Homeಮುಖಪುಟಕೆಲ ಬಿಜೆಪಿ ಮುಖಂಡರೆ ನಮ್ಮ ರೈತ ಆಂದೋಲನ ಮೆಚ್ಚಿಕೊಂಡಿದ್ದಾರೆ: ರಾಕೇಶ್ ಟಿಕಾಯತ್

ಕೆಲ ಬಿಜೆಪಿ ಮುಖಂಡರೆ ನಮ್ಮ ರೈತ ಆಂದೋಲನ ಮೆಚ್ಚಿಕೊಂಡಿದ್ದಾರೆ: ರಾಕೇಶ್ ಟಿಕಾಯತ್

- Advertisement -
- Advertisement -

ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಮತ್ತು ಎಂಎಸ್‌ಪಿಗಾಗಿ ಕಾನೂನು ತರಲು ದೆಹಲಿಯಲ್ಲಿ ಒಂದು ದೊಡ್ಡ ಆಂದೋಲನ ನಡೆಯುತ್ತಿದೆ. ದೆಹಲಿಯನ್ನು ನಾಲ್ಕು ದಿಕ್ಕೂಗಳಿಂದ ರೈತರು ಸುತ್ತುವರೆದಿದ್ದಾರೆ. ಸರ್ಕಾರದೊಂದಿಗೆ 12 ಸುತ್ತಿನ ಮಾತುಕತೆಗಳು ನಡೆದಿವೆ. ಜನಪರ ಸರ್ಕಾರವಾಗಿದ್ದರೆ ರೈತರ ಸಮಸ್ಯೆಯನ್ನು ಬಗೆಹರಿಸುತ್ತಿತ್ತು. ಆದರೆ ಇದು ಬಂಡವಾಳಶಾಹಿಪರ ಸರ್ಕಾರವಾಗಿದೆ. ಎರಡು ತಿಂಗಳಿನಿಂದ ಸರ್ಕಾರ ಮಾತುಕತೆ ಸ್ಥಗಿತಗೊಳಿಸಿದೆ. ಆದರೆ ಜನ ಎಚ್ಚೆತ್ತುಕೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ, ಮುನ್ನಡೆಯಲು ಸಹಕರಿಸುತ್ತಿದ್ದಾರೆ, ಇದು ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 26 ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಯತ್ನಿಸುತ್ತಿದೆ. ರೈಲ್ವೇ, ಏರ್‌ಪೋರ್ಟ್, ದೊಡ್ಡ ತೈಲ ಕಂಪನಿಗಳು, ಎಲ್‌ಐಸಿಯಂತಹ ದೊಡ್ಡ ಸಾರ್ವಜನಿಕ ಸಂಸ್ಥೆಗಳು ಮಾರಾಟವಾಗುತ್ತಿವೆ. ಆದರೆ ಜನರನ್ನು ಮಂದಿರದ ಸುತ್ತ ಸುತ್ತಿಸಲಾಗುತ್ತಿದೆ. ಜಾತಿ ಧರ್ಮ ವಿಷಯದಲ್ಲಿ ಹೊಡೆದಾಡುವಂತೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಬಾರದಂತೆ ಜನರನ್ನು ಕಟ್ಟಿಹಾಕಲಾಗುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಇಂದು ಮಣ್ಣಿನ ಮತ್ತು ಆಹಾರದ ವ್ಯಾಪಾರಕ್ಕೆ ದೊಡ್ಡ ಬಂಡವಾಳಶಾಹಿಗಳು ಮುಂದಾಗಿದ್ದಾರೆ. ದಿನನಿತ್ಯದ ಹಸಿವಿನ ವ್ಯಾಪಾರಕ್ಕಿಳಿದಿದ್ದಾರೆ. ಎಷ್ಟು ಜನ ಹಸಿದುಕೊಂಡಿದ್ದಾರೆ, ಹಸಿವಿನ ಪ್ರಮಾಣವೆಷ್ಟು ಎಂಬುದರ ಆಧಾರದಲ್ಲಿ ಅವರು ಆಹಾರದ ದರಗಳನ್ನು ನಿಗಧಿಮಾಡುತ್ತಿದ್ದಾರೆ. ಇಂದು ನೀವು ಮ್ಯಾಕ್‌ಡೋನಾಲ್ಡ್, ಕೆಎಫ್‌ಸಿ ಯಂತಹ ಹೋಟೆಲ್‌ಗಳನ್ನು ನೋಡಿರಬಹುದು. ಅವು ಆಹಾರವನ್ನು ಪ್ಯಾಕ್ ಮಾಡಿ ಮಾರುತ್ತವೆ. ಆಹಾರ ಉಳಿದುಕೊಂಡರೆ ಅಂದೇ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಅದನ್ನು ನಿಮ್ಮದೇ ಕಂಪನಿಯ ಕಾರ್ಮಿಕರೇಕೆ ಕೊಡುವುದಿಲ್ಲ ಎಂದು ನಾನು ಕೇಳಿದರೆ ಅವರ ಬಳಿ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯುವಜನರಿಂದ ಉದ್ಯೋಗಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಶಾಸಕರು, ಸಂಸದರಿಗೆ ಎರಡು ಮೂರು ರೀತಿಯ ಪಿಂಚಣಿಗಳನ್ನು ಕೊಡಲಾಗುತ್ತಿದೆ. ಆದರೆ ದೇಶ ಕಟ್ಟುತ್ತಿರುವ ಸಾಮಾನ್ಯ ಕಾರ್ಮಿಕರಿಗೆ-ನೌಕರರಿಗೆ, ದೇಶಕಾಯುತ್ತಿರುವ ಸೈನಿಕರಿಗೆ ಮಾತ್ರ ಪಿಂಚಣಿ ಕೊಡುತ್ತಿಲ್ಲ. ಎಲ್‌ಪಿಜಿ ಸಬ್ಸಿಡಿ ಬಿಡಿ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಾವು ಶಾಸಕರು, ಸಂಸದರಿಗೆ ಪಿಂಚಣಿ ಬಿಡಿ ಎಂದು ನಾವು ಕೇಳಬೇಕು ಎಂದರು.

