ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದೇಶದ ಮೇಲೆ ಹೇರಿದ್ದ ‘ತುರ್ತು ಮಿಲಿಟರಿ ಆಡಳಿತ’ವನ್ನು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ನೇತೃತ್ವದ ಸರ್ಕಾರ ಬುಧವಾರ (ಡಿ.4) ನಸುಕಿನಲ್ಲಿ ಹಿಂಪಡೆದಿದೆ.
ಮಿಲಿಟರಿ ಆಡಳಿತ ಘೋಷಿಸಿದ ಬೆನ್ನಲ್ಲೇ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಭೆ ಸೇರಿದ ಸಂಸದರು, ಮಿಲಿಟರಿ ಆಡಳಿತ ತಿರಸ್ಕರಿಸುವುದರ ಪರವಾಗಿ ಮತ ಚಲಾಯಿಸಿದರು. ದೇಶದ ವಿವಿದೆಡೆಗಳಲ್ಲಿ ಜನರು ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಇದರಿಂದ ಬೆದರಿದ ಸರ್ಕಾರ ಮಿಲಿಟರಿ ಆಡಳಿತವನ್ನು ವಾಪಸ್ ಪಡೆದಿದೆ.
ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲು ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಮಂಗಳವಾರ (ಡಿ.3) ರಾತ್ರಿ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಿಸಿದ್ದರು. ಅಧ್ಯಕ್ಷರ ನಡೆಯ ವಿರುದ್ದ ಸಂಪುಟ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಮತ್ತಷ್ಟು ರಾಜಕೀಯ ಬಿಕ್ಕಟ್ಟು ಉಂಟಾಗಲಿದೆ. ಜನಾಕ್ರೋಶ ಭುಗಿಲೇಲಲಿದೆ ಎಂದಿದ್ದರು. ಸಂಪುಟ ಸಚಿವರ ಒತ್ತಡ ಮತ್ತು ಜನಾಕ್ರೋಶಕ್ಕೆ ಅಧ್ಯಕ್ಷರು ಮಣಿದಿದ್ದಾರೆ.
ದೇಶದ ವಿರೋಧ ಪಕ್ಷಗಳು ಸಂಸತ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದ ಅಧ್ಯಕ್ಷ ಸುಕ್ ಯೋಲ್ ಅವರು, ಮಂಗಳವಾರದಿಂದಲೇ ‘ತುರ್ತು ಮಿಲಿಟರಿ ಆಡಳಿತ’ವನ್ನು ಜಾರಿಗೊಳಿಸಿದ್ದರು.
ದೇಶ ವಿರೋಧಿ ಕೃತ್ಯದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಉತ್ತರ ಕೊರಿಯಾ ಯತ್ನಿಸುತ್ತಿದೆ ಎಂದು ಸುಕ್ ಯೋಲ್ ಆರೋಪಿಸಿದ್ದರು. ದೇಶದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸ್ಥಿತಿ ತಲುಪಿರುವುದರಿಂದ ಸಾಂವಿಧಾನಿಕ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಟೆಲಿವಿಷನ್ ಮೂಲಕ ಅವರು ಹೇಳಿದ್ದರು.
1980ರ ದಶಕದ ಉತ್ತರಾರ್ಧದಲ್ಲಿ ದೇಶದಲ್ಲಿ ಮಿಲಿಟರಿ ಸರ್ವಾಧಿಕಾರವು ಕೊನೆಗೊಂಡ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷರು ಇದೇ ಮೊದಲ ಬಾರಿಗೆ ‘ಮಿಲಿಟರಿ ಆಡಳಿತ ಜಾರಿ’ ಮಾಡಿ ಆದೇಶ ಹೊರಡಿಸಿದ್ದರು. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಪರಿಸ್ಥಿತಿ ಘೋಷಿಸುತ್ತಿದ್ದೇವೆ ಎಂದು ಯೂನ್ ಸುಕ್ ಯೋಲ್ ತಮ್ಮ ಭಾಷಣದಲ್ಲಿ ಹೇಳಿದ್ದರು.
