.