ನಮ್ಮೊಂದಿಗೆ ಸಂಪರ್ಕದಲ್ಲಿರುವ ಕೆಲ ಬಿಜೆಪಿ ಮುಖಂಡರೆ ನಮ್ಮ ರೈತ ಆಂದೋಲನವನ್ನು ಮೆಚ್ಚಿಕೊಂಡಿದ್ದಾರೆ. ಅದನ್ನು ಮುಂದುವರೆಸಿ ಎಂದು ಹಾರೈಸಿದ್ದಾರೆ. ಸದನದ ಒಳಗೆ ವಿರೋಧ ಪಕ್ಷಗಳ ದನಿ ಕ್ಷೀಣಿಸುತ್ತಿರುವಾಗ ನಾವು ದೇಶದ ಎಲ್ಲಾ ಮೂಲೆಗಳಲ್ಲಿ ರೈತ ಆಂದೋಲನವನ್ನು ಹುಟ್ಟುಹಾಕಬೇಕಾಗಿದೆ ಎಂದರು.

ಟ್ರ್ಯಾಕ್ಟರ್ ಎಂಬುದು ರೈತನ ಅವಿಭಾಜ್ಯ ಅಂಗವಾಗಿದೆ. ಅದು ಎಲ್ಲಾ ಕಷ್ಟಗಳನ್ನು ಬದಿಗೊತ್ತಿ ರೈತನಿಗೆ ಅವರ ಸ್ವಂತ ದಾರಿ ಮಾಡಿಕೊಡುತ್ತದೆ. ಟ್ರ್ಯಾಕ್ಟರ್‌ಗಳಿಲ್ಲದಿದ್ದರೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿ ತಲುಪುವುದು ಕಷ್ಟವಾಗುತ್ತಿತ್ತು. ಈಗ ಹತ್ತು ವರ್ಷ ಹಳೆಯದಾಗಿರುವ ಟ್ರ್ಯಾಕ್ಟರ್‌ಗಳನ್ನು ಬಳಸಬಾರದು ಎಂದು ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ರೈತರು ಹತ್ತು ವರ್ಷಕ್ಕೊಮ್ಮೆ ಹೊಸ ಟ್ರ್ಯಾಕ್ಟರ್ ಖರೀದಿಸಲು ಸಮರ್ಥರಾಗಿದ್ದಾರೆಯೇ? ಬೀಜ ಕಾಯ್ದೆ ತಂದು ರೈತರ ಸ್ವಾಯುತ್ತತ್ತೆ ಕಸಿದುಕೊಳ್ಳಲಾಗುತ್ತಿದೆ. ಅದೇ ಸಮಯದಲ್ಲಿ ವಿದ್ಯುತ್ ತಿದ್ದುಪಡಿ ಕಾಯ್ದೆಯ ಮೂಲಕ ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತದೆ. ಇದೆಲ್ಲವೂ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸಿ ದೊಡ್ಡ ಬಂಡವಾಳಶಾಹಿಗಳು ಕೃಷಿಯ್ನು ವಶಪಡಿಸಿಕೊಳ್ಳಲು ಮಾಡುತ್ತಿರುವ ಹುನ್ನಾರ ಎಂದು ರಾಕೇಶ್ ಟಿಕಾಯತ್ ಆತಂಕ ವ್ಯಕ್ತಪಡಿಸಿದರು.

ರೈತರ ಬೆಳೆಗಳನ್ನು ಮಾರಲು ಎಪಿಎಂಸಿ ಬೇಕಾಗಿಲ್ಲ ಎಲ್ಲಿ ಬೇಕಾದರೂ ಮಾರಬಹುದು ಎಂದು ಸರ್ಕಾರ ಹೇಳುತ್ತಿದೆ. ಹಾಗಾಗಿ ನೀವು ಬೆಳೆದ ಬೆಳೆಯನ್ನು ವಿಧಾನಸೌಧಕ್ಕೆ ತಂದು ಮಾರಬೇಕು. ಯಾರಾದರೂ ತಡೆದರೆ ನೀವು ಸರ್ಕಾರವನ್ನು ಪ್ರಶ್ನಿಸಿ ಎಂದು ಹೇಳಬೇಕು ಎಂದರು.

ಸರ್ಕಾರದ ವತಿಯಿಂದ ಕೃಷಿ ಸಚಿವರಾದ ಬಿ.ಸಿ ಪಾಟೀಲ್‌ರವರು ರೈತರ ಹಕ್ಕೊತ್ತಾಯ ಪತ್ರ ಪಡೆದರು. ಇಂದಿನ ಹೋರಾಟದಲ್ಲಿ ದೆಹಲಿಯ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ಬಿಕೆಯು ಪ್ರಧಾನ ಕಾರ್ಯದರ್ಶಿ ಯುಧುವೀರ್ ಸಿಂಗ್, ಕುಲ್‌ಬೀರ್‌ ಸಿಂಗ್, ರಾಜ್ಯದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಇದನ್ನೂ ಓದಿ: ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...