ಮಿಲಿಟರಿ ಆಡಳಿತ ಘೋಷಣೆ ಬಳಿಕ ಏನಾಯಿತು?
ಮಂಗಳವಾರ ರಾತ್ರಿ ಅಧ್ಯಕ್ಷ ತುರ್ತು ಮಿಲಿಟರಿ ಆಡಳಿತ ಘೋಷಣೆ ಮಾಡಿದ ಬೆನ್ನಲ್ಲೇ ಭದ್ರತಾ ಪಡೆಗಳು ರಾಷ್ಟ್ರೀಯ ಅಸೆಂಬ್ಲಿಯ ಬಾಗಿಲನ್ನು ಸೀಲ್ ಮಾಡಿತ್ತು. ಅಸೆಂಬ್ಲಿ ಕಟ್ಟಡದ ಛಾವಣಿಯ ಮೇಲೆ ಹೆಲಿಕಾಫ್ಟರ್ ಮೂಲಕ ಬಂದಿಳಿದ ಭದ್ರತಾ ಪಡೆಗಳು ಸಂಸದರು ಅಸೆಂಬ್ಲಿ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿತು. ಆದರೆ, ಸುಮಾರು 190 ಸಂಸದರು ಭದ್ರತಾ ಪಡೆಗಳನ್ನು ಬೇಧಿಸಿ ಅಸೆಂಬ್ಲಿ ಒಳಗೆ ಪ್ರವೇಶಿಸಿದರು. ತುರ್ತು ಮಿಲಿಟರಿ ಆಡಳಿತ ಅಥವಾ ಸಮರ ಕಾನೂನು ತೆಗೆದು ಹಾಕಲು ಸರ್ವಾನುಮತದಿಂದ ಮತ ಚಲಾಯಿಸಿದರು.
ಅಸೆಂಬ್ಲಿ ಒಳಗೆ ಅಧ್ಯಕ್ಷರ ನಿರ್ಧಾರದ ವಿರುದ್ದ ಸಂಸದರು ಮತ ಚಲಾಯಿಸಿದರೆ, ಹೊರಗಡೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಅಧ್ಯಕ್ಷರ ಬಂಧನಕ್ಕೆ ಒತ್ತಾಯಿಸಿದರು.

ಬಳಿಕ ಆಕ್ರೋಶಕ್ಕೆ ಮಣಿದ ಅಧ್ಯಕ್ಷ ಯೋಲ್ ತನ್ನ ಆದೇಶವನ್ನು ಹಿಂಪಡೆದರು. ಬಳಿಕ ದೇಶವನ್ನು ಉದ್ದೇಶಿಸಿ ಟೆಲಿವಿಷನ್‌ನಲ್ಲಿ ಮಾತನಾಡಿದ ಅವರು, ಅಸೆಂಬ್ಲಿಯಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಹಿಂಪಡೆಯುವಂತೆ ಮತ ಚಲಾಯಿಸಲಾಗಿದೆ. ಆದ್ದರಿಂದ ನಾವು ಆದೇಶವನ್ನು ಹಿಂಪಡೆಯುತ್ತಿದ್ದೇವೆ” ಎಂದು ತಿಳಿಸಿದರು.
ದಕ್ಷಿಣ ಕೊರಿಯಾದ ಸಂವಿಧಾನದ ಪ್ರಕಾರ, ಮಿಲಿಟರಿ ಆಡಳಿತ ಅಥವಾ ಸಮರ ಕಾನೂನು ಜಾರಿ ಆದೇಶದ ವಿರುದ್ದ ರಾಷ್ಟ್ರೀಯ ಅಸೆಂಬ್ಲಿ ಬಹುಮತದೊಂದಿಗೆ ಮತ ಚಲಾಯಿಸಿದರೆ, ಅದನ್ನು ಗೌರವಿಸಿ ಆದೇಶ ವಾಪಸ್ ಪಡೆಯಬೇಕಿದೆ.
