ಸೋನು ಸೂದ್.. ಈ ಹೆಸರು ಕಳೆದೊಂದು ವರ್ಷದಿಂದ ಭಾರತದಲ್ಲಿ ಲಕ್ಷಾಂತರ ಜನರ ಪಾಲಿಗೆ ದೇವರಿಗೆ ಸಮ. ಕಳೆದ ವರ್ಷ ನರೇಂದ್ರ ಮೋದಿ ಹೇರಿದ ಲಾಕ್‌ಡೌನ್ ಸಂದರ್ಭದಲ್ಲಿ ಸಿಕ್ಕಿಕೊಂಡ ಸಾವಿರಾರು ಜನರನ್ನು ಅವರ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಿದವರು ಸೋನು ಸೂದ್. ಅಲ್ಲಿಂದ ಇಂದಿನವರೆಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೂರಾರು ರೀತಿಯಲ್ಲಿ ಈ ನಟ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೋವಿಡ್ ಎರಡನೇ ಅಲೆ ಸಾವಿರಾರು ಜನರ ಸಾವುನೋವುಗಳಿಗೆ ಕಾರಣವಾಗುತ್ತಿರುವ ಸಂದರ್ಭದಲ್ಲಿ ಔಷಧಿ ಆಕ್ಸಿಜನ್ ಒದಗಿಸಲು ಸೋನು ಸೂದ್ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಇಂತಹ ದುರಂತದ ಸಮಯದಲ್ಲಿಯೂ ಕೆಲವು ದುಷ್ಟರು ಸೋನು ಸೂದ್ ಹೆಸರು ಬಳಸಿಕೊಂಡು ದೇಣಿಗೆ ಎತ್ತಿ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಸೂದ್ ಫೌಂಡೇಶನ್ ಡೋನೆಟ್ ಹೆಸರಿನಲ್ಲಿ ‘ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡಬೇಕಾದ ಅಗತ್ಯವಿದೆ. ಒಂದು ರೂ ನಿಂದ ಹಿಡಿದು ನಿಮಗೆ ಎಷ್ಟು ಕೊಡಲು ಸಾಧ್ಯ ಅಷ್ಟನ್ನು ದೇಣಿಗೆ ನೀಡಬೇಕೆಂದು ಸೋನು ಸೂದ್ ಫೌಂಡೇಶನ ಟೀಮ್ ನಿಮ್ಮಲ್ಲಿ ಮನವಿ ಮಾಡುತ್ತದೆ’ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ಸೋನು ಸೂದ್ ಫೋಟೊ ಸಹ ಹಾಕಲಾಗಿದ್ದು ಒಂದು ನಕಲಿ ಫೋನ್ ಪೇ ನಂಬರ್, ಒಂದು ನಕಲಿ ಹೆಲ್ಪ್ ನಂಬರ್ ಅನ್ನು ನೀಡಲಾಗಿದೆ.
ಈ ಕುರಿತು ಸ್ವತಃ ಸೋನು ಸೂದ್ ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಇದು ಫೇಕ್ ಎಂದು ಸ್ಪಷ್ಟಪಡಿಸಿದ್ದಾರೆ. “ಈ ರೀತಿಯ ಪೋಸ್ಟರ್ ನಾವು ಮಾಡಿಲ್ಲ ಮತ್ತು ಈ ರೀತಿ ಫೋನ್ ಪೇ ನಂಬರ್ ಮೂಲಕ ನಾವು ದೇಣಿಗೆ ಸಂಗ್ರಹಿಸುತ್ತಿಲ್ಲ. ಈ ಕುರಿತು ಜಾಗರೂಕರಾಗಿರಿ ಮತ್ತು ಯಾರಾದರೂ ನಿಮ್ಮನ್ನು ಈ ಪೋಸ್ಟರ್ ಬಳಸಿ ಹಣ ಕೇಳಿದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ” ಎಂದು ಅವರು ಮನವಿ ಮಾಡಿದ್ದಾರೆ.
ಸೋನು ಸೂದ್ ತಮ್ಮ ಫೌಂಡೇಶನ್ ಮೂಲಕ ಇಂದಿಗೂ ಕೋವಿಡ್ ಔಷಧಿಗಳು ಮತ್ತು ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಒದಗಿಸುವ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ಮಾನವೀಯ ಕಾರ್ಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಮೆಚ್ಚಗೆಯ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ:ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು: ಸೋನು ಸೂದ್ ಆಗ್ರಹ


