ಸಿಯೋಲ್: ಮಿಲಿಟರಿ ಕಾನೂನು ಜಾರಿಗೊಳಿಸಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್‍ರನ್ನು ದೋಷಾರೋಪಣೆಗೆ ಗುರಿಪಡಿಸುವ ನಿರ್ಣಯಕ್ಕೆ ದೇಶದ ಸಂಸತ್ತು ಅಂಗೀಕಾರ ನೀಡಿದೆ.
ಈ ಮೂಲಕ, ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದಕ್ಕಾಗಿ ಯೋಲ್ ಅವರ ವಿರುದ್ಧ ವಾಗ್ದಂಡನೆ ಗೊತ್ತುವಳಿಯನ್ನು ಮಂಡಿಸಲಾಗಿತ್ತು. ಅಧ್ಯಕ್ಷರಿಗೆ ವಾಗ್ದಂಡನೆ ವಿಧಿಸಬೇಕೆಂದು ಕೋರಿದ್ದ ಈ ನಿರ್ಣಯದ ಬಗ್ಗೆ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ ಕಾವೇರಿದ ಚರ್ಚೆ ನಡೆಯಿತು. ನಂತರ ನಿರ್ಣಯವನ್ನು 204–85 ಮತಗಳಿಂದ ಅಂಗೀಕರಿಸಲಾಯಿತು.
ಯೋಲ್ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್ ಪೀಪಲ್ ಪವರ್ ಪಾರ್ಟಿಯ (ಪಿಪಿಪಿ) ಕೆಲ ಸದಸ್ಯರು ಕೂಡ ನಿರ್ಣಯದ ಪರವಾಗಿಯೇ ಮತ ಚಲಾಯಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಯೋಲ್ ಅವರು ಅಧಿಕಾರವನ್ನು ಮೊಟಕುಗೊಳಿಸಲಾಯಿತು. ಪ್ರಧಾನಿ ಹಾನ್ ಡಕ್–ಸೂ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧ್ಯಕ್ಷರ ಪದಚ್ಯುತಿಯನ್ನು ಅನುಮೋದಿಸಬೇಕೇ ಅಥವಾ ಅಧಿಕಾರವನ್ನು ಪುನಃಸ್ಥಾಪಿಸಬೇಕೇ ಎಂಬುದನ್ನು ಅಲ್ಲಿನ ಸಾಂವಿಧಾನಿಕ ಕೋರ್ಟ್ 180 ದಿನಗಳಲ್ಲಿ ನಿರ್ಧರಿಸಬೇಕಿದೆ. ಕೋರ್ಟ್‌ನಲ್ಲಿಯೂ ಪದಚ್ಯುತಿ ಅನುಮೋದನೆಯಾದರೆ, ಆರು ತಿಂಗಳೊಳಗೆ ಪುನಃ ಚುನಾವಣೆ ನಡೆಯಬೇಕಿದೆ.

ಅಧ್ಯಕ್ಷರ ವಿರುದ್ಧದ ದೋಷಾರೋಪಣೆ ನಿರ್ಣಯವನ್ನು ವಿರೋಧ ಪಕ್ಷಗಳು ಮಂಡಿಸಿದ್ದು 300 ಸಂಸದರಲ್ಲಿ 204 ಸಂಸದರು ನಿರ್ಣಯದ ಪರ ಮತ್ತು 85 ಸಂಸದರು ವಿರುದ್ಧ ಮತ ಹಾಕಿದ್ದಾರೆ. ಮೂವರು ಸಂಸದರು ಮತದಾನಕ್ಕೆ ಹಾಜರಾಗಲಿಲ್ಲ. 8 ಮತಗಳನ್ನು ಅಸಿಂಧುಗೊಳಿಸಲಾಗಿದೆ. ವಾಗ್ದಂಡನೆಗೆ ಗುರಿಪಡಿಸಲು ಕನಿಷ್ಠ 200 ಸದಸ್ಯರ ಬೆಂಬಲ ಅಗತ್ಯವಿತ್ತು. ನಿರ್ಣಯ ತಂದಿರುವ ಪ್ರತಿಪಕ್ಷಗಳ ಸದಸ್ಯ ಬಲ 192 ಆಗಿದ್ದು ನಿರ್ಣಯವು ಅಂಗೀಕಾರವಾಗಬೇಕಾದರೆ ಆಡಳಿತಾರೂಢ ಪಿಪಿಪಿಯ ಕನಿಷ್ಠ 8 ಸದಸ್ಯರ ಬೆಂಬಲವು ಅಗತ್ಯವಿತ್ತು. ನಿರ್ಣಯವನ್ನು ಶನಿವಾರ ಮತಕ್ಕೆ ಹಾಕಿದಾಗ ಪಿಪಿಪಿ ಪಕ್ಷದ 12 ಮಂದಿ ನಿರ್ಣಯದ ಪರ ಮತ ಹಾಕಿದರು. ಇದಕ್ಕೂ ಮುನ್ನ ಡಿಸೆಂಬರ್ 7ರಂದು ಇಂತದ್ದೇ ನಿರ್ಣಯಕ್ಕೆ ಮೂರನೇ ಎರಡರಷ್ಟು ಬೆಂಬಲ ಸಿಗದ ಕಾರಣ ಯೋಲ್ ಅವರು ಪದಚ್ಯುತಿ ಕ್ರಮದಿಂದ ಪಾರಾಗಿದ್ದರು.
ನಿರ್ಣಯ ಅಂಗೀಕಾರಗೊಂಡಿರುವುದರಿಂದ ಯೂನ್ ಅವರ ಅಧ್ಯಕ್ಷೀಯ ಅಧಿಕಾರ ಮತ್ತು ಕರ್ತವ್ಯಗಳು ಅಮಾನತುಗೊಂಡಿವೆ. ಪ್ರಧಾನಿ ಹ್ಯಾನ್ ಡುಕ್-ಸೂ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಯೂನ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಸಾಂವಿಧಾನಿಕ ಕೋರ್ಟ್ ಪರಿಶೀಲಿಸಿ 180 ದಿನಗಳೊಳಗೆ ತೀರ್ಪು ನೀಡಲಿದೆ. ಅದುವರೆಗೆ ಪ್ರಧಾನಿ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಯೂನ್ ಅವರ ಪದಚ್ಯುತಿಯನ್ನು ಸಾಂವಿಧಾನಿಕ ನ್ಯಾಯಾಲಯ ಎತ್ತಿಹಿಡಿದರೆ, 60 ದಿನಗಳೊಳಗೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ.
75 ವರ್ಷದ ಹ್ಯಾನ್ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ನಾಯಕತ್ವದ ಹುದ್ದೆ ನಿರ್ವಹಿಸಿದ್ದು 2007-08ರಲ್ಲಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅಮೆರಿಕಕ್ಕೆ ರಾಯಭಾರಿಯಾಗಿ, ವಿತ್ತಸಚಿವ, ವಾಣಿಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು 2022ರಲ್ಲಿ ಅಧ್ಯಕ್ಷ ಯೂನ್ ಸುಕ್ ಮತ್ತೆ ಪ್ರಧಾನಿ ಹುದ್ದೆಗೆ ನೇಮಕಗೊಳಿಸಿದ್ದರು.


