ಇತ್ತೀಚೆಗೆ ಕೋಮು ಕೊಲೆಗಳು, ಗುಂಪು ಹತ್ಯೆಗೆ ಸಾಕ್ಷಿಯಾಗಿರುವ ಕರಾವಳಿಯಲ್ಲಿ ‘ಸುನ್ನೀ ಯುವಜನ ಸಂಘ (ಎಸ್‌ವೈಎಸ್) ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಯಾತ್ರೆ ಕೈಗೊಂಡಿದೆ.
ಜುಲೈ 14ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಚಾಲನೆ ನೀಡಲಾಗಿರುವ ಯಾತ್ರೆಯು ಇಂದು (ಜುಲೈ 16) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಮಾಪ್ತಿಯಾಗಲಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಪಡುಬಿದ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಸುರತ್ಕಲ್, ಮಂಗಳೂರು, ಫರಂಗಿಪೇಟೆ, ಬಿ.ಸಿ ರೋಡ್, ಕಲ್ಲಡ್ಕ, ಮಾಣಿ, ಪುತ್ತೂರು, ಜಾಲ್ಸೂರು, ಸುಳ್ಯ ಹೀಗೆ ಎರಡು ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ಯಾತ್ರೆ ಹಾದು ಹೋಗಿದೆ.
ಎಲ್ಲಾ ಪ್ರದೇಶಗಳಲ್ಲಿಯೂ, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ವಿವಿಧ ಧರ್ಮಗಳ ನಾಯಕರು, ಸ್ಥಳೀಯ ರಾಜಕೀಯ, ಸಾಮಾಜಿಕ, ಸಾಮುದಾಯಿಕ ಮುಖಂಡರು ಮತ್ತು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಕೋಮು ಸಂಘರ್ಷದ ಪ್ರದೇಶ ಎಂಬ ಕಪ್ಪು ಚುಕ್ಕೆಯಿದೆ. ಈ ವರ್ಷದ 6 ತಿಂಗಳ ಒಳಗೆ ಎರಡು ಕೋಮು ಹತ್ಯೆಗಳು, ಮತ್ತೊಂದು ಕೋಮು ಪ್ರಚೋದಿತ ಗುಂಪು ಹತ್ಯೆ ನಡೆದಿವೆ. ಈ ಕಪ್ಪು ಚುಕ್ಕೆಯನ್ನು ಹೋಗಲಾಡಿಸಿ ತುಳುನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವುದು ಈ ಸೌಹಾರ್ದ ಸಂಚಾರ ಯಾತ್ರೆಯ ಉದ್ದೇಶ ಎಂದು ಸಂಘಟಕರು ಹೇಳಿದ್ದಾರೆ.
ಎಸ್‌ವೈಎಸ್, ಕಳೆದೆರಡು ದಿನಗಳಿಂದ ನಿಮಿಷಾ ಪ್ರಿಯಾ ವಿಷಯದಲ್ಲಿ ಸುದ್ದಿಯಲ್ಲಿರುವ ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ನೇತೃತ್ವ ನೀಡುವ ಸುನ್ನೀ ಯುವಕರ ಸಂಘಟನೆಯಾಗಿದೆ. ಇದರ ಸಹೋದರ ವಿದ್ಯಾರ್ಥಿ ಸಂಘಟನೆ ಸುನ್ನೀ ಸ್ಟೂಡೆಂಡ್ ಫೆಡರೇಶನ್ (ಎಸ್‌ಎಸ್‌ಎಫ್) ಇತ್ತೀಚಿಗೆ ರಾಜ್ಯಾದ್ಯಂತ ‘ಸೌಹಾರ್ದ ನಡಿಗೆ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜುಲೈ 4ರಂದು ಆ ಕಾರ್ಯಕ್ರಮದ ಸಮಾರೋಪ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿದೆ.
‘ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ’: ಅನನ್ಯ ಭಟ್ ತಾಯಿ ಕಣ್ಣೀರು