ಅಧ್ಯಕ್ಷರ ಪದಚ್ಯುತಿಗೆ ನಿಲುವಳಿ
ವಿಪಕ್ಷಗಳನ್ನು ಹತ್ತಿಕ್ಕಲು ತುರ್ತುಸ್ಥಿತಿ ಹೇರಲು ವಿಫಲ ಯತ್ನ ನಡೆಸಿದ್ದ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಪ್ರತಿಪಕ್ಷಗಳು ವಾಗ್ದಂಡನೆ ಗೊತ್ತುವಳಿ ಮಂಡಿಸಿವೆ. ಇದು ಸಂಸತ್ತಿನಲ್ಲಿ ಶುಕ್ರವಾರ (ಡಿ.6) ಮತಕ್ಕೆ ಹೋಗುವ ಸಂಭವವಿದೆ. ಯೋಲ್ ಅವರ ವಾಗ್ದಂಡನೆಗೆ ಮಾಡಲು ಸಂಸತ್ತಿನ 3ನೇ 2ರಷ್ಟು ಬೆಂಬಲ ಬೇಕಾಗುತ್ತದೆ ಮತ್ತು 9 ಸದಸ್ಯರ ಸಾಂವಿಧಾನಿಕ ನ್ಯಾಯಾಲಯದಲ್ಲಿ ಕನಿಷ್ಠ 6 ನ್ಯಾಯಮೂರ್ತಿಗಳು ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅದನ್ನು ಬೆಂಬಲಿಸಬೇಕಾಗುತ್ತದೆ. ಪ್ರಮುಖ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಮತ್ತು 5 ಸಣ್ಣ ವಿರೋಧ ಪಕ್ಷಗಳು ವಾಗ್ದಂಡನೆ ಗೊತ್ತುವಳಿ ಸಲ್ಲಿಸಿವೆ.
ಈ ನಡುವೆ, ಯೋಲ್ ಅವರ ಬೆಂಬಲಿಗರು ಹಾಗೂ ಹಲವು ಸಚಿವರು ಪದಚ್ಯುತಿ ಭೀತಿಯಿಂದಾಗಿ ಬುಧವಾರವೇ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಯೋಲ್ ಮಾತ್ರ ಮೌನವಾಗಿದ್ದಾರೆ. ಒಂದು ವೇಳೆ ಯೋಲ್ ಪದಚ್ಯುತಿ ಆದರೆ ಹಾಲಿ ಪ್ರಧಾನಿ ಹಾನ್ ಡಕ್ ಸೂ ಮುಂದಿನ ಅಧ್ಯಕ್ಷರಾಗಲಿದ್ದಾರೆ.
ರಕ್ಷಣಾ ಸಚಿವ ರಾಜೀನಾಮೆ
ಏಕಾಏಕಿ ತುರ್ತು ಮಿಲಿಟರಿ ಆಡಳಿತ ಹೇರಿದ ಅಧ್ಯಕ್ಷ ಯೋನ್ ಸುಕ್ ಯೋಲ್ ಅವರ ನಡೆ ಖಂಡಿಸಿ ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್ ಬುಧವಾರ (ಡಿ.4) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಧ್ಯಕ್ಷ ಯೋಲ್ ಸ್ವೀಕರಿಸಿದ್ದು, ನೂತನ ರಕ್ಷಣಾ ಸಚಿವರಾಗಿ ಸೌದಿ ಅರೇಬಿಯಾದಲ್ಲಿ ದೇಶದ ರಾಯಭಾರಿಯಾಗಿದ್ದ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ನೇಮಿಸಿದ್ದಾರೆ.
ಇದನ್ನೂ ಓದಿ : ಬಿಬಿಸಿ 2024ರ ಸ್ಪೂರ್ತಿದಾಯಕ ಮಹಿಳೆ ಪಟ್ಟಿ | ಭಾರತದ ವಿನೇಶ್ ಫೋಗಟ್ ಸೇರಿ ಮೂವರಿಗೆ ಸ್ಥಾನ


