ತುರ್ತು ಮಿಲಿಟರಿ ಆಡಳಿತ ಹೇರಿ ವಾಪಸ್ ಪಡೆದು ವಾಗ್ದದಂಡನೆ ಶಿಕ್ಷೆಗೆ ಒಳಗಾಗಿ ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಬಂಧನಕ್ಕೆ ದಕ್ಷಿಣ ಕೊರಿಯಾ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ ಎಂದು ತನಿಖಾಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.
ಯೂನ್ ಸುಕ್ ಯೋಲ್ ಅವರು ಡಿಸೆಂಬರ್ 3, 2024ರಂದು ರಾತ್ರಿ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿದ್ದರು. ಸ್ವಪಕ್ಷದವರು ಸೇರಿದಂತೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಮರುದಿನ ಅದನ್ನು ವಾಪಸ್ ಪಡೆದಿದ್ದರು.
ಯೂನ್ ಸುಕ್ ಯೋಲ್ ಸ್ವಹಿತಾಸಕ್ತಿಗಾಗಿ ದೇಶದಲ್ಲಿ ಮಿಲಿಟರಿ ಆಡಳಿತ ಹೇರಿದ ಆರೋಪದ ಮೇಲೆ ಅವರನ್ನು ಸಂಸತ್ ವಾಗ್ದದಂಡೆ ಮೂಲಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದೆ. ಆದರೆ, ಅವರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.
ಯೂನ್ ಸುಕ್ ಯೋಲ್ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಪರಿಶೀಲನೆ ಮತ್ತು ಅವರ ಬಂಧನಕ್ಕೆ ಇಂದು (ಡಿ.31) ಬೆಳಿಗ್ಗೆ ವಾರೆಂಟ್ ಹೊರಡಿಸಲಾಗಿದೆ ಎಂದು ಜಂಟಿ ತನಿಖಾ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ತುರ್ತು ಮಿಲಿಟರಿ ಆಡಳಿತ ಹೇರಿ ಬಗ್ಗೆ ತನಿಖಾ ತಂಡ ಯೂನ್ ಸುಕ್ ಯೋಲ್ ಅವರನ್ನು ಮೂರು ಬಾರಿ ವಿಚಾರಣೆಗೆ ಕರೆದರೂ ಅವರು ಹಾಜರಾಗಲು ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಬಲಪಂಥೀಯ ನಾಯಕ ಯೂನ್ ಸುಕ್ ಯೋಲ್ ಅವರ ವಿರುದ್ದ ಕ್ರಿಮಿನಲ್ ಆರೋಪಗಳಿದ್ದು, ಇದರಲ್ಲಿ ಅವರನ್ನು ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಗೆ ಗುರಿಪಡಿಸಬಹುದು ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಕಕ್ಷೆ ತಲುಪಿದ ಇಸ್ರೋದ ಡಾಕಿಂಗ್ ಉಪಗ್ರಹ : ಜನವರಿಯಲ್ಲಿ 100ನೇ ಉಡಾವಣೆ


