ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಕೊನೆಗೊಳಿಸಲು ಹೋರಾಡಿದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಾನವ ಹಕ್ಕುಗಳ ಹೋರಾಟಗಾರ ಆರ್ಚ್‌ಬಿಷಪ್ ಎಮೆರಿಟಸ್ ಡೆಸ್ಮಂಡ್ ಎಂಪಿಲೊ ಟುಟು (90) ಇಂದು ಕೊನೆಯುಸಿರೆಳೆದಿದ್ದಾರೆ.
ಸಮಾನತೆ ಮತ್ತು ಜನಾಂಗೀಯ ನ್ಯಾಯಕ್ಕಾಗಿ ಹೋರಾಟಗಾರರಾಗಿದ್ದ ಟುಟು ಅವರು ಕೇಪ್ ಟೌನ್‌ನಲ್ಲಿ ನಿಧನರಾದರು ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ಪ್ರಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲಾ ಅವರು ಜೈಲಿನಲ್ಲಿದ್ದ ದೀರ್ಘ ವರ್ಷಗಳಲ್ಲಿ, ಆರ್ಚ್‌ಬಿಷಪ್ ಟುಟು ಅವರು ಅಂದಿನ ಆಡಳಿತದ ವಿರುದ್ಧ ದನಿ ಎತ್ತಿದವರು ಮತ್ತು ಮಾನವ ಹಕ್ಕುಗಳ ಅವರ ನಿರಂತರ ಪ್ರಯತ್ನಗಳಿಗಾಗಿ 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು.
1994 ರಲ್ಲಿ ವರ್ಣಭೇದ ನೀತಿಯು ಔಪಚಾರಿಕವಾಗಿ ಅಂತ್ಯಕವಾದ ನಂತರವೂ ಟುಟು ಅವರು ಮಾನವ ಹಕ್ಕುಗಳ ಹೋರಾಟವನ್ನು ನಿಲ್ಲಿಸಲಿಲ್ಲ. ಸತ್ಯ ಮತ್ತು ಸಮನ್ವಯ ಆಯೋಗದ ಅಧ್ಯಕ್ಷರಾಗಿದ್ದುಕೊಂಡು ಹಿಂದಿನ ಜನಾಂಗೀಯ ದೌರ್ಜನ್ಯಗಳ ಇತಿಹಾಸವನ್ನು ತನಿಖೆ ಮಾಡಲು, ಅಗತ್ಯವಿರುವಲ್ಲಿ ನ್ಯಾಯವನ್ನು ಅನ್ವಯಿಸಲು ಮತ್ತು ಇಡೀ ಜನಸಂಖ್ಯೆಯು ಉಜ್ವಲ ಭವಿಷ್ಯಕ್ಕೆ ಹೆಜ್ಜೆ ಹಾಕಲು ಹೋರಾಡಿದ್ದರು.
ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ರಾಜಕಾರಣಿಗಳ ವಿರುದ್ಧ ವಿಮರ್ಶಾತ್ಮಕವಾಗಿ ಮಾತನಾಡುವುದನ್ನು ಮುಂದುವರೆಸಿದರು. ಅವರು HIV/AIDS, ಬಡತನ, ವರ್ಣಭೇದ ನೀತಿ, ಹೋಮೋಫೋಬಿಯಾ ಮತ್ತು ಟ್ರಾನ್ಸ್‌ಫೋಬಿಯಾ ಸೇರಿದಂತೆ ವಿವಿಧ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮಾನವ ಹಕ್ಕುಗಳಿಗಾಗಿನ ಅವರ ಹೋರಾಟ ದಕ್ಷಿಣ ಆಫ್ರಿಕಾಕ್ಕೆ ಸೀಮಿತವಾಗಿರಲಿಲ್ಲ. 2015 ರಲ್ಲಿ ಅವರು ರಚಿಸಿದ ಪೀಸ್ ಫೌಂಡೇಶನ್ ಮೂಲಕ ಶಾಂತಿಯುತ ಜಗತ್ತಿಗಾಗಿ ಶ್ರಮಿಸುತ್ತಿದ್ದರು. ಪ್ರತಿಯೊಬ್ಬ ಮಾನವರಿಗೂ ಘನತೆಯಿದೆ ಎಂದು ಎತ್ತಿ ಹಿಡಿದಿದ್ದರು.
ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಟುಟು ನಿಧನದ ಕುರಿತು ಎಲ್ಲಾ ದಕ್ಷಿಣ ಆಫ್ರಿಕಾದ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದು, ಡೆಸ್ಮಂಡ್ ಟುಟು ಅಪ್ರತಿಮ ಆಧ್ಯಾತ್ಮಿಕ ನಾಯಕ ಮತ್ತು ಜಾಗತಿಕ ಮಾನವ ಹಕ್ಕುಗಳ ಪ್ರಚಾರಕ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಹರಿಯಾಣ: ದುಷ್ಕರ್ಮಿಗಳಿಂದ ಯೇಸು ಕ್ರಿಸ್ತನ ಪ್ರತಿಮೆ ಧ್ವಂಸ